ಸ್ಯಾಂಡಲ್ ವುಡ್ ಗೆ ಐಟಿ ರಿಲೀಫ್: ಶೂಟಿಂಗ್ ನತ್ತ ನಟರು

Published : Jan 07, 2019, 10:41 AM IST
ಸ್ಯಾಂಡಲ್ ವುಡ್ ಗೆ ಐಟಿ ರಿಲೀಫ್: ಶೂಟಿಂಗ್ ನತ್ತ ನಟರು

ಸಾರಾಂಶ

ಸ್ಯಾಂಡಲ್‌ವುಡ್ ಈಗ ನಿರಾಳವಾಗಿದೆ. ಕಾರಣ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಮನೆ ಮೇಲೆ ನಡೆದಿದ್ದ ಐಟಿ ದಾಳಿ ಮುಗಿದಿದೆ. ಅಧಿಕಾರಿಗಳ ವಿಚಾರಣೆಗೆ ಸಹಕಾರ ನೀಡುವ ಸಲುವಾಗಿ ಮೂರು ದಿನಗಳ ಕಾಲ ಶೂಟಿಂಗ್ ನಿಲ್ಲಿಸಿ, ಮನೆಯಲ್ಲಿದ್ದ ಸ್ಟಾರ್ ನಟರು ರಿಲ್ಯಾಕ್ಸ್ ಆಗಿ ಎಂದಿನಂತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ತನ್ಮೂಲಕ ಚಿತ್ರರಂಗ ಎಂದಿನಂತೆ ಮುಂದೆ ಸಾಗಿದೆ. ಅದರೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.  

ವಿಶ್ರಾಂತಿ ನಂತರವೇ ‘ಆನಂದ’

ನಟ ಶಿವರಾಜ್ ಕುಮಾರ್ ಪಿ. ವಾಸು ನಿರ್ದೇಶನದ ‘ಆನಂದ’ ಚಿತ್ರದ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ‘ಶಿವಲಿಂಗ’ ನಂತರ ಮತ್ತೆ ವಾಸು ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಒಂದಾಗಿದೆ. ದ್ವಾರಕೀಶ್ ಚಿತ್ರ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಶುರುವಾಗಿದೆ. ಗುರುವಾರ ತಮ್ಮ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸದೇ ಇದ್ದಿದ್ದರೆ ಇಷ್ಟೊತ್ತಿಗೆ ಶಿವರಾಜ್ ಕುಮಾರ್ ‘ಆನಂದ’ ಚಿತ್ರದ ಸೆಟ್‌ನಲ್ಲಿ ಇರಬೇಕಿತ್ತು. ಆದರೆ, ಮುಂಜಾನೆಯೇ ಐಟಿ ಅಧಿಕಾರಿಗಳು ಮನೆಗೆ ಬಂದ ಕಾರಣ ಶೂಟಿಂಗ್ ಸ್ಟಾಪ್ ಮಾಡಿಸಿ, ಮನೆಯಲ್ಲೇ ಉಳಿದಿದ್ದರು. ಈಗವರು ಮತ್ತೆ ಎಂದಿನಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಐಟಿ ದಾಳಿಯ ಒತ್ತಡದಲ್ಲಿದ್ದ ಶಿವಣ್ಣ ಶನಿವಾರ ಮತ್ತು ಭಾನುವಾರ ಮನೆಯಲ್ಲೇ ವಿಶ್ರಾಂತಿ ಪಡೆದರು. ಮೂಲಗಳ ಪ್ರಕಾರ ಬುಧವಾರದಿಂದ ಅವರು ಮತ್ತೆ ಶೂಟಿಂಗ್ ಸೆಟ್‌ಗೆ ತೆರಳಲಿದ್ದಾರೆ. ಈಗಾಗಲೇ ‘ರುಸ್ತುಂ’ ಕೂಡ ಬಹುತೇಕ ಚಿತ್ರೀಕರಣ ಮುಗಿಸಿರುವುದರಿಂದ ಸದ್ಯ ಅವರ ಗಮನ ‘ಆನಂದ’ ಚಿತ್ರದತ್ತ.

ಬಿಗ್‌ಬಾಸ್ ಶೂಟಿಂಗ್‌ನಲ್ಲಿ ಸುದೀಪ್

ಆದಾಯ ತೆರಿಗೆ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್, ‘ಪೈಲ್ವಾನ್’ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿದ್ದರು. ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಶೂಟಿಂಗ್ ಅರ್ಧದಲ್ಲೇ ನಿಲ್ಲಿಸಿ ವಾಪಸ್ ಬೆಂಗಳೂರಿಗೆ ಬಂದಿದ್ದರು. ಹಾಗಾಗಿ ‘ಪೈಲ್ವಾನ್’ ಚಿತ್ರದ ಶೂಟಿಂಗ್ ಈಗ ತಾತ್ಕಾಲಿಕವಾಗಿ ಸ್ಟಾಪ್ ಆಗಿದ್ದು, ಅವರೀಗ ಮತ್ತೆ ಚಿತ್ರೀಕರಣಕ್ಕೆ ತೆರಳಬೇಕಿದೆ. ಆದರೆ, ಐಟಿ ದಾಳಿಯ ಒತ್ತಡದ ನಡುವೆಯೇ ಶನಿವಾರ ಮತ್ತು ಭಾನುವಾರ ಬಿಗ್‌ಬಾಸ್ ಶೂಟಿಂಗ್‌ನಲ್ಲಿದ್ದರು ಕಿಚ್ಚ. ಸದ್ಯಕ್ಕೀಗ ಅವರದ್ದು ರೆಸ್್ಟಲೆಸ್ ಕೆಲಸ. ತಕ್ಷಣವೇ ‘ಪೈಲ್ವಾನ್’ ಚಿತ್ರೀಕರಣಕ್ಕೆ ತೆರಳುವುದು ಕಷ್ಟ ಸಾಧ್ಯ. ನಿರ್ದೇಶಕ ಕೃಷ್ಣ ಅವರೇ ಹೇಳುವ ಪ್ರಕಾರ ಎಲ್ಲವೂ ಸುಸೂತ್ರವಾಗಿ ಮುಗಿದು, ನಿರಾಳವಾದ ನಂತರವೇ ಮತ್ತೆ ಚಿತ್ರೀಕರಣ ಶುರುವಾಗಲಿದೆಯಂತೆ. ಅಲ್ಲಿಗೆ ಇನ್ನು ಮೂರ್ನಾಲ್ಕು ದಿನಗಳು ಚಿತ್ರೀಕರಣ ಇಲ್ಲ. ಆನಂತರವೇ ಶೂಟಿಂಗ್. ಎಲ್ಲವೂ ಅಂದುಕೊಂಡಂತೆ ಆದರೆ ಗುರುವಾರದ ನಂತರ ಸುದೀಪ್, ‘ಪೈಲ್ವಾನ್ ’ಚಿತ್ರದ ಶೂಟಿಂಗ್ ಸೆಟ್‌ಗೆ ತೆರಳುವುದು ಗ್ಯಾರಂಟಿ.

‘ನಟಸಾರ್ವಭೌಮ’ನಗುಂಗಿನಲ್ಲಿ ಪುನೀತ್

ಐಟಿ ಅಧಿಕಾರಿಗಳು ಶುಕ್ರವಾರ ಮಧ್ಯರಾತ್ರಿ ತಮ್ಮ ಮನೆಯಿಂದ ತೆರಳುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಶನಿವಾರ ಮುಂಜಾನೆಯೇ ಹುಬ್ಬಳ್ಳಿಗೆ ತೆರಳಿದ್ದರು. ಅಂದು ಸಂಜೆ ಅಲ್ಲಿ ‘ನಟಸಾರ್ವಭೌಮ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಫಿಕ್ಸ್ ಆಗಿತ್ತು. ಅದರಲ್ಲಿ ಭಾಗವಹಿಸಿ ಬಂದಿರುವ ಅವರು, ಸದ್ಯಕ್ಕೆ ಅದರ ಪ್ರಮೋಷನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಪಿಆರ್ ಕೆ ಬ್ಯಾನರ್ ನಿರ್ಮಾಣದಲ್ಲಿ ಶುರುವಾಗುತ್ತಿರುವ ಮೂರನೇ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೂ ಸಿದ್ಧತೆ ನಡೆಸಿದ್ದಾರೆ. ಸದ್ಯಕ್ಕೀಗ ಅವರು ಯಾವುದೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿಲ್ಲ. ‘ನಟಸಾರ್ವಭೌಮ’ ಮುಗಿದಿದೆ. ‘ಯುವ ರತ್ನ’ ಶುರುವಾಗಬೇಕಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಅದಕ್ಕೆ ಇನ್ನಷ್ಟು ಸಮಯ ಬೇಕಿದೆ. ಹೀಗಾಗಿ ಪುನೀತ್, ಶೂಟಿಂಗ್ ಶೆಡ್ಯೂಲ್ ಬದಲಿಗೆ ‘ನಟಸಾರ್ವಭೌಮ’ ಚಿತ್ರದ ಪ್ರಮೋಷನ್ ಜತೆಗೆ ಪಿಆರ್‌ಕೆ ಬ್ಯಾನರ್ ನಿರ್ಮಾಣದ ಚಿತ್ರಗಳ ರಿಲೀಸ್ ಮತ್ತು ಮೂರನೇ ಚಿತ್ರದ ಮುಹೂರ್ತದತ್ತ ಗಮನ ಹರಿಸಿದ್ದಾರೆ.

ಒಂದಷ್ಟು ದಿನ ರೆಸ್ಟ್, ಉಳಿದದ್ದು ನೆಕ್ಸ್ಟ್

‘ಕೆಜಿಎಫ್’ ಚಿತ್ರದ ಭರ್ಜರಿ ಸಕ್ಸಸ್ ಸಂಭ್ರಮದಲ್ಲೇ ನಟ ಯಶ್ ಐಟಿ ಶಾಕ್‌ಗೆ ಒಳಗಾದರು. ಅವರೀಗ ಚಿತ್ರೀಕರಣ, ಡಬ್ಬಿಂಗ್ ಅಂತೆಲ್ಲ ಬ್ಯುಸಿ ಇಲ್ಲದಿದ್ದರೂ ‘ಕೆಜಿಎಫ್ ಚಾಪ್ಟರ್ ೨’ ಮತ್ತು ‘ಮೈ ನೇಮ್ ಈಸ್ ಕಿರಾತಕ’ ಚಿತ್ರದ ಚಿತ್ರೀಕರಣ ಬಾಕಿಯಿವೆ. ಅದರಲ್ಲಿ ಭಾಗವಹಿಸಬೇಕಿದ್ದರೂ, ಸದ್ಯಕ್ಕೀಗ ಅವರ ಗಮನ ‘ಕೆಜಿಎಫ್’ ಚಿತ್ರದ ಕಡೆಯೇ. ಹಾಗಾಗಿಯೇ ಐಟಿ ದಾಳಿಯ ದಿನ ಅವರು ಮುಂಬೈನಲ್ಲಿದ್ದರು. ವಿಷಯ ತಿಳಿದು ವಾಪಸ್ ಆಗಿರುವ ಯಶ್, ತಕ್ಷಣವೇ ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಷ್ಟ. ಒಂದಷ್ಟು ದಿನ ವಿಶ್ರಾಂತಿಯಲ್ಲಿದ್ದು, ಎಂದಿನಂತೆ ಸಿನಿಮಾ ಕೆಲಸ ಅಂತ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು