ತಾಳಿ, ಬೊಟ್ಟು, ವ್ರತ.. ಪುರುಷರಿಗೆ ಇಲ್ಲದ ಈ ನಿಯಮಗಳೆಲ್ಲ ಮಹಿಳೆಯರಿಗೆ ಮಾತ್ರ ಏಕೆ?: ನಟಿ ನಮಿತಾ ಪ್ರಶ್ನೆ!

Published : Sep 12, 2026, 04:50 PM IST
Namitha

ಸಾರಾಂಶ

ನಟಿ ನಮಿತಾ ಅವರ ತಾಳಿ, ಬೊಟ್ಟು ಮತ್ತು ಮಹಿಳೆಯರ ಮೇಲಿನ ಸಂಪ್ರದಾಯಗಳ ಕುರಿತ ಹೇಳಿಕೆಗಳು ವೈರಲ್ ಆಗಿವೆ. ‘ಮಹಿಳೆಯರಿಗೇ ಏಕೆ ಎಲ್ಲಾ ನಿಯಮಗಳು?’ ಎಂದು ಪ್ರಶ್ನಿಸಿರುವ ಅವರು, ಪತ್ನಿಯ ಕ್ಷೇಮಕ್ಕಾಗಿ ಗಂಡಂದಿರು ಉಪವಾಸ ಮಾಡುವುದಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ನಟಿ ನಮಿತಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಭಾರತೀಯ ವಿವಾಹ ಸಂಪ್ರದಾಯಗಳು ಹಾಗೂ ಸಮಾಜದಲ್ಲಿ ರೂಢಿಯಾಗಿರುವ ಕೆಲ ಆಚಾರಗಳ ಬಗ್ಗೆ ಕುತೂಹಲಕಾರಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯರೇ ತಾಳಿ ಧರಿಸಬೇಕು, ಬೊಟ್ಟು ಇಡಬೇಕು, ಗಂಡನ ಕ್ಷೇಮಕ್ಕಾಗಿ ವರಮಹಾಲಕ್ಷ್ಮಿ ವ್ರತದಂತಹ ಉಪವಾಸಗಳನ್ನು ಮಾಡಬೇಕು ಎಂದು ಸಮಾಜ ಏಕೆ ನಿರೀಕ್ಷಿಸುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಪತ್ನಿಯರಿಗಾಗಿ ಗಂಡಂದಿರು ಎಂದಾದರೂ ಉಪವಾಸ ಮಾಡುತ್ತಾರೆಯೇ ಎಂದು ಪ್ರಶ್ನಿಸಿರುವ ನಮಿತಾ, ಇಂತಹ ನಿಯಮಗಳೆಲ್ಲ ಸಮಾಜವೇ ಸೃಷ್ಟಿಸಿಕೊಂಡಿರುವುದು, ಯಾವುದೇ ಗ್ರಂಥಗಳಲ್ಲೂ ಇವುಗಳ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ. ಇದೀಗ ನಮಿತಾ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕನ್ನಡ ಪ್ರೇಕ್ಷಕರಿಗೆ ನಟಿ ನಮಿತಾ ಪರಿಚಿತ ಮುಖ. ತಮಿಳಿನ ಜೊತೆಗೆ ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲೂ ಅವರು ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಸಿನಿಮಾಗಳಿಂದ ದೂರವಿರುವ ನಮಿತಾ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ವಿವಾಹ ಪದ್ಧತಿ ಹಾಗೂ ಮಹಿಳೆಯರ ಮೇಲೆ ಸಮಾಜ ಹೇರಿರುವ ಕೆಲವು ಜವಾಬ್ದಾರಿಗಳ ಬಗ್ಗೆ ಮಾತನಾಡಿದ್ದಾರೆ.

ಮಹಿಳೆಯರೇ ತಾಳಿ ಏಕೆ ಧರಿಸಬೇಕು?

ಪುರುಷರಿಗೆ ಇಲ್ಲದ ಕೆಲವು ನಿಯಮಗಳು ಮಹಿಳೆಯರಿಗೆ ಮಾತ್ರ ಏಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಗಂಡನ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಆಚರಿಸುವ ವರಮಹಾಲಕ್ಷ್ಮಿ ವ್ರತದಂತಹ ಸಂಪ್ರದಾಯಗಳ ಬಗ್ಗೆಯೂ ನಮಿತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಿಳೆಯರೇ ತಾಳಿ ಏಕೆ ಧರಿಸಬೇಕು? ಮಹಿಳೆಯರೇ ಬೊಟ್ಟು ಇಡಬೇಕು, ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಏಕೆ ನಿರೀಕ್ಷಿಸುತ್ತಾರೆ? ಪುರುಷರಿಗೆ ಇಲ್ಲದ ಈ ನಿಯಮಗಳೆಲ್ಲ ಮಹಿಳೆಯರಿಗೆ ಮಾತ್ರ ಏಕೆ?

ಎಲ್ಲಾ ನಿಯಮಗಳೂ ಮಹಿಳೆಯರಿಗೇ ಏಕೆ?

ನನ್ನ ಗಂಡ ಸುರಕ್ಷಿತವಾಗಿರಬೇಕು ಎಂದು ನಾನು ಉಪವಾಸ ಮಾಡುತ್ತೇನೆ. ಆದರೆ ಪತ್ನಿಯ ಕ್ಷೇಮಕ್ಕಾಗಿ ಗಂಡ ವರ್ಷಕ್ಕೆ ಕನಿಷ್ಠ ಒಂದು ದಿನವಾದರೂ ಉಪವಾಸ ಮಾಡಬೇಕು ಎಂಬ ನಿಯಮ ಏನಾದರೂ ಇದೆಯೇ? ಅಂತಹದ್ದೇನೂ ಇಲ್ಲ. ಸಮಾಜ ಇಂತಹ ನಿಯಮಗಳನ್ನು ಏಕೆ ರೂಪಿಸಿಲ್ಲ? ಎಲ್ಲಾ ನಿಯಮಗಳೂ ಮಹಿಳೆಯರಿಗೇ ಏಕೆ? ಇವೆಲ್ಲವೂ ಸಮಾಜ ಸೃಷ್ಟಿಸಿಕೊಂಡಿರುವ ನಿಯಮಗಳು. ಯಾವುದೇ ಗ್ರಂಥದಲ್ಲೂ ಇಂತಹ ನಿಯಮಗಳಿಲ್ಲ ಎಂದು ನಮಿತಾ ಅಭಿಪ್ರಾಯಪಟ್ಟಿದ್ದಾರೆ.

ನಮಿತಾ ಅವರ ಈ ಕಾಮೆಂಟ್‌ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಕೆಲವರು ಅವರ ಪ್ರಶ್ನೆಗಳನ್ನು ಬೆಂಬಲಿಸಿದರೆ, ಇನ್ನು ಕೆಲವರು ಭಾರತೀಯ ಸಂಪ್ರದಾಯಗಳ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಉದ್ಯಮಿ ವೀರೇಂದ್ರ ಚೌಧರಿ ಜೊತೆ ವಿವಾಹ

'ನೀಲಕಂಠ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ನಮಿತಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ತಮಿಳು ಚಿತ್ರರಂಗದಲ್ಲಿ ನಮಿತಾ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೇ ಇದೆ. 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಅವರನ್ನು ನಮಿತಾ ವಿವಾಹವಾದರು. ತಮ್ಮ 41ನೇ ಹುಟ್ಟುಹಬ್ಬದಂದು ತಾವು ಗರ್ಭಿಣಿಯಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದರು. 2022ರ ಆಗಸ್ಟ್‌ನಲ್ಲಿ ನಮಿತಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಇನ್ನು 2020ರಲ್ಲಿ ಬಿಡುಗಡೆಯಾದ ‘ಮಿಯಾ’ ಎಂಬ ತಮಿಳು ಸಿನಿಮಾ ನಮಿತಾ ಅಭಿನಯದ ಕೊನೆಯ ಚಿತ್ರ. ಇದೀಗ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವರ್ಕೌಟ್ ಮೂಲಕ ಸಾಕಷ್ಟು ಸ್ಲಿಮ್ ಆಗಿರುವ ನಮಿತಾ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಲೇಟೆಸ್ಟ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಸ್‌ ಹಾಡುಗಳು, ಜಾನಪದ ಸೊಗಡು.. ಸಿನಿಮಾ ಪ್ರಿಯರಿಗೆ ಕಿಕ್‌ ಎಂದಿದ್ಯಾಕೆ ದುನಿಯಾ ವಿಜಯ್‌!
Video Review: ತಾಂತ್ರಿಕ ಶ್ರೀಮಂತ ಕುತೂಹಲಕರ ರುದ್ರ ಭಯಾನಕ ಜಾಗದಲ್ಲಿ ವ್ಲಾಗರ್‌ಗಳು!