
ಬೆಂಗಳೂರು (ಆ.12) ಮಾನ ಹಾಗೂ ಆನೆ ನಡುವಿನ ಸಂಘರ್ಷಗಳ ಕುರಿತು ಸಾಕ್ಷ್ಯ ಚಿತ್ರ ವಿಶ್ವ ಆನೆಗಳ ದಿನ (ಆ.12) ಬಿಡುಗಡೆಯಾಗುತ್ತಿದೆ. ಕ್ರಾಸಿಂಗ್ ಪಾತ್ಸ್ ಅನ್ನೋ ಸಾಕ್ಷ್ಯ ಚಿತ್ರದ ಮೂಲಕ ನಟಿ ಸಂಯುಕ್ತ ಹೊರನಾಡು ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ ಮಾನವ-ಆನೆ ಸಂಘರ್ಷದ ಕುರಿತು ಬೆಳಕು ಚೆಲ್ಲುತ್ತದೆ. ಈ ಸಾಕ್ಷ್ಯಚಿತ್ರಕ್ಕೆ ಟೆಕಿಯಾನ್ (Tekion) ಸಂಸ್ಥೆಯ ಸಿಎಸ್‌ಆರ್ ಇನಿಶಿಯೇಟಿವ್ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆ ಮತ್ತು ಆ ರೋಚಾ ಇಂಡಿಯಾ, ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಇದಕ್ಕೆ ಸಹಯೋಗ ನೀಡಿವೆ.
ಕಾಡುಗಳು ಕಿರಿದಾಗುತ್ತಾ, ಮಾನವನ ಚಟುವಟಿಕೆಗಳಿಂದಾಗಿ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಆನೆಗಳು ಅನಿವಾರ್ಯವಾಗಿ ಮಾನವ ವಸತಿ ಪ್ರದೇಶಗಳಿಗೆ ಕಾಲಿಡುತ್ತಿವೆ. ಇದು ಸ್ಥಳೀಯ ಸಮುದಾಯಗಳು ಮತ್ತು ವನ್ಯಜೀವಿಗಳು ಇಬ್ಬರ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಂಘರ್ಷಕ್ಕೆ ಕಾರಣವಾಗಿದೆ. 'ಕ್ರಾಸಿಂಗ್ ಪಾತ್ಸ್' ಚಿತ್ರವು ಈ ಸಂಘರ್ಷವನ್ನು ಹಾಗೂ ಮಾನವ ಮತ್ತು ಪ್ರಾಣಿಗಳು ಸಹಬಾಳ್ವೆ ನಡೆಸಲು ಕಂಡುಕೊಳ್ಳಬೇಕಾದ ಸುಸ್ಥಿರ ಮಾರ್ಗಗಳ ತುರ್ತು ಅಗತ್ಯವನ್ನು ಪರಿಶೀಲಿಸುತ್ತದೆ.
ಈ ಸಾಕ್ಷ್ಯಚಿತ್ರವು 'ಆ ರೋಚಾ ಇಂಡಿಯಾ' ಸಂಸ್ಥೆಯು 'ಕರ್ನಾಟಕ ಅರಣ್ಯ ಇಲಾಖೆ'ಯ ಸಹಯೋಗದೊಂದಿಗೆ ನಡೆಸುತ್ತಿರುವ 'ಪ್ರಾಜೆಕ್ಟ್ ಇಎಡಿಡಿಎಸ್' (ಆನೆಗಳ ಉಪಟಳ ತಡೆಯುವ ಶ್ವಾನ ದಳ) ಯೋಜನೆಯನ್ನು ಹಿಂಬಾಲಿಸುತ್ತದೆ. ಈ ಯೋಜನೆಯು ಸಂರಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. 'ಆ ರೋಚಾ ಇಂಡಿಯಾ' ತಂಡದ ಅವಿನಾಶ್ ಕೃಷ್ಣನ್ ಅವರು ಈ ಇಎಡಿಡಿಎಸ್ ಕಾರ್ಯಕ್ರಮವನ್ನು ನಿಭಾಯಿಸುತ್ತಿದ್ದಾರೆ. 'ಗಂಧದ ಗುಡಿ' ಮತ್ತು '777 ಚಾರ್ಲಿ' ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪ್ರತೀಕ್ ಶೆಟ್ಟಿ ಅವರು ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.
ಹವಾಮಾನ ವೈಪರೀತ್ಯ, ಪರಿಸರ ನಾಶ ಮತ್ತು ನಮ್ಮ ಸುತ್ತಲೂ ಹೆಚ್ಚುತ್ತಿರುವ ಹಿಂಸಾಚಾರದ ಈ ಕಾಲಘಟ್ಟದಲ್ಲಿ, 'ಕ್ರಾಸಿಂಗ್ ಪಾತ್ಸ್' ಅತ್ಯಂತ ತುರ್ತಾಗಿ ಗಮನಹರಿಸಬೇಕಾದ ಶಾಂತಿಯುತ ಸಂಘರ್ಷದ ಕಡೆಗೆ ಬೆಳಕು ಚೆಲ್ಲಲು ಹಾಗೂ ಸಹಬಾಳ್ವೆಯ ಸಾಧ್ಯತೆಯನ್ನು ಎತ್ತಿಹಿಡಿಯಲು ಆಶಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.