
ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಸಂದರ್ಶನವೊಂದರಲ್ಲಿ ಹೇಳಿರುವ ಮಾತು ಇದೀಗ ಸಖತ್ ವೈರಲ್ ಅಗುತ್ತಿದೆ. ಆ ಮಾತುಗಳು 'ಕೆಜಿಎಫ್ ಭಾಗ-1' ತೆರೆಗೆ ಬಂದು ಸೂಪರ್ ಹಿಟ್ ಆಗಿರುವ ಸಮಯದಲ್ಲಿ ಆಡಿದ್ದು. ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ ಆ ಮಾತುಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಹಾಗಿದ್ದರೆ ಅದೇನು ಮ್ಯಾಟರ್? ಯಾಕೆ ಯಶ್ ಅವರಾಡಿರುವ ಆ ಮಾತುಗಳು ಅಷ್ಟೊಂದು ವೈರಲ್ ಆಗುತ್ತಿರುತ್ತವೆ ಎಂಬುದರ ಬಗ್ಗೆ ಮುಂದಿದೆ ಮಾಹಿತಿ ನೋಡಿ...
ಹೌದು, ನಟ ಯಶ್ ಅವರಿಗೆ ಸಂದರ್ಶನವೊಂದರಲ್ಲಿ ನಿರೂಪಕಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. 'ನಿಮ್ಗೆ ಬಾಲಿವುಡ್ ಆಫರ್ಸ್ ಏನಾದ್ರೂ ಬಂತಾ?' ಅಂತ ಯಶ್ ಅವರನ್ನು ಕೇಳಿದ್ದಾರೆ. ಅದಕ್ಕೆ ಯಶ್ ಅವರು ತುಂಬಾ ಮಾರ್ಮಿಕ ಹಾಗೂ ಅನಿರೀಕ್ಷಿತ ಉತ್ತರ ಕೊಟ್ಟಿದ್ದಾರೆ. 'ನನಗೆ ಈ ಬಾಲಿವುಡ್, ಸ್ಯಾಂಡಲ್‌ವುಡ್ ಎಂಬ ಕಾನ್ಸೆಪ್ಟ್‌ಗಳಲ್ಲಿ ನಂಬಿಕೆ ಇಲ್ಲ. ಮುಂಬೈನಲ್ಲಿ ಸಿನಿಮಾ ಮಾಡಿದರೆ ಅದನ್ನು ಬಾಲಿವುಡ್ ಅಂತಾರೆ. ಆಂಧ್ರದಲ್ಲಿ ಮಾಡಿದ್ರೆ ಟಾಲಿವುಡ್ ಅಂತಾರೆ, ಕರ್ನಾಟಕದಲ್ಲಿ ಮಾಡಿದ್ರೆ ಅದನ್ನು ಸ್ಯಾಂಡಲ್‌ವುಡ್ ಅಂತಾರೆ.
ನನ್ನ ಪ್ರಕಾರ, ನಾವು ಯಾವುದೇ ಸಿನಿಮಾವವನ್ನು ಮಾಡಿದರೂ ಅದನ್ನು 'ಇಂಡಿಯನ್' ಸಿನಿಮಾ ಅಂತ ಹೇಳಬೇಕು. ನಾನು ಯಾಕೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡಿದೆ ಅಂದ್ರೆ, ಹೆಚ್ಚು ಏರಿಯಾಗಳಿಗೆ ರೀಚ್ ಆಗೋದಕ್ಕೆ ಹಾಗೂ ಹೆಚ್ಚು ಪ್ರೇಕ್ಷಕರನ್ನು ತಲುಪಲಿಕ್ಕೆ ಅಷ್ಟೇ. ನಾವು ಯಾವುದೇ ಭಾಷೆಯಲ್ಲಿ ಮಾಡಿದರೂ ಅದನ್ನು ಇಂಡಿಯನ್ ಸಿನಿಮಾ ಎನ್ನುವದೇ ಸರಿ' ಎಂದಿದ್ದಾರೆ ನಟ ಯಶ್.
ಕನ್ನಡದ ನಟ, ಈಗ ಜಗತ್ತೇ ನೋಡಿರುವ ಸ್ಟಾರ್ ಯಶ್ (Rocking Star Yash) ಸುದ್ದಿ ಇದು. ಯಶ್ ಅವರು ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರನ್ನು ಮದುವೆಯಾಗಿದ್ದು ಬಹುತೇಕರಿಗೆ ಗೊತ್ತಿದೆ. 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಒಟ್ಟಿಗೇ ನಟಿಸಿದ್ದರು. ಅದಕ್ಕೂ ಮೊದಲು ಅವರಿಬ್ಬರೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ, ಈ ಇಬ್ಬರೂ ಸ್ನೇಹಿತರಾಗಿ, ಪ್ರೇಮಿಗಳಾಗಿ 2016 ರಲ್ಲಿ ಮದುವೆ ಅಗಿದ್ದಾರೆ. ಈಗ ಯಶ್-ರಾಧಿಕಾ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್.
ನಟ ಯಶ್ ಸದ್ಯ ಬಾಲಿವುಡ್ ನಿರ್ಮಾಣದ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಸೀತೆಯಾಗಿ ನಟಿ ಸಾಯಿ ಪಲ್ಲವಿ ಜೋಡಿಯಾಗಿದ್ದಾರೆ. ರಾವಣನಾಗಿ ನಟ ಯಶ್ ಅವರು ಅಬ್ಬರಿಸಲಿದ್ದು, ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಜೊತೆಗೆ, ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್'ನಲ್ಲಿ ಯಶ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದ್ದು ಇವೆಲ್ಲವೂ ಭಾರೀ ಬಜೆಟ್ ಸಿನಿಮಾಗಳು. ಈ ಮೂಲಕ ಯಶ್ ಅವರು ಜಗತ್ತೇ ನೋಡುವ, ಮಾತನಾಡುವ ಹೀರೋ ಆಗಿ ಬೆಳೆದಿದ್ದಾರೆ.
ಇಂಥ ನಟ ಯಶ್ ಅವರು 'ಕೆಜಿಎಫ್' ಬಳಿಕ ಅದೊಂದು ಸಂದರ್ಶನದಲ್ಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯನ್ನು ಕನ್ನಡ ಚಿತ್ರರಂಗದಲ್ಲಿ ಅನುರೂಪ ಜೋಡಿ, ಆದರ್ಶ ಜೋಡಿ ಎಂದು ಕರೆಯುತ್ತಾರೆ. ಅವರು ಹೊರಗೆ ಫಂಕ್ಷನ್‌ಗಳಿಗೆ ಹೋದಾಗ ಕೂಡ ಅವರಿಬ್ಬರಲ್ಲಿ ಇರುವ ಅಪರೂಪದ ಎನಿಸುವ ಹೊಂದಾಣಿಕೆ ಎದ್ದು ಕಾಣಿಸುತ್ತದೆ. ಹಾಗಿದ್ದರೆ ನಟ ಯಶ್ ಅವರು ತಮ್ಮ ಹೆಂಡತಿ ರಾಧಿಕಾ ಪಂಡಿತ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..
ನಾನು ಇಂಥ ಪಾರ್ಟನರ್ ಹೊಂದಿರೋದಕ್ಕೆ ತುಂಬಾ ಖುಷಿ ಇದೆ. ರಾಧಿಕಾ ನನ್ನ ಶಕ್ತಿ.. ಅವ್ರು ಯಾವತ್ತೂ ನನ್ನ ಸಪೋರ್ಟ್ ಮಾಡಿದಾರೆ. ಅವರಿಗೆ ನನ್ನ ಬಗ್ಗೆ ಎಲ್ಲವೂ ಗೊತ್ತಿದೆ. ನಾವಿಬ್ಬರೂ ಒಂಥರಾ ಒಟ್ಟಿಗೇ ಬೆಳೆದವರು ಎನ್ನಬೇಕು. ಅದೇ ನಮ್ಮಿಬ್ಬರ ಅಡ್ವಾಂಟೇಜ್. ನಾನು ಅವರನ್ನು ಮೊದಲು ನೋಡಿದ್ದು ಫ್ರೆಂಡ್ ಆಗಿ. ಆ ಬಳಿಕವಷ್ಟೇ ಪ್ರೇಮಿ ಹಾಗೂ ಪತ್ನಿ. ಈಗವರು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಆದರೆ, ಎಲ್ಲಕ್ಕಿಂತ ಮೊದಲು ಅವರು ನನ್ನ ಫ್ರೆಂಡ್ ಆಗಿದ್ದ ಕಾರಣಕ್ಕೆ ಅವರಿಗೆ ನಾನು ಯಾವುದನ್ನು ಅತ್ಯಂತ ಹೆಚ್ಚಾಗಿ ಇಷ್ಟಪಡುತ್ತೇನೆ ಎಂಬುದು ಗೊತ್ತಿದೆ. ನನಗೂ ಅಷ್ಟೇ, ಅವರಿಗೆ ಏನಿಷ್ಟ ಅನ್ನೋದು ಗೊತ್ತಿದೆ.
ಇದೆಲ್ಲಕ್ಕಿಂತಲೂ ಹೆಚ್ಚಾಗಿ ನಾನು ಯಾವುದೇ ಸಿನಿಮಾ ಮಾಡಲಿ, ಅದ್ರಿಂದ ನಿನಗೆ ಏನು ಸಿಗುತ್ತೆ ಅಂತಾಗಲೀ ಅಥವಾ, ನಿನಗೆ ಅದ್ರಿಂದ ಎಷ್ಟು ಹಣ ಬಂತು ಎಂದಾಗಲೀ, ಯಾವತ್ತೂ ರಾಧಿಕಾ ಕೇಳಿಲ್ಲ. ಜೊತೆಗೆ, ಈ ಸಿನಿಮಾ ನನಗೆ ಒಳ್ಳೆಯ ಆಯ್ಕೆಯಾ ಅಥವಾ ಕೆಟ್ಟ ಆಯ್ಕೆಯಾ ಎಂದು ಯಾವತ್ತೂ ಕೇಳಿಲ್ಲ. ಅವಳು ಕೇಳಿದ್ದು ಒಂದೇ, 'ನೀನು ಸಂತೋಷವಾಗಿ ಇದ್ದೀಯಾ?' ಎಂದಷ್ಟೇ..' ಎಂದಿದ್ದಾರೆ ರಾಧಿಕಾ ಪಂಡಿತ್ ಪತಿ, ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್.
ಈಗಂತೂ ನಟ ಯಶ್ ಮಾತ್ರವಲ್ಲ, ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ ಕೂಡ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. 'ಕೊತ್ತಲವಾಡಿ' ಸಿನಿಮಾ ನಿರ್ಮಾಣ ಮಾಡಿ ಇದೀಗ ಪ್ರಚಾರಕಾರ್ಯದಲ್ಲಿ ಭಾಗಿಯಾಗಿರುವ ಪುಷ್ಪಾ ಅವರು ಈಗ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. 01 ಆಗಸ್ಟ್ 2025ರಂದು ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್ ಅವರ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದ ಬಳಿಕ ಮಲ್ಟಿ ಲಾಂಗ್ವೇಜ್ ಸಿನಿಮಾ ಮಾಡಲು ಅವರು ಯೋಚಿಸುತ್ತಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.