
‘ರಣಬಾಲಿ’ ಪ್ರೀ-ರಿಲೀಸ್ ಈವೆಂಟ್ನಲ್ಲಿ ರಶ್ಮಿಕಾ ಮಂದಣ್ಣ ಮಾಡಿದ ಕಾಮೆಂಟ್ಸ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ವಿಜಯ್ ದೇವರಕೊಂಡ ಜೊತೆಗಿನ ತಮ್ಮ ಹಿಂದಿನ ಸಿನಿಮಾಗಳನ್ನು ನೆನಪಿಸಿಕೊಂಡ ನಟಿ, ಮತ್ತೆ ಅವರೊಂದಿಗೆ ಪ್ರೇಮಕಥೆಯಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಣಬಾಲಿ’ಯ ಗ್ರ್ಯಾಂಡ್ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ವೇಳೆ ನಾಯಕಿ ರಶ್ಮಿಕಾ ಮಂದಣ್ಣ ತಮ್ಮ ಮಾತುಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಿನಿಮಾ ತಂಡದ ಪರಿಶ್ರಮ, ನಿರ್ದೇಶಕ ರಾಹುಲ್ ಸಂಕೃತ್ಯಾಯನ್ ಅವರ ವಿಷನ್ ಹಾಗೂ ನಾಯಕ ವಿಜಯ್ ದೇವರಕೊಂಡ ಅವರ ಅಭಿನಯದ ಬಗ್ಗೆ ರಶ್ಮಿಕಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ವೇದಿಕೆಯಲ್ಲಿ ಮಾತನಾಡಿದ ರಶ್ಮಿಕಾ, ಎಷ್ಟೇ ಬಾರಿ ಸ್ಟೇಜ್ ಏರಿದ್ದರೂ ಪ್ರತಿ ಬಾರಿಯೂ ಹೃದಯ ಬಡಿತ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವೇ ತಮ್ಮನ್ನು ಧೈರ್ಯವಾಗಿ ಮುಂದೆ ಸಾಗುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ‘ರಣಬಾಲಿ’ಯಲ್ಲಿನ ತಮ್ಮ ‘ಜಯಮ್ಮ’ ಪಾತ್ರದ ಲುಕ್ನಲ್ಲಿ ಅಭಿಮಾನಿಗಳು ಮಾಡುತ್ತಿರುವ ರೀಲ್ಸ್, ಪೋಸ್ಟ್ಗಳು ಹಾಗೂ ಕಾಮೆಂಟ್ಗಳನ್ನು ನೋಡಿ ಖುಷಿಯಾಗುತ್ತಿದೆ ಎಂದು ರಶ್ಮಿಕಾ ಹೇಳಿದ್ದಾರೆ.
'ನಿಮ್ಮ ರೀಲ್ಸ್ ನೋಡುತ್ತಾ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ನೀವು ತುಂಬಾ ಮುದ್ದಾಗಿದ್ದೀರಿ. ಐ ಲವ್ ಯೂ ಆಲ್' ಎಂದು ಅಭಿಮಾನಿಗಳಿಗೆ ರಶ್ಮಿಕಾ ಪ್ರೀತಿಯಿಂದ ಹೇಳಿದ್ದಾರೆ.
ಸಿನಿಮಾ ಸೆಟ್ನಲ್ಲಿ ರಶ್ಮಿಕಾಗೆ ಭಯವಾಗಿದ್ದೇಕೆ?
‘ರಣಬಾಲಿ’ ಶೂಟಿಂಗ್ ಅನುಭವದ ಬಗ್ಗೆ ಮಾತನಾಡಿದ ರಶ್ಮಿಕಾ, ತಾವು ಕೆಲವೇ ದಿನಗಳ ಶೆಡ್ಯೂಲ್ನಲ್ಲಿ ಭಾಗಿಯಾಗುತ್ತಿದ್ದೆ, ಆದರೆ ಚಿತ್ರತಂಡದ ಉಳಿದ ಸದಸ್ಯರು ತಿಂಗಳುಗಟ್ಟಲೆ ನಿರಂತರವಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ನಾನು ನಾಲ್ಕೈದು ದಿನಗಳ ಶೆಡ್ಯೂಲ್ಗೆ ಹೋಗಿ ಮತ್ತೆ ಬರುತ್ತಿದ್ದೆ. ಆದರೆ ಸೆಟ್ಗೆ ಹೋದಾಗ ಎಲ್ಲರೂ ಅಷ್ಟು ಸೀರಿಯಸ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಅವರನ್ನು ನೋಡಿದಾಗ ನನಗೆ ಭಯವಾಗುತ್ತಿತ್ತು ಎಂದು ರಶ್ಮಿಕಾ ಹೇಳಿದ್ದಾರೆ.
ವಿಜಯ್ ದೇವರಕೊಂಡ ಅವರ ಅಭಿನಯದ ಬಗ್ಗೆಯೂ ವಿಶೇಷವಾಗಿ ಮಾತನಾಡಿದ ಅವರು, ವಿಜಯ್ ಮೀಸೆ ತಿರುಗಿಸುತ್ತಾ ಆ ಪರ್ಫಾರ್ಮೆನ್ಸ್ ಕೊಡುತ್ತಿದ್ದರೆ ನಿಜಕ್ಕೂ ಭಯವಾಗುತ್ತದೆ ಎಂದು ಹೇಳಿದ್ದಾರೆ. ಚಿತ್ರತಂಡ ಕಠಿಣ ಪರಿಸ್ಥಿತಿಗಳಲ್ಲೂ ಅತ್ಯಂತ ಶ್ರಮಪಟ್ಟು ಕೆಲಸ ಮಾಡಿದೆ. ಇಡೀ ಕಾಸ್ಟ್ ಮತ್ತು ಕ್ರೂ ನೀಡಿದ ಪರಿಶ್ರಮವನ್ನು ಎಷ್ಟು ಹೊಗಳಿದರೂ ಕಡಿಮೆಯೇ ಎಂದು ರಶ್ಮಿಕಾ ತಿಳಿಸಿದ್ದಾರೆ.
‘ರಣಬಾಲಿ’ ಸಿನಿಮಾ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ!
ಚಿತ್ರದ ಬಗ್ಗೆ ಮಾತನಾಡಿದ ರಶ್ಮಿಕಾ, ತಾವು ಈ ಸಿನಿಮಾದ ಮೊದಲ ಪ್ರೇಕ್ಷಕಿ ಎಂದು ಹೇಳಿದ್ದಾರೆ. ಅಕ್ಟೋಬರ್ 16ರಂದು ‘ರಣಬಾಲಿ’ ಬಿಡುಗಡೆಯಾಗಲಿದೆ. ಸಿನಿಮಾ ನೋಡಿದಾಗ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅದನ್ನು ನಾನು ಹಾಮೀ ನೀಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.
ತಾವು ಇನ್ನೂ ಸಂಪೂರ್ಣ ಸಿನಿಮಾವನ್ನು ನೋಡಿಲ್ಲ. ಅಭಿಮಾನಿಗಳ ಜೊತೆಯಲ್ಲೇ ಮೊದಲ ದಿನ ಸಿನಿಮಾ ವೀಕ್ಷಿಸುವುದಾಗಿ ಅವರು ತಿಳಿಸಿದ್ದಾರೆ. ಚಿತ್ರತಂಡ ಸಿನಿಮಾವನ್ನು ಅತ್ಯಂತ ಪ್ರೀತಿ ಮತ್ತು ಪ್ಯಾಷನ್ನಿಂದ ಮಾಡಿದೆ. ಇಡೀ ತಂಡವನ್ನು ನೋಡಿದಾಗ ಅವರು ‘ಗಾಡ್ ಮೋಡ್’ನಲ್ಲಿ ಕೆಲಸ ಮಾಡಿರುವಂತೆ ಅನಿಸುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.
ರಾಹುಲ್ ಸಂಕೃತ್ಯಾಯನ್ ಬಗ್ಗೆ ರಶ್ಮಿಕಾ ಮಾತು
ನಿರ್ದೇಶಕ ರಾಹುಲ್ ಸಂಕೃತ್ಯಾಯನ್ ಅವರ ಬಗ್ಗೆ ಮಾತನಾಡಿದ ರಶ್ಮಿಕಾ, ಈ ಸಿನಿಮಾ ತಮ್ಮ ಪಾಲಿಗೆ ಬಹಳ ವಿಶೇಷವಾದದ್ದು ಎಂದು ಹೇಳಿದ್ದಾರೆ. ನಾನು ಒಂದು ಸಿನಿಮಾ ಮಾಡಬೇಕೆಂದರೆ ಅದು ನನಗಾಗಿ ದೇವರು ಬರೆದು ಇಟ್ಟಿರುವ ಸಿನಿಮಾ ಎಂದು ನಂಬುತ್ತೇನೆ. ಹಲವು ಸಿನಿಮಾಗಳನ್ನು ಮಾಡಬೇಕು ಅನಿಸುತ್ತದೆ. ಆದರೆ ಡೇಟ್ಸ್, ಕಾಂಪ್ಲಿಕೇಷನ್ಸ್ ಹೀಗೆ ಹಲವು ಕಾರಣಗಳಿಂದ ಸಾಧ್ಯವಾಗುವುದಿಲ್ಲ. ಆದರೆ ಈ ಸಿನಿಮಾ ಬಂದಾಗ ನಾನು ಇದನ್ನು ಮಾಡಿದ್ದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ಏಕೆಂದರೆ ಇದು ಬಹಳ ಮುಖ್ಯವಾದ ಸಿನಿಮಾ ಎಂದು ಹೇಳಿದ್ದಾರೆ.
ವಿಜಯ್ ಜೊತೆ ಮತ್ತೆ ಲವ್ಸ್ಟೋರಿ ಮಾಡಬೇಕು!
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಈಗಾಗಲೇ ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಈ ಎರಡೂ ಸಿನಿಮಾಗಳಲ್ಲೂ ಇವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಆದರೆ ‘ರಣಬಾಲಿ’ ಕೇವಲ ಪ್ರೇಮಕಥೆಯಲ್ಲ ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದಾರೆ. ಸಿನಿಮಾದಲ್ಲಿ ಲವ್ ಟ್ರ್ಯಾಕ್ ಅದ್ಭುತವಾಗಿರಲಿದೆ. ಆದರೆ ಸಿನಿಮಾ ಪ್ರೇಮಕಥೆಗಿಂತಲೂ ದೊಡ್ಡ ಕ್ಯಾನ್ವಾಸ್ ಹೊಂದಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವಿಜಯ್ ದೇವರಕೊಂಡ ಜೊತೆ ಮತ್ತೊಮ್ಮೆ ಪ್ರೇಮಕಥೆಯ ಸಿನಿಮಾದಲ್ಲಿ ನಟಿಸುವ ಆಸೆಯನ್ನೂ ರಶ್ಮಿಕಾ ವ್ಯಕ್ತಪಡಿಸಿದ್ದಾರೆ.
ತಮ್ಮ ಪಾತ್ರ ‘ಜಯಮ್ಮ’ ಬಗ್ಗೆ ಮಾತನಾಡುವಾಗ ರಶ್ಮಿಕಾ ಭಾವುಕರಾಗಿದ್ದಾರೆ. ರಾಹುಲ್ ಸಂಕೃತ್ಯಾಯನ್ ಅವರಿಂದ ಪಾತ್ರದ ನ್ಯಾರೇಷನ್ ಕೇಳುವ ಸಂದರ್ಭದಲ್ಲಿ ‘ಜಯಮ್ಮ’ ಎಂಬುದು ನಿರ್ದೇಶಕರ ತಾಯಿಯ ಹೆಸರು ಎಂಬುದು ತಿಳಿದಾಗ ತಾವು ಭಾವುಕರಾದೆ ಎಂದು ಹೇಳಿದ್ದಾರೆ. ಇದನ್ನು ಈಗ ಮಾಡದೇ ಇದ್ದರೆ ಹೇಗೆ ಎಂಬ ಭಾವನೆ ಬಂತು. ಜಯಮ್ಮ ತುಂಬಾ ಸುಂದರವಾದ ಪಾತ್ರ. ಆ ಪಾತ್ರ ನಿಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಈ ಸಿನಿಮಾ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ರಶ್ಮಿಕಾ ಹೇಳಿದ್ದಾರೆ.
ಸಂಗೀತ ನಿರ್ದೇಶಕರಾದ ಅಜಯ್-ಅತುಲ್ ಅವರಿಗೆ ಅದ್ಭುತ ಸಂಗೀತ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ ರಶ್ಮಿಕಾ, ತಾವು ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ. ಇನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯನ್ನು ತಮ್ಮ ‘ಹೋಮ್ ಪ್ರೊಡಕ್ಷನ್’ ಎಂದು ಕರೆದಿರುವ ರಶ್ಮಿಕಾ, ಅವರೊಂದಿಗೆ ಇನ್ನಷ್ಟು ಕ್ರೇಜಿ ಸಿನಿಮಾಗಳನ್ನು ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಕೊನೆಯಲ್ಲಿ ವಿಜಯ್ ದೇವರಕೊಂಡ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಶ್ಮಿಕಾ, ಅವರ ಅಭಿನಯದ ದೊಡ್ಡ ಅಭಿಮಾನಿ ತಾವು ಎಂದಿದ್ದಾರೆ.
‘ರಣಬಾಲಿ’ಯಲ್ಲಿ ವಿಜಯ್ ದೇವರಕೊಂಡ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನೋಡಲು ತಾವು ಕೂಡ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಮಾತುಗಳು ‘ರಣಬಾಲಿ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಅದರಲ್ಲೂ ವಿಜಯ್ ದೇವರಕೊಂಡ ಜೊತೆ ಮತ್ತೆ ಲವ್ಸ್ಟೋರಿ ಮಾಡಬೇಕೆಂಬ ಅವರ ಆಸೆ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.