ಅವನ ಕೈಯಲ್ಲಿ ಹೊಡೆತ ತಿನ್ನಬೇಕಾ? ಹೋಗ್ರಯ್ಯ: ಒಂದು ಷರತ್ತು ಎಂದಿದ್ಯಾಕೆ ರಜನಿಕಾಂತ್

Published : Oct 14, 2026, 03:12 PM IST
Rajinikanth

ಸಾರಾಂಶ

‘ಜೈಲರ್ 2’ ಚಿತ್ರದ ವೇದಿಕೆಯಲ್ಲಿ ರಜನಿಕಾಂತ್ ಸೀಕ್ವೆಲ್ ಬಗ್ಗೆ ತಮ್ಮ ಅಭಿಪ್ರಾಯ, ನೆಲ್ಸನ್ ಜೊತೆಗಿನ ಚರ್ಚೆ, ಮಿಥುನ್ ಚಕ್ರವರ್ತಿ ಅವರ ಷರತ್ತು, ಎಸ್.ಜೆ. ಸೂರ್ಯ ಅವರ ಡೆಡಿಕೇಷನ್ ಹಾಗೂ ತಮನ್ನಾ ಅವರ ಹಾಡಿನ ಬಗ್ಗೆ ಮಾತನಾಡಿದ್ದಾರೆ.

ರಜನಿಕಾಂತ್ ಯಾವುದೇ ವೇದಿಕೆಯಲ್ಲಾದರೂ ಸೊಗಸಾಗಿ ಮಾತನಾಡುತ್ತಾರೆ. ತನ್ನನ್ನು ತಾನು ಗೇಲಿ ಮಾಡಿಕೊಳ್ಳುತ್ತ, ಕೊಂಚ ಫಿಲಾಸಫಿ ಬೆರೆಸುವ ಅವರ ಮಾತುಗಳಿಗೇ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅ.15ರಂದು ಬಿಡುಗಡೆಯಾಗುತ್ತಿರುವ ‘ಜೈಲರ್ 2’ ಚಿತ್ರದ ವೇದಿಕೆಯಲ್ಲಿ ಅವರು ಆಡಿದ ಮಾತಿನ ತುಣುಕುಗಳು ಹೀಗಿವೆ:

-ನಾನು ಸೀಕ್ವೆಲ್‌ಗಳನ್ನು ಅಷ್ಟಾಗಿ ಪ್ರೋತ್ಸಾಹಿಸುವುದಿಲ್ಲ. ಸೀಕ್ವೆಲ್ ಅಂದಕೂಡಲೇ ಕ್ರಿಯೇಟಿವಿಟಿ ಕಡಿಮೆಯಾಗಿದೆ, ಹಳೆಯ ಸರಕಿಗೇ ಉಪ್ಪು-ಖಾರ ಹಾಕಿ ಮತ್ತೆ ಮಾಡುತ್ತಾರೆ ಎಂಬ ಭಾವನೆ ನನಗಿತ್ತು.

-ಈ ಹಿಂದೆ ‘ಬಾಷಾ’, ‘ಪೆಟ್ಟಾ’ ಸೀಕ್ವೆಲ್ ಐಡಿಯಾ ಹೇಳಿದಾಗ ಆಸಕ್ತಿ ಬರಲಿಲ್ಲ. ಆದರೆ ‘ಜೈಲರ್’ ಓಟಿಟಿಯಲ್ಲಿ ಮತ್ತೊಮ್ಮೆ ನೋಡುವಾಗ ನೆಲ್ಸನ್ ಕಥೆಯಲ್ಲಿ ಹಲವು ದಾರಿಗಳನ್ನು ಉಳಿಸಿರುವುದು ಗಮನಕ್ಕೆ ಬಂತು. ವರ್ಮನ್ ಹೇಳುವ ‘ನಮ್ಮ ಹಿಂದೆ ಒಂದು ದೊಡ್ಡ ಗುಂಪಿದೆ’ ಎಂಬ ಮಾತು, ಜೈಲರ್ ಬಳಿಯ ಕಂಟೇನರ್‌ಗಳು ಕತೆಗೆ ಅಡಿಪಾಯ ಹಾಕಿದ್ದವು.

-ಈ ಐಡಿಯಾ ಹೊಳೆದು ನೆಲ್ಸನ್‌ಗೆ ಫೋನ್ ಮಾಡಿದಾಗ, ಅವರು ಮತ್ತೊಬ್ಬ ದೊಡ್ಡ ಹೀರೋ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸಿದ್ದರು. ಐಡಿಯಾ ಹೇಳಿದಾಗ, ‘ಬೇಡ ಸರ್, ಮತ್ತೆ ಅದೇ ಮಾಡಿ ಹಿಂಡಿ ಹಿಪ್ಪೆ ಮಾಡುವುದು ಬೇಡ’ ಎಂದರು. ಒಂದು ತಿಂಗಳ ಬಳಿಕ ಅವರೇ, ‘ಸರ್, ಯೋಚಿಸಿದೆ. ‘ಜೈಲರ್ 2’ ಮಾಡಿದರೆ ಚೆನ್ನಾಗಿರುತ್ತದೆ’ ಎಂದರು.

-ಈ ಐಡಿಯಾಕ್ಕೆ ಮುಖ್ಯ ಕಾರಣ ಜೈಲರ್ ಪಾತ್ರ. ನನಗೆ ಈಗ 75 ವರ್ಷ. ವಯಸ್ಸಿಗೆ ತಕ್ಕ ಪಾತ್ರ ಸಿಗುವುದು ಕಷ್ಟ. ಈ ವಯಸ್ಸಿನಲ್ಲಿ ಒಳ್ಳೆಯ ಪಾತ್ರದೊಂದಿಗೆ ಕೆರಿಯರ್ ಮುಂದುವರಿಸುವುದೂ ಸುಲಭವಲ್ಲ. ದೊಡ್ಡ ನಟರಿಗೆ ಸರಿಯಾದ ಕಥೆ, ಪಾತ್ರ, ನೆಲ್ಸನ್‌ರಂತಹ ನಿರ್ದೇಶಕ, ಸನ್ ಪಿಕ್ಚರ್ಸ್‌ನಂತಹ ನಿರ್ಮಾಣ ಸಂಸ್ಥೆ ಸಿಗದಿದ್ದರೆ ನಟನೆ ಮುಂದುವರಿಸುವುದು ಕಷ್ಟ.

ಚಾಲೆಂಜ್ ಇರಬೇಕು

-ಸೀಕ್ವೆಲ್‌ನ ಕಷ್ಟ ಕಣಕ್ಕಿಳಿದ ಮೇಲೆಯೇ ಗೊತ್ತಾಗುತ್ತದೆ. ಮೊದಲ ಭಾಗದ ಬಳಿಕ ಎರಡನೇ ಭಾಗಕ್ಕೆ ಬಂದಾಗ ಹಿಂದಿನ ಚಿತ್ರವೇ ಬೃಹತ್ ಭೂತದಂತೆ ಎದುರು ನಿಲ್ಲುತ್ತದೆ. ಅದಕ್ಕೆ ಸರಿಸಮಾನವಾಗಿ ಅಥವಾ ಮಿಗಿಲಾಗಿ ಕೊಡಬೇಕು. ಜೀವನದಲ್ಲಿ ಚಾಲೆಂಜ್ ಇರಬೇಕು. ಸುಮ್ಮನೆ ಓಡಿದರೆ ಪ್ರಯೋಜನವಿಲ್ಲ.

-ಮಿಥುನ್ ಚಕ್ರವರ್ತಿ ಅವರನ್ನು ವಿಲನ್ ಪಾತ್ರಕ್ಕೆ ಕೇಳಿದಾಗ, ‘ರಜನಿ ಎದುರು ವಿಲನ್ ಆಗಿ ನಟಿಸಬೇಕಾ? ಅವನು ನನ್ನ ಆಪ್ತ ಗೆಳೆಯ. ಅವನ ಕೈಯಲ್ಲಿ ಹೊಡೆತ ತಿನ್ನಬೇಕಾ? ಹೋಗ್ರಯ್ಯ!’ ಎಂದು ಕಳುಹಿಸಿಬಿಟ್ಟಿದ್ದರಂತೆ. ಬಾಂಬೆಯಲ್ಲಿ ಸಿಕ್ಕಾಗ ನನ್ನನ್ನು ಕೇಳಿದರು. ‘ನೀವು ಮಾಡಿದರೆ ಚೆನ್ನಾಗಿರುತ್ತದೆ’ ಎಂದೆ. ‘ಒಂದು ಷರತ್ತು, ನೀನು ನನಗೆ ಹೊಡೆಯಬಾರದು, ನನ್ನ ಮೇಲೆ ಶೂಟ್ ಮಾಡಬಾರದು’ ಎಂದರು. ಡೈರೆಕ್ಟರ್ ಬಳಿ ಹೇಳುತ್ತೇನೆ ಎಂದೆ. ಹಾಗೆ ಅವರೂ ಬಂದರು.

-ಎಸ್.ಜೆ. ಸೂರ್ಯ ನಟ ರಾಕ್ಷಸ. ನೆಲ್ಸನ್ ಓಕೆ ಎಂದರೂ ಅವರು ಬಿಡುತ್ತಿರಲಿಲ್ಲ. ‘ಸರ್, ಒನ್ ಮೋರ್ ಸರ್, ಇನ್ನೊಂದು ಟೇಕ್ ಸರ್’ ಎಂದು 8, 10, 12 ಟೇಕ್ ತೆಗೆಯುತ್ತಿದ್ದರು. ನಾವೂ, ರಮ್ಯಾ ಕೃಷ್ಣನ್ ಅವರೂ ನಿಂತಿರಬೇಕು. ಕೊನೆಗೆ, ‘ನನಗೆ 75 ವರ್ಷವಾಯಿತು, ಸ್ವಲ್ಪ ಕೂತ್ಕೋತೀನಿ ಬಿಡಿ’ ಎಂದರೂ ಬಿಡುತ್ತಿರಲಿಲ್ಲ. ಅವರ ಡೆಡಿಕೇಷನ್ ನೋಡಿ ದಂಗಾದೆ.

ಸಾಧ್ಯವಿಲ್ಲ ಸರ್

-‘ಜೈಲರ್ 2’ರಲ್ಲಿ ಮಿಸ್ಸಿಂಗ್ ಎಂದರೆ ತಮನ್ನಾ. ಅವರ ಒಂದು ಹಾಡು ಇಡೋಣ ಎಂದು ನೆಲ್ಸನ್‌ಗೆ ಹೇಳಿದೆ. ‘ನಿಮಗೆ ಇಷ್ಟ ಎಂದು ಇಡಲು ಸಾಧ್ಯವಿಲ್ಲ ಸರ್’ ಎಂದರು. ‘ನನಗೆ ಇಷ್ಟ ಎಂದು ಮಾಡಿದ್ದರೆ 40 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಹೋಗಿಬಿಡುತ್ತಿದ್ದೆ. ಜನರಿಗೆ ಏನು ಇಷ್ಟವೋ ಅದನ್ನು ಮಾಡಿದ ಕಾರಣಕ್ಕೇ ಇಲ್ಲಿಯವರೆಗೆ ಬಂದಿದ್ದೇನೆ’ ಎಂದೆ.

-ನನಗೆ 75-76 ವರ್ಷವಾಗುತ್ತಿದೆ. ಇನ್ನೂ ಹೇಗೆ ಹೀರೋ ಆಗಿ ನಟಿಸುತ್ತಿದ್ದೀರಿ ಎಂದು ಹಲವರು ಕೇಳುತ್ತಾರೆ. ನನ್ನನ್ನು ಬದುಕಿಸುತ್ತಿರುವುದು ಅಭಿಮಾನಿಗಳು. ನೀವಿಲ್ಲದಿದ್ದರೆ ನಾನೇನೂ ಅಲ್ಲ, ಒಂದು ಹುಲ್ಲಿನ ಕಡ್ಡಿಯಷ್ಟೇ. ನಿಮ್ಮ ಪ್ರೀತಿ, ಬೆಂಬಲದಿಂದಲೇ ಸಿನಿಮಾ ಸಾಧ್ಯವಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೌತ್ ಇಂಡಿಯಾದ ನೂರಾರು ಕುಟುಂಬಗಳಿಗೆ ಆಸರೆಯಾದ ರಶ್ಮಿಕಾ ಮಂದಣ್ಣ; ಈ ಕಾರ್ಯಕ್ಕೆ 'ಜಯಮ್ಮ' ಕೊಡುಗೆ ಏನು?
Gunmaaster G9 Movie: ಶೂಟಿಂಗ್ ವೇಳೆ ಭೀಕರ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ; ಗಾಳಿಯಲ್ಲಿ ಪಲ್ಟಿ ಹೊಡೆದ SUV, ವಿಡಿಯೋ ವೈರಲ್