
ಕನ್ನಡದ ನಟಿ ರುಕ್ಮಿಣಿ ವಸಂತ್ ಸದ್ಯ ಸ್ಯಾಂಡಲ್ವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಚಿತ್ರರಂಗದಲ್ಲೂ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಹಾಗೂ ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳ ಬಳಿಕ ರುಕ್ಮಿಣಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿರುವ ಅವರಿಗೆ ಮತ್ತೊಂದು ದೊಡ್ಡ ಅವಕಾಶ ಒದಗಿ ಬಂದಿದೆ.
ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ಅವರ ಮುಂದಿನ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಟಾಲಿವುಡ್ನಲ್ಲಿ ಮತ್ತೊಂದು ಪ್ರಮುಖ ಸಿನಿಮಾದ ಭಾಗವಾಗಲಿದ್ದಾರೆ ರುಕ್ಮಿಣಿ. ನಾನಿ ಅಭಿನಯದ ‘ದಿ ಪ್ಯಾರಡೈಸ್’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಆಕ್ಷನ್ ಪ್ರಧಾನವಾಗಿದ್ದ ಈ ಸಿನಿಮಾ ನಾನಿಯ ವೃತ್ತಿಜೀವನದಲ್ಲೇ ವಿಭಿನ್ನ ಪ್ರಯತ್ನವಾಗಿತ್ತು. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎನ್ನಲಾಗಿದೆ.
ಇದೀಗ ಆಕ್ಷನ್ ಜಾನರ್ನಿಂದ ಹೊರಬಂದು ನಾನಿ ಮತ್ತೆ ತಮ್ಮ ಪ್ರೇಮಕಥೆ ಮತ್ತು ರೊಮ್ಯಾಂಟಿಕ್ ಕಾಮಿಡಿ ಶೈಲಿಯತ್ತ ಮರಳುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಸರಳ ಹಾಗೂ ಭಾವನಾತ್ಮಕ ಪ್ರೇಮಕತೆಯನ್ನು ಆಧರಿಸಿರಲಿದೆ ಎನ್ನಲಾಗಿದ್ದು, ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
‘96’ ನಿರ್ದೇಶಕರ ಜೊತೆ ನಾನಿ-ರುಕ್ಮಿಣಿ ಜೋಡಿ
ಈ ಸಿನಿಮಾದ ಮತ್ತೊಂದು ವಿಶೇಷತೆ ನಿರ್ದೇಶಕರ ಆಯ್ಕೆ. ತಮಿಳಿನ ಜನಪ್ರಿಯ ಸಿನಿಮಾ ‘96’ ಮೂಲಕ ಗಮನ ಸೆಳೆದ ನಿರ್ದೇಶಕ ಪ್ರೇಮ್ ಕುಮಾರ್ ಅವರು ನಾನಿಯ ಮುಂದಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ‘96’ ಸಿನಿಮಾದಲ್ಲಿ ಪ್ರೀತಿ, ನೆನಪುಗಳು ಮತ್ತು ಭಾವನೆಗಳನ್ನು ಅತ್ಯಂತ ಸಹಜವಾಗಿ ಕಟ್ಟಿಕೊಟ್ಟಿದ್ದ ಪ್ರೇಮ್ ಕುಮಾರ್, ಇದೀಗ ನಾನಿ ಮತ್ತು ರುಕ್ಮಿಣಿ ವಸಂತ್ ಅವರೊಂದಿಗೆ ಯಾವ ರೀತಿಯ ಕಥೆಯನ್ನು ಹೇಳಲಿದ್ದಾರೆ ಎಂಬ ಕುತೂಹಲ ಮೂಡಿದೆ.
ರುಕ್ಮಿಣಿ ಅವರ ಸಹಜ ಅಭಿನಯ ಹಾಗೂ ತೆರೆ ಮೇಲಿನ ಆಕರ್ಷಕ ವ್ಯಕ್ತಿತ್ವ ಈ ಪಾತ್ರಕ್ಕೆ ಸೂಕ್ತವಾಗಲಿದೆ ಎಂಬ ಕಾರಣಕ್ಕೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ನಾನಿ ಅವರಂತಹ ಸ್ಟಾರ್ ನಟನ ಜೊತೆ ರುಕ್ಮಿಣಿ ಮೊದಲ ಬಾರಿಗೆ ಜೋಡಿಯಾಗುತ್ತಿರುವುದು ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಸದ್ಯ ರುಕ್ಮಿಣಿ ವಸಂತ್ ಕೈಯಲ್ಲಿ ಹಲವು ಭಾಷೆಗಳ ಸಿನಿಮಾಗಳಿವೆ. ಜೂನಿಯರ್ ಎನ್ಟಿಆರ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಇದರ ಜೊತೆಗೆ ಮಲಯಾಳಂನಲ್ಲಿ ನಿವಿನ್ ಪೌಲಿ ಅಭಿನಯಿಸುತ್ತಿರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ‘ಮಂಗಳ ಗೌರಿ’ ಎಂಬ ಹಾಸ್ಯಪ್ರಧಾನ ಥ್ರಿಲ್ಲರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ತಮಿಳಿನ ಮತ್ತೊಂದು ಸಿನಿಮಾಕ್ಕೂ ರುಕ್ಮಿಣಿ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಕನ್ನಡದಿಂದ ಆರಂಭಿಸಿ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದತ್ತ ಹೆಜ್ಜೆ ಇಡುತ್ತಿರುವ ರುಕ್ಮಿಣಿ ವಸಂತ್, ಇದೀಗ ನಾನಿ ಜೊತೆಗಿನ ಸಿನಿಮಾದ ಮೂಲಕ ಟಾಲಿವುಡ್ನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ನಾನಿ-ರುಕ್ಮಿಣಿ ಜೋಡಿ ಹಾಗೂ ಪ್ರೇಮ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.