ಸಿನಿಮಾ ವೇದಿಕೆಯಲ್ಲೇ ಸೂಪರ್ ಎಲ್ ನಿನೋ, ಬರಗಾಲ ಆತಂಕದ ಬಗ್ಗೆ ವಿಜಯ್ ದೇವರಕೊಂಡ ಏನಂದ್ರು?

Published : Oct 14, 2026, 04:23 PM IST
Vijay Deverakonda

ಸಾರಾಂಶ

ರಣಬಾಲಿ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ವಿಜಯ್ ದೇವರಕೊಂಡ ಸಿನಿಮಾ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಹುಲ್ ಸಂಕೃತ್ಯಾಯನ್, ರಶ್ಮಿಕಾ ಮಂದಣ್ಣ ಹಾಗೂ ಬರಗಾಲದ ಬಗ್ಗೆ ನಟ ಹೇಳಿದ್ದೇನು ತಿಳಿಯಿರಿ.

ಬಹುನಿರೀಕ್ಷಿತ ಸಿನಿಮಾ ‘ರಣಬಾಲಿ’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರದ ಗ್ರ್ಯಾಂಡ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಾಯಕ ವಿಜಯ್ ದೇವರಕೊಂಡ ಸಿನಿಮಾದ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ರಣಬಾಲಿ’ ತೆಲುಗು ಚಿತ್ರರಂಗ ಹೆಮ್ಮೆಪಡುವಂತಹ ಸಿನಿಮಾವಾಗಲಿದೆ ಎಂದು ಹೇಳಿರುವ ಅವರು, ನಿರ್ದೇಶಕ ರಾಹುಲ್ ಸಂಕೃತ್ಯಾಯನ್ ಅವರ ದೃಷ್ಟಿಕೋನ, ಚಿತ್ರತಂಡದ ಪರಿಶ್ರಮ ಹಾಗೂ ಸಿನಿಮಾದ ಹಿಂದಿರುವ ಉದ್ದೇಶದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ಮುಂಬರುವ ಬರಗಾಲದ ಆತಂಕದ ಬಗ್ಗೆಯೂ ಪ್ರಸ್ತಾಪಿಸಿ, ನೀರು, ವಿದ್ಯುತ್ ಮತ್ತು ಆಹಾರವನ್ನು ಮಿತವಾಗಿ ಬಳಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

‘ತೆಲುಗು ಚಿತ್ರರಂಗ ಹೆಮ್ಮೆಪಡುವ ಸಿನಿಮಾ ರಣಬಾಲಿ!’

ಅಕ್ಟೋಬರ್ 16ರಂದು ಬಿಡುಗಡೆಯಾಗಲಿರುವ ‘ರಣಬಾಲಿ’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ವಿಜಯ್ ದೇವರಕೊಂಡ ಅವರ ಮಾತುಗಳು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಸಿನಿಮಾದ ಬಗ್ಗೆ ತಮ್ಮಲ್ಲಿರುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, 'ಬರುತ್ತಿದ್ದಾನೆ ಸಿಂಗನಮಲ ಬೊಬ್ಬಿಲಿ ರಣಬಾಲಿ. ಬಾ, ನಿನ್ನಿಂದ ಏನಾಗುತ್ತೋ ನೋಡೋಣ!' ಎಂಬರ್ಥದಲ್ಲಿ ಸವಾಲಿನ ಧಾಟಿಯಲ್ಲಿ ಮಾತನಾಡಿದ್ದಾರೆ.

‘ಟ್ಯಾಕ್ಸಿವಾಲಾ’, ‘ಶ್ಯಾಮ್ ಸಿಂಗ ರಾಯ್’ ಸಿನಿಮಾಗಳ ಮೂಲಕ ಗಮನ ಸೆಳೆದ ನಿರ್ದೇಶಕ ರಾಹುಲ್ ಸಂಕೃತ್ಯಾಯನ್, ಒಂದು ದೊಡ್ಡ ಗ್ರಾಮೀಣ ಹಿನ್ನೆಲೆಯ ಮಾಸ್ ಪೀರಿಯಡ್ ಸಿನಿಮಾ ಮಾಡುವ ಕನಸು ಕಂಡಿದ್ದರು. ತಮ್ಮ ಊರಿಗೆ ತೆರಳಿ ಅಲ್ಲಿನ ಕಥೆಗಳು, ಜಾತ್ರೆಗಳು, ಬುರ್ರಕಥೆಗಳು ಹಾಗೂ ವೀರರ ಇತಿಹಾಸವನ್ನು ತಿಳಿದುಕೊಳ್ಳುವ ಸಂದರ್ಭದಲ್ಲಿ ಅವರಿಗೆ ದೊಡ್ಡ ಕಥಾ ಜಗತ್ತು ತೆರೆದುಕೊಂಡಿತು ಎಂದು ವಿಜಯ್ ಹೇಳಿದ್ದಾರೆ. ಆದರೆ, ಇತಿಹಾಸದ ಪುಟಗಳಲ್ಲಿ ಅಡಗಿರುವ ಒಂದು ಮಹತ್ವದ ಅಧ್ಯಾಯದ ಪರಿಚಯವಾದಾಗ ಆ ಕಥೆಗೆ ಹೊಸ ಉದ್ದೇಶ ಸಿಕ್ಕಿತು. ಅದೇ ‘ರಣಬಾಲಿ’ ಸಿನಿಮಾವಾಗಿ ರೂಪುಗೊಂಡಿತು ಎಂದು ವಿವರಿಸಿದ್ದಾರೆ.

ಈ ಸಿನಿಮಾ ಕೇವಲ ಪೀರಿಯಡ್ ಆಕ್ಷನ್ ಚಿತ್ರವಲ್ಲ, ಐತಿಹಾಸಿಕ ಕಥೆಯೂ ಅಲ್ಲ. ಈ ಎರಡೂ ಅಂಶಗಳನ್ನು ವಿಭಿನ್ನವಾಗಿ ಸಂಯೋಜಿಸಿ, ಸುಂದರವಾಗಿ ಪ್ರೇಕ್ಷಕರ ಮುಂದಿಡುವ ಪ್ರಯತ್ನವೇ ‘ರಣಬಾಲಿ’ಯ ವಿಶೇಷತೆ ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಸಂಕೃತ್ಯಾಯನ್ ತಮ್ಮ ವೃತ್ತಿಜೀವನಕ್ಕಾಗಿ ಮಾತ್ರವಲ್ಲದೆ, ಮಹತ್ವದ ಕಥೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿನಿಮಾ ಮಾಡುತ್ತಾರೆ ಎಂದು ನಿರ್ದೇಶಕರನ್ನು ಶ್ಲಾಘಿಸಿದ್ದಾರೆ.

ಬರಗಾಲದ ಬಗ್ಗೆ ವಿಜಯ್ ದೇವರಕೊಂಡ ಎಚ್ಚರಿಕೆ!

ಸಿನಿಮಾದ ಬಗ್ಗೆ ಮಾತನಾಡುವುದರ ಜೊತೆಗೆ ವಿಜಯ್ ದೇವರಕೊಂಡ ಒಂದು ಪ್ರಮುಖ ಸಾಮಾಜಿಕ ಸಂದೇಶವನ್ನೂ ನೀಡಿದ್ದಾರೆ. ಇತಿಹಾಸದಲ್ಲಿ ಕೆಲವು ಘಟನೆಗಳು ಚಕ್ರದಂತೆ ಮತ್ತೆ ಮತ್ತೆ ಮರುಕಳಿಸುತ್ತವೆ ಎಂದು ಹೇಳಿದ ಅವರು, ಸೂಪರ್ ಎಲ್ ನಿನೋ ವಿದ್ಯಮಾನ ಹಾಗೂ ಅದರಿಂದ ಎದುರಾಗಬಹುದಾದ ಬರಗಾಲದ ಆತಂಕದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಈ ವಿಚಾರದ ಬಗ್ಗೆ ಮಾತನಾಡಿರುವುದನ್ನು ಉಲ್ಲೇಖಿಸಿದ ವಿಜಯ್, ಸುಮಾರು 150 ವರ್ಷಗಳ ಹಿಂದೆ ಸಂಭವಿಸಿದ ಬರಗಾಲದ ಭೀಕರ ಪರಿಣಾಮಗಳನ್ನು ನೆನಪಿಸಿಕೊಂಡಿದ್ದಾರೆ. ಆಗಿನ ಮದ್ರಾಸ್ ಬರಗಾಲದ ಸಂದರ್ಭದಲ್ಲಿ ಬ್ರಿಟಿಷರ ಆಡಳಿತದ ನೀತಿಗಳಿಂದಾಗಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದರೆಂದು ತಿಳಿಸಿದ್ದಾರೆ.

ಮತ್ತೆ ಇಂತಹ ಹವಾಮಾನ ಪರಿಸ್ಥಿತಿ ಎದುರಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದ್ದಾರೆ. ಮುಂದಿನ ಒಂದು ವರ್ಷ ನೀರು, ವಿದ್ಯುತ್ ಮತ್ತು ಆಹಾರವನ್ನು ಅನಗತ್ಯವಾಗಿ ವ್ಯರ್ಥ ಮಾಡದೆ ಜವಾಬ್ದಾರಿಯಿಂದ ಬಳಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ನೀರು, ವಿದ್ಯುತ್ ಮತ್ತು ಆಹಾರವನ್ನು ಉಳಿಸಿ. ಯಾವುದನ್ನೂ ವ್ಯರ್ಥ ಮಾಡಬೇಡಿ' ಎಂಬುದು ವಿಜಯ್ ಅವರ ಸಂದೇಶದ ಸಾರವಾಗಿತ್ತು.

‘ಐ ವಿಲ್ ಬಿ ಬ್ಯಾಕ್’ ಎಂದಿದ್ದ ವಿಜಯ್; ಈಗ ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸ!

ತಮ್ಮ ಸಿನಿಮಾ ಪಯಣದ ಏರಿಳಿತಗಳನ್ನು ನೆನಪಿಸಿಕೊಂಡ ವಿಜಯ್ ದೇವರಕೊಂಡ, ‘ಟ್ಯಾಕ್ಸಿವಾಲಾ’ ಸಮಯದಲ್ಲಿ ಎದುರಿಸಿದ ಸವಾಲುಗಳು ಹಾಗೂ ‘ನೋಟಾ’ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದಿದ್ದಾಗ ಅನುಭವಿಸಿದ ನೋವಿನ ಬಗ್ಗೆಯೂ ಮಾತನಾಡಿದ್ದಾರೆ. ಆ ಕಷ್ಟದ ಸಮಯದಲ್ಲಿ ತಾವು ಮತ್ತೆ ಯಶಸ್ಸಿನೊಂದಿಗೆ ಮರಳುವುದಾಗಿ ಹೇಳಿದ್ದ ಮಾತನ್ನು ಸ್ಮರಿಸಿಕೊಂಡ ಅವರು, ತಮ್ಮ ಆತ್ಮವಿಶ್ವಾಸವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.

ನಾನು ಮತ್ತೆ ಬರುತ್ತೇನೆ ಎಂದು ಹೇಳಿದ್ದೆ. ನಾನು ಮರಳಿ ಬರುತ್ತೇನೆ ಎಂಬುದನ್ನು ಖಚಿತವಾಗಿ ನಂಬಿ ಎಂಬರ್ಥದಲ್ಲಿ ಮಾತನಾಡಿದ ವಿಜಯ್, ‘ರಣಬಾಲಿ’ ಮೂಲಕ ನಿರ್ದೇಶಕ ರಾಹುಲ್ ಸಂಕೃತ್ಯಾಯನ್ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೊಡ್ಡ ವೇದಿಕೆ ಕಲ್ಪಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅನಂತಪುರದಲ್ಲಿ ನಡೆಯಲಿರುವ ‘ರಣಬಾಲಿ’ ವಿಜಯೋತ್ಸವದ ವೇದಿಕೆಯಲ್ಲಿ ಮತ್ತೆ ಇದೇ ಮಾತುಗಳನ್ನು ಹೇಳುವುದಾಗಿ ತಿಳಿಸಿದ್ದಾರೆ.

ನಮ್ಮ ಕೈಯಲ್ಲಿರುವುದು ನಮ್ಮ ಮೇಲಿನ ನಂಬಿಕೆ ಮತ್ತು ನಾವು ಮಾಡುವ ಕೆಲಸದ ಬಗೆಗಿನ ಸಂಪೂರ್ಣ ಬದ್ಧತೆ ಮಾತ್ರ. ಉಳಿದ ಸಂಗತಿಗಳು ನಮ್ಮ ಪರವಾಗಿ ಕೈಜೋಡಿಸಬೇಕು ಎಂದು ವಿಜಯ್ ಹೇಳಿದ್ದಾರೆ.

ರಶ್ಮಿಕಾ ಅಭಿನಯಕ್ಕೆ ವಿಜಯ್ ಮೆಚ್ಚುಗೆ

ಚಿತ್ರತಂಡದ ಪ್ರತಿಯೊಬ್ಬರಿಗೂ ವಿಜಯ್ ದೇವರಕೊಂಡ ಧನ್ಯವಾದ ಅರ್ಪಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಅವರು ತೆಲುಗು ಚಿತ್ರರಂಗಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಸಿನಿಮಾಟೋಗ್ರಾಫರ್ ಜಿಷ್ಣು ಭಟ್ಟಾಚಾರ್ಯ ಅವರ ಕೆಲಸವನ್ನು ಮೆಚ್ಚಿಕೊಂಡ ವಿಜಯ್, ಸಂಗೀತ ನಿರ್ದೇಶಕರಾದ ಅಜಯ್-ಅತುಲ್ ಸಂಯೋಜನೆಯ ‘ಏಂದಯ್ಯಾ ಸ್ವಾಮಿ’ ಹಾಡು ಬ್ಲಾಕ್‌ಬಸ್ಟರ್ ಆಗಿದೆ ಎಂದು ಹೇಳಿದ್ದಾರೆ.

ನಾಯಕಿ ರಶ್ಮಿಕಾ ಮಂದಣ್ಣ ಅವರ ಅಭಿನಯ ಹಾಗೂ ನಟಿಯಾಗಿ ಅವರು ಬೆಳೆದು ಬಂದಿರುವ ರೀತಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಇತರ ಕಲಾವಿದರು ಕೂಡ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದು ಚಿತ್ರದ ದೊಡ್ಡ ಶಕ್ತಿಯಾಗಲಿದೆ ಎಂಬ ವಿಶ್ವಾಸವನ್ನು ವಿಜಯ್ ಹಂಚಿಕೊಂಡಿದ್ದಾರೆ.

ಇನ್ನು ‘ರಣಬಾಲಿ’ ಕೇವಲ ಆಕ್ಷನ್ ಮತ್ತು ಮನರಂಜನೆಗೆ ಸೀಮಿತವಾಗದೆ, ಇತಿಹಾಸದ ಮಹತ್ವದ ಅಧ್ಯಾಯವೊಂದನ್ನು ಪ್ರೇಕ್ಷಕರ ಮುಂದಿಡುವ ಸಿನಿಮಾ ಎಂಬ ನಿರೀಕ್ಷೆಯನ್ನು ವಿಜಯ್ ದೇವರಕೊಂಡ ವ್ಯಕ್ತಪಡಿಸಿದ್ದಾರೆ. ಅವರ ಆತ್ಮವಿಶ್ವಾಸದ ಮಾತುಗಳು, ರಾಹುಲ್ ಸಂಕೃತ್ಯಾಯನ್ ಅವರ ವಿಭಿನ್ನ ಕಥನಶೈಲಿ ಮತ್ತು ಚಿತ್ರತಂಡದ ಪರಿಶ್ರಮದ ಬಗ್ಗೆ ಮಾಡಿದ ಮೆಚ್ಚುಗೆ ಈಗ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂಟಿ ಹುಡುಗಿಯ ರಹಸ್ಯ ಶಕ್ತಿ, ಮನೆ ಮೇಲೆ ಬೀಳುವ ಕಲ್ಲುಗಳು: ಪ್ರೈಮ್‌ನಲ್ಲಿದೆ ಮಸ್ಟ್ ವಾಚ್ ಹಾರರ್ ಸೀರಿಸ್!
ಇವರ ಜೊತೆ ಲವ್‌ಸ್ಟೋರಿ ಮಾಡ್ಬೇಕು: ರಶ್ಮಿಕಾ ಮನಸ್ಸಿನಲ್ಲಿರೋ ಆ ಆಸೆ ಕೊನೆಗೂ ಬಯಲು!