ಕಾಶ್ಮೀರಕ್ಕೆ ಹೊರಟ ರಮೇಶ್‌ ಅರವಿಂದ್‌ !

By Web DeskFirst Published Aug 9, 2019, 11:17 AM IST
Highlights

ರಮೇಶ್ ಅರವಿಂದ್ ನಿರ್ದೇಶನದ '100' ಚಿತ್ರದ ಫಸ್ಟ್ ಲುಕ್ ರಿಲೀಸ್ | ಶೃಂಗೇರಿ, ಕಾಶ್ಮೀರದಲ್ಲಿ ಶೂಟಿಂಗ್ | ಕ್ರೈಮ್ ನ ಮತ್ತೊಂದು ಮುಖದ ಅನಾವರಣ ಮಾಡುತ್ತದೆ ‘100' ಸಿನಿಮಾ 

ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸುತ್ತಿರುವ ‘100’ ಚಿತ್ರದ ಫಸ್ಟ್ ಲುಕ್ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ರಮೇಶ್ ಮೊದಲ ಬಾರಿಗೆ ಮಾತನಾಡಿದ್ದಾರೆ.

ಯಾವಾಗ ‘100’ ಹೆಸರಿನ ಸಿನಿಮಾ ಶುರುವಾಯಿತು?

ಒಂದು ತಿಂಗಳ ಹಿಂದೆ ಶುರುವಾದ ಸಿನಿಮಾ. ಚಿತ್ರೀಕರಣ ಬಹುತೇಕ ಮುಗಿಸಿಕೊಂಡ ಮೇಲೆ ನಮ್ಮ ಚಿತ್ರದ ಬಗ್ಗೆ ಮಾತಾಡೋಣ ಎಂದುಕೊಂಡಿದ್ದೆ. ಸಾಕಷ್ಟುಪೂರ್ವ ತಯಾರಿ ಮಾಡಿಕೊಂಡಿದ್ದಕ್ಕೆ ಇಷ್ಟುಬೇಗ ಶೂಟಿಂಗ್‌ ಮುಗಿಸುವ ಹಂತಕ್ಕೆ ಬಂದಿದ್ದೇವೆ. ಶೇ.30 ಭಾಗ ಚಿತ್ರೀಕರಣ ಬಾಕಿ ಇದೆ. ಇದನ್ನು ಶೃಂಗೇರಿ ಹಾಗೂ ಕಾಶ್ಮೀರದಲ್ಲಿ ಚಿತ್ರೀಕರಣ ಪ್ಲಾನ್‌ ಮಾಡಿಕೊಂಡಿದ್ದೇವೆ.

ಈ ಚಿತ್ರದ ಕತೆ ಏನು?

ಸೈಬರ್‌ ಕ್ರೈಂ ಹಿನ್ನೆಲೆಯಲ್ಲಿ ನಡೆಯುವ ಘಟನೆಗಳೇ ಚಿತ್ರದ ಕತೆಯ ಅಂಶಗಳು. ಸೈಬರ್‌ ಕ್ರೈಮ್‌ ಎಂದಾಗ ಏನೆಲ್ಲ ನೆನಪಿಗೆ ಬರುತ್ತದೆ ಎಂಬುದು ಪ್ರತ್ಯೇಕವಾಗಿ ಬೇಳಬೇಕಿಲ್ಲ. ಆದರೆ, ಆ ಕ್ರೈಮ್‌ನ ಮತ್ತೊಂದು ಮುಖವಾಡವನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಜತೆಗೆ ಪೊಲೀಸ್‌ ಇಲಾಖೆಯ ಸಹಾಯವಾಣಿ ‘100’ ಸಂಖ್ಯೆಯ ನಂಬರ್‌ ಹೇಗೆ ಇಲ್ಲಿ ಬಳಕೆಯಾಗುತ್ತದೆ ಎಂಬುದನ್ನು ಕೂಡ ಚಿತ್ರದಲ್ಲಿ ಹೇಳಲಾಗಿದೆ.

ಇಲ್ಲಿ ನಿಮ್ಮ ಪಾತ್ರವೇನು?

ನಾನು ಸೈಬರ್‌ ಕ್ರೈಂ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ‘ವೆಂಕಟ ಇನ್‌ ಸಂಕಟ’ ಹಾಗೂ ಇನ್ನೂ ಬಿಡುಗಡೆಯಾಗದ ‘ಭೈರಾದೇವಿ’ ಚಿತ್ರದಲ್ಲೂ ನಾನು ಪೊಲೀಸ್‌ ಪಾತ್ರ ಮಾಡಿದ್ದೇನೆ. ಈ ಚಿತ್ರಗಳ ನಂತರ ಒಂದು ಖಡಕ್‌ ಪೊಲೀಸ್‌ ಪಾತ್ರ ಮಾಡಿರುವುದು ಈ ‘100’ ಚಿತ್ರದಲ್ಲಿ. ನನ್ನ ಪಾತ್ರದ ಹೆಸರು ವಿಷ್ಣು. ಸೃಷ್ಟಿಯ ಸೃಷ್ಟಿಕರ್ತ, ದೃಷ್ಟನಾಶಕ ವಿಷ್ಣು. ಹೀಗಾಗಿ ನಾನೂ ಕೂಡ ತೆರೆ ಮೇಲೆ ದೃಷ್ಟರನ್ನು ನಾಶ ಮಾಡುವುದರಿಂದ ವಿಷ್ಣು ಎನ್ನುವ ಹೆಸರನ್ನು ನನ್ನ ಪಾತ್ರಕ್ಕೆ ಇಡಲಾಗಿದೆ.

ಪೊಲೀಸ್‌ ಸಹಾಯವಾಣಿ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?

ಅಧುನಿಕ ತಂತ್ರಜ್ಞಾನದ ಬಳಕೆಯ ಪರಿಣಾಗಳ ಸುತ್ತ ಈ ಸಿನಿಮಾ ಸಾಗುತ್ತದೆ. ತೀರಾ ಖಾಸಗಿ ಜೀವನ ಕೂಡ ಈ ಅಧುನಿಕತೆ ಹೇಗೆಲ್ಲ ಕಿತುತ್ತುಕೊಳ್ಳುತ್ತಿದೆ. ಅದರಿಂದಾಗುವ ದುಷ್ಪರಿಣಾಮಗಳು ಹೇಗಿರುತ್ತದೆ ಎಂಬುದನ್ನ ಇಲ್ಲಿ ಕಾಣಬಹುದು. ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ಸಾಮಾಜಿಕ ಜಾಲತಾಣಗಳು ಈಗ ತಂದೊಡ್ಡುತ್ತಿರುವ ಪರಿಣಾಗಳು ಒಂದೆರಡಲ್ಲ. ಕೆಲವು ಆ್ಯಪ್‌ಗಳು ಮನುಷ್ಯರ ಪ್ರಾಣವನ್ನೇ ತೆಗೆಯುತ್ತಿರುವ ಹೊತ್ತಿನಲ್ಲಿ ಅದೇ ಕತೆಯನ್ನು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದರೆ ಜನರಲ್ಲಿ ಅರಿವು ಮೂಡಿಸುವುದು ಈ ಚಿತ್ರದ ಉದ್ದೇಶ. ಮುಖ್ಯವಾಗಿ ಸೈಬರ್‌ ಕ್ರೈಂನಿಂದ ಹೆಣ್ಣು ಮಕ್ಕಳನ್ನು ಹೇಗೆ ರಕ್ಷಿಸುವುದು ಎಂದು ತೋರಿಸುವ ಪ್ರಯತ್ನವಿದು.

100 ಚಿತ್ರದ ತಂಡದ ಬಗ್ಗೆ ಹೇಳುವುದಾದರೆ?

ಸೂರಜ್‌ ಪ್ರೊಡಕ್ಷನ್‌ನಲ್ಲಿ ರಮೇಶ್‌ ರೆಡ್ಡಿ ನಂಗ್ಲಿ ಈ ಚಿತ್ರದ ನಿರ್ಮಾಪಕರು. ಈ ಹಿಂದೆ ‘ಪಡ್ಡೆಹುಲಿ’ ಚಿತ್ರವನ್ನು ನಿರ್ಮಿಸಿದವರು. ಸತ್ಯಹೆಗ್ಡೆ ಈ ಚಿತ್ರದ ಛಾಯಾಗ್ರಾಹಕ. ರವಿ ಬಸ್ರೂರು ಸಂಗೀತವಿದೆ. ನನ್ನದೇ ‘ಸುಂದರಾಂಗ ಜಾಣ’, ‘ಪುಷ್ಪಕ ವಿಮಾನ’ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್‌ 100 ಚಿತ್ರಕ್ಕೂ ಡೈಲಾಗ್‌ ಬರೆಯುತ್ತಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ಆರು ಮಂದಿ ನಾಯಕಿಯರಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಪೂರ್ಣ, ರಚಿತಾ ರಾಮ್‌, ಆಶಿಕಾ ರಂಗನಾಥ್‌, ಶಿಲ್ಪಾ ಶೆಟ್ಟಿ, ಸುಕನ್ಯಾ ಗಿರೀಶ್‌, ಲಕ್ಷ್ಮೀ ಅವರು ನಟಿಸಿದ್ದಾರೆ. ಉಳಿದಂತೆ ಮಾಲತಿ ಸುಧೀರ್‌, ಬೇಬಿ ವಿಸ್ಮಯ ಅವರು ಮುಖ್ಯ ಪಾತ್ರಧಾರಿಗಳು.

ಇನ್ನೂ ಚಿತ್ರೀಕರಣ ಎಷ್ಟುಬಾಕಿ ಇದೆ?

ಬೆಂಗಳೂರಿನಲ್ಲಿ ಮಾತ್ರ ಈಗಾಗಲೇ 32 ದಿನ ಶೂಟಿಂಗ್‌ ಮಾಡಿದ್ದು, ಮುಂದೆ ಶೃಂಗೇರಿಯಲ್ಲಿ 8 ದಿನ, ಕಾಶ್ಮೀರದಲ್ಲಿ ಒಂದು ವಾರಗಳ ಕಾಲ ಚಿತ್ರೀಕರಣ ಮಾಡಿದರೆ ಶೂಟಿಂಗ್‌ ಮುಗಿದಂತೆ. ಕಾರ್ಪೋರೇಟ್‌ ಶೈಲಿಯಲ್ಲಿ ಮೇಕಿಂಗ್‌ ಮಾಡುತ್ತಿದ್ದೇವೆ.

ನಿಮ್ಮ ನಟನೆಯ ಚಿತ್ರಗಳು ಯಾವಾಗ ತೆರೆ ಮೇಲೆ ಬರೋದು?

ನನ್ನ ನಿರ್ದೇಶನದ ‘ಬಟರ್‌ ಫ್ಲೈ’ ಸದ್ಯದಲ್ಲೇ ಬರಲಿದೆ. ಇದರ ಜತೆಗೆ ನನ್ನ ನಟನೆಯ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಹಾಗೂ ‘ಭೈರಾದೇವಿ’ ಚಿತ್ರಗಳು ಇನ್ನೇನು ತೆರೆಗೆ ಬರಲಿವೆ. ಅವು ಕೊನೆಯ ಹಂತದ ಚಿತ್ರೀಕರಣದಲ್ಲಿವೆ.

- ಆರ್. ಕೇಶವಮೂರ್ತಿ 

click me!