
ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ಕ್ಷಣಗಣನೆ ಶುರುವಾಗಿರುವಾಗಲೇ, ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಅಧಿಕೃತ ಬಿಡುಗಡೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವುದು ಸಿನಿಪ್ರಿಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ವಿಶೇಷ ಪ್ರದರ್ಶನ ಕಂಡಿದ್ದ ಟ್ರೇಲರ್ ಅನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಆನ್‌ಲೈನ್‌ಗೆ ಹರಿಬಿಟ್ಟಿದ್ದು, ಕಡಿಮೆ ಗುಣಮಟ್ಟದ ವಿಡಿಯೊ ಆಗಿದ್ದರೂ ಅದರಲ್ಲಿರುವ ಅದ್ದೂರಿ ದೃಶ್ಯಗಳು ಈಗಾಗಲೇ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ಲೀಕ್ ಟ್ರೇಲರ್‌ನಲ್ಲಿ ರಾವಣನಾಗಿ ಯಶ್ ರೌದ್ರಾವತಾರ
ಟ್ರೇಲರ್‌ನ ಪ್ರಮುಖ ಹೈಲೈಟ್ ಎಂದರೆ ರಾವಣನಾಗಿ ಯಶ್ ಅವರ ಅದ್ಧೂರಿ ಎಂಟ್ರಿ. ಘರ್ಜಿಸುತ್ತಿರುವ ಸಿಂಹದ ಎದುರು ಇನ್ನಷ್ಟು ಆವೇಶದಿಂದ ಘರ್ಜಿಸುವ ರಾವಣನ ದೃಶ್ಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ತನ್ನ ವ್ಯಕ್ತಿತ್ವದ ಪ್ರಭಾವದಿಂದಲೇ ಸಿಂಹವನ್ನು ಶಾಂತಗೊಳಿಸುವ ದೃಶ್ಯ, ಜೊತೆಗೆ ಬಾಹುಗಳನ್ನು ಚಾಚಿ ಸಂಭಾಷಣೆ ಹೇಳುವ ಕ್ಷಣಗಳು ಟ್ರೇಲರ್‌ನ ಅತ್ಯಂತ ಮಾಸ್ ಹೈಲೈಟ್‌ಗಳಾಗಿ ಕಾಣಿಸಿಕೊಂಡಿವೆ.
ರಾಮ, ಸೀತೆ, ಹನುಮಂತನ ದರ್ಶನ
ಲೀಕ್ ಆದ ಟ್ರೇಲರ್‌ನಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಕುಲ್ ಪ್ರೀತ್ ಸಿಂಗ್ ಶೂರ್ಪಣಖಿಯಾಗಿ ಕಾಣಿಸಿಕೊಂಡಿದ್ದಾರೆ. ರಾಮನ ವನವಾಸ, ದಶರಥ-ರಾಮ ಭಾವನಾತ್ಮಕ ಕ್ಷಣಗಳು, ಸೀತಾ ಕಲ್ಯಾಣ, ಶೂರ್ಪಣಖಿಯ ಮೂಗು ಕತ್ತರಿಸುವ ದೃಶ್ಯ, ಹನುಮಂತನ ಭವ್ಯ ಎಂಟ್ರಿ ಸೇರಿದಂತೆ ರಾಮಾಯಣದ ಪ್ರಮುಖ ಅಧ್ಯಾಯಗಳ ಝಲಕ್ ಟ್ರೇಲರ್‌ನಲ್ಲಿ ಕಾಣಸಿಗುತ್ತದೆ. ಕೇವಲ ಕೆಲವು ನಿಮಿಷಗಳ ದೃಶ್ಯಗಳೇ ಚಿತ್ರದ ಅದ್ದೂರಿ ನಿರ್ಮಾಣವನ್ನು ಸೂಚಿಸುತ್ತಿವೆ.
ಕಡಿಮೆ ಗುಣಮಟ್ಟದಲ್ಲೂ ಅದ್ದೂರಿ ಮೇಕಿಂಗ್
ಲೀಕ್ ಆದ ವಿಡಿಯೊ ಮೊಬೈಲ್‌ನಲ್ಲಿ ಚಿತ್ರೀಕರಿಸಲ್ಪಟ್ಟ ಕಾರಣ ದೃಶ್ಯ ಗುಣಮಟ್ಟ ಉತ್ತಮವಾಗಿಲ್ಲ. ಆದರೂ ಚಿತ್ರದ ಅದ್ದೂರಿ ಸೆಟ್‌ಗಳು, ಅತ್ಯಾಧುನಿಕ VFX ಹಾಗೂ ಭವ್ಯ ದೃಶ್ಯ ಸಂಯೋಜನೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಧಿಕೃತ ಟ್ರೇಲರ್ ಬಿಡುಗಡೆಯಾದ ಬಳಿಕ ಈ ದೃಶ್ಯಗಳು ಇನ್ನಷ್ಟು ಅದ್ಭುತವಾಗಿ ಮೂಡಿಬರಲಿವೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ನಾಳೆ ಅಧಿಕೃತ ಟ್ರೇಲರ್ ಬಿಡುಗಡೆ
ಚಿತ್ರತಂಡ ಈಗಾಗಲೇ ಅಧಿಕೃತ ಟ್ರೇಲರ್ ಬಿಡುಗಡೆಗೆ ಸಜ್ಜಾಗಿದ್ದು, ಜುಲೈ 30ರಂದು ಬೆಳಿಗ್ಗೆ 4:15ಕ್ಕೆ ಟ್ರೇಲರ್ ಬಿಡುಗಡೆಯಾಗಲಿದೆ. ಲೀಕ್ ವಿಡಿಯೊ ಈಗಾಗಲೇ ವೈರಲ್ ಆಗಿರುವ ಹಿನ್ನೆಲೆ, ಅಧಿಕೃತ ಟ್ರೇಲರ್‌ಗೆ ದಾಖಲೆ ಮಟ್ಟದ ವೀಕ್ಷಣೆ ಸಿಗುವ ನಿರೀಕ್ಷೆ ಇದೆ.
ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಮಹಾಕಾವ್ಯಕ್ಕೆ ಸುಮಾರು ₹2000 ಕೋಟಿ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಸೇರಿದಂತೆ ಭಾರೀ ತಾರಾಗಣ ಚಿತ್ರದಲ್ಲಿದ್ದು, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಸಹ ನಿರ್ಮಾಪಕರಾಗಿದ್ದಾರೆ. ಮೊದಲ ಭಾಗ ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ ಮುಂದಿನ ವರ್ಷದ ನವೆಂಬರ್‌ನಲ್ಲಿ ತೆರೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.