ರಾವಣನಾಗಿ ಯಶ್ ರೌದ್ರಾವತಾರ: 'ರಾಮಾಯಣ' ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದ ಆ 5 ದೃಶ್ಯಗಳು ಯಾವುವು?

Published : Jul 30, 2026, 05:09 PM IST
Yash Ramayana Movie

ಸಾರಾಂಶ

ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ 'ರಾಮಾಯಣ: ಪಾರ್ಟ್ 1' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.

ಸಿನಿಪ್ರಿಯರು ಹಲವು ತಿಂಗಳುಗಳಿಂದ ಕಾತರದಿಂದ ಕಾಯುತ್ತಿದ್ದ 'ರಾಮಾಯಣ: ಪಾರ್ಟ್ 1' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಮಹಾಕಾವ್ಯ 'ರಾಮಾಯಣ' ಆಧಾರಿತ ಈ ಬಿಗ್ ಬಜೆಟ್ ಸಿನಿಮಾ ತನ್ನ ಅದ್ಭುತ ದೃಶ್ಯ ವೈಭವ, ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್ ಹಾಗೂ ಭಾವನಾತ್ಮಕ ನಿರೂಪಣೆಯಿಂದ ಮೊದಲ ನೋಟದಲ್ಲೇ ಪ್ರೇಕ್ಷಕರ ಗಮನ ಸೆಳೆದಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶೇಷವಾಗಿ ಅದರ ತಾಂತ್ರಿಕ ಗುಣಮಟ್ಟ, ಹಿನ್ನೆಲೆ ಸಂಗೀತ ಮತ್ತು ಪಾತ್ರಗಳ ವಿನ್ಯಾಸದ ಬಗ್ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಹ್ಯಾನ್ಸ್ ಝಿಮ್ಮರ್ ಮತ್ತು ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಜಂಟಿಯಾಗಿ ನೀಡಿರುವ ಹಿನ್ನೆಲೆ ಸಂಗೀತ ಟ್ರೇಲರ್‌ನ ಪ್ರತಿಯೊಂದು ಫ್ರೇಮ್‌ಗೆ ಮತ್ತಷ್ಟು ಭವ್ಯತೆಯನ್ನು ನೀಡಿದೆ.

ಟ್ರೇಲರ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ 5 ದೃಶ್ಯಗಳು

1. ರಾವಣನಾಗಿ ಯಶ್‌ರ ಭರ್ಜರಿ ಎಂಟ್ರಿ: ಟ್ರೇಲರ್‌ನಲ್ಲೇ ಅತಿ ಹೆಚ್ಚು ಚರ್ಚೆಗೆ ಕಾರಣವಾಗಿರುವುದು ಯಶ್ ಅವರ ರಾವಣ ಅವತಾರ. ಮೂರು ಲೋಕಗಳ ಅಧಿಪತಿಯಾಗಿ ಭವ್ಯವಾಗಿ ಕಾಣಿಸಿಕೊಂಡಿರುವ ರಾವಣ ತನ್ನ ಸಾಮ್ರಾಜ್ಯದ ಶಕ್ತಿಯನ್ನು ಸಾರುವ ಸಂಭಾಷಣೆಯೊಂದಿಗೆ ಅಬ್ಬರಿಸುತ್ತಾನೆ. ಈ ಪಾತ್ರದ ಲುಕ್, ಬಾಡಿ ಲ್ಯಾಂಗ್ವೇಜ್ ಮತ್ತು ಪ್ರೆಸೆನ್ಸ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

2. ಶ್ರೀಮನ್ನಾರಾಯಣನ ದಿವ್ಯ ಅವತಾರ: ಭೂಮಿಯಲ್ಲಿ ಅಧರ್ಮ ಹೆಚ್ಚಾದಾಗ ಧರ್ಮರಕ್ಷಣೆಗೆ ವಿಷ್ಣು ಅವತರಿಸುವ ಕ್ಷಣವನ್ನು ಅತ್ಯಂತ ಅದ್ದೂರಿಯಾಗಿ ಚಿತ್ರಿಸಲಾಗಿದೆ. ಶೇಷನಾಗನ ಮೇಲೆ ವಿರಾಜಮಾನನಾಗಿರುವ ಶ್ರೀಮನ್ನಾರಾಯಣನ ದೃಶ್ಯವು ಆಧ್ಯಾತ್ಮಿಕತೆ ಮತ್ತು ದೃಶ್ಯ ವೈಭವವನ್ನು ಒಂದೇ ವೇಳೆ ಅನುಭವಿಸುವಂತೆ ಮಾಡುತ್ತದೆ.

3. ಧ್ಯಾನಸ್ಥ ಶ್ರೀರಾಮನ ದೃಶ್ಯ: ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಶಾಂತ, ಗಂಭೀರ ಮತ್ತು ದಿವ್ಯವಾಗಿ ಕಾಣಿಸಿಕೊಂಡಿದ್ದಾರೆ. ಧ್ಯಾನದಲ್ಲಿ ತಲ್ಲೀನನಾಗಿರುವ ರಾಮನ ಸುತ್ತ ಕಮಲದ ದಳಗಳು ಅರಳುವ ದೃಶ್ಯವು ಟ್ರೇಲರ್‌ನ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದಾಗಿದೆ. ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರವೂ ಗಮನ ಸೆಳೆಯುತ್ತದೆ.

4. ಖಡ್ಗ ಹಿಡಿದ ಸೀತೆ: ಸಾಯಿ ಪಲ್ಲವಿ ಅಭಿನಯದ ಸೀತೆಯ ಪಾತ್ರ ಟ್ರೇಲರ್‌ನ ಅಚ್ಚರಿಯ ಅಂಶವಾಗಿದೆ. ಕೇವಲ ಕರುಣೆ ಮತ್ತು ತ್ಯಾಗದ ಪ್ರತಿರೂಪವಾಗಿ ಮಾತ್ರವಲ್ಲದೆ, ಆತ್ಮಸ್ಥೈರ್ಯ ಮತ್ತು ಧೈರ್ಯದ ಪ್ರತೀಕವಾಗಿಯೂ ಸೀತೆಯನ್ನು ಚಿತ್ರಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಖಡ್ಗ ಹಿಡಿದಿರುವ ಸೀತೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

5. ಬ್ರಹ್ಮಾಸ್ತ್ರದೊಂದಿಗೆ ಟ್ರೇಲರ್‌ಗೆ ಕ್ಲೈಮ್ಯಾಕ್ಸ್: "ಇದು ರಾಮಯುಗದ ಆರಂಭ" ಎಂಬ ಸಂಭಾಷಣೆಯೊಂದಿಗೆ ಶ್ರೀರಾಮ ಬ್ರಹ್ಮಾಸ್ತ್ರವನ್ನು ಆಹ್ವಾನಿಸುವ ದೃಶ್ಯ ಟ್ರೇಲರ್‌ಗೆ ಭವ್ಯ ಅಂತ್ಯ ನೀಡುತ್ತದೆ. ಪಂಚಭೂತಗಳ ಶಕ್ತಿಯನ್ನು ಅದ್ಭುತ ವಿಎಫ್‌ಎಕ್ಸ್ ಮೂಲಕ ಮೂಡಿಸಿರುವ ಈ ದೃಶ್ಯ ಚಿತ್ರದ ತಾಂತ್ರಿಕ ಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.

ನಿರೀಕ್ಷೆ ಹೆಚ್ಚಿಸಿದ 'ರಾಮಾಯಣ': ರಾಮಾಯಣದ ಮೇಲಿನ ಜನರ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ ಈ ಚಿತ್ರವನ್ನು ಅತ್ಯಂತ ಕಾಳಜಿಯಿಂದ ನಿರ್ಮಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಭವ್ಯ ತಾರಾಗಣ, ವಿಶ್ವಮಟ್ಟದ ತಾಂತ್ರಿಕ ತಂಡ ಮತ್ತು ಅದ್ದೂರಿ ನಿರ್ಮಾಣ ಮೌಲ್ಯಗಳಿಂದ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ 'ರಾಮಾಯಣ: ಪಾರ್ಟ್ 1' 2026ರ ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಟ್ರೇಲರ್ ನೋಡಿದ ಸಿನಿಪ್ರಿಯರು ಈಗ ಚಿತ್ರಕ್ಕಾಗಿ ದಿನಗಣನೆ ಆರಂಭಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟೈಟ್ ಜೀನ್ಸ್, ಟಿ-ಶರ್ಟ್, ಸನ್ ಗ್ಲಾಸ್ ಧರಿಸಿ ಶಿವನಿಗೆ ಅಭಿಷೇಕ... ಬಾಲಿವುಡ್ ನಟಿಗೆ ನೆಟ್ಟಿಗರಿಂದ ಟ್ರೋಲ್
ಡಾಲಿ ಧನಂಜಯ ಅಭಿಮಾನಿಗಳಿಗೆ ಡಬಲ್ ಖುಷಿ: 'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಫಿಕ್ಸ್