
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಬಾಕ್ಸ್ ಆಫೀಸ್ ಸುನಾಮಿಯೊಂದು ಸೃಷ್ಟಿಯಾಗಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಅಂದರೆ ನವೆಂಬರ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾದ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಮಹಾಕಾವ್ಯ ಆಧಾರಿತ ‘ರಾಮಾಯಣ; ಭಾಗ 1’ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳ ಇತಿಹಾಸ ಬರೆಯುತ್ತಿದೆ. ಬಾಲಿವುಡ್ ಸೂಪರ್ಸ್ಟಾರ್ ರಣಬೀರ್ ಕಪೂರ್, ನ್ಯಾಚುರಲ್ ನಟಿ ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಬಿಗ್ ಬಜೆಟ್ ಚಿತ್ರವು ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ವಿಶ್ವಾದ್ಯಂತ 1,600 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭಾರತೀಯ ಸಿನಿಮಾ ರಂಗವನ್ನು ದಂಗಾಗಿಸಿದೆ. ಚಿತ್ರ ಪ್ರದರ್ಶನ ಕಾಣಲು ಪ್ರಾರಂಭಿಸಿದ ಮೊದಲ ದಿನದಿಂದಲೂ ಪ್ರತಿದಿನವೂ ಒಂದಲ್ಲ ಒಂದು ಹೊಸ ಗಳಿಕೆಯ ಅಂಕಿಅಂಶಗಳು ಹೊರಬರುತ್ತಿದ್ದು, ಚಿತ್ರರಂಗದ ಪ್ರಮುಖ 10 ಸಾರ್ವಕಾಲಿಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಆ ಪ್ರಮುಖ 10 ಬಾಕ್ಸ್ ಆಫೀಸ್ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ.
‘ರಾಮಾಯಣ: ಭಾಗ 1’ ಚಿತ್ರವು ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ವಿಶ್ವದಾದ್ಯಂತ ₹1,500 ಕೋಟಿ ಗಳಿಕೆಯ ಗಡಿಯನ್ನು ದಾಟಿದೆ. ಈ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೇಸ್ನಲ್ಲಿ 16 ದಿನ ತೆಗೆದುಕೊಂಡಿದ್ದ 'ಧುರಂಧರ್ 2', 17 ದಿನ ತೆಗೆದುಕೊಂಡಿದ್ದ 'ಪುಷ್ಪ 2' ಹಾಗೂ 20 ದಿನ ತೆಗೆದುಕೊಂಡಿದ್ದ 'ಬಾಹುಬಲಿ 2' ಚಿತ್ರಗಳ ದಾಖಲೆಯನ್ನು ರಾಮಾಯಣ ಪತನಗೊಳಿಸಿದೆ.
ವಿಶ್ವಾದ್ಯಂತ ₹1,500 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಸಾಲಿನಲ್ಲಿ ಇದು ಐದನೇ ಚಿತ್ರವಾಗಿ ಹೊರಹೊಮ್ಮಿದೆ. 'ಧುರಂಧರ್', 'ಆರ್ಆರ್ಆರ್' ಮತ್ತು 'ಕೆಜಿಎಫ್ 2' ಚಿತ್ರಗಳ ಗಳಿಕೆಯನ್ನು ಈಗಾಗಲೇ ಹಿಂದಿಕ್ಕಿರುವ ರಾಮಾಯಣ, ಪ್ರಸ್ತುತ 1,742.1 ಕೋಟಿ ರೂ. ಗಳಿಸಿರುವ 'ಪುಷ್ಪ 2' ಸಾರ್ವಕಾಲಿಕ ದಾಖಲೆಯನ್ನು ಮೀರಲು ಧಾವಿಸುತ್ತಿದೆ.
ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ₹1,000 ಕೋಟಿ ನಿವ್ವಳ ಗಳಿಕೆ ಸಾಧಿಸಿದ ಆರನೇ ಭಾರತೀಯ ಸಿನಿಮಾ ಇದಾಗಿದೆ. ಈ ಹಿಂದೆ 'ಬಾಹುಬಲಿ 2', 'ಕೆಜಿಎಫ್ 2', 'ಪುಷ್ಪ 2', 'ಧುರಂಧರ್' ಮತ್ತು 'ಧುರಂಧರ್ 2' ಮಾತ್ರ ಈ ಐತಿಹಾಸಿಕ ಮೈಲಿಗಲ್ಲು ತಲುಪಿದ್ದವು. ರಣಬೀರ್, ಸಾಯಿ ಪಲ್ಲವಿ ಹಾಗೂ ನಿತೇಶ್ ತಿವಾರಿಗೆ ವೃತ್ತಿಜೀವನದ ಬಿಗ್ಗೆಸ್ಟ್ ಓಪನಿಂಗ್ ಚಿತ್ರವು ಮೊದಲ ದಿನವೇ ಭಾರತದಲ್ಲಿ ₹64.85 ಕೋಟಿ ನಿವ್ವಳ ಗಳಿಕೆ ಮಾಡುವ ಮೂಲಕ ರಣಬೀರ್ ಕಪೂರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರ ಎನಿಸಿಕೊಂಡಿದೆ. ಈ ಹಿಂದೆ ₹63.80 ಕೋಟಿ ಗಳಿಸಿದ್ದ ಅವರ 'ಅನಿಮಲ್' ದಾಖಲೆ ಉಡೀಸ್ ಆಗಿದೆ. ಜೊತೆಗೆ ನಟಿ ಸಾಯಿ ಪಲ್ಲವಿ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರಿಗೂ ಇದು ವೃತ್ತಿಜೀವನದ ಸಾರ್ವಕಾಲಿಕ ಗರಿಷ್ಠ ಓಪನಿಂಗ್ ಆಗಿದೆ.
ಬಿಡುಗಡೆಯಾದ 5ನೇ ದಿನದಂದು (ಭಾನುವಾರ) ಬರೋಬ್ಬರಿ ₹107.50 ಕೋಟಿ ನಿವ್ವಳ ಗಳಿಕೆ ಮಾಡುವ ಮೂಲಕ, ರಣವೀರ್ ಸಿಂಗ್ ಅವರ 'ಧುರಂಧರ್ 2' ನಂತರ ಒಂದೇ ದಿನದಲ್ಲಿ ₹100 ಕೋಟಿ ನಿವ್ವಳ ಗಳಿಕೆಯ ಗಡಿ ದಾಟಿದ ಭಾರತದ 2ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎರಡನೇ ವಾರಾಂತ್ಯದಲ್ಲಿ ಎಲ್ಲಾ ಭಾಷೆಗಳಿಂದ ಒಟ್ಟು ₹196 ಕೋಟಿ ನಿವ್ವಳ ಗಳಿಕೆ ಕಾಣುವ ಮೂಲಕ 'ಧುರಂಧರ್ 2' ಹೆಸರಿನಲ್ಲಿದ್ದ ದಾಖಲೆಯನ್ನು ಧೂಳೀಪಟ ಮಾಡಿದೆ. ದಕ್ಷಿಣ ಭಾರತದಲ್ಲಿ ₹50 ಕೋಟಿ ಗಳಿಸಿದ ಪ್ರಥಮ ಬಾಲಿವುಡ್ ಚಿತ್ರ ರಾಮಾಯಣವಾಗಿದೆ. ಹಿಂದಿ ಬೆಲ್ಟ್ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲೂ ತಲಾ ₹50 ಕೋಟಿಗೂ ಹೆಚ್ಚು ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಐತಿಹಾಸಿಕ ಹೆಗ್ಗಳಿಕೆ ಪಾತ್ರವಾಗಿದೆ.
ಐಮ್ಯಾಕ್ಸ್ ಪರದೆಗಳಲ್ಲಿ ಮೊದಲ ದಿನವೇ ಸುಮಾರು 2 ಮಿಲಿಯನ್ (ಅಂದಾಜು ₹16+ ಕೋಟಿ) ಗಳಿಕೆ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಐಮ್ಯಾಕ್ಸ್ ಓಪನಿಂಗ್ ದಾಖಲಿಸಿದೆ. ವಿದೇಶದಲ್ಲೂ ಈ ಚಿತ್ರದ ಕ್ರೇಜ್ ಮುಗಿಲುಮುಟ್ಟಿದ್ದು, ಉತ್ತರ ಅಮೆರಿಕಾದಲ್ಲಿ $25 ಮಿಲಿಯನ್ ಗಳಿಸಿದ 2ನೇ ಬಾಲಿವುಡ್ ಚಿತ್ರವಾಗಿದೆ. ಈ ಹಾದಿಯಲ್ಲಿ 'ಬಾಹುಬಲಿ 2' ಗಳಿಕೆಯನ್ನು ಇದು ಹಿಂದಿಕ್ಕಿದೆ. ಈ ಎಲ್ಲಾ ಮಹಾಸಾಧನೆಗಳ ಮೂಲಕ 'ರಾಮಾಯಣ: ಭಾಗ 1' ಚಿತ್ರವು ಭಾರತೀಯ ಸಂಸ್ಕೃತಿ ಮತ್ತು ಸಿನಿಮಾದ ತಾಕತ್ತನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ದಾಖಲೆಗಳನ್ನು ನಿರ್ಮಿಸುವ ಮುನ್ಸೂಚನೆ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.