ಯಶ್ 'ರಾಮಾಯಣ' ನೋಡಿ ಹಾಲಿವುಡ್ ವಿಮರ್ಶಕರು ಹೇಳಿದ್ದೇನು? ಮೆಚ್ಚುಗೆ ಜೊತೆಗೆ ಬಂತು ಶಾಕಿಂಗ್ ಕಾಮೆಂಟ್

Published : Nov 01, 2026, 04:01 PM IST
Yash Ramayana

ಸಾರಾಂಶ

ಯಶ್ ನಟನೆಯ 'ರಾಮಾಯಣ' ಸಿನಿಮಾದ ಗ್ರಾಫಿಕ್ಸ್ ಮತ್ತು ಮೇಕಿಂಗ್‌ಗೆ ಹಾಲಿವುಡ್ ವಿಮರ್ಶಕರು ಫಿದಾ ಆಗಿದ್ದಾರೆ. ಆದರೆ ನವೆಂಬರ್ 5ರಂದು ರಿಲೀಸ್ ಆಗಲಿರುವ ಈ ಚಿತ್ರದ ಉದ್ದ, ಕಥೆ ಹೇಳಿದ ರೀತಿ ಹಾಗೂ ನಿರೂಪಣೆ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದ ಮೊದಲ ಇಂಟರ್‌ನ್ಯಾಷನಲ್ ರಿವ್ಯೂಸ್ ಹೊರಬಿದ್ದಿವೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ವರ್ಲ್ಡ್ ಪ್ರೀಮಿಯರ್ ಶೋ ಬಳಿಕ, ಈ ಬಹುನಿರೀಕ್ಷಿತ ಭಾರತೀಯ ಸಿನಿಮಾ ವಿದೇಶಿಗರಿಗೆ ಎಷ್ಟರಮಟ್ಟಿಗೆ ಇಷ್ಟವಾಗಿದೆ ಅನ್ನೋ ಸುಳಿವು ಸಿಕ್ಕಿದೆ. ಸಿನಿಮಾದ ಪ್ರೊಡಕ್ಷನ್ ಡಿಸೈನ್, ಕಾಸ್ಟ್ಯೂಮ್ಸ್ ಹಾಗೂ ಅದ್ಭುತ ದೃಶ್ಯವೈಭವವನ್ನು ಹಲವು ವಿಮರ್ಶಕರು ಕೊಂಡಾಡಿದ್ದಾರೆ. 'ಎನ್‌ವೈಸಿ ಮೂವೀ ಗುರು'ವಿನ ಅವಿ ಆಫರ್, ಇದೊಂದು ಕಣ್ಮನ ಸೆಳೆಯುವ ಆಕ್ಷನ್ ಅಡ್ವೆಂಚರ್ ಎಂದಿದ್ದು, ಸೆಟ್ಸ್ ಹಾಗೂ ಕಾಸ್ಟ್ಯೂಮ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಸ್ಕ್ರೀನ್ ರ‍್ಯಾಂಟ್'ನ ಬ್ರಾಂಡನ್ ಜಕಾರಿ ಚಿತ್ರಕ್ಕೆ 10ಕ್ಕೆ 7 ರೇಟಿಂಗ್ ಕೊಟ್ಟು, ಇದೊಂದು ಅತ್ಯುತ್ತಮ ತಾಂತ್ರಿಕ ಸಾಧನೆ ಎಂದಿದ್ದಾರೆ. 'ಇಂಡಿವೈರ್' ಚಿತ್ರಕ್ಕೆ 'B' ಗ್ರೇಡ್ ನೀಡಿದ್ದು, ಇಷ್ಟೊಂದು ಬೃಹತ್ ಮಟ್ಟದಲ್ಲಿ ಈ ಮಹಾಕಾವ್ಯವನ್ನು ತೆರೆಗೆ ತಂದ ನಿತೇಶ್ ತಿವಾರಿ ಪ್ರಯತ್ನವನ್ನು ಶ್ಲಾಘಿಸಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ, ಸಿನಿಮಾದ ಬೃಹತ್ ಕ್ಯಾನ್ವಾಸ್ ಹಾಗೂ ದೃಶ್ಯವೈಭವವೇ ಇದರ ಅತಿದೊಡ್ಡ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ.

ಸಿನಿಮಾದ ಉದ್ದ ಹಾಗೂ ನಿರೂಪಣೆ ಬಗ್ಗೆ ಟೀಕೆ

ದೃಶ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಸಿನಿಮಾದ ಉದ್ದ ಹಾಗೂ ಕಥೆ ಹೇಳಿದ ರೀತಿಯ ಬಗ್ಗೆ ಟೀಕೆಗಳು ಕೇಳಿಬಂದಿವೆ. ಭಾರತದಲ್ಲಿ ರಿಲೀಸ್ ಆಗುವ ವರ್ಷನ್‌ಗಿಂತ ಇಂಗ್ಲಿಷ್ ವರ್ಷನ್ ಸುಮಾರು 30 ನಿಮಿಷ ಚಿಕ್ಕದಾಗಿದೆ. ಆದರೂ 150 ನಿಮಿಷಗಳ ಈ ಸಿನಿಮಾ ನೋಡುಗರಿಗೆ ಸುಸ್ತು ಮಾಡುತ್ತದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

'ಎನ್‌ವೈಸಿ ಮೂವೀ ಗುರು'ವಿನ ಅವಿ ಆಫರ್ ಚಿತ್ರದ ಬಗ್ಗೆ ಕೊಂಚ ಕಟುವಾಗಿಯೇ ವಿಮರ್ಶೆ ಮಾಡಿದ್ದಾರೆ. ಸಿನಿಮಾ ತುಂಬಾನೇ ಎಳೆಯಲಾಗಿದೆ, ಸುಸ್ತು ಮಾಡುತ್ತದೆ ಹಾಗೂ ಎಮೋಷನಲ್ ಆಗಿ ಕನೆಕ್ಟ್ ಆಗುವುದಿಲ್ಲ ಎಂದಿದ್ದಾರೆ. ನಟನೆಯ ಬಗ್ಗೆಯೂ ಅಸಮಾಧಾನ ಹೊರಹಾಕಿರುವ ಅವರು, 'ಸೀತಾ ಸಿಂಗ್ಸ್ ದಿ ಬ್ಲೂಸ್' ಅನಿಮೇಟೆಡ್ ಚಿತ್ರಕ್ಕೆ ಹೋಲಿಸಿದರೆ ಇದು ತೀರಾ ಕಳಪೆ ಎಂದಿದ್ದಾರೆ.

'ನೆಕ್ಸ್ಟ್ ಬೆಸ್ಟ್ ಪಿಕ್ಚರ್'ನ ಜಿಯೋವಾನಿ ಲಾಗೊ ಚಿತ್ರಕ್ಕೆ 10ಕ್ಕೆ 5 ರೇಟಿಂಗ್ ಕೊಟ್ಟಿದ್ದಾರೆ. ಇಷ್ಟೊಂದು ದೊಡ್ಡ ಕಥೆಯನ್ನು ಸಿನಿಮಾ ಮಾಡುವುದಕ್ಕಿಂತ, ಟಿವಿ ಸೀರೀಸ್ ಮಾಡಿದ್ದರೆ ಪಾತ್ರಗಳನ್ನು ಹಾಗೂ ಕಥೆಯನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡಬಹುದಿತ್ತು ಎಂದು ಅವರು ಸಲಹೆ ನೀಡಿದ್ದಾರೆ. ರಾಮಾಯಣದಂತಹ ಬೃಹತ್ ಕಥೆಯನ್ನು ಅದ್ಭುತ ಮೇಕಿಂಗ್ ಜೊತೆಗೆ ಎಮೋಷನಲ್ ಆಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಚಿತ್ರತಂಡ ಎಡವಿದೆ ಅನ್ನೋದನ್ನು ಈ ಟೀಕೆಗಳು ಎತ್ತಿತೋರಿಸುತ್ತಿವೆ.

ರಿಲೀಸ್‌ಗೂ ಮುನ್ನ ಸಿಜಿಐ ಹಾಗೂ ಆಕ್ಷನ್ ಬಗ್ಗೆ ಐಜಿಎನ್ ಕಳವಳ

ಆರಂಭಿಕ ವಿಮರ್ಶೆಗಳ ಪೈಕಿ 'ಐಜಿಎನ್'ನ ಸಿದ್ಧಾರ್ಥ್ ಅದ್ಲಾಖಾ ಚಿತ್ರಕ್ಕೆ ಕೇವಲ 4/10 ರೇಟಿಂಗ್ ನೀಡಿದ್ದಾರೆ. ಸಿನಿಮಾದ ಆಕ್ಷನ್ ದೃಶ್ಯಗಳು, ಸಿಜಿಐ (CGI) ಹಾಗೂ ಲಿಪ್-ಸಿಂಕ್ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವೆಂಬರ್ 5ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕೂ ಮುನ್ನವೇ ಈ ಟೀಕೆಗಳು ಕೇಳಿಬಂದಿವೆ. ಮೊದಲ ಭಾಗದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ.

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ (DNEG) ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗುವ ಪ್ಲಾನ್ ಇದೆ. ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಇನ್ನು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿದ್ದರೆ, ಹಿಂದಿ ಮಾರ್ಕೆಟ್‌ನಲ್ಲಿ ಧರ್ಮ ಪ್ರೊಡಕ್ಷನ್ಸ್ ಚಿತ್ರವನ್ನು ವಿತರಿಸುತ್ತಿದೆ. ವಿಶ್ವಾದ್ಯಂತ ಐಮ್ಯಾಕ್ಸ್ (IMAX) ವರ್ಷನ್ ಕೂಡ ರಿಲೀಸ್ ಆಗಲಿದೆ. ಭಾರತೀಯ ವಿಮರ್ಶಕರು ಇನ್ನೂ ಸಿನಿಮಾವನ್ನು ನೋಡಿಲ್ಲ. ಹೀಗಾಗಿ ನಮ್ಮಲ್ಲಿ ಚಿತ್ರಕ್ಕೆ ಎಂಥಾ ರೆಸ್ಪಾನ್ಸ್ ಸಿಗಲಿದೆ ಕಾದುನೋಡಬೇಕಿದೆ. ಸದ್ಯದ ಮಟ್ಟಿಗೆ, ಹಾಲಿವುಡ್ ವಿಮರ್ಶಕರ ಪ್ರಕಾರ 'ರಾಮಾಯಣ' ಕಣ್ಣಿಗೆ ಹಬ್ಬ ನೀಡಿದರೂ, ಕಥೆ ಹಾಗೂ ನಿರೂಪಣೆಯಲ್ಲಿ ಕೊಂಚ ಎಡವಿದೆ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಲವು ಸವಾಲುಗಳ ಬಳಿಕ ನನಸಾದ ಕನಸು, ‘ಆದಿಲಕ್ಷ್ಮೀ ಪುರಾಣ’ ನಟಿ ಆಶಾ ಅಯ್ಯನಾರ್ ಭಾವುಕ ಪೋಸ್ಟ್
ನಿಖಿಲ್‌ ಗೌಡ ಹಿಟ್‌ ಅಂಡ್‌ ರನ್‌ ಕೇಸ್‌ ಗೂ ನನಗೂ ಸಂಬಂಧ ಇಲ್ಲ, ಮೊದಲ ಬಾರಿ ಯೂಟ್ಯೂಬರ್‌ ಮಧು ಗೌಡ ರಿಯಾಕ್ಷನ್‌