
ಬೆಂಗಳೂರು(ಮಾ.31): ಬಾಕ್ಸಾಫೀಸಿನಲ್ಲಿ ಮ್ಯಾಜಿಕ್ ಮಾಡಿದ್ದ ರಕ್ಷಿತ್ ಶೆಟ್ಟಿಅಭಿನಯದ ‘ಕಿರಿಕ್ ಪಾರ್ಟಿ' ಚಿತ್ರತಂಡಕ್ಕೆ ಯುಗಾದಿಯ ಬಂಫರ್ ಕೊಡುಗೆ ಸಿಕ್ಕಿದೆ. 2017 ರ ‘ಐಫಾ' (ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಆವಾರ್ಡ್ಸ್) ಚಿತ್ರೋತ್ಸವದಲ್ಲಿ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದೆ ‘ಕಿರಿಕ್ ಪಾರ್ಟಿ' ಚಿತ್ರ ತಂಡ. ಯುಗಾದಿ ದಿನ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಐಫಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ನೃತ್ಯ, ಅತ್ಯುತ್ತಮ ಸಂಗೀತ ನಿರ್ದೇಶನ ಹಾಗೂ ಅತ್ಯುತ್ತಮ ನಟ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳು ನಟ ರಕ್ಷಿತ್ ಶೆಟ್ಟಿಮತ್ತವರ ತಂಡದ ಪಾಲಾಗಿವೆ. ಯುವ ನಿರ್ದೇಶಕ ‘ಲೂಸಿಯಾ' ಪವನ್ ಕುಮಾರ್ ಕೂಡ ಎರಡು ಕೈಯಲ್ಲೂ ಒಂದೊಂದು ಪ್ರಶಸ್ತಿ ಬಾಚಿಕೊಂಡು ಗೆಲುವಿನ ನಗೆ ಬೀರಿದರು.
ಟಾಲಿವುಡ್‌ನ ಹೆಸರಾಂತ ನಟ ಜೂನಿಯರ್ ಎನ್‌ಟಿಆರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ರಕ್ಷಿತ್ ಶೆಟ್ಟಿ, ‘ಇಂತಹ ಅದ್ಭುತ ಕ್ಷಣಗಳು ನನ್ನ ಜೀವನದಲ್ಲಿ ಮತ್ತೆ ಯಾವಾಗ ಸಿಗುತ್ತವೆಯೋ ಗೊತ್ತಿಲ್ಲ. ಆದರೆ ಈ ವೇದಿಕೆಯಲ್ಲಿ ಅದು ಘಟಿಸಿದ್ದು ನನ್ನನ್ನು ರೋಮಾಂಚನಗೊಳಿಸಿದೆ. ಇದು ಕನ್ನಡದ ಆರು ಕೋಟಿ ಜನರ ಆಶೀರ್ವಾದಿಂದಲೇ ಸಾಧ್ಯವಾಗಿದೆ ಎಂದು ನಾನು ಭಾವಿಸಿದ್ದೇನೆ 'ಎಂದರು. ನಿರೂಪಣೆ ಮಾಡುತ್ತಿದ್ದ ನಟ ಅಕುಲ್ ಬಾಲಾಜಿ ರಕ್ಷಿತ್ ಶೆಟ್ಟಿಅವರ ಕರಾವಳಿ ಮೂಲವನ್ನು ನೆನಪಿಸಿದರು. ಆಗ ನಟ ಜೂನಿಯರ್ ಎನ್‌ಟಿ ಆರ್ ಮೈಕ್ ಹಿಡಿದು, ನನ್ನ ತಾಯಿಯ ಹುಟ್ಟೂರು ಕುಂದಾಪುರ. ಅದಷ್ಟೇ ಗೊತ್ತು. ಅಲ್ಲಿ ಯಾರಿದ್ದಾರೆ? ಹೇಗಿದ್ದಾರೆ? ಮಾಹಿತಿ ಇಲ್ಲ' ಎನ್ನುವ ಮೂಲಕ ಕನ್ನಡದ ನಂಟನ್ನು ಬಿಚ್ಚಿಟ್ಟರು. ಬಾರೀ ಚಪ್ಪಾಳೆಯ ಸಪ್ಪಳ ಕೇಳಿಬಂತು. ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ‘ಜೀವಮಾನ ಸಾಧನೆ'ಯ ಪ್ರಶಸ್ತಿಗೆ ಪಾತ್ರರಾದರು.
ಉಳಿದಂತೆ ತೆಲುಗಿನಲ್ಲಿ ‘ಜನತಾ ಗ್ಯಾರೇಜ್' ಹಾಗೂ ಮಲಯಾಳಂನಲ್ಲಿ ‘ಚಾರ್ಲಿ' ಚಿತ್ರತಂಡಕ್ಕೆ ಅತೀ ಹೆಚ್ಚಿನ ಪ್ರಶಸ್ತಿಗಳು ಸಿಕ್ಕವು. ಕನ್ನಡದಿಂದ ಇದೇ ಮೊದಲ ಬಾರಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ಸೋತ್ಸವದ ವೇದಿಕೆಯಲ್ಲಿ ಕುಣಿದಿದ್ದು ವಿಶೇಷ ಎನಿಸಿತು. ರಚಿತಾ ರಾಮ್, ಮೇಘನಾ ಗಾಂವ್ಕರ್ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ನಟಿ ಮೀನಾ ಪುತ್ರಿ ಬೇಬಿ ನೈನಿಕಾ ತಮಿಳಿನ ‘ಥೇರಿ' ಚಿತ್ರದಲ್ಲಿನ ಅಭಿನಯಕ್ಕೆ ಪ್ರಶಸ್ತಿ ಪಡೆದರು.
ಅತ್ಯುತ್ತಮ ಚಿತ್ರ- ಕಿರಿಕ್ ಪಾರ್ಟಿ
ಅತ್ಯುತ್ತಮ ಕತೆ- ಪವನ್ ಕುಮಾರ್ (ಯುಟರ್ನ್)
ಅತ್ಯುತ್ತಮ ನಿರ್ದೇಶಕ- ಪವನ್ ಕುಮಾರ್(ಯುಟರ್ನ್)
ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ(ಕಿರಿಕ್ ಪಾರ್ಟಿ)
ಅತ್ಯುತ್ತಮ ನಟಿ- ಪಾರೂಲ್ ಯಾದವ್(ಕಿಲ್ಲಿಂಗ್ ವೀರಪ್ಪನ್)
ಅತ್ಯುತ್ತಮ ಹಾಸ್ಯ ನಟ- ಚಿಕ್ಕಣ್ಣ(ಕೋಟಿಗೊಬ್ಬ 2)
ಅತ್ಯುತ್ತಮ ಗೀತೆ ರಚನೆ- ರಕ್ಷಿತ್ ಶೆಟ್ಟಿ( ಕಿರಿಕ್ ಪಾರ್ಟಿ)
ಅತ್ಯುತ್ತಮ ನೃತ್ಯ ನಿರ್ದೇಶನ- ರಕ್ಷಿತ್ ಶೆಟ್ಟಿ(ಕಿರಿಕ್ ಪಾರ್ಟಿ)
ಅತ್ಯುತ್ತಮ ಸಂಗೀತ ನಿರ್ದೇಶನ- ಬಿ. ಅಜನೀಶ್ ಲೋಕನಾಥ್(ಕಿರಿಕ್)
ಅತ್ಯುತ್ತಮ ಖಳನಟ- ವಶಿಷ್ಟಸಿಂಹ( ಗೋಧಿ ಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ಹಿನ್ನೆಲೆ- ಗಾಯಕ ವಿಜಯ್ ಪ್ರಕಾಶ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಇಂಚರಾ ರಾವ್(ಗೋ)
ಅತ್ಯುತ್ತಮ ಪೋಷಕ- ನಟ ರಕ್ಷಿತ್ ಶೆಟ್ಟಿ(ಗೋಧಿ ಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ಪೋಷಕ ನಟಿ- ಯಜ್ಞಾ ಶೆಟ್ಟಿ( ಕಿ.ವೀರಪ್ಪನ್)
ವರದಿ: ಕನ್ನಡ ಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.