
ಹುಚ್ಚ ವೆಂಕಟ್ ಮತ್ತೆ ಬಂದಿದ್ದಾರೆ. ಈ ಬಾರಿಯೂ ಒಂದು ಸಿನಿಮಾದೊಂದಿಗೆ ಮಾಧ್ಯಮಗಳ ಮುಂದೆ ಬಂದ ಹುಚ್ಚ ವೆಂಕಟ್ ಅಂದು ಮೂರು ಕಾರ್ಯಕ್ರಮಗಳನ್ನು ಒಟ್ಟಿಗೆ ಆಯೋಜಿಸಿದ್ದರು. ತಮ್ಮ ‘ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಪತ್ರಿಕಾಗೋಷ್ಠಿ, ಹುಚ್ಚ ವೆಂಕಟ್ ಸೇನೆಯ ವಾರ್ಷಿಕೋತ್ಸವ ಹಾಗೂ ತಮ್ಮ ಹೆಸರಿನ ಸೇನೆ ಚುನಾವಣೆಗೆ ನಿಲ್ಲುತ್ತಿರುವ ಕುರಿತು ಘೋಷಣೆ. ಇಷ್ಟಕ್ಕೂ ವೇದಿಕೆಯಾಗಿದ್ದು ‘ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಪತ್ರಿಕಾಗೋಷ್ಠಿ. ಚಿತ್ರದ ಮಾತುಕತೆಯ ನಡುವೆ ಮಾಧ್ಯಮಗಳ ವಿರುದ್ಧ ಗರಂ ಆಗಿರುವ ರಾಜಕೀಯ ಮುಖಂಡರನ್ನು ತಮ್ಮದೇ ಸ್ಟೈಲ್‌ನಲ್ಲಿ ತರಾಟೆಗೆ ತೆಗೆದುಕೊಂಡರು.
ಈಗ ಹುಚ್ಚು ವೆಂಕಟ್ ಸೇನೆ ಹುಟ್ಟಿದ ದಿನದ ಮಾತು. ಅಮೆರಿಕ, ಪ್ಯಾರೀಸ್, ಜರ್ಮನಿ, ಲಂಡನ್, ಪಾಕಿಸ್ತಾನ್ ಮುಂತಾದ ದೇಶಗಳಲ್ಲಿ ಸೇನೆಯ ಶಾಖೆಗಳನ್ನು ತೆರೆಯಲಾಗಿದೆ. ಅಲ್ಲೆಲ್ಲ ಹೋರಾಡುತ್ತಿರುವ ಜನ ಸಾಮಾನ್ಯರ ಪರವಾಗಿ ತಮ್ಮ ಸೇನೆಯ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಜತೆಗೆ ಬಡವರ ಹಸಿವು ನೀಗಿಸುವ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಹುಚ್ಚ ವೆಂಕಟ್ ಸೇನೆ ಅದ್ಭುತವಾಗಿ ಬೆಳೆಯುತ್ತಿದೆ... ಹೀಗೆ ಹುಚ್ಚ ವೆಂಕಟ್ ಹೇಳುತ್ತಿದ್ದರೆ ಅವರ ಮಾತುಗಳನ್ನು ಬರೆದುಕೊಳ್ಳುತ್ತಿದ್ದ ಪತ್ರಕರ್ತರು ಆಗಾಗ ತಮ್ಮ ತಮ್ಮ ಕಿವಿಗಳನ್ನು ಮುಟ್ಟಿಮುಟ್ಟಿನೋಡಿಕೊಳ್ಳುತ್ತಿದ್ದರು. ಅಲ್ಲಿ ಯಾವುದೇ ಹೂವು ಇಲ್ಲ ಎಂದು ಖಾತ್ರಿಯಾದ ಮೇಲೆ ವೆಂಕಟ್ ಮಾತುಗಳಿಗೆ ಮತ್ತಷ್ಟುಕಿವಿ ಕೊಡುತ್ತಿದ್ದರು. ವೆಂಕಟ್ ಮಾತ್ರ ಜಗತ್ತಿನ ಯಾವ ಯಾವ ದೇಶಗಳಲ್ಲಿ ತಮ್ಮ ಹುಚ್ಚ ವೆಂಕಟ್ ಸೇನೆ ಕಾರ್ಯ ನಿರ್ವಹಿಸುತ್ತಿದೆ, ಅದರ ತತ್ವಗಳೇನು ಎಂಬುದರ ಬಗ್ಗೆ ಸವಿವರವಾಗಿಯೇ ಮಾತನಾಡುತ್ತಿದ್ದರು. ಜತೆಗೆ ಮುಂಬರುವ ಚುನಾವಣೆಯಲ್ಲಿ ಸೇನೆಯಿಂದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸುವ ಘೋಷಣೆಯನ್ನು ಪ್ರಕಟಿಸುವ ಮೂಲಕ ಹೊಸ ಬಾಂಬ್ ಸಿಡಿಸಿದರು.
ಈಗ ಚಿತ್ರದ ಕುರಿತು ಮಾತು. ನಮ್ಮ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಚಿತ್ರಕ್ಕೆ ಯಾಕೆ ‘ಪೊರ್ಕಿ ಹುಚ್ಚ ವೆಂಕಟ್' ಎಂದು ಹೆಸರಿಟ್ಟಿದ್ದೇನೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು. ಚಿತ್ರಕ್ಕೆ ಸೆನ್ಸಾರ್ ಮುಗಿದಿದ್ದು ಯು/ಎ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಜತೆಗೆ ಚಿತ್ರಕ್ಕೆ ಮೂರು ಮ್ಯೂಟ್ ಮಾಡಿದ್ದಾರೆ. ನಾನು ವಿಷ್ಣುವರ್ಧನ್ ಅಭಿಮಾನಿಯಾಗಿದ್ದರಿಂದ ಅವರ ಕೆಲವೊಂದು ಗುಣಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ಸಂದೇಶ, ಪ್ರೀತಿ, ಸೆಂಟಿಮೆಂಟ್ ಜತೆಗೆ ರೈತರ ಕಷ್ಟಗಳನ್ನು ಹೇಳಲಾಗಿದೆ. ಅಲ್ಲದೆ ಅತ್ಯಾಚಾರಿಗೆ ಗಲ್ಲು ಶಿಕ್ಷೆಯಾಗಬೇಕು, ಐಟಂ ಹಾಡು ಬ್ಯಾನ್ ಮಾಡಿ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇನೆ. ಇನ್ನು ನನ್ನದೇ ಟ್ರೆಂಡ್ ಡೈಲಾಗ್‌ಗಳಾದ ನನ್ ಮಗಂದ್, ನನ್ ಯಕಡಾ ಅಂತ ಯಾಕೆ ಮಾತನಾಡುತ್ತೇನೆ ಎಂಬುದಕ್ಕೂ ಚಿತ್ರದಲ್ಲಿ ಉತ್ತರ ಸಿಗಲಿದೆ. ಸೌಮ್ಯ, ರಚನಾ ಅವರು ಚಿತ್ರದ ನಾಯಕಿಯರು. ತಾಯಿಯಾಗಿ ಹಿರಿಯ ನಟಿ ಶೈಲಶ್ರೀ ಇದ್ದಾರೆ ಎಂದು ಮಾತು ಮುಗಿಸಿದರು. ಅಲ್ಲಿ ತನಗೆ ತಲೆ ಬಗ್ಗಿಸಿ ಬರೆದುಕೊಳ್ಳುತ್ತಿದ್ದ ಪತ್ರಕರ್ತರು ಒಮ್ಮೆ ನಿಟ್ಟುಸಿರು ಬಿಟ್ಟು ಹುಚ್ಚ ವೆಂಕಟ್ ಕಡೆಗೆ ನೋಡಿದರು. ಅಲ್ಲಿಗೆ ತ್ರಿ ಇನ್ ವನ್ ಕಾರ್ಯಕ್ರಮ ಮುಗಿಸಲಾಯಿತು.
ವರದಿ: ಕನ್ನಡ ಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.