ರಾಜ್ ಮೊಮ್ಮಗಳಿಗೆ ಸಿನಿಮಾ ಅವಕಾಶ ಸಿಕ್ಕಿದ್ದು ಹೀಗೆ!

By Web DeskFirst Published Jun 4, 2019, 8:54 AM IST
Highlights

ರಾಜ್‌ಕುಮಾರ್‌ ಮೊಮ್ಮಗಳು ಹಾಗೂ ನಟ ರಾಮ್‌ಕುಮಾರ್‌-ಪೂರ್ಣಿಮಾ ದಂಪತಿ ಪುತ್ರಿ ಧನ್ಯಾ ರಾಮ್‌ಕುಮಾರ್‌ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಸಹೋದರ ಧೀರನ್‌ ರಾಮ್‌ಕುಮಾರ್‌ ಈಗಾಗಲೇ ‘ದಾರಿ ತಪ್ಪಿದ ಮಗ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ಬೆನ್ನಲ್ಲೇ ನಟ ಸೂರಜ್‌ಗೌಡ ನಾಯಕತ್ವದ ಹೊಸ ಸಿನಿಮಾಕ್ಕೆ ಧನ್ಯಾ ರಾಮ್‌ಕುಮಾರ್‌ ನಾಯಕಿ ಆಗಿದ್ದಾರೆ. ಬೆಳ್ಳಿತೆರೆಯ ಪ್ರವೇಶ ಮತ್ತು ಚೊಚ್ಚಲ ಚಿತ್ರದ ಕುರಿತ ಅನುಭವದ ಕುರಿತು ಅವರೊಂದಿಗೆ ಮಾತುಕತೆ.

ದೇಶಾದ್ರಿ ಹೊಸ್ಮನೆ

ಸಹೋದರ ಧೀರನ್‌ಗಿಂತ ಮುಂಚೆಯೇ ನೀವೇ ಸಿನಿ ದುನಿಯಾಕ್ಕೆ ಬರ್ತೀರಿ ಅನ್ನೋ ನಿರೀಕ್ಷೆ ಇತ್ತು?

ಹೌದು, ವರ್ಷದ ಹಿಂದೆ ಹಾಗೆ ಸುದ್ದಿ ಆಗಿದ್ದು ನಿಜ. ಅದಕ್ಕೆ ಕಾರಣವಾಗಿದ್ದು ಪ್ರೊಫೈಲ್‌ಗೆ ಅಂತ ನಾನು ಮಾಡಿಸಿದ್ದ ಒಂದು ಫೋಟೋಶೂಟ್‌. ಫೋಟೋ ಚೆನ್ನಾಗಿವೆ ಅಂತ ಕುತೂಹಲಕ್ಕೆ ಸೋಷಲ್‌ ಮೀಡಿಯಾದಲ್ಲಿ ಒಂದಷ್ಟುಫೋಟೋ ಹಾಕಿಕೊಂಡಿದ್ದೆ. ಅವುಗಳನ್ನು ನೋಡಿದವರೆಲ್ಲ ಸಿನಿಮಾ ಬರ್ತೀದ್ದೀರಾ ಅಂತ ಕೇಳಿದ್ದು ನಿಜ. ಅದು ದೊಡ್ಡ ಸುದ್ದಿಯೂ ಆಗಿತ್ತು. ಆದರೆ ಆಗ ನಾನಿನ್ನು ನಟಿ ಆಗುವ ಬಗ್ಗೆ ಆಲೋಚನೆ ಮಾಡಿರಲಿಲ್ಲ. ಮೇಲಾಗಿ ಆ ಬಗ್ಗೆ ಯಾವುದೇ ಸಿದ್ಧತೆಯೂ ಕೂಡ ಇರಲಿಲ್ಲ. ಜತೆಗೆ ಸೂಕ್ತವಾದ ಕತೆ ಮತ್ತು ಪಾತ್ರವೂ ಸಿಕ್ಕಿರಲಿಲ್ಲ. ಈಗ ಅವೆಲ್ಲವಕ್ಕೂ ಸಮಯ ಕೂಡಿ ಬಂತು ಅಂತೆನಿಸುತ್ತಿದೆ.

ನೀವೀಗ ನಾಯಕಿ ಆಗುತ್ತಿರುವ ಸಿನಿಮಾ ಬಗ್ಗೆ ಹೇಳಿ..

ಚಿತ್ರಕ್ಕೀನ್ನು ಟೈಟಲ್‌ ಫೈನಲ್‌ ಆಗಿಲ್ಲ. ಸುಮನ್‌ ಜಾದೂಗಾರ್‌ ಎನ್ನುವವರು ಡೈರೆಕ್ಟರ್‌. ಸಾಕಷ್ಟುಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟುಅನುಭವವೂ ಇದೆ ಅಂತ ಕೇಳಿದ್ದೇನೆ. ಹಾಗೆಯೇ ಸೂರಜ್‌ ಗೌಡ ಹೀರೋ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿ ಇದ್ದೇವೆ. ನಿರ್ಮಾಪಕರು ಕೂಡ ತುಂಬಾ ಒಳ್ಳೆಯವರು. ಪ್ರತಿಯೊಬ್ಬರಿಗೂ ಸಿನಿಮಾ ಮೇಲೆ ಸಿಕ್ಕಾಪಟ್ಟೆಪ್ಯಾಷನ್‌ ಇದೆ. ಒಂದು ಸಿನಿಮಾಕ್ಕೆ ಆರಂಭದಲ್ಲೇ ಅವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ, ನಂಗಂತೂ ಅದೃಷ್ಟವೇ ಎನಿಸಿದೆ.

ರಾಜ್ ಕುಟುಂಬದ ಮೊದಲ ಹೆಣ್ಣಮಗಳು ನಟಿಯಾಗಿ ಎಂಟ್ರಿ!

ಸಿನಿಮಾ ಕ್ಷೇತ್ರಕ್ಕೇ ಬರಬೇಕು ಅಂತೆನಿಸಿದ್ದು ಯಾಕೆ?

ಅದೇನೋ ಚಿಕ್ಕವಳಿದ್ದಾಗಿನಿಂದಲೂ ನನ್ನೊಳಗಿದ್ದ ಆಸೆ ಅದು. ಅದಕ್ಕೆ ಮನೆ ವಾತಾವರಣವೂ ಕಾರಣ. ನಾನು ಶೂಟಿಂಗ್‌ ಸೆಟ್‌ಗೆ ಚಿಕ್ಕವಳಿದ್ದಾಗಿನಿಂದಲೂ ಹೋಗುತ್ತಿದೆ. ಅಪ್ಪನ ಸಿನಿಮಾಗಳ ಜತೆಗೆ ಮಾಮಂದಿರಾದ ಪುನೀತ್‌, ಶಿವಣ್ಣ ಅವರು ಅಭಿನಯಿಸಿದ ಸಾಕಷ್ಟುಸಿನಿಮಾಗಳ ಶೂಟಿಂಗ್‌ ಸೆಟ್‌ಗೆ ಮಮ್ಮಿ ಜತೆಗೆ ಹೋಗಿದ್ದು ಉಂಟು. ಆಗೆಲ್ಲ ನಂಗೆ ತೀವ್ರ ಕುತೂಹಲ. ಹೇಗೆಲ್ಲ ಮಾಡ್ತಾರೆ, ಅವರೆಂದರೆ ಜನರಿಗೆ ಅದೇಕೆ ಇಷ್ಟಅಂತ ಅಚ್ಚರಿ. ಆಮೇಲೆ ಎಲ್ಲವೂ ಗೊತ್ತಾಗುವ ಹೊತ್ತಿಗೆ ಸಿನಿಮಾದ ಆಸೆ ನನ್ನೊಳಗೂ ಶುರುವಾಯಿತು. ನಾನು ಯಾಕೆ ಸಿನಿಮಾಕ್ಕೆ ಬರಬಾರದು ಅಂತ ಎನಿಸಿತು. ಆ ಪ್ರಭಾವವೇ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿತು.

ನಟಿ ಆಗುವುದಕ್ಕೆ ಏನೆಲ್ಲ ತಯಾರಿ ಮಾಡಿಕೊಂಡಿದ್ದೀರಿ, ಸಿದ್ಧತೆ ಹೇಗಿದೆ?

ಹೆಚ್ಚು ಕಡಿಮೆ ಒಂದು ವರ್ಷದಷ್ಟುಕಾಲ ಅಭಿನಯ ತರಂಗದಲ್ಲಿ ಆ್ಯಕ್ಟಿಂಗ್‌ ಕೋರ್ಸ್‌ಗೆ ಹೋಗಿದ್ದೇನೆ. ಜತೆಗೆ ಕಾಲೇಜು ದಿನಗಳಿಂದಲೂ ಸಾಲ್ಸಾ ಡಾನ್ಸ್‌ ಟ್ರೈನಿಂಗ್‌ಗೆ ಹೋಗುತ್ತಿದ್ದೆ. ಅದರ ಜತೆಗೆ ಭರತ ನಾಟ್ಯ ಸೇರಿ ವಿವಿಧ ನಾಟ್ಯ ಪ್ರಕಾರಗಳಲ್ಲೂ ಅಷ್ಟೋ ಇಷ್ಟೋ ಅನುಭವ ಇದೆ. ಸಿನಿಮಾಕ್ಕೆ ಬರಬೇಕು ಎನ್ನುವುದಕ್ಕಿಂತ ಎಲ್ಲದರಲ್ಲೂ ಒಂದಷ್ಟುಅನುಭವ ಇರಲಿ ಅಂತ ಮಮ್ಮಿ ಡಾನ್ಸ್‌ ಕ್ಲಾಸ್‌ಗೆ ಸೇರಿಸಿದ್ದರು. ಅಲ್ಲಿ ಒಂದಷ್ಟುಕಲಿಯಲು ಸಾಧ್ಯವಾಯಿತು. ಫಿಟ್ನೆಸ್‌ ಅಂತ ಮೊದಲಿನಿಂದಲೂ ವರ್ಕೌಟ್‌ ನಡೆಯುತ್ತಲೇ ಇದೆ. ಕಲಿಕೆ ಅಂತ ಇಷ್ಟಿದ್ದರೂ, ಹಂತ ಹಂತವಾಗಿ ಕಲಿಯುವುದು ಇದ್ದೇ ಇದೆ.

ಚೊಚ್ಚಲ ಸಿನಿಮಾದ ಅವಕಾಶ ಸಿಕ್ಕಿದ್ದು ಹೇಗೆ?

ಜಸ್ಟ್‌ ಫ್ರೆಂಡ್‌ ಮೂಲಕ. ನಿರ್ದೇಶಕರೇ ಅಪ್ರೋಚ್‌ ಮಾಡಿದ್ದು. ಸಿನಿಮಾಕ್ಕೆ ಬರ್ತೀನಿ ಅನ್ನೋ ಕುತಹೂಲವೂ ಅದಕ್ಕೆ ಕಾರಣವಾಗಿರಬಹುದು. ಅವರೇ ಸಂಪರ್ಕ ಮಾಡಿದರು. ಮೊದಲು ಅಪ್ಪ ಮತ್ತು ಮಮ್ಮಿ ಬಳಿ ಕತೆ ಬಗ್ಗೆ ಹೇಳಿದರು. ಪಾತ್ರದ ಡಿಟೈಲ್ಸ್‌ ಕೂಡ ಕೊಟ್ಟರು. ಅವರೇ ಚಾಯ್ಸ್ ಮಾಡಿದರು. ನಾನೂ ಕೂಡ ಒಂದ್ಸಲ ಕತೆ ಮತ್ತು ಪಾತ್ರದ ವಿವರ ಕೇಳಿದೆ. ಹೇಗಿದೆ ಅಂತ ಮಮ್ಮಿ ಕೇಳಿದ್ರು. ಚೆನ್ನಾಗಿದೆ ಅಂದೆ. ಅವರಿಗೂ ಇಷ್ಟವಾಯಿತು ಅಂತ ಆಮೇಲೆ ಹೇಳಿದ್ರು. ಎಂಟ್ರಿಗೆ ಇದೇ ಕತೆ ಮತ್ತು ಪಾತ್ರ ಸೂಕ್ತ ಅಂತ ಡಿಸೈಡ್‌ ಆಂದ್ಮೇಲೆಯೇ ಈ ಸಿನಿಮಾದಲ್ಲಿ ಅಭಿನಯಸಲು ಒಪ್ಪಿಕೊಂಡೆ.

ಕ್ಯಾರೆಕ್ಟರ್‌ ಹೇಗಿರುತ್ತೆ ಅಂತ ಮಾಹಿತಿ ಇದೆಯಾ?

ಅದೆಲ್ಲ ಈಗಲೇ ರಿವೀಲ್‌ ಮಾಡೋ ಹಾಗಿಲ್ಲ. ಆದ್ರೆ ನನ್ನ ಎಂಟ್ರಿಗೆ ಒಂದು ಪಾತ್ರ ಹೇಗಿರಬೇಕು ಹಾಗಿದೆ ಈ ಪಾತ್ರ. ಮಮ್ಮಿ ಕೂಡ ಪಾತ್ರದ ವಿವರ ಕೇಳಿ ಖುಷಿ ಆಗಿದ್ದಾರೆ. ನಂಗೂ ತುಂಬಾ ಎಕ್ಸೈಟ್‌ಮೆಂಟ್‌ ಇದೆ. ಈಗಿನ ಹುಡುಗಿಯರಿಗೆ ರಿಲೇಟ್‌ ಆಗುವಂತಹ ಪಾತ್ರ. ಅಷ್ಟುಮಾತ್ರ ಹೇಳಬಹುದು

ಅಪ್ಪ-ಅಮ್ಮ ಜತೆಗೆ ಮಾವಂದಿರ ಸಲಹೆ , ಮಾರ್ಗದರ್ಶನ ಹೇಗಿದೆ?

ಸದ್ಯಕ್ಕೆ ಅಪ್ಪ-ಅಮ್ಮ ಇಬ್ಬರಿಗೂ ಇಷ್ಟಇದೆ. ಅವರ ಸರ್ಪೋಟ್‌ನಿಂದಾಗಿಯೇ ಈ ಪ್ರಾಜೆಕ್ಟ್ಗೆ ಓಕೆ ಅಂದಿದ್ದೇನೆ. ಮಾವಂದಿರಿಗೂ ನಾನು ಸಿನಿಮಾಕ್ಕೆ ಬರುತ್ತಿದ್ದೇನೆ ಎನ್ನುವ ವಿಷಯ ಗೊತ್ತು. ಆ್ಯಕ್ಟಿಂಗ್‌ ಹೇಗಿರಬೇಕು, ಸಿನಿಮಾ ಅಂದ್ರೇನು ಅಂತ ಇನ್ಮೇಲೆ ಅವರಿಂದ ಸಲಹೆ-ಸೂಚನೆ ಪಡೆಯುತ್ತೇನೆ. ಒಂದಂತೂ ಸತ್ಯ. ಅಪ್ಪ-ಮಮ್ಮಿ ಸದಾ ಹೇಳುವುದೇನಂದ್ರೆ, ಎಷ್ಟೇ ಬೆಳೆದ್ರು ಸಿನಿಮಾ ಮತ್ತು ಪ್ರೇಕ್ಷಕರ ಬಗ್ಗೆ ಗೌರವದಿಂದ ಇರಬೇಕು. ವಿನಯ ಅತೀ ಮುಖ್ಯ, ಹಾಗೆಯೇ ಶಿಸ್ತು ಕೂಡ ಬೇಕು ಅಂತ ಹೇಳುತ್ತಿದ್ದಾರೆ. ಆ ಪ್ರಕಾರ ನಡೆದುಕೊಳ್ಳುತ್ತೇನೆ.

click me!