ಸ್ಟಾರ್'ಗಳ ನಡುವೆ ತರಾಸು : ‘ದಳವಾಯಿ ಮುದ್ದಣ್ಣ’ದಲ್ಲಿ ಪ್ರಕಾಶ್ ರೈ? ರಜನಿಕಾಂತ್?

Published : Sep 06, 2016, 09:48 AM ISTUpdated : Apr 11, 2018, 12:48 PM IST
ಸ್ಟಾರ್'ಗಳ ನಡುವೆ ತರಾಸು : ‘ದಳವಾಯಿ ಮುದ್ದಣ್ಣ’ದಲ್ಲಿ ಪ್ರಕಾಶ್ ರೈ?  ರಜನಿಕಾಂತ್?

ಸಾರಾಂಶ

ಮೊದಲಿಗೆ ಈ ಚಿತ್ರದಲ್ಲಿ ನಟಿಸುವಂತೆ ಪ್ರಕಾಶ್ ರೈ ಅವರಿಗೆ ಕೇಳಲಾಗಿತ್ತು. ನಟಿಸುವುದಕ್ಕೆ ಒಪ್ಪಿಕೊಂಡಿದ್ದ ರೈ ಮುಂಗಡವಾಗಿ ಹಣವನ್ನೂ ಪಡೆದಿದ್ದರಂತೆ.

-ಆರ್.ಕೇಶವ ಮೂರ್ತಿ

ಸಿನಿಮಾ ಮತ್ತು ಕಾದಂಬರಿ ಎಂಬ ಪದವನ್ನು ಒಟ್ಟೊಟ್ಟಿಗೆ ಕೇಳಿದಾಗ ಕನ್ನಡದ ಮಟ್ಟಿಗೆ ತರಾಸು ನಿಸ್ಸಂದೇಹವಾಗಿ ನೆನಪಾಗುತ್ತಾರೆ. ‘ನಾಗರಹಾವು’, ‘ಹಂಸಗೀತೆ’, ‘ಬೆಂಕಿಯಬಲೆ’, ‘ಮಸಣದ ಹೂವು’, ‘ಗಾಳಿಮಾತು’ ಚಿತ್ರಗಳ ಜನಪ್ರಿಯತೆ ಇದಕ್ಕೆ ಕಾರಣವಿದ್ದಿರಬಹುದು. ದುರ್ಗದ ತಳುಕಿನ ಈ ಜನಪ್ರಿಯ ಕಾದಂಬರಿಕಾರ ಈಗ ನಮ್ಮೊಂದಿಗಿಲ್ಲ. ಆದರೆ ಅವರನ್ನು ಪುನಃ ನೆನಪಿಸಿಕೊಳ್ಳಲು ಒಂದು ನೆಪ ಸಿಕ್ಕಿದೆ. ತರಾಸು ಅವರ ಮತ್ತೊಂದು ಕಾದಂಬರಿ ಇದೀಗ ಸಿನಿಮಾ ಆಗುತ್ತಿದೆ.

ತರಾಸು ಅವರ ಐತಿಹಾಸಿಕ ತ್ರಿವಳಿ ಕಾದಂಬರಿಗಳಾದ ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’ ಹಾಗೂ ‘ತಿರುಗುಬಾಣ’ಗಳನ್ನು ಸೇರಿಸಿ ‘ದಳವಾಯಿ ಮುದ್ದಣ್ಣ’ ಕೃತಿ ಆಗಿದೆ. ಈಗ ಸಿನಿಮಾ ಆಗುತ್ತಿರುವುದು ಇದೇ ಕೃತಿ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ನಂತರ ನಾಗಣ್ಣ ಅವರೇ ಮುದ್ದಣ್ಣನ ಸಾಹಸವನ್ನು ತೆರೆ ಮೇಲೆ ತರುತ್ತಿದ್ದಾರೆ. ಈಗಾಗಲೇ ಚಿತ್ರಕತೆ ಕೂಡ ತಯಾರಿಸಿಕೊಂಡಿದ್ದು, ಹಾಡು, ಸಂಗೀತ ಸಂಯೋಜನೆ ಕೂಡ ಮುಗಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಇದೇ ಚಿತ್ರದ ಸುತ್ತ ಕೆಲಸ ಮಾಡುತ್ತಿದ್ದ ನಾಗಣ್ಣ ಅವರಿಗೆ ಸಾಥ್ ನೀಡಿದ್ದು ಸಿ ನಾರಾಯಣ್ ಎಂಬವರು. ಈ ನಾರಾಯಣ್ ಅವರು ಬೇರಾರೂ ಅಲ್ಲ, ತುಂಬಾ ಹಿಂದೆಯೇ ಶಿವಕುಮಾರ್ ನಿರ್ದೇಶಿಸಿದ ‘ಭಾವತರಂಗ’ ಎನ್ನುವ ಚಿತ್ರದ ನಾಯಕ ನಟ ಮತ್ತು ನಿರ್ಮಾಪಕರು. ಮಮತಾ ಶೆಣೈ ಈ ಚಿತ್ರದ ನಾಯಕಿಯಾಗಿದ್ದು, ರಾಮ್‌ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ತರಾಸು ಅವರಿಗೆ ಆಪ್ತರಾಗಿದ್ದ ಸಿ ನಾರಾಯಣ್ ಅವರು ತ್ರಿವಳಿ ಕಾದಂಬರಿಗಳನ್ನು ಒಳಗೊಂಡ ‘ದಳವಾಯಿ ಮುದ್ದಣ್ಣ’ದ ಹಕ್ಕುಗಳು ಪಡೆದಿದ್ದರು. ನಾರಾಯಣ್ ಅವರು ತಾವೇ ಈ ಕೃತಿಯನ್ನು ಸಿನಿಮಾ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಸುತ್ತಿರುವ ಹೊತ್ತಿನಲ್ಲೇ ಅನಾರೋಗ್ಯಕ್ಕೆ ತುತ್ತಾಗಿ, ಇತ್ತೀಚೆಗಷ್ಟೆ ನಿಧನ ಹೊಂದಿದರು. ಆದರೆ, ನಾರಾಯಣ್ ಅವರ ಜತೆ ನಿಂತು ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಸೇರಿದಂತೆ, ಹಾಡು, ಸಂಗೀತ ಕೆಲಸಗಳನ್ನು ಮಾಡಿ ಮುಗಿಸಿದ್ದ ನಿರ್ದೇಶಕ ನಾಗಣ್ಣ ಅವರೇ ‘ದಳವಾಯಿ ಮುದ್ದಣ್ಣ’ ಚಿತ್ರಕ್ಕೆ ಮರುಜೀವ ನೀಡಿದ್ದಾರೆ. ಮೊದಲಿಗೆ ಈ ಚಿತ್ರದಲ್ಲಿ ನಟಿಸುವಂತೆ ಪ್ರಕಾಶ್ ರೈ ಅವರಿಗೆ ಕೇಳಲಾಗಿತ್ತು. ನಟಿಸುವುದಕ್ಕೆ ಒಪ್ಪಿಕೊಂಡಿದ್ದ ರೈ ಮುಂಗಡವಾಗಿ ಹಣವನ್ನೂ ಪಡೆದಿದ್ದರಂತೆ.

ಆದರೆ, ಬಿಗ್‌ಬಜೆಟ್ ಸಿನಿಮಾ ಎನ್ನುವ ಕಾರಣಕ್ಕೆ ತಡವಾಗುತ್ತಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಇದಕ್ಕೆ ಅಂತಿಮ ರೂಪ ಸಿಗಲಿದೆ. ವಿಶೇಷವೆಂದರೆ ವಿತರಕ ಎಚ್ ಡಿ ಗಂಗರಾಜು ಅವರ ಜತೆ ಸೇರಿ ಒಮ್ಮೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ‘ದಳವಾಯಿ ಮುದ್ದಣ್ಣ’ನ ಕತೆಯನ್ನು ಹೇಳಿ ಬಂದಿದ್ದಾರೆ. ಹೀಗಾಗಿ ಇಬ್ಬರ ನಟರ ಪೈಕಿ ಯಾರು ಮುದ್ದಣ್ಣ ಆಗುತ್ತಾರೆಂಬುದು ಸದ್ಯದ ಕುತೂಹಲ. ಈ ನಡುವೆ ನಾಗಣ್ಣ ಅವರು ನಾರಾಯಣ್ ಅವರ ಪುತ್ರಿ ಹಾಗೂ ಅಡ್ವೋಕೇಟ್ ಶಾಂತಾ ಎನ್ ಸ್ವಾಮಿ ಅವರ ಸಾರಥ್ಯದಲ್ಲಿ ‘ದಳವಾಯಿ ಮುದ್ದಣ್ಣ’ನಿಗೆ ಅಂತಿಮ ರೂಪ ನೀಡುತ್ತಿದ್ದಾರೆ. ಅಂದುಕೊಂಡಂತೆ ಎಲ್ಲವೂ ಆದರೆ, ವಾಲ್ಮಿಕಿ ಬ್ಯಾನರ್‌ನಡಿ ಬೇರೆ ನಿರ್ಮಾಪಕರ ಜತೆ ಸೇರಿ ‘ದಳವಾಯಿ ಮುದ್ದಣ್ಣ’ನಿಗೆ ಮುಹೂರ್ತ ಮಾಡುವುದಕ್ಕೆ ನಾಗಣ್ಣ ನಿರ್ಧರಿಸಿದ್ದಾರೆ. ಆದರೆ, ‘ದಳವಾಯಿ ಮುದ್ದಣ್ಣ’ನಾಗಿ ಅಂದುಕೊಂಡಂತೆ ಪ್ರಕಾಶ್ ರೈ ಕಾಣಿಸಿಕೊಳ್ಳುತ್ತಾರಾ? ಅಥವಾ ರಜನಿಕಾಂತ್ ಗ್ರೀನ್ ಸಿಗ್ನಲ್ ಕೊಡುತ್ತಾರಾ? ಸಿನಿಮಾ ಸೆಟ್ಟೇರಿದ ಮೇಲೆಯೇ ಗೊತ್ತಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?