ರಾಜಮೌಳಿ ಮೊದಲು ಕಲಿಯಲು ಬಂದಿದ್ದೇ ಬೇರೆ? ಕನ್ನಡದಲ್ಲಿ ಇವರೆಂದರೆ ತುಂಬ ಇಷ್ಟ

Published : Sep 29, 2016, 06:32 PM ISTUpdated : Apr 11, 2018, 12:36 PM IST
ರಾಜಮೌಳಿ ಮೊದಲು ಕಲಿಯಲು ಬಂದಿದ್ದೇ ಬೇರೆ? ಕನ್ನಡದಲ್ಲಿ ಇವರೆಂದರೆ ತುಂಬ ಇಷ್ಟ

ಸಾರಾಂಶ

ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಜತೆಗೆ ಆತ್ಮೀಯ ನಂಟು ಇಟ್ಟುಕೊಂಡಿರುವ ರಾಜಮೌಳಿ ಅವರಿಗೆ ಕನ್ನಡದಲ್ಲೇ ಒಂದು ಸಿನಿಮಾ ಮಾಡುವ ಆಸೆಯೂ ಇದೆ. ಅದೂ ಐತಿಹಾಸಿಕ ಸಿನಿಮಾ. ‘ಕನ್ನಡದಲ್ಲಿ ನಾನು ಚಿತ್ರ ಮಾಡುವುದಾದರೆ ದೊಡ್ಡ ಮಟ್ಟದಲ್ಲಿ ಮಾಡುವ ಆಸೆ ಇದೆ. ಮೊದಲಿನಿಂದಲೂ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಮೇಲೊಂದು ಸಿನಿಮಾ ಮಾಡುವ ಆಸೆ ಇದೆ. ಅದೊಂದು ದೊಡ್ಡ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವಾಗ ಮಾಡುತ್ತೇನೆಂಬುದು ಸದ್ಯಕ್ಕೆ ಯೋಚನೆ ಇಲ್ಲ’ ಎನ್ನುವ ರಾಜಮೌಳಿ ಅವರನ್ನು ಯಾವ ನಿರ್ಮಾಪಕರು ಕನ್ನಡಕ್ಕೆ ಕರೆತರುತ್ತಾರೆಂಬುದು ನೋಡಬೇಕಿದೆ.

-ಆರ್. ಕೇಶವ ಮೂರ್ತಿ

ನಿರ್ದೇಶಕ ರಾಜಮೌಳಿ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗುತ್ತಿವೆ. ಎಡಿಟಿಂಗ್ ಕಲಿಯಲು ಬಂದವರು ಏನೆಲ್ಲ ಸಾಧನೆ ಮಾಡಿದರೆಂಬುದು ಎಲ್ಲರಿಗೂ ಗೊತ್ತಿದೆ. ‘ಬಾಹುಬಲಿ-2’ ಚಿತ್ರದಲ್ಲಿ ತೊಡಗಿಸಿಕೊಂಡಿರುವ ರಾಜಮೌಳಿ, 15 ವರ್ಷಗಳ ಜರ್ನಿಯನ್ನು ಸಂಭ್ರಮಿಸುತ್ತಿದ್ದಾರೆ. ಚಿತ್ರಪ್ರಭದೊಂದಿಗೂ ಖುಷಿಯನ್ನು ಹಂಚಿಕೊಂಡರು

ಕೆಲವೇ ವರ್ಷಗಳ ಹಿಂದೆ ಆತ ತೆಲುಗು ಸಿನಿಮಾ ನಿರ್ದೇಶಕ. ಅದಕ್ಕೂ ಹಿಂದೆ ಕರ್ನಾಟಕದಿಂದ ವಲಸೆ ಹೋಗಿರುವ ಕುಟುಂಬದ ಕುಡಿ. ನಿರ್ದೇಶನದ ನೇಗಿಲು ಹೊರುವ ಮೊದಲೇ ಎಡಿಟಿಂಗ್ ರೂಮ್‌ನಲ್ಲಿ ಶಬ್ದಗಳ ಜತೆ ಗೆಳೆತನ ಬೆಳೆಸಿದವರು. ಧಾರಾವಾಹಿಗಳನ್ನು ಸಾಧ್ಯವಾದಷ್ಟು ಹಿಗ್ಗಿಸುತ್ತ ನೋಡುಗನ ಕುತೂಹಲವನ್ನು ಹೆಚ್ಚಿಸುತ್ತಲೇ ಕ್ಲಾಪ್ ಬೋರ್ಡ್ ಹಿಡಿದು ಚುರುಕಾಗಿ ಓಡಾಡಿದವ. ತನಗೆ ಕೆಲಸ ಕೊಟ್ಟ ಗುರುಗಳೇ ಅಚ್ಚರಿಯಾಗುವಂತೆ ಒಂದೊಂದು ಚಿತ್ರವನ್ನು ಗೆಲುವಿನ ಶಿಖರಕ್ಕೆ ಮುಟ್ಟಿಸಿದವರು. ಮೊದಲ ಚಿತ್ರದಿಂದಲೇ ಯಶಸ್ಸಿನ ಶಿಖರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡರೂ ಆತನನ್ನು ಟಾಲಿವುಡ್ ನಿರ್ದೇಶಕನೆಂದೇ ಗುರುತಿಸಿದರು.

ಆದರೆ, ಕಳೆದವರ್ಷ ಬಂದ ಆ ಒಂದು ಸಿನಿಮಾ ಇವರ ಹೆಸರನ್ನೇ ಇಂಡಿಯಾ ಗೇಟ್‌ನ ಆಚೆಗೆ ಕೊಂಡೊಯ್ಯಿತು. ಈಗ ಅವರು ತೆಲುಗು ಸಿನಿಮಾ ನಿರ್ದೇಶಕನಲ್ಲ. ಎಡಿಟರ್ ಕೂಡ ಅಲ್ಲ. ಧಾರಾವಾಹಿಯ ಸಂಚಿಕೆ ನಿರ್ದೇಶಕನಂತೂ ಅಲ್ಲವೇ ಅಲ್ಲ. ‘ಇಂಡಿಯನ್ ಫಿಲ್ಮ್ ಡೈರೆಕ್ಟರ್’! ಇವೆಲ್ಲ ಬಣ್ಣನೆ ಕೇಳುವಾಗ ಅವರು ಎಸ್ ಎಸ್ ರಾಜವೌಳಿ ಅಂತ ನಿಮಗೂ ಅನ್ನಿಸಿರಬಹುದು. ನಿಜ, ‘ಬಾಹುಬಲಿ’ಯ ಸೂತ್ರಧಾರ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ, ತಮನ್ನಾ, ರಮ್ಯಾಕೃಷ್ಣ ಹೀಗೆ ಒಂದಿಷ್ಟು ಸ್ಟಾರ್‌ಗಳ ಕಾಂಬಿನೇಷನ್‌ನಲ್ಲಿ ಇಂಡಿಯನ್ ಸಿನಿಮಾಗೆ ರಾಜವೌಳಿ ಕೊಟ್ಟ ಬಂಪರ್ ಗ್‌ಟಿ ‘ಬಾಹುಬಲಿ’!

ಸಾಮಾನ್ಯವಾಗಿ ಸಿನಿಮಾಗಳನ್ನು ಆಯಾ ಚಿತ್ರಗಳ ಹೀರೋಗಳ ಹೆಸರಿನಿಂದಲೇ ಗುರುತಿಸುವುದು ವಾಡಿಕೆ. ಅದು ನಮ್ಮ ಚಿತ್ರರಂಗದಲ್ಲಿ ಬೇರೂರಿರುವ ಸ್ಟಾರ್ ಇಮೇಜ್‌ನ ಪರಿಣಾಮ. ಆದರೆ, ಕೆಲವು ಸಿನಿಮಾಗಳನ್ನು ಮಾತ್ರ ನಿರ್ದೇಶಕರ ನೆರಳಿನಿಂದ ಆಚೆ ತರಲಾಗದು. ಕೆ ಬಾಲಚಂದರ್, ಪುಟ್ಟಣ್ಣ ಕಣಗಾಲ್, ಮಣಿರತ್ನಂ, ಶಂಕರ್, ರಾಮ್‌ಗೋಪಾಲ್ ವರ್ಮಾ, ಮುರುಗದಾಸ್ ಹೀಗೆ ಒಂದಿಷ್ಟು ನಿರ್ದೇಶಕರು ತಮ್ಮ ಚಿತ್ರಗಳಿಗೆ ತಾವೇ ಹೀರೋಗಳಾಗಿರುತ್ತಾರೆ! ಆ ಮೂಲಕ ಒಂದು ಸಿನಿಮಾದ ನಿಜವಾದ ಕ್ಯಾಪ್ಟನ್ ಅನಿಸಿಕೊಂಡಿರುತ್ತಾರೆ.

 ಆ ಸಾಲಿಗೆ ರಾಜವೌಳಿಯೂ ಸೇರುತ್ತಾರೆ. ಹಾಗೆ ನೋಡಿದರೆ ‘ಬಾಹುಬಲಿ’ಗಿಂತ ಮೊದಲು ಬಂದ ಚಿತ್ರಗಳನ್ನು ಗುರುತಿಸಿದ್ದು ಮಾತ್ರ ಆಯಾ ಹೀರೋಗಳಿಂದಲೇ. ಆದರೆ, ಬಾಹುಬಲಿ ನಂತರ ರಾಜಮೌಳಿಯ ಹಿಂದಿನ ಚಿತ್ರಗಳನ್ನೂ ಹೀರೋಗಳ ಬದಲಿಗೆ ರಾಜವೌಳಿಯ ಹೆಸರಿನಿಂದಲೇ ಹೇಳುತ್ತಾರೆಂಬುದು ಒಂದು ಚಿತ್ರ ಕೊಟ್ಟ ಯಶಸ್ಸಿನ ಅಲೆ. ಮೊದಲ ಚಿತ್ರದಲ್ಲೇ ಜ್ಯೂ. ಎನ್‌ಟಿಆರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು. ‘ಸ್ಟೂಡೆಂಟ್ ನಂ.1’ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ ರಾಜವೌಳಿ ಅದೇ ಎನ್‌ಟಿಆರ್ ಜತೆ ಮೂರು ಹಿಟ್ ಸಿನಿಮಾಗಳನ್ನು ಕೊಟ್ಟವರು.

ಹ್ಯಾಟ್ರಿಕ್ ಡೈರಕ್ಟರ್

‘ನಾನೊಂದು ಸಿನಿಮಾ ನಿರ್ದೇಶನ ಮಾಡುವುದು ಯಾವಾಗ? ಚಿತ್ರರಂಗಕ್ಕೆ ಬಂದಾಗ ಆರಂಭದ ದಿನಗಳಲ್ಲಿ ನನ್ನ ಆಗಾಗ ಕಾಡುತ್ತಿದ್ದ ಪ್ರಶ್ನೆ ಇದು. ಆ ಯೋಚನೆಯಲ್ಲಿ ಎಡಿಟಿಂಗ್ ಕಲಿಯುತ್ತಿದ್ದವನು ನಾನು. ಆದರೆ, ರಾಘವೇಂದ್ರರಾವ್‌ರಂಥ ನಿರ್ದೇಶಕನಿಗೆ ಶಿಷ್ಯ ಅನಿಸಿಕೊಂಡ ಲವೋ ಏನೋ ಇದ್ದಕ್ಕಿದಂತೆ ನಿರ್ದೇಶನ ಮಾಡುವ ಅವಕಾಶವೂ ದಕ್ಕಿತು. ‘ಸ್ಟೂಡೆಂಟ್ ನಂ.1’ ಮೂಲಕ ಆ್ಯಕ್ಷನ್ ಕಟ್ ಹೇಳಿದೆ. ನಾನು ಮತ್ತು ಜ್ಯೂ ಎನ್‌ಟಿಆರ್ ಹಾಗೆ ಕೆರಿಯರ್ ಆರಂಭಿಸಿದೆವು. ಎಡಿಟಿಂಗ್ ಅಸಿಸ್ಟಂಟ್ ಆಗಿ ಸೇರಿಕೊಂಡಾಗ ನನಗೆ 25 ವರ್ಷ. ಶಬ್ಧಗಳ ಜತೆ ನಂಟು ಬೆಳೆಸಿಕೊಂಡವನು. 2001 ಸೆ.27ರಂದು ನನ್ನ ಮೊದಲ ನಿರ್ದೇಶನದ ಸಿನಿಮಾ ತೆರೆಗೆ ಬಂತು. ಅಲ್ಲಿಂದ ಇಲ್ಲಿವರೆಗೂ ಬ್ಯೂಟಿುಲ್ ಜರ್ನಿ ನನ್ನದು’ ಎನ್ನುತ್ತಾರೆ ರಾಜವೌಳಿ.

ಬಾಹುಬಲಿ ಚಿತ್ರದವರೆಗೂ ಈ 15 ವರ್ಷಗಳಲ್ಲಿ 10 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರ ನಡುವೆ ‘ರಾಜನ್ನ’ ಹೆಸರಿನ ಚಿತ್ರಕ್ಕೆ ಕೇವಲ ವಾರ್ ಸನ್ನಿವೇಶಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೊದಲಿನಿಂದಲೂ ಐತಿಹಾಸಿಕ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡವರು ರಾಜವೌಳಿ. ಹೀಗಾಗಿ ‘ಮಗೀರ’, ‘ಯಮದೊಂಗ’ ಚಿತ್ರಗಳ ನಂತರವೂ ಅವರ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ. ಆ ಕಾರಣಕ್ಕೆ ‘ಬಾಹುಬಲಿ’ಯಂಥ ಬಿಗ್ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟರು. ‘ನಾನು ಚಿಕ್ಕ ವಯಸ್ಸಿನಲ್ಲೇ ನನ್ನ ತಂದೆ ಜತೆಗೆ ಲೈಬ್ರರಿಗೆ ಹೋಗಿ ಅಮರ ಚಿತ್ರಕಥಾವನ್ನು ಓದುತ್ತಿದ್ದೆ. ಅವು ಕಲ್ಪನೆಯೋ, ವಾಸ್ತವವೋ ನನಗೆ ಗೊತ್ತಿಲ್ಲ.

ಪ್ರೇಮಲೋಕದ ಕ್ರೇಜಿಸ್ಟಾರ್ ಇಷ್ಟಪಡುವ ಮೌಳಿ

ಆದರೂ ಕಾಮಿಕ್ಸ್ ರೂಪದ ಆ ಕತೆಗಳು ನನ್ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದವು. ಚಿತ್ರರಂಗಕ್ಕೆ ಬಂದ ಮೇಲೂ ನಾನು ಅಂಥ ಕತೆಗಳನ್ನು ಓದುವುದನ್ನು ತಪ್ಪಿಸಿಕೊಳ್ಳಲಿಲ್ಲ. ಮಗೀರ, ಬಾಹುಬಲಿಯಂಥ ಸಿನಿಮಾಗಳನ್ನು ಮಾಡುವುದಕ್ಕೆ ಸಾಧ್ಯವಾಗಿದ್ದೂ ಇದೇ ಕಾರಣಕ್ಕೆ. ನಾನು ಒಬ್ಬ ಪ್ರೇಕ್ಷಕನಾಗಿ ಎಲ್ಲ ರೀತಿಯ ಸಿನಿಮಾಗಳನ್ನು ನೋಡಿದರೂ ರಾಜ- ಮಹಾರಾಜರ ಕತೆಗಳನ್ನು ನಿರ್ದೇಶಿಸುವುದಕ್ಕೆ ಇಷ್ಟಪಡುತ್ತೇನೆ’ ಎನ್ನುವ ರಾಜಮೌಳಿ, ಕನ್ನಡದಲ್ಲಿ ಅವರಿಗೆ ಅತಿಹೆಚ್ಚು ಇಷ್ಟವಾಗುವುದು ರವಿಚಂದ್ರನ್ ಸಿನಿಮಾಗಳಂತೆ. ‘ಪ್ರೇಮಲೋಕ’ ಚಿತ್ರದಿಂದಲೇ ರವಿಚಂದ್ರನ್ ಸಿನಿಮಾಗಳನ್ನು ನೋಡಲು ಶುರುಮಾಡಿದರು. ಇದರ ಹೊರತಾಗಿ ವಿಷ್ಣುವರ್ಧನ್ ಸಿನಿಮಾಗಳನ್ನು ಹೆಚ್ಚಾಗಿ ನೋಡಿದ್ದಾರೆ. ಆದರೆ, ಈಗಲೂ ತಾಂತ್ರಿಕವಾಗಿ ಸಿನಿಮಾ ಕಟ್ಟುವ ವಿಚಾರದಲ್ಲಿ ರವಿಚಂದ್ರನ್ ಅವರಿಗೆ ಅವರೇ ಸಾಟಿ ಎನ್ನುವ ಅಭಿಪ್ರಾಯ ರಾಜಮೌಳಿಯದ್ದು.

ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಜತೆಗೆ ಆತ್ಮೀಯ ನಂಟು ಇಟ್ಟುಕೊಂಡಿರುವ ರಾಜಮೌಳಿ ಅವರಿಗೆ ಕನ್ನಡದಲ್ಲೇ ಒಂದು ಸಿನಿಮಾ ಮಾಡುವ ಆಸೆಯೂ ಇದೆ. ಅದೂ ಐತಿಹಾಸಿಕ ಸಿನಿಮಾ. ‘ಕನ್ನಡದಲ್ಲಿ ನಾನು ಚಿತ್ರ ಮಾಡುವುದಾದರೆ ದೊಡ್ಡ ಮಟ್ಟದಲ್ಲಿ ಮಾಡುವ ಆಸೆ ಇದೆ. ಮೊದಲಿನಿಂದಲೂ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಮೇಲೊಂದು ಸಿನಿಮಾ ಮಾಡುವ ಆಸೆ ಇದೆ. ಅದೊಂದು ದೊಡ್ಡ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವಾಗ ಮಾಡುತ್ತೇನೆಂಬುದು ಸದ್ಯಕ್ಕೆ ಯೋಚನೆ ಇಲ್ಲ’ ಎನ್ನುವ ರಾಜಮೌಳಿ ಅವರನ್ನು ಯಾವ ನಿರ್ಮಾಪಕರು ಕನ್ನಡಕ್ಕೆ ಕರೆತರುತ್ತಾರೆಂಬುದು ನೋಡಬೇಕಿದೆ.

ಸದ್ಯಕ್ಕೆ ‘ಬಾಹುಬಲಿ-2’ ಚಿತ್ರೀಕರಣದಲ್ಲಿ ತೊಡಗಿರುವ ರಾಜವೌಳಿ, ಹಗಲು- ರಾತ್ರಿಯ ವ್ಯತ್ಯಾಸವಿಲ್ಲದೆ ಶೂಟಿಂಗ್‌ನಲ್ಲಿದ್ದಾರೆ. ಆದರೆ, ಬಾಹುಬಲಿಯ ಪಾರ್ಟ್-2 ಬಗ್ಗೆ ಕೇಳಿದರೆ ‘ನೋ ಕಾಮೆಂಟ್ಸ್. ಈಗ ಚಿತ್ರೀಕರಣ ನಡೆಯುತ್ತಿದೆ. ಏನೂ ಹೇಳಲಾರೆ. ಸಿನಿಮಾ ಬರುತ್ತದೆ ನೋಡಿ’ ಎಂದಷ್ಟೆ ಹೇಳುತ್ತಾರೆ. ಬಿಡುವಿಲ್ಲದ ಚಿತ್ರೀರಣದ ನಡೆಯೂ ಹೊಸ ರೀತಿಯ ಸಿನಿಮಾಗಳನ್ನು ನೋಡುತ್ತಿರುವ ರಾಜವೌಳಿ, ಅವರ ಸ್ನೇಹಿತರೇ ನಿರ್ದೇಶಿಸಿರುವ ‘ಪೆಲ್ಲಿಚೂಪುಲು’ ಚಿತ್ರವನ್ನು ನೋಡಿ ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ‘ಕೋಟಿಗಳ ವೆಚ್ಚದಲ್ಲಿ ಮಾಡುವುದು ಮಾತ್ರ ಸಿನಿಮಾಗಳಲ್ಲ. ತುಂಬಾ ಚಿಕ್ಕ ಬಜೆಟ್ ಸಿನಿಮಾಗಳೂ ಬರುತ್ತಿವೆ. ಅವು ಪ್ರೇಕ್ಷಕರನ್ನು ತಲುಪುತ್ತಿವೆ.

ಎಲ್ಲ ಭಾಷೆಯಲ್ಲೂ ಈ ಹೊಸ ಪ್ರಯತ್ನಗಳು ನಡೆಯುತ್ತಿರಬಹುದು. ನಾನು ತೆಲುಗಿನಲ್ಲಿ ಇತ್ತೀಚೆಗೆ ನೋಡಿದ ಅಂಥ ಹೊಸ ಪ್ರಯತ್ನದ ಸಿನಿಮಾ ಪೆಲ್ಲಿಚೂಪುಲು. ಕೆಲವೇ ಲಕ್ಷಗಳ ವೆಚ್ಚದಲ್ಲಿ ಮಾಡಿರುವ ಈ ಸಿನಿಮಾ ತುಂಬಾ ್ರೆಶ್ ಆಗಿದೆ. ಇಂಥ ಹೊಸ ಹೊಸ ಸಿನಿಮಾಗಳು ಬರಬೇಕಿದೆ. ಚಿತ್ರರಂಗ ಅಂದಮೇಲೆ ಎಲ್ಲ ರೀತಿಯ ಸಿನಿಮಾಗಳು ಹುಟ್ಟಿಕೊಂಡು ಪ್ರತಿ ಚಿತ್ರದಿಂದಲೂ ಪ್ರೇಕ್ಷಕ ಗೆಲ್ಲಬೇಕು. ಯಾಕೆಂದರೆ ನಾವು ಸಿನಿಮಾ ಮಾಡುವುದೇ ಅವನಿಗಾಗಿ. ಅವನು ಗೆದ್ದರೆ ಸಿನಿಮಾ ಗೆದ್ದಂತೆ’ ಎನ್ನುವ ಅಭಿಪ್ರಾಯ ರಾಜವೌಳಿ ಅವರದ್ದು.

ಕನ್ನಡಕ್ಕೆ ರಿಮೇಕ್ ಆದ ರಾಜವೌಳಿ ಚಿತ್ರಗಳು

ಸಿಂಹಾದ್ರಿ- ಕಂಠೀರವ (ವಿಜಯ್)

ವಿಕ್ರಾಮಾರ್ಕುಡು- ಛತ್ರಪತಿ (ಸಿದ್ಧಾರ್ಥ್)

ಮರ್ಯಾದ ರಾಮಣ್ಣ- ಮರ್ಯಾದೆ ರಾಮಣ್ಣ (ಕೋಮಲ್)

 

ಚಿತ್ರರಂಗಕ್ಕೆ ಬಂದು 15 ವರ್ಷಗಳಾಗುತ್ತಿವೆ ಎಂಬುದು ಖುಷಿಯ ವಿಚಾರ. ಆದರೆ, ಇಷ್ಟು ವರ್ಷಗಳಲ್ಲಿ ನಾನು ಮಾಡಿದ್ದು ಕಡಿಮೆ. ಮಾಡಬೇಕಿರುವುದು ಇನ್ನೂ ಹೆಚ್ಚಿದೆ. ಯಾಕೆಂದರೆ ನಾನು ಎಂದಿಗೂ ಸಿನಿಮಾ ವಿದ್ಯಾರ್ಥಿಯಾಗಿಯೇ ಉಳಿದುಕೊಳ್ಳಬೇಕು ಎಂದುಕೊಂಡಿರುವೆ. ಇಷ್ಟು ದಿನ ನನ್ನ ನಿರ್ದೇಶಕನಾಗಿ ನೋಡಿದ ಪ್ರತಿಯೊಬ್ಬರಿಗೂ ನಾನು ಋಣಿ. ಮರೆಯಲಾಗದ ಪಯಣವನ್ನು ನೆನಪಿಸಿಕೊಳ್ಳುತ್ತಲೇ ‘ಬಾಹುಬಲಿ-2’ ಚಿತ್ರೀಕರಣದಲ್ಲಿರುವೆ. ಸದ್ಯದಲ್ಲೇ ನಿಮ್ಮ ಮುಂದೆ ಬರುತ್ತೇನೆ.

- ರಾಜಮೌಳಿ, ನಿರ್ದೇಶಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಪೆಷಲ್ ಡ್ಯಾನ್ಸ್‌ಗಾಗಿಯೇ ನಾಯಕಿಯನ್ನು ಹುಡುಕುವ ನೆಲ್ಸನ್: ಜೈಲರ್ 2ನಲ್ಲಿ ರಜನಿಕಾಂತ್ ಆ ಫೀಲಿಂಗ್ಸ್ ಈಡೇರುತ್ತಾ?
ದುಬೈನಲ್ಲಿ ಮೋಸದಿಂದ 'ಬಾರ್​ ಗರ್ಲ್'​ ಆದೆ, ಆದ್ರೆ ಆ ಅನುಭವವೇ ಸೂಪರ್​: ರಾಧಾ ಕಲ್ಯಾಣ ನಟಿ ಮಾತು ಕೇಳಿ