
ಈ ತಿಂಗಳು, ಆಗಷ್ಟ್ 01 ರಂದು ಪುಷ್ಪಾ ಅರುಣ್ ಕುಮಾರ್ (Pushpa Arun Kumar) ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈ (Kothalavadi) ಸಿನಿಮಾದ ಬಗ್ಗೆ ಏನ್ ಟಾಕ್ ಇದೆ? ಈ ಸಿನಿಮಾದ ಗಳಿಕೆ (Collection) ಎಷ್ಟಾಗಿದೆ? 'ಕೊತ್ತಲವಾಡಿ' ಸಿನಿಮಾ ಸೋತಿದ್ಯಾ ಅಥವಾ ಗೆದ್ದಿದ್ಯಾ? ತಮ್ಮ 'ಕೊತ್ತಲವಾಡಿ' ಚಿತ್ರದ ಬಿಡುಗಡೆ ಬಳಿಕ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಏನ್ ಹೇಳಿದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಕೊತ್ತಲವಾಡಿ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರು 'ನನಗೆ ನನ್ನ ಸಿನಿಮಾ ಮೇಕಿಂಗ್ ಹಾಗೂ ಸಿನಿಪ್ರೇಕ್ಷಕರ ಪ್ರತಿಕ್ರಿಯೆ ಖುಷಿ ಕೊಟ್ಟಿದೆ. ನಿರ್ದೇಶಕ ಶ್ರೀರಾಜ್ ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಿನಿಮಾ ಕಥೆ, ನಿರ್ದೇಶಕರು, ನಟನಟಿಯರು, ತಂತ್ರಜ್ಞರು ಸೇರಿದಂತೆ, ನಮ್ಮ ಇಡೀ ಟೀಂ ಕೆಲಸ ನನಗೆ ತೃಪ್ತಿ ನೀಡಿದೆ. ನಮ್ಮ ಲಿಮಿಟೆಟ್ ಬಜೆಟ್‌ನಲ್ಲಿ, 'ಕೊತ್ತಲವಾಡಿ' ಹಳ್ಳಿಗೆ ಸಂಬಂಧಿಸಿದ ಒಂದು ಕಥೆಯನ್ನು ನಾವು ತೆರೆಯ ಮೇಲೆ ನಮ್ಮಿಂದ ಸಾಧ್ಯವಾದಷ್ಟೂ ಚೆನ್ನಾಗಿ ತಂದಿದ್ದೇವೆ.
ಇನ್ನು, ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಹೇಳಬೇಕು ಎಂದರೆ, 'ಚೆನ್ನಾಗಿದೆ ಎನ್ನುತ್ತೇನೆ. ಏಕೆಂದರೆ, ನಾನು ನಿರ್ಮಾಪಕಿಯಾಗಿ ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದೇನೆ. ನಾನು ಸಾಕಷ್ಟು ತಿಳಿದುಕೊಂಡು ಬಂದರೂ ಇಲ್ಲಿನ ಮೇಕಿಂಗ್ ಹಾಗೂ ವ್ಯವಹಾರ ತಿಳಿದುಕೊಳ್ಳಬೇಕಿರುವುದು ಇನ್ನೂ ಬಹಳಷ್ಟಿದೆ. ಹೀಗಾಗಿ ನಾನು ಈಗ ಬಂದವಳು ಸಾಗಬೇಕಾದ ದಾರಿ ತುಂಬಾ ಇದೆ. ಕೊತ್ತಲವಾಡಿ ನನ್ನ ಮೊದಲ ಸಿನಿಮಾ. ತುಂಬಾ ಕಡಿಮೆ ಬಜೆಟ್‌ನಲ್ಲಿ ಮಾಡಿದ್ದೇವೆ. ನಮ್ಮಿಂದಾದಷ್ಟು ಪ್ರಚಾರ ಮಾಡಿದ್ದೇವೆ.
ಎಲ್ಲಕ್ಕಿಂತ ಹೆಚ್ಚಾಗಿ ನಾವು ಕಥೆ ಆಯ್ಕೆ ಮಾಡಿಕೊಂಡ ಜಾಗ, ಶೂಟಿಂಗ್ ಮಾಡಿರೋ ಆ ಸ್ಥಳಕ್ಕೆ ಸಿನಿಮಾ ಬಿಡುಗಡೆ ವೇಳೆಯಲ್ಲಿ ಮತ್ತೆ ಹೋಗಿ, ಅಲ್ಲಿನ ಜನರನ್ನು ಮಾತನಾಡಿಸಿದ್ದೇವೆ. ಅವರು ನಮಗೆ ತೋರಿಸಿರುವ ಪ್ರೀತಿ-ಅಕ್ಕರೆಗೆ ಬೆಲೆ ಕಟ್ಟಲು ಅಸಾಧ್ಯ. ನಮ್ಮ ಟೀಂ ನೋಡಿ, ಕೊತ್ತಲವಾಡಿ ಜನರು ತುಂಬಾ ಖುಷಿಯಾಗಿದ್ದಾರೆ. ಅಲ್ಲಿನವರು ತಮ್ಮೂರಿನ ಕಥೆಯನ್ನು ನಮ್ಮ ಸಿನಿಮಾ ಮೂಲಕ ತೆರೆಯ ಮೇಲೆ ನೋಡಿದ್ದಾರೆ. ಆ ಮುಗ್ಧ ಜನರು ತೋರಸಿರುವ ಪ್ರೀತಿಯಿಂದ ನಮ್ಮೆಲ್ಲರ ಮನಸ್ಸು ತೃಪ್ತಿಯಿಂದ ತುಂಬಿಹೋಗಿದೆ.
ಇನ್ನು ಕಲೆಕ್ಷನ್ ವಿಷಯಕ್ಕೆ ಬಂದರೆ, ನಮ್ಮ ಸಿನಿಮಾ ಉತ್ತಮ ಓಪನಿಂಗ್ ಪಡೆದು, ಹಾಕಿರುವ ಹಣ ವಾಪಸ್ ಬಂದಿದೆ. ಈಗಲೂ ಸಾಕಷ್ಟು ಕಡೆ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಜನರು ನಮ್ಮ ಸಿನಿಮಾ ಮಾತ್ರವಲ್ಲ, ಎಲ್ಲರ ಸಿನಿಮಾ ನೋಡಬೇಕು. ಹೀಗಾಗಿ ನಮ್ಮ ಸಿನಿಮಾಗೆ ವಾಪಸ್ ಬಂದಿರುವ ಕಾಸು, ಜನರು ತೋರಿಸಿರುವ ಪ್ರೀತಿ ಬಗ್ಗೆ ನನಗೆ ತುಂಬಾ ಖುಷಿಯಿದೆ. ಈಗಷ್ಟೇ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿದ್ದೇನೆ. ಮುಂದೆ, ಇನ್ನೂ ಹೆಚ್ಚಿನ ಬಜೆಟ್, ಇನ್ನೂ ಹೆಚ್ಚಿನ ಭಾಷೆ ಹಾಗೂ ರೀಚ್ ಆಗಬಲ್ಲ ಸಿನಿಮಾ ಮಾಡಲಿದ್ದೇನೆ.
ನಾನು ಯಶ್ ಅಮ್ಮ, ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಈಗ ಯಶ್ ತಲುಪಿರುವ ಹಂತವನ್ನು ನಾನು ತಕ್ಷಣ ತಲುಪಲು ಅಸಾಧ್ಯ. ಒಂದೊಂದೇ ಮೆಟ್ಟಿಲ್ಲನ್ನು ಹತ್ತಿ ಹೋಗಬೇಕು ನಾನು. ಯಶ್ ಸಿನಿಮಾ ಬಿಗ್ ಬಜೆಟ್ ಹಾಗೂ ಮೇಕಿಂಗ್ ನಾನು ಈಗ ಮಾಡಲಾಗದು, ಅದಕ್ಕೆ ಸಾಕಷ್ಟು ಟೈಂ ಬೇಕು. ಈ ಸಿನಿಮಾ ಯಶ್ ನೋಡಿದ್ರಾ ಅಂತ ಪ್ರಶ್ನೆ ಮಾಡೋರಿಗೆ ನಾನು ಹೇಳೋದು ಇಷ್ಟು- 'ಅಷ್ಟೊಂದು ದೊಡ್ಡದೊಡ್ಡ ಸಿನಿಮಾಗೆ ಒಪ್ಪಿಕೊಂಡು ಶೂಟಿಂಗ್ ನಡೆಸುತ್ತಿರುವಾಗ, ಬೇರೆ ನಿರ್ಮಾಪಕರಿಗೆ ಕಾಲ್‌ಶೀಟ್ ಕೊಟ್ಟಿರುವಾಗ, ನಮ್ಮ ಈ ಚಿಕ್ಕ ಸಿನಿಮಾಗೆ ನನ್ನ ಮಗ ಯಶ್ ಸಡನ್ನಾಗಿ ಬಂದು ಹೋಗಲು ಸಾಧ್ಯವೇ?
ಶೂಟಿಂಗ್ ಗ್ಯಾಪ್‌ನಲ್ಲಿ ಯಶ್ ಇಲ್ಲಿ ಬಂದಾಗ ಖಂಡಿತ ನಮ್ಮ ಸಿನಿಮಾ ನೋಡ್ತಾನೆ. ಆತ ನನ್ನ ಮಗ, ನನ್ನ ಮಗ ಬೆಳೆದಿರುವ ಎತ್ತರ ನೋಡಿ ನನಗೆ ನಿಜವಾಗಿಯೂ ಹೆಮ್ಮೆಯಿದೆ. ಹಾಗಂತ, ಆತ ನನ್ನ ಸುತ್ತಲೂ ಯಾವಾಗ್ಲೂ ಸುತ್ತುತ್ತಲೇ ಇರಬೇಕು ಅಂತ ನಾನು ಹೇಳೋದಿಲ್ಲ' ಎಂದಿದ್ದಾರೆ ಕೊತ್ತಲವಾಡಿ ನಿರ್ಮಾಪಕಿ, ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್.
ಆದರೆ.. ಇಲ್ಲೊಂದು ಸತ್ಯ ಸಂಗತಿ ಇದೆ..! ಕೊತ್ತಲವಾಡಿ ಸಿನಿಮಾ ಬಿಡುಗಡೆ ಆಗಿರೋ ಈ ಸಮಯದಲ್ಲಿ, ‘ಸು ಫ್ರಂ ಸೋ’ ಸಿನಿಮಾ, ‘ಕಿಂಗ್‌ಡಮ್’ ಹಾಗು ‘ಮಹಾವತಾರ ನರಸಿಂಹ’ ಸಿನಿಮಾಗಳಿಗೆ ಹೆಚ್ಚಿನ ಥಿಯೇಟರ್‌ಗಳು ಸಿಕ್ಕಿವೆ. ಹೀಗಾಗಿ ಪುಷ್ಪಾ ಅವರ ಕೊತ್ತಲವಾಡಿ ಪ್ರದರ್ಶನಕ್ಕೆ ಸೂಕ್ತವಾದ ಥೀಯೇಟರ್‌ಗಳು ಹಾಗೂ ಮಲ್ಟಿಫ್ಲೆಕ್ಸ್‌ಗಳು ಸಿಕ್ಕಿಲ್ಲ. ಈ ಕಾರಣದಿಂದ ಕಲೆಕ್ಷನ್ ಮೇಲೆ ಹೆಚ್ಚಿನ ಹೊಡೆತ ಬಿದ್ದಿದೆ.
ಸಿನಿಮಾಗೆ ಖರ್ಚು ಮಾಡಿರುವ ಹಣ ವಾಪಸ್ ಬಂದಿದೆಯಾದರೂ ತುಂಬಾ ಲಾಭ ಮಾಡುವ ಅವಕಾಶ ಕೈತಪ್ಪಿ ಹೋಗಿರಬಹುದು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ನಿರ್ಮಾಪಕಿ ಪುಷ್ಪಾ ಸೇರಿದಂತೆ ಕೊತ್ತಲವಾಡಿ ಇಡೀ ಟೀಂ ಯಾವುದೇ ಆರೋಪ ಮಾಡದೇ ‘ಎಲ್ಲರೊಳಗೊಂದಾಗಿ ಬದುಕು’ ಎಂಬ ಸೂತ್ರಕ್ಕೆ ಬದ್ಧವಾಗಿ ನಡೆದುಕೊಂಡು ಮೆಚ್ಚುಗೆ ಗಳಿಸಿಕೊಂಡಿದೆ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.