ತಮಿಳಿನ ತಗರಾರು ಕದ್ದು ಜಿಂದಾ ಕಥೆ; ಮುಸ್ಸಂಜೆ ವಿರುದ್ಧ ಮಂಜು ದೂರು

By Suvarna Web DeskFirst Published Jun 11, 2017, 1:25 PM IST
Highlights

‘ತಗರಾರು' ಚಿತ್ರವನ್ನು ನೋಡಿ ಅದರಿಂದ ಶೇ.36ರಷ್ಟು ಕತೆ ಕದ್ದು ‘ಜಿಂದಾ' ಚಿತ್ರವನ್ನು ಮಾಡಿದ್ದಾರೆಂಬುದು ನಿರ್ಮಾಪಕ ಕೆ.ಮಂಜು ಅವರ ಆರೋಪ. ಹೀಗಾಗಿ ಅವರು ನಿರ್ದೇಶಕ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಈ ದೂರಿನ ವಿಚಾರಣೆ ಸೋಮವಾರ ನಡೆಯಲಿದೆ.

ಬೆಂಗಳೂರು: ತಾನು ನಿರ್ಮಾಣ ಮಾಡಬೇಕೆಂದು​ಕೊಂಡಿರುವ ಚಿತ್ರದ ಕತೆಯನ್ನು ಕದ್ದು ನಿರ್ದೇಶಕ ಮುಸ್ಸಂಜೆ ಮಹೇಶ್‌ ‘ಜಿಂದಾ' ಸಿನಿಮಾ ಮಾಡಿದ್ದಾರೆಂದು ನಿರ್ಮಾಪಕ ಕೆ.ಮಂಜು ಆರೋಪಿಸಿದ್ದು, ಕರ್ನಾಟಕ ಚಲನಚಿತ್ರ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದಾರೆ.

ಕಳೆದ ಶುಕ್ರವಾರ ತೆರೆಗೆ ಬಂದ ‘ಜಿಂದಾ' ಸಿನಿಮಾದ ಕತೆ ತಮಿಳಿನ ‘ತಗರಾರು' ಚಿತ್ರವನ್ನೇ ಹೋಲುತ್ತದೆ. ಈ ತಮಿಳಿನ ‘ತಗರಾರು' ಚಿತ್ರವನ್ನು ಕನ್ನಡಕ್ಕೆ ರಿಮೇಕ್‌ ಮಾಡುವುದಕ್ಕಾಗಿಯೇ ಮೂರು ವರ್ಷಗಳ ಹಿಂದೆ ಅದರ ರೀಮೇಕ್‌ ಹಕ್ಕುಗಳನ್ನು ಕೆ.ಮಂಜು ಖರೀದಿಸಿದ್ದಾರೆ. ಈ ಚಿತ್ರವನ್ನು ಸಾಯಿಪ್ರಕಾಶ್‌'ರ ಪುತ್ರ ಸಾಯಿ ನಿರ್ದೇಶನ ಮಾಡಲಿದ್ದು, ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಲಿದ್ದಾರೆ. ಆದರೆ, ಈಗ ಇದೇ ‘ತಗರಾರು' ಚಿತ್ರವನ್ನು ನೋಡಿ ಅದರಿಂದ ಶೇ.36ರಷ್ಟು ಕತೆ ಕದ್ದು ‘ಜಿಂದಾ' ಚಿತ್ರವನ್ನು ಮಾಡಿದ್ದಾರೆಂಬುದು ನಿರ್ಮಾಪಕ ಕೆ.ಮಂಜು ಅವರ ಆರೋಪ. ಹೀಗಾಗಿ ಅವರು ನಿರ್ದೇಶಕ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಈ ದೂರಿನ ವಿಚಾರಣೆ ಸೋಮವಾರ ನಡೆಯಲಿದೆ.

ಈ ಕುರಿತು ನಿರ್ಮಾಪಕ ಕೆ.ಮಂಜು ಅವರು ‘ಕನ್ನಡಪ್ರಭ' ಜೊತೆ ಮಾತನಾಡಿ, ನಾನು ಮೂರು ವರ್ಷಗಳ ಹಿಂದೆಯೇ ತಮಿಳಿನ ‘ತಗರಾರು' ಚಿತ್ರದ ರೀಮೇಕ್‌ ರೈಟ್ಸ್‌ ತೆಗೆದುಕೊಂಡು ಬಂದಿದ್ದೇನೆ. ಈ ಚಿತ್ರಕ್ಕೆ ಕೆಲಸ ಮಾಡುವ ಎಲ್ಲರಿಗೂ ಅಡ್ವಾನ್ಸ್‌ ಬೇರೆ ಕೊಟ್ಟಿದ್ದೇನೆ. 45 ಲಕ್ಷ ರುಪಾಯಿ ವೆಚ್ಚ ಮಾಡಿದ್ದೇನೆ. ಈಗ ನನ್ನ ಬಳಿ ರೀಮೇಕ್‌ ಹಕ್ಕುಗಳಿರುವ ಚಿತ್ರವನ್ನು ಕದ್ದು ‘ಜಿಂದಾ' ಸಿನಿಮಾ ಮಾಡಿರುವ ನಿರ್ದೇಶಕ ಮುಸ್ಸಂಜೆ ಮಹೇಶ್‌ ಅವರು ನನಗೆ ನಷ್ಟ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ಸಿನಿ ವಾರ್ತೆ
epaper.kannadaprabha.in

click me!