
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರ ಮದುವೆಪೂರ್ವ ಕಾರ್ಯಗಳು ಇದಾಗಲೇ ಶುರುವಾಗಿದೆ. ಉತ್ತರ ಭಾರತದ ಶಾಸ್ತ್ರಗಳಾದ ಅರಿಶಿಣ ಶಾಸ್ತ್ರ, ಸಂಗೀತ, ಮೆಹಂದಿ ಕಾರ್ಯಕ್ರಮ ಇವೆಲ್ಲವೂ ಈಗ ದಕ್ಷಿಣದಲ್ಲಿಯೂ ಮಾಮೂಲಾಗಿದೆ. ಅದರಲ್ಲಿಯೂ ವೈಷ್ಣವಿ ಅವರ ಭಾವಿ ಪತಿ ಅನುಕೂಲ್ ಅವರು ಛತ್ತೀಸಗಢದವರಾಗಿರುವ ಕಾರಣ, ಈ ಶಾಸ್ತ್ರಗಳು ಅಲ್ಲಿಯ ಪದ್ಧತಿಯ ಅನ್ವಯ ನಡೆಯುತ್ತಿದೆ. ಇದಾಗಲೇ ನಟಿ ವೈಷ್ಣವಿ ಗೌಡ ಮತ್ತು ಅನುಕೂಲ್ ಅವರ ವಿವಾಹ ಪೂರ್ವ ಕಾರ್ಯಗಳು ಭರ್ಜರಿಯಾಗಿ ಆರಂಭಗೊಂಡಿದ್ದು, ಅವುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಳದಿ ಕಾರ್ಯಕ್ರಮದಲ್ಲಿ ಈ ಜೋಡಿಯನ್ನು ಒಟ್ಟಿಗೇ ನೋಡಬಹುದಾಗಿದೆ. ಇದಾಗಲೇ ಆರ್ಸಿಬಿ ಪಂದ್ಯದಲ್ಲಿ ವೈಷ್ಣವಿ ಅವರು ಮ್ಯಾಚ್ ನೋಡುತ್ತಲೇ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಇವುಗಳ ವಿಡಿಯೋ ಕೂಡ ವೈರಲ್ ಆಗಿವೆ.
ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿರುವ ನಟಿಯ ವಿವಿಧ ವಿಡಿಯೋಗಳು ಈಗ ಅಭಿಮಾನಿಗಳನ್ನು ರಂಜಿಸುತ್ತಿವೆ. ಮನೆಯವರ ಸಮ್ಮುಖದಲ್ಲಿ ಇದಾಗಲೇ ವೈಷ್ಣವಿ ಮೈಗೆ ಅರಿಶಿಣದ ಸ್ಪರ್ಶವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಶಾಸ್ತ್ರದ ವಿಡಿಯೋ ವೈರಲ್ ಆಗ್ತಿದೆ. ಸೀರೆಯುಟ್ಟು, ಕೊರಳಿಗೆ ಮಾಲೆ ಹಾಕಿ ಕುಳಿತಿರುವ ವೈಷ್ಣವಿ ಗೌಡಗೆ, ಕುಟುಂಬಸ್ಥರು ಅರಿಶಿಣ ಹಚ್ಚುತ್ತಿದ್ದಾರೆ. ಮನೆಯವರ ಜೊತೆ ಫೋಟೋಗಳಿಗೆ ವೈಷ್ಣವಿ ಫೋಸ್ ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ನಟಿ ಸಕತ್ ಸ್ಟೆಪ್ ಹಾಕಿದ್ದು, ಅದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಿತ್ರ ತಾರೆಯರು ಆಗಮಿಸಿದ್ದು, ನಟಿ ಅಮೂಲ್ಯ ಅವರು ಮದುಮಗಳು ವೈಷ್ಣವಿ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ವೈಷ್ಣವಿ ಮತ್ತು ಭಾವಿ ಪತಿ ಗುಟ್ಟುಗುಟ್ಟಾಗಿ ಮಾತನಾಡಿರುವ ವಿಡಿಯೋ ನೋಡಿ ನಟಿಯ ಫ್ಯಾನ್ಸ್ ಮದ್ವೆಯಾಗುವವರೆಗೂ ತಡೆದುಕೊಳ್ಳಿ ಎಂದು ಕಾಲೆಳೆಯುತ್ತಿದ್ದಾರೆ.
ಇನ್ನು, ಇವರ ಮದುವೆಯ ಹಿನ್ನೆಲೆಯ ಕುರಿತು ಹೇಳುವುದಾದರೆ, ನಟಿ ಅದ್ಧೂರಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಮದ್ವೆ ಫಿಕ್ಸ್ ಆಗಿದ್ದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಎಲ್ಲರಿಗೂ ಬಿಗ್ ಸರ್ಪ್ರೈಸ್ ಕೊಟ್ಟಿದ್ದರು. ವೈಷ್ಣವಿ ಗೌಡ ಅವರ ಭಾವಿ ಪತಿ ಅನುಕೂಲ್ ಮಿಶ್ರಾ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು. ಆದರೆ, ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಕೊನೆಗೂ ಗುಟ್ಟನ್ನು ಅವರೇ ರಿವೀಲ್ ಮಾಡುವ ಜೊತೆಜೊತೆಗೇನೇ ಎಂಗೇಜ್ಮೆಂಟ್ ಕೂಡ ಮಾಡಿಕೊಂಡು ಬಿಗ್ ಸರ್ಪ್ರೈಸ್ ನೀಡಿದ್ದರು.
ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.