ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ನಟನೆಯ, ರೂಪಾ ರಾವ್ ನಿರ್ದೇಶನ ಮಾಡಿರುವ ‘ಗಂಟುಮೂಟೆ’ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಗುತ್ತಿದೆ. ಮೈಸೂರು ಟಾಕೀಸ್ ಮೂಲಕ ಯೋಗೀಶ್ ದ್ವಾರಕೀಶ್ ಅವರು ಈ ಚಿತ್ರವನ್ನು ಅ.18ರಂದು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಂದಿದ್ದು, ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಬಿಡುಗಡೆಗೆ ಸಜ್ಜಾಗುತ್ತಿರುವ ಈ ಚಿತ್ರದ ವಿಶೇಷತೆಗಳೇನು?
ಹದಿಹರೆಯದ ಮನಸ್ಸಿನ ಕನ್ನಡಿ: ಒಂದು ಹುಡುಗಿಯ ಸುತ್ತ ಸಾಗುವ ಕತೆ. ಆಗಷ್ಟೆಹೈಸ್ಕೂಲ್ ಮೆಟ್ಟಿಲೇರಿದ ಹುಡುಗಿಯ ಮೂಲಕ ಸಿನಿಮಾ ಸಾಗುತ್ತದೆ. ಶಾಲೆಯ ಅಂಗಳದಲ್ಲಿ ಉಂಟಾಗುವ ಆಕರ್ಷಣೆ, ಪ್ರೀತಿ, ಸರಿ- ತಪ್ಪುಗಳು, ಹುಡುಗಿಯ ಸಂಚಲನ ಮನಸ್ಸು, ತೀರಾ ಚಿಕ್ಕಂದಿನಲ್ಲಿ ಹುಟ್ಟಿಕೊಳ್ಳುವ ಗೊಂದಲಗಳು... ಇವೆಲ್ಲವನ್ನೂ 80ರ ದಿನಗಳ ಹಿನ್ನೆಲೆಯಲ್ಲಿ ಹೇಳುತ್ತ ಹೋಗಿದ್ದಾರೆ ನಿರ್ದೇಶಕರು. ಹೀಗಾಗಿ ಪೋಷಕರು ಕೂಡ ನೋಡಲೇ ಬೇಕಾದ ಸಿನಿಮಾ ಎಂಬುದು ರೂಪಾ ರಾವ್ ಅವರ ಮಾತು.
ಟ್ರೇಲರ್ ಲಾಂಚ್: ನಟಿ ಶ್ರದ್ದಾ ಶ್ರೀನಾಥ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್‌ನಲ್ಲಿ ಟ್ರೇಲರ್‌ಗೆ ಸಾಕಷ್ಟುಪ್ರತಿಕ್ರಿಯೆಗಳು ಬರುತ್ತಿವೆ. ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿರುವ ‘ಗಂಟುಮೂಟೆ’ ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಗೆಲುವು ಸಿಗುವ ಭರವಸೆಯಲ್ಲಿದೆ ಚಿತ್ರತಂಡ. ಅಲ್ಲದೆ ಬೆಂಗಳೂರಿನ ಬಿಎಂಎಸ್ ಕಾಲೇಜಿನ ಅವರಣದಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಪ್ರದರ್ಶಿಸಲಾಗಿದೆ.
ಚಿತ್ರೋತ್ಸವಗಳಲ್ಲಿ ಸದ್ದು ಮಾಡಿದ ಚಿತ್ರ: ಸಾಮಾನ್ಯವಾಗಿ ಇಂಥ ಸಿನಿಮಾಗಳು ಚಿತ್ರೋತ್ಸವಗಳಿಗೆ ಹಾಗೂ ಪ್ರಶಸ್ತಿಗಳಿಗೆ ಮಾತ್ರ ಸೀಮಿತ ಎಂದುಕೊಳ್ಳುವವರೇ ಹೆಚ್ಚು. ಹಾಗೆ ನೋಡಿದರೆ ಈಗಾಗಲೇ ಈ ಸಿನಿಮಾ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಕತೆಗೆ ಪ್ರಶಸ್ತಿ ಪಡೆದುಕೊಂಡಿದೆ. ಇಟಲಿ, ಕೆನಡಾ, ಸಿಯಾಟೆಲ್, ಮೆಲ್ಬೋರ್ನ್ ಚಿತ್ರೋತ್ಸವಗಳಲ್ಲಿ ‘ಗಂಟುಮೂಟೆ’ಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಪ್ರಪಂಚದ ಅತಿ ದೊಡ್ಡ ಚಿತ್ರೋತ್ಸವ ಎನಿಸಿಕೊಂಡಿರುವ ಏಷ್ಯಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.
ಎಲಿವೇಟೆಡ್ ರಸ್ತೆ ಕೈ ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ವೆಬ್ ಸರಣಿ ತಂದ ಗೆಲವು: ಗಂಟುಮೂಟೆ ಚಿತ್ರದ ನಿರ್ದೇಶಕಿ ರೂಪಾ ರಾವ್ ಅವರಿಗೆ ಇದು ಮೊದಲ ಚಿತ್ರವಾದರೂ, ದೆಹಲಿಯಲ್ಲಿ ನಿರ್ದೇಶನ ಹಾಗೂ ನಿರ್ಮಾಣದ ತರಬೇತಿ ಮಾಡಿಕೊಂಡವರು. ಅಮೆರಿಕದಲ್ಲಿ ಹಲವು ಸಾಕ್ಷ್ಯ ಚಿತ್ರಗಳಿಗೆ ಕೆಲಸ ಮಾಡಿದವರು. ನಂತರ ಸುದೀಪ್ ಅಭಿನಯದ ‘ವಿಷ್ಣುವರ್ಧನ’ ಚಿತ್ರಕ್ಕೆ ಅಸೋಸೆಟ್ ಆಗಿ ಕೆಲಸ ಮಾಡಿದವರು. ಇದರ ನಡುವೆ ‘ಅದರ್ಸ್ ಲವ್ ಸ್ಟೋರಿ’ ಹೆಸರಿನ ವೆಬ್ ಸರಣಿ ನಿರ್ದೇಶಿಸಿದ ಮೇಲೆ ಯಶಸ್ಸು ಕಂಡವರು. ಈ ವೆಬ್ ಸರಣಿಯ ಗೆಲವು ಕೊಟ್ಟಉತ್ಸಾಹದಿಂದಲೇ ‘ಗಂಟುಮೂಟೆ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಾಕಷ್ಟುಪೂರ್ವ ತಯಾರಿ ಮಾಡಿಕೊಂಡೇ ಮೊದಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ತೆರೆ ಮೇಲೆ ತೇಜು ಬೆಳವಾಡಿ: ಇಲ್ಲಿವರೆಗೂ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ತೇಜು ಬೆಳವಾಡಿ ಮೊದಲ ಬಾರಿಗೆ ಬೆಳ್ಳಿತೆರೆಗೆ ಈ ಚಿತ್ರದ ಮೂಲಕ ಕಾಲಿಡುತ್ತಿದ್ದಾರೆ. ಮೀರಾ ಎನ್ನುವ ಪಾತ್ರ ಮಾಡಿದ್ದು, ಶಾರೂಖ್ ಖಾನ್ ಅಭಿಮಾನಿಯಾಗಿ, ಹೈಸ್ಕೂಲಿನಲ್ಲೇ ಪ್ರೀತಿ- ಪ್ರೇಮಕ್ಕೆ ಆಕರ್ಷಿತಗೊಳ್ಳುವ ಹುಡುಗಿಯ ಪಾತ್ರದಲ್ಲಿ ತೇಜು ಬೆಳವಾಡಿ ನಟಿಸಿದ್ದಾರೆ. ನಿಶ್ಚಿತ್ ಈ ಚಿತ್ರದ ಹೀರೋ. ಇವರೂ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಬಹುತೇಕರಿಗೆ ಇದು ಮೊದಲ ಸಿನಿಮಾ. ಅಕ್ಟೋಬರ್ 18ರಂದು ತೆರೆ ಮೇಲೆ ಮೂಡುತ್ತಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿ ಸ್ವಾಗತ ದೊರೆಯಲಿದೆ ಎಂಬುದನ್ನು ನೋಡಬೇಕಿದೆ.