
ಮದುವೆಗೆ ನಿತ್ಯಾ ಮೆನನ್ ನೋ ಎಂದಿಲ್ಲ, ಆದರೆ ಒಂದು ‘ಕಂಡೀಷನ್ ಇದೆ’ ಎಂದ ನಟಿ
ದಕ್ಷಿಣ ಭಾರತದ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿರುವ ನಿತ್ಯಾ ಮೆನನ್ ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳ ಮನಗೆದ್ದಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದ ವಿಚಾರದಲ್ಲೂ ತಮ್ಮದೇ ಆದ ಸ್ಪಷ್ಟ ನಿಲುವು ಹೊಂದಿರುವ ನಟಿ ಅವರು. ಅದರಲ್ಲೂ ಮದುವೆ ವಿಚಾರ ಬಂದಾಗಲೆಲ್ಲ ನಿತ್ಯಾ ಮೆನನ್ ಅವರ ಹೆಸರು ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಪಾಡ್ಕಾಸ್ಟ್ವೊಂದರಲ್ಲಿ ತಮ್ಮ ಪ್ರೀತಿ, ಸಂಬಂಧ ಮತ್ತು ಮದುವೆಯ ಕುರಿತಾಗಿ ಅವರು ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಗಮನ ಸೆಳೆದಿವೆ. ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ನನ್ನನ್ನು ಅರ್ಥಮಾಡಿಕೊಳ್ಳುವ ಸರಿಯಾದ ವ್ಯಕ್ತಿಗಾಗಿ ಕಾಯುತ್ತಿದ್ದೇನೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ನಟಿ ನಿತ್ಯಾ ಮೆನನ್ ಇತ್ತೀಚೆಗೆ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಹಿಂದಿನ ಸಂಬಂಧಗಳ ಅನುಭವ, ಸಂಗಾತಿಯಿಂದ ತಮಗೆ ಬೇಕಿರುವ ಸ್ವಾತಂತ್ರ್ಯ ಮತ್ತು ಮದುವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ.
ಸಂಬಂಧ ಎಂದರೆ ಕೇವಲ ಪ್ರೀತಿ, ಆಕರ್ಷಣೆ ಮತ್ತು ಒಟ್ಟಿಗೆ ಸಮಯ ಕಳೆಯುವುದಷ್ಟೇ ಅಲ್ಲ. ಅಲ್ಲಿ ಪರಸ್ಪರ ಗೌರವ, ನಂಬಿಕೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೂ ಜಾಗವಿರಬೇಕು ಎನ್ನುವುದು ನಿತ್ಯಾ ಮೆನನ್ ಅವರ ಅಭಿಪ್ರಾಯ. ತಮ್ಮ ಹಿಂದಿನ ಕೆಲವು ಸಂಬಂಧಗಳಲ್ಲಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವಂತಹ ಪರಿಸ್ಥಿತಿಗಳನ್ನು ಎದುರಿಸಿದ್ದಾಗಿ ಅವರು ತಿಳಿಸಿದ್ದಾರೆ.
ಕೆಲವು ವ್ಯಕ್ತಿಗಳ ಪ್ರಭಾವ ಎಷ್ಟಿರುತ್ತದೆ ಎಂದರೆ, ಅವರ ಜೊತೆಗಿದ್ದಾಗ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವತಂತ್ರವಾಗಿ ಉಸಿರಾಡುವುದಕ್ಕೂ ಅವಕಾಶವಿಲ್ಲದಂತಹ ಅನುಭವವಾಗುತ್ತದೆ. ಸಂಗಾತಿಯ ಪ್ರತಿಯೊಂದು ನಿರ್ಧಾರವನ್ನೂ ನಿಯಂತ್ರಿಸಲು ಪ್ರಯತ್ನಿಸುವ ವ್ಯಕ್ತಿಗಳ ಜೊತೆ ಸಂಬಂಧ ಮುಂದುವರಿಸುವುದು ಕಷ್ಟ. ಇಂತಹ ಪರಿಸ್ಥಿತಿಯನ್ನು ಎದುರಿಸಿದಾಗ ಸಂಬಂಧದಿಂದ ಹೊರಬರುವುದೇ ಸೂಕ್ತ ನಿರ್ಧಾರ ಎಂದು ನಿತ್ಯಾ ಹೇಳಿದ್ದಾರೆ.
ಇದು ಭಯದಿಂದ ತೆಗೆದುಕೊಂಡ ನಿರ್ಧಾರವಲ್ಲ. ಜೀವನದಲ್ಲಿ ಎದುರಿಸಿದ ಅನುಭವಗಳಿಂದ ಕಲಿತ ಪಾಠ ಎಂದು ಅವರು ವಿವರಿಸಿದ್ದಾರೆ. ಕೆಲವೊಮ್ಮೆ ಒಂದು ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಿಂತ ಅದರಿಂದ ಹೊರಬಂದು ನಮ್ಮನ್ನು ನಾವು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂಬ ಸಂದೇಶವನ್ನೂ ಅವರ ಮಾತುಗಳು ಸಾರುತ್ತವೆ.
ನಿತ್ಯಾ ಮೆನನ್ ಅವರ ಹಿಂದಿನ ಕೆಲವು ಹೇಳಿಕೆಗಳನ್ನು ಗಮನಿಸಿದ ಅಭಿಮಾನಿಗಳು, ಅವರಿಗೆ ಮದುವೆಯಾಗುವ ಆಸೆಯೇ ಇಲ್ಲ ಎಂದು ಭಾವಿಸಿದ್ದರು. ಆದರೆ ಇದೀಗ ಈ ವಿಚಾರಕ್ಕೆ ನಟಿ ತೆರೆ ಎಳೆದಿದ್ದಾರೆ. ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ನನಗೂ ಮದುವೆಯಾಗುವ ಆಸೆಯಿದೆ. ಆದರೆ ಕೇವಲ ಮದುವೆಯಾಗಬೇಕು ಎಂಬ ಕಾರಣಕ್ಕೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಜೀವನಕ್ಕೆ ಬರುವ ವ್ಯಕ್ತಿ ತಮ್ಮ ಸ್ವಾತಂತ್ರ್ಯವನ್ನು ಗೌರವಿಸಬೇಕು. ತಮ್ಮ ವ್ಯಕ್ತಿತ್ವ ಮತ್ತು ಕನಸುಗಳಿಗೆ ಬೆಲೆ ನೀಡಬೇಕು. ಇಬ್ಬರೂ ಒಬ್ಬರನ್ನೊಬ್ಬರು ನಿಯಂತ್ರಿಸುವ ಬದಲು ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ಅವರ ನಿರೀಕ್ಷೆ.
ಅಂತಹ ವ್ಯಕ್ತಿ ಸಿಕ್ಕರೆ ಖಂಡಿತವಾಗಿಯೂ ಮದುವೆಯಾಗುತ್ತೇನೆ. ಒಂದು ವೇಳೆ ಅಂತಹ ವ್ಯಕ್ತಿ ಸಿಗದಿದ್ದರೆ ಮದುವೆಯಾಗದೆ ಇರಲು ಕೂಡ ಸಿದ್ಧಳಿದ್ದೇನೆ ಎಂದು ನಿತ್ಯಾ ತಮ್ಮ ನಿಲುವನ್ನು ತಿಳಿಸಿದ್ದಾರೆ. ಅವರ ಈ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.
ಸಂಬಂಧದಿಂದ ಹೊರಬಂದಾಗ ಸಿಗುವ ನೆಮ್ಮದಿಯೇ ಬೇರೆ!
ಕೆಲವು ಸಂಬಂಧಗಳಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಸಂಪೂರ್ಣವಾಗಿ ನಿರ್ಬಂಧಿತವಾಗಿರುತ್ತದೆ. ಸಂಗಾತಿ ತಮ್ಮನ್ನು ನಿಯಂತ್ರಿಸುತ್ತಿದ್ದಾರೆ, ತಮ್ಮ ಇಷ್ಟದಂತೆ ಬದುಕಲು ಬಿಡುತ್ತಿಲ್ಲ ಎಂಬ ಭಾವನೆ ಮೂಡಿದಾಗ ಮಾನಸಿಕವಾಗಿ ಕುಗ್ಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ನಿತ್ಯಾ ಹೇಳಿದ್ದಾರೆ.
ಅಂತಹ ಸಂಬಂಧಗಳಿಂದ ಹೊರಬರುವುದು ಆರಂಭದಲ್ಲಿ ಕಷ್ಟವಾಗಬಹುದು. ಆದರೆ ಹೊರಬಂದ ನಂತರ ನಮ್ಮ ಜೀವನವನ್ನು ನಮ್ಮಿಷ್ಟದಂತೆ ರೂಪಿಸಿಕೊಳ್ಳುವ ಅವಕಾಶ ಸಿಗುತ್ತದೆ. ಹೊಸ ಜಗತ್ತಿಗೆ ಕಾಲಿಟ್ಟ ಅನುಭವವಾಗುತ್ತದೆ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ನಿತ್ಯಾ ಮೆನನ್
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ನಿತ್ಯಾ ಮೆನನ್ ಇತ್ತೀಚಿನ ವರ್ಷಗಳಲ್ಲಿ ಹಲವು ವಿಭಿನ್ನ ಕಥೆಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕಿ ಕೃತಿಕಾ ಉದಯನಿಧಿ ಅವರ 'ಕಾದಲಿಕ್ಕ ನೆರೆಮಿಲ್ಲೈ' ಚಿತ್ರದಲ್ಲಿ ರವಿ ಮೋಹನ್ ಜೊತೆ ನಟಿಸಿದ್ದರು. ಬಳಿಕ ಪಾಂಡಿರಾಜ್ ನಿರ್ದೇಶನದ 'ತಲೈವನ್ ತಲೈವಿ' ಸಿನಿಮಾದಲ್ಲಿ ವಿಜಯ್ ಸೇತುಪತಿ ಜೊತೆ ತೆರೆ ಹಂಚಿಕೊಂಡಿದ್ದರು. ಧನುಷ್ ನಿರ್ದೇಶನದ 'ಇಡ್ಲಿ ಕಡೈ' ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ಅವರ ಮುಂದಿನ ಹಿಂದಿ ಸಿನಿಮಾ 'ಮಿಸ್ಟರ್ & ಮಿಸೆಸ್ ಗ್ರೇ' ಬಿಡುಗಡೆಯ ನಿರೀಕ್ಷೆಯಲ್ಲಿದೆ. ಅಂಕುರ್ ಪಜ್ನಿ ಮತ್ತು ವಿಶಾಲ್ ರಂಜನ್ ಮಿಶ್ರಾ ನಿರ್ದೇಶನದ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿವಾಹೇತರ ಸಂಬಂಧ ಮತ್ತು ಆರ್ಥಿಕ ವಂಚನೆಯ ಸುತ್ತ ಸಾಗುವ ಕಥಾಹಂದರವನ್ನು ಸಿನಿಮಾ ಹೊಂದಿದೆ. ಡಿಸೆಂಬರ್ 11ರಂದು ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.
ಟಿಫಿನ್ ಬಾಕ್ಸ್ ಕಳೆದುಹೋಗಿದ್ದಕ್ಕೆ ತೆಂಡೂಲ್ಕರ್ ಪತ್ನಿ ಅಂಜಲಿ ಇ-ಮೇಲ್, ಕನ್ನಡತಿ ಟೀಚರ್ ಶಾಕ್!
ಒಟ್ಟಿನಲ್ಲಿ, ಮದುವೆ ಎನ್ನುವುದು ಜೀವನದ ಅನಿವಾರ್ಯ ಗುರಿಯಲ್ಲ, ಪರಸ್ಪರ ಗೌರವಿಸುವ ವ್ಯಕ್ತಿಯೊಂದಿಗೆ ಸುಂದರವಾದ ಬದುಕು ಕಟ್ಟಿಕೊಳ್ಳುವುದೇ ಮುಖ್ಯ ಎಂಬ ನಿತ್ಯಾ ಮೆನನ್ ಅವರ ನಿಲುವು ಗಮನ ಸೆಳೆದಿದೆ. ಪ್ರೀತಿ ಇರಲಿ, ಮದುವೆಯಿರಲಿ, ಅಲ್ಲಿ ಸ್ವಾತಂತ್ರ್ಯ ಮತ್ತು ಗೌರವಕ್ಕೆ ಮೊದಲ ಆದ್ಯತೆ ಇರಬೇಕು ಎನ್ನುವುದು ಅವರ ಮಾತುಗಳ ಸಾರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.