
ನಟಿ ನೇಹಾ ರಾಮಕೃಷ್ಣ ಅವರು ತಮ್ಮ ಮಗಳಿಗೆ ಹಾಲುಣಿಸುವುದನ್ನು ನಿಲ್ಲಿಸಿದ ಬಳಿಕ ಎದುರಾದ ಭಾವನಾತ್ಮಕ ಅನುಭವಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಾಯ್ತನದ ಈ ಮಹತ್ವದ ಹಂತವನ್ನು ನೆನಪಿಸಿಕೊಂಡಿರುವ ಅವರು, ಸಂತೋಷ, ಸಮಾಧಾನ, ಅಪರಾಧಿ ಭಾವನೆ ಹಾಗೂ ಮಗಳೊಂದಿಗಿನ ಆ ಪುಟ್ಟ ಕ್ಷಣಗಳ ನೆನಪುಗಳು ಮನಸ್ಸಿನಲ್ಲಿ ಮಿಶ್ರ ಭಾವನೆಗಳನ್ನು ಮೂಡಿಸಿವೆ ಎಂದು ಬರೆದುಕೊಂಡಿದ್ದಾರೆ.
ಬಹಳ ದಿನಗಳಿಂದ ಮಗಳಿಗೆ ಹಾಲುಣಿಸುವುದನ್ನು ನಿಲ್ಲಿಸಬೇಕು ಎಂದುಕೊಂಡಿದ್ದೆ. ಕೊನೆಗೂ ಆ ನಿರ್ಧಾರ ತೆಗೆದುಕೊಂಡಾಗ, ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಆ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನೇಹಾ ಹೇಳಿದ್ದಾರೆ. ತಮ್ಮ ನಿರ್ಧಾರಕ್ಕೆ ಕೆಲವರು ಬೆಂಬಲ ನೀಡಿದರೆ, ಇನ್ನು ಕೆಲವರು ಇಷ್ಟು ಬೇಗ ಏಕೆ ಹಾಲುಣಿಸುವುದನ್ನು ನಿಲ್ಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಆದರೆ, ತಮ್ಮ ಮನಸ್ಸು ಹೇಳಿದ್ದನ್ನು ಕೇಳಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಎಂದಿಗೂ ಬದಲಾಗುವುದಿಲ್ಲ ಎಂಬುದು ಗೊತ್ತಿದ್ದರೂ, ತಮ್ಮ ಹೃದಯದ ಅಮೂಲ್ಯವಾದ ಒಂದು ಭಾಗವನ್ನು ಬಿಟ್ಟುಬಂದಂತೆ ಭಾಸವಾಗುತ್ತಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ತಾಯ್ತನದ ಅತ್ಯಂತ ಕಠಿಣವಾದರೂ ಅಷ್ಟೇ ಮಧುರವಾದ ಒಂದು ಪಯಣ ಈಗ ಮುಗಿದಿದೆ. ಮಗಳು ಬೆಳೆಯುತ್ತಿದ್ದಾಳೆ. ಮಗುವನ್ನು ಅಪಾರವಾಗಿ ಪ್ರೀತಿಸುತ್ತಲೇ, ಸಮಯ ಬಂದಾಗ ಅದನ್ನು ಬಿಟ್ಟು ಮುಂದೆ ಸಾಗುವುದನ್ನೂ ಕಲಿಯುವುದೇ ತಾಯ್ತನ ಎಂದು ನೇಹಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಮಗಳೊಂದಿಗೆ ಕಳೆದ ಪ್ರತಿಯೊಂದು ಅಪ್ಪುಗೆ, ನಿದ್ರೆಯ ಮಂಪರಿನಲ್ಲಿ ಹಾಲುಣಿಸಿದ ಕ್ಷಣಗಳು ಹಾಗೂ ತಮ್ಮಿಬ್ಬರ ನಡುವಿನ ವಿಶೇಷ ಕ್ಷಣಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ. ಹೊಸ ಅಧ್ಯಾಯ ಆರಂಭವಾಗುತ್ತಿದ್ದರೂ, ಹಿಂದಿನ ಆ ಸುಂದರ ಕ್ಷಣಗಳ ನೆನಪು ಮನಸ್ಸಿನಲ್ಲಿ ಉಳಿದಿದೆ ಎಂದು ಬರೆದುಕೊಂಡಿದ್ದಾರೆ.
ನೇಹಾ, ಹಾಲುಣಿಸುವ ಅನೇಕ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಬಹಳ ಹಿಂದಿನ ತಮ್ಮ ಹಾಲುಣಿಸುವ ದಿನಗಳ ನೆನಪು ಎಂದು ನೇಹಾ ಸ್ಪಷ್ಟಪಡಿಸಿದ್ದಾರೆ. ಈ ಕುರಿತ ಪೋಸ್ಟ್ ಅನ್ನು ಬಹಳ ದಿನಗಳಿಂದ ಡ್ರಾಫ್ಟ್ನಲ್ಲಿ ಇಟ್ಟುಕೊಂಡಿದ್ದೆ. ಆದರೆ ಇಂದು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿತು. ಕೆಲವು ನೆನಪುಗಳು ಸರಿಯಾದ ಸಮಯ ಬಂದಾಗ ಮತ್ತೆ ನಮ್ಮ ಮುಂದೆ ಬರುತ್ತವೆ ಎಂದಿದ್ದಾರೆ. ಇದೇ ವೇಳೆ, ಪ್ರಸ್ತುತ ಮಕ್ಕಳಿಗೆ ಹಾಲುಣಿಸುತ್ತಿರುವ ತಾಯಂದಿರಿಗೂ ಅವರು ಪ್ರೀತಿಯ ಸಂದೇಶ ನೀಡಿದ್ದಾರೆ. ಮಗುವಿಗೆ ಹಾಲುಣಿಸುವ ಈ ಹಂತ ಕೆಲವೊಮ್ಮೆ ತುಂಬಾ ದಣಿವು, ಒತ್ತಡ ಹಾಗೂ ದೈಹಿಕ-ಮಾನಸಿಕ ಬಳಲಿಕೆಯನ್ನು ಉಂಟುಮಾಡಬಹುದು. ಕೆಲವು ದಿನಗಳಲ್ಲಿ ಎಲ್ಲವೂ ತುಂಬಾ ಕಷ್ಟ ಎನಿಸಬಹುದು. ಆದರೆ ಅದರಲ್ಲಿ ತಪ್ಪೇನಿಲ್ಲ ಎಂದು ತಾಯಂದಿರಿಗೆ ಧೈರ್ಯ ತುಂಬಿದ್ದಾರೆ.
ಸಾಧ್ಯವಾದಷ್ಟು ಮಗುವಿನೊಂದಿಗೆ ಕಳೆಯುವ ಈ ಪುಟ್ಟ ಕ್ಷಣಗಳನ್ನು ಆಸ್ವಾದಿಸಿ. ಈ ಹಂತ ನಿಮಗೆ ಅರಿವಾಗುವಷ್ಟರಲ್ಲಿ ಮುಗಿದುಹೋಗಿರುತ್ತದೆ. ಮುಂದೆ ನಿಮ್ಮ ಮಗು ಇದೇ ರೀತಿ ನಿಮ್ಮನ್ನು ಅವಲಂಭಿಸದಿದ್ದಾಗ, ಈಗಿನ ಈ ಕ್ಷಣಗಳನ್ನೇ ನೀವು ಮತ್ತೆ ನೆನಪಿಸಿಕೊಂಡು ಮಿಸ್ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ನೇಹಾ ಮತ್ತು ಚಂದನ್ ಗೌಡ ದಂಪತಿ ಅಕ್ಟೋಬರ್ 29, 2024ರಲ್ಲಿ ಹೆಣ್ಣು ಮಗುವಿಗೆ ಪಾಲಕರಾಗಿದ್ದಾರೆ. ಮಗುವಿಗೆ ನೇಹಾ ಶಾರದ ಎಂದು ನಾಮಕರಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.