
ಬೆಂಗಳೂರು (ಫೆ. 2): ನಟ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ ಚಿತ್ರದ ಕತೆ ಏನೆಂಬ ರಹಸ್ಯಕ್ಕೆ ತೆರೆ ಬಿದ್ದಿದೆ. ಈಗಾಗಲೇ ಚಿತ್ರದ ಟ್ರೇಲರ್ ನೋಡಿದವರು ಐಎಎಸ್ ಅಧಿಕಾರಿಯ ಕತೆಯಿರಬಹುದೇ ಎನ್ನುವ ಗುಮಾನಿ ವ್ಯಕ್ತಪಡಿಸಿದ್ದಾರಂತೆ.
ಇಲ್ಲಿ ಚಿತ್ರದ ನಾಯಕ ಭ್ರಷ್ಟರನ್ನು ಬೇಟೆಯಾಡುವ ಅಧಿಕಾರಿ. ಅಲ್ಲದೆ ತೆರಿಗೆ ಇಲಾಖೆಯಲ್ಲಿರುವ ಪವರ್ ಫುಲ್ ಅಫೀಸರ್. ಇನ್ನೂ ಡಾಂಬರು ರಸ್ತೆಯನ್ನು ಪರಿಶೀಲಿಸುವುದು, ಮರಳು ಮಾಫಿಯಾ ಹಿಂದೆ ಹೋಗುವುದು, ದೇವರ ಕರವನ್ನು ತಲೆ ಮೇಲೆ ಹೊತ್ತು ಕುಣಿಯುವ ದೃಶ್ಯಗಳು ಟ್ರೇಲರ್‌ನಲ್ಲಿವೆ. ಸೇಮ್ ಟು ಸೇಮ್ ಇವೆಲ್ಲವೂ ಡಿ ಕೆ ರವಿ ಅವರಿಗೆ ತುಂಬಾ ಹತ್ತಿರವಾಗಿವೆ. ಕೆಲವು ತಿಂಗಳುಗಳ ಹಿಂದೆ ಅನುಮಾನಾಸ್ಪದವಾಗಿ ಸಾವು ಕಂಡು, ದೊಡ್ಡ ಸಂಚಲನಕ್ಕೆ ಕಾರಣವಾದ ಕೋಲಾರ ಮೂಲದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಕತೆಯನ್ನೇ ನಿರ್ದೇಶಕ ಜೇಕಬ್ ವರ್ಗೀಸ್ ‘ಚಂಬಲ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ.
ಇಲ್ಲಿ ಚಿತ್ರದ ಟೈಟಲ್‌ಗೆ ತಕ್ಕಂತೆ ಕಾಡು, ಕಣಿಗಳಲ್ಲಿ ಮಾತ್ರ ಡಕಾಯಿತರಿಲ್ಲ. ಖಾಕಿ, ರಾಜಕೀಯ, ಮಾಫಿಯಾ ರೂಪದಲ್ಲಿ ನಗರದಲ್ಲೂ ಆ ಚಂಬಲ್ ಕಣಿವೆಯ ಡಕಾಯಿತರನ್ನು ಮೀರಿಸುವ ಕಳ್ಳರು ಇದ್ದಾರೆ ಎನ್ನುವ ಅರ್ಥ ನೀಡುತ್ತದೆ. ಅಂಥ ಕಳ್ಳ- ಭ್ರಷ್ಟರನ್ನು ಬೇಟೆಯಾಡುವ ಒಬ್ಬ ಅಧಿಕಾರಿಯ ಕತೆ ಎನ್ನುತ್ತಿದೆ ಚಿತ್ರತಂಡ. ಆದರೆ, ಈಗ ಪುನೀತ್‌ರಾಜ್‌ಕುಮಾರ್ ಅವರಿಂದ ಬಿಡುಗಡೆಯಾದ ಟ್ರೇಲರ್ ಮಾತ್ರ, ‘ಇದು ಡಿ ಕೆ ರವಿ ಅವರ ಬದುಕು ಮತ್ತು ಸಾವಿನ ಕತೆಯನ್ನು ಹೇಳುತ್ತದೆ’ ಎಂದು ಹೇಳುತ್ತಿದೆ.
‘ಚಿತ್ರದ ಟ್ರೇಲರ್ ಬಂದ ಮೇಲೆ ನನಗೂ ಇಂಥ ಸಾಕಷ್ಟು ಪ್ರಶ್ನೆಗಳು ಕೇಳುತ್ತಿದ್ದಾರೆ. ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿ ನಂ.2 ಸ್ಥಾನದಲ್ಲಿದೆ. ಒಬ್ಬ ದಕ್ಷ ಅಧಿಕಾರಿ ಇದ್ದರು. ಆ ಅಧಿಕಾರಿಯ ಜೀವನದಿಂದ ಸ್ಫೂರ್ತಿಗೊಂಡು ಮಾಡಿರುವ ಕತೆ ಇದು. ಯಾರು ಆ ಅಧಿಕಾರಿ ಎಂಬುದು ಸಿನಿಮಾ ನೋಡಿ ತಿಳಿಯಲಿ. ಈಗ ನಾನೇನು ಮಾತನಾಡಲ್ಲ’ ಎನ್ನುತ್ತಾರೆ ನಟ ಸತೀಶ್ ನೀನಾಸಂ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.