ನಟ ಸಾರ್ವಭೌಮ ರಿಲೀಸ್‌ಗೂ ಮುನ್ನ 1200 ಟಿಕೆಟ್ ಖರೀದಿಸಿದ ಅಭಿಮಾನಿ

By Web DeskFirst Published Feb 2, 2019, 9:36 AM IST
Highlights

ಫೆ. 07 ಕ್ಕೆ ನಟ ಸಾರ್ವಭೌಮ ರಿಲೀಸ್ | ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್ | ನಟ ಸಾರ್ವಭೌಮ ರಿಲೀಸ್‌ಗೂ ಮುನ್ನ 1200 ಟಿಕೆಟ್ ಖರೀದಿಸಿದ ಅಭಿಮಾನಿ 

ಬೆಂಗಳೂರು (ಫೆ. 02): ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರ ‘ನಟ ಸಾರ್ವಭೌಮ’ ಫೆ.7 ಕ್ಕೆ ತೆರೆ ಕಾಣುತ್ತಿದ್ದು, ಶುಕ್ರವಾರ (ಫೆ.1)ದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಲಾಲ್‌ಬಾಗ್ ರಸ್ತೆಯ
ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ ಹಾಗೂ ಮಾಗಡಿ ರಸ್ತೆಯ ಪ್ರಸನ್ನ ಸೇರಿದಂತೆ ಐದು ಚಿತ್ರಮಂದಿರಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು.

ಚಿತ್ರ ತಂಡದ ಮಾಹಿತಿ ಪ್ರಕಾರ ಸಂಜೆ 6 ಗಂಟೆಯ ಹೊತ್ತಿಗೆ ಎಲ್ಲಾ ಚಿತ್ರಮಂದಿರಗಳಲ್ಲೂ ಮೊದಲ ದಿನದ ಮೊದಲ ಪ್ರದರ್ಶನದ ಟಿಕೆಟ್ ಬಹುತೇಕ ಸೋಲ್ಡ್ ಔಟ್. ಮುಖ್ಯವಾಗಿ ಹೊಸ ದಾಖಲೆಯೊಂದಕ್ಕೆ ‘ನಟಸಾರ್ವಭೌಮ’ ಸಾಕ್ಷಿ
ಆಗಿದೆ. ಬೆಂಗಳೂರಿನ ‘ಊರ್ವಶಿ’ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 4 ಗಂಟೆಗೆ ಶುರುವಾಗುತ್ತಿರುವ ‘ನಟ ಸಾರ್ವಭೌಮ’ ಚಿತ್ರದ ಮೊದಲ ಪ್ರದರ್ಶನಕ್ಕೆ ಚಿತ್ರಮಂದಿರದ ಒಟ್ಟು ೧೨೦೦
ಆಸನಗಳನ್ನು ಒಬ್ಬರೇ ಕಾಯ್ದಿರಿಸಿ, ನಟ ಪುನೀತ್ ಮೇಲಿನ ಅಭಿಮಾನ ಮೆರೆದಿದ್ದಾರೆ.

ಕನ್ನಡದಲ್ಲಿ ಇಂತಹ ಅಭಿಮಾನ ಅಲೆ ಕಂಡಿದ್ದು ಇದು ಮೊದಲು. ಈ ದಾಖಲೆಗೆ ಮುನ್ನುಡಿ ಬರೆದಿದ್ದು ಬೆಂಗಳೂರು ನಿವಾಸಿ ಹಾಗೂ ಪುನೀತ್ ಅವರ ಪಕ್ಕಾ ಅಭಿಮಾನಿ ಅಭಿ ಮತ್ತವರ ತಂಡ. ‘ನಾವು ಗೆಳೆಯರು ಆರಂಭದಿಂದಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು. ಅವರು ಅಭಿನಯಿಸಿದ ಯಾವುದೇ ಚಿತ್ರ ತೆರೆ ಕಂಡರೂ ಅದರ ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ನಾವಿರುತ್ತೇವೆ.

ಈಗ ನಾವೆಲ್ಲ ಸೇರಿ ಒಟ್ಟಿಗೆ ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ನಟಸಾರ್ವಭೌಮ ನೋಡುವ ಆಲೋಚನೆ ಇತ್ತು. ಅದಕ್ಕಾಗಿ ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದೇವೆ. ಇದು ಪುನೀತ್ ಅವರ ಮೇಲಿನ ಅಭಿಮಾನಕ್ಕೆ ಮಾತ್ರ. ಹಾಗೆಯೇ ಕನ್ನಡ ಸಿನಿಮಾಗಳನ್ನು ಹೀಗೂ ನೋಡುವವರಿದ್ದಾರೆನ್ನುವುದು ಬೇರೆ ಭಾಷೆಯವರಿಗೂ ಗೊತ್ತಾಗಬೇಕೆನ್ನುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಅಭಿ.

click me!