Neem Karoli Baba: ರಾಜ್ ಶೆಟ್ಟಿ, ಮನೋಜ್ ಬಾಜಪೇಯಿ ಇಬ್ಬರನ್ನೂ ಬೆಸೆದ ಬಾಬಾ!

Published : Sep 22, 2025, 09:13 PM IST
manoj raj shetty

ಸಾರಾಂಶ

Neem Karoli baba: ನಟ ಮನೋಜ್ ಬಾಜಪೇಯಿ ತಮ್ಮ 'ಜುಗ್ನುಮಾ' ಚಿತ್ರದ ಚಿತ್ರೀಕರಣಕ್ಕೂ ಮುನ್ನ ಉತ್ತರಾಖಂಡದ ಒಬ್ಬರು ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಅನಿಶ್ಚಿತತೆಯಲ್ಲಿದ್ದ ಅವರಿಗೆ ಅಲ್ಲಿನ ಆಧ್ಯಾತ್ಮಿಕ ಅನುಭವ ದಾರಿ ತೋರಿತು. ಅಚ್ಚರಿಯೆಂದರೆ, ನಟ ರಾಜ್ ಬಿ. ಶೆಟ್ಟಿ ಕೂಡ ಇದೇ ಬಾಬಾರ ಅನುಯಾಯಿ!

ನಟ ಮನೋಜ್ ಬಾಜಪೇಯಿ ತಮ್ಮ ಇತ್ತೀಚಿನ ಚಿತ್ರ ಜುಗ್ನುಮಾ (ದಿ ಫೇಬಲ್) ಚಿತ್ರೀಕರಣ ಪ್ರಾರಂಭಿಸುವ ಮೊದಲು, ಅವರು ಮತ್ತು ನಿರ್ದೇಶಕ ರಾಮ್ ರೆಡ್ಡಿ ಉತ್ತರಾಖಂಡದ ಕೈಂಚಿ ಧಾಮ್‌ನಲ್ಲಿರುವ ನೀಮ್ ಕರೋಲಿ ಬಾಬಾ (Neem Karoli baba) ಆಶ್ರಮಕ್ಕೆ ಭೇಟಿ ನೀಡಿದ್ದಾಗಿ ಹೇಳಿಕೊಂಡರು. ಹಿಮಾಲಯದ ಪ್ರಶಾಂತ ವಾತಾವರಣದಲ್ಲಿರುವ ಆ ಆಶ್ರಮ ತಮ್ಮ ಫಿಲಂ ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಬಾಜಪೇಯಿ ಹೇಳಿದರು.

ಜುಗ್ನುಮಾದ ಕಥೆ 1980ರ ದಶಕದ ಉತ್ತರಾರ್ಧದ ಕಾಲದ್ದು. ಅದರಲ್ಲಿ ಮಾಯ ಮಂತ್ರ ಮಾಟ ವಾಮಾಚಾರ ಎಲ್ಲ ಇವೆ. ಮಾಂತ್ರಿಕ ವಾಸ್ತವಿಕತೆಯಲ್ಲಿ ಮುಳುಗಿದೆ. ಆ ಪೀಳಿಗೆಯ ಆಘಾತ, ಮೂಢನಂಬಿಕೆ, ವರ್ಗಸಂಘರ್ಷ ಮತ್ತು ಅತೀಂದ್ರಿಯತೆಯ ವಿಷಯಗಳನ್ನು ಅನ್ವೇಷಿಸುತ್ತದೆ. ಬರ್ಲಿನ್, ಲೀಡ್ಸ್, ಮಾಮಿ ಮತ್ತು ಮುಂಬೈ ಚಲನಚಿತ್ರೋತ್ಸವ ಸೇರಿದಂತೆ ಪ್ರತಿಷ್ಠಿತ ಉತ್ಸವಗಳಿಗೆ ಈಗಾಗಲೇ ಹೋಗಿ ತೆರೆ ಕಂಡಿದೆ. ಕಳೆದ ವಾರವಷ್ಟೇ ಭಾರತದಲ್ಲಿ ಚಿತ್ರಮಂದಿರಗಳನ್ನು ತಲುಪಿದೆ.

ಒಂದು ಇಂಟರ್‌ವ್ಯೂಲ್ಲಿ ಮಾತಾಡುತ್ತಾ ಮನೋಜ್‌ ಬಾಜಪೇಯಿ ಅವರು ಮತ್ತು ರಾಮ್‌ ರೆಡ್ಡಿ ನೇರವಾಗಿ ಶೂಟಿಂಗ್ ಸ್ಥಳಕ್ಕೆ ಹೋಗದೆ ʼಮಧ್ಯದಲ್ಲಿ ಎಲ್ಲೋʼ ಭೇಟಿಯಾಗಲು ನಿರ್ಧರಿಸಿದ್ದನ್ನು ನೆನಪಿಸಿಕೊಂಡರು. ಅದು ನೀಮ್‌ ಕರೋಲಿ ಬಾಬಾ ಆಶ್ರಮವಾಗಿ ಬದಲಾಯಿತು. "ನಾವು ಬಾಬಾಜಿಯ ಗುಹೆಗೆ ಹೋದೆವು. ನಾವು ಅಲ್ಲಿ ಧ್ಯಾನ ಮಾಡಿದೆವು. ಮತ್ತೆ ಕೆಲವು ಮಾಂತ್ರಿಕ ಸಂಗತಿಗಳು ನಡೆದವು. ನಾವಿಬ್ಬರೂ ಅದನ್ನು ಅನುಭವಿಸಿದೆವು. ನಾವು ಅಲ್ಲಿದ್ದಾಗ ನಮಗೆ ಚಿತ್ರದ ಕತೆಯೇ ಕಣ್ಣ ಮುಂದೆ ಕಂಡಂತಾಯಿತು. ಇದನ್ನು ನಾವಿಬ್ಬರೂ ಹೇಳಿಕೊಂಡೆವು. ಅದು ಒಂದು ಪ್ರಬಲವಾದ ಭಾವನೆ. ಅದನ್ನು ವಿವರಿಸಿ ಹೇಳಿ ಎಂದು ನನ್ನನ್ನು ಕೇಳಿದರೆ, ಅದು ನಮಗೆ ಸಾಧ್ಯವಿಲ್ಲ" ಎಂದು ಇಬ್ಬರೂ ಹೇಳುತ್ತಾರೆ.

ಮನೋಜ್‌ ಬಾಜಪೇಯಿ ಮೂರು ದಶಕಗಳಿಂದ ಅದ್ಭುತ ವೃತ್ತಿಜೀವನವನ್ನು ನಿರ್ಮಿಸಿಕೊಂಡಿದ್ದಾರೆ ಆದರೆ ಇತ್ತೀಚೆಗೆ ಸ್ವಲ್ಪ ವೈಯಕ್ತಿಕ ಅನಿಶ್ಚಿತತೆಯ ಸಮಯದಲ್ಲಿ ಅವರಿದ್ದರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟನಾದ ಮನೋಜ್ ಒಂದು ಹಂತದಲ್ಲಿ ಚಲನಚಿತ್ರಗಳ ನಟನೆಯನ್ನೇ ಸಂಪೂರ್ಣವಾಗಿ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದರಂತೆ. ಆಗ ಅವರಿಗೆ ದೊರೆತುದು ಜುಗ್ನುಮಾ. "ನಾನು ವಿಶ್ರಾಂತಿಯಿಲ್ಲದ ಅವಧಿಯನ್ನು ಎದುರಿಸುತ್ತಿದ್ದೆ. ನನ್ನ ಸಮಯ ಮುಗಿದಿದೆ ಮತ್ತು ನಾನು ಈ ವೃತ್ತಿಯನ್ನು ತೊರೆಯಬೇಕು ಎಂದು ಅದು ನನಗೆ ಅನಿಸಿತ್ತು. ಅದು ತುಂಬಾ ತೀವ್ರವಾಗಿತ್ತು. ಜುಗ್ನುಮಾವನ್ನು ಪ್ರಾರಂಭಿಸುವ ಮೊದಲು, ನಾನು ಒಂದು ವರ್ಷ ಕೆಲಸ ಮಾಡಿರಲಿಲ್ಲ. ದಿ ಫ್ಯಾಮಿಲಿ ಮ್ಯಾನ್‌ನ ಮೊದಲ ಸೀಸನ್ ಪ್ರಾರಂಭವಾಗುವ ಮೊದಲು ಸಹ ಹೀಗೇ ಸಂಭವಿಸಿತ್ತು" ಎಂದು ಮನೋಜ್‌ ಹೇಳುತ್ತಾರೆ.

ಮನೋಜ್ ಸ್ನೇಹಿತರು ಇದರಿಂದೆಲ್ಲ ಚಿಂತಿತರಾಗಿದ್ದರು. ಆದರೆ ಅವರ ಪತ್ನಿ, ಮಾಜಿ ನಟಿ ಶಬಾನಾ ರಜಾ ಅಚಲ ಬೆಂಬಲವನ್ನು ಮನೋಜ್‌ಗೆ ನೀಡಿದರು. "ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಮಾಡಿ. ನೀವು ಈ ನಗರ ಮತ್ತು ಉದ್ಯಮವನ್ನು ಬಿಡಲು ಬಯಸಿದರೆ, ನಾವು ಅದಕ್ಕೆ ಸಿದ್ಧರಿದ್ದೇವೆ' ಎಂದು ಅವಳು ನನಗೆ ಹೇಳಿದಳು. ನನ್ನಲ್ಲಿ ಉತ್ತರ ಇರಲಿಲ್ಲ. ಆದರೆ ನಾನು ಅದನ್ನು ಜುಗ್ನುಮಾದ ಸ್ಕ್ರಿಪ್ಟ್‌ನಲ್ಲಿ ಕಂಡುಕೊಂಡೆ. ನನಗೆ ತಕ್ಷಣ ಅದರೊಂದಿಗೆ ಒಂದು ಸಂಪರ್ಕ ಸಾಧ್ಯವಾಯಿತು" ಎಂದು ಮನೋಜ್‌ ಹೇಳುತ್ತಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ 'ತಿಥಿ' ಚಿತ್ರದ ಮೂಲಕ ಹೆಸರುವಾಸಿಯಾದ ರಾಮ್ ರೆಡ್ಡಿ ನಿರ್ದೇಶನದ 'ಜುಗ್ನುಮಾ' ಚಿತ್ರದಲ್ಲಿ ಬಾಜಪೇಯಿ ಅವರ ಪಾತ್ರ ಬಹು ಪದರಗಳದ್ದು. ಈ ಚಿತ್ರದಲ್ಲಿ ನಟಿಸಿದ ಬಾಜಪೇಯಿ ಅವರಿಗೆ ಆಧ್ಯಾತ್ಮಿಕ ಅನುಭೂತಿ ನೀಡಿದ ನೀಮ್‌ ಕರೋಲಿ ಬಾಬಾ ಅವರ ಆಶ್ರಮ, ಅವರ ಪ್ರಭಾವಳಿಯನ್ನು ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಅನುಭವಿಸಿದ್ದಾರೆ. ಇತ್ತೀಚೆಗೆ ಸು ಫ್ರಂ ಸೋ ಪತ್ರಿಕಾಗೋಷ್ಠಿಯಲ್ಲಿ ರಾಜ್‌ ಬಿ ಶೆಟ್ಟಿ ಕೂಡ ತಮ್ಮ ಮೊಬೈಲ್‌ನ ಸ್ಕ್ರೀನ್‌ ಸೇವರ್‌ ಆಗಿದ್ದ ನೀಮ್‌ ಕರೋಲಿ ಬಾಬಾ ಚಿತ್ರವನ್ನು ತೋರಿಸಿದ್ದರು. ರಾಜ್‌ ಶೆಟ್ಟಿ ಕೂಡ ನೀಮ್‌ ಕರೋಲಿ ಬಾಬಾ ಅವರ ಅನುಯಾಯಿಯಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌