
ಚಿತ್ರ: ನಟರಾಜ ಸರ್ವಿಸ್
ಭಾಷೆ: ಕನ್ನಡ
ತಾರಾಗಣ: ಶರಣ್, ಮಯೂರಿ, ರವಿಶಂಕರ್, ರಾಕ್‌ಲೈನ್ ವೆಂಕಟೇಶ್
ನಿರ್ದೇಶನ: ಪವನ್ ಒಡೆಯರ್
ಸಂಗೀತ: ಅನೂಪ್ ಸೀಳಿನ್
ಛಾಯಾಗ್ರಹಣ: ಅರುಳ್ ಕೆ ಸೋಮಸುಂದರಂ
ರೇಟಿಂಗ್: ***
ನಟರಾಜ ಹುಟ್ಟಾಕಳ್ಳ. ಸಹನಾ ಮೂಲ ನಕ್ಷತ್ರದಲ್ಲಿ ಹುಟ್ಟಿದವರ ಹಾಗೆ ನತದೃಷ್ಟೆ. ಅವರಿಬ್ಬರ ಜರ್ನಿಯಲ್ಲಿ ಸಾಗುವ ಕತೆಗೆ ಇನ್ನೇನೋ ಕಡಿಮೆ ಆಯ್ತು ಅನ್ನುವುದೊಂದೇ ಕೊರಗು. ಅದನ್ನು ಹೊರತುಪಡಿಸಿದರೆ ಶರಣ್ ಹಾಗೂ ಮಯೂರಿ ಅಭಿನಯದ ‘ನಟರಾಜ ಸವೀರ್‍ಸ್' ಮನರಂಜನೆಗಂತೂ ಮೋಸವೇ ಇಲ್ಲ. ಕಳ್ಳ ಪೊಲೀಸ್ ಆಟದ ನಡುವೆ ಹುಟ್ಟುವ ಹೊಸತೊಂದು ಪ್ರೀತಿಯ ಕತೆಯಲ್ಲಿ ತಾಜಾತನವಿದೆ. ಮಾತುಗಾರ ಮಲ್ಲನಂತೆ ಹರಳು ಹುರಿ ದಂತೆ ಪಟಪಟನೆ ಮಾತನಾಡುವ ಶರಣ್, ಪಂಚಿಂಗ್ ಡೈಲಾಗ್ ಮೂಲಕ ಪ್ರೇಕ್ಷಕನಿಗೆ ಕಚಗುಳಿ ಇಡುತ್ತಾರೆ. ಮಯೂರಿಯ ಮುಗ್ಧತೆ ನೋಡುನಿಗೆ ಆಪ್ತ ಎನಿಸುತ್ತದೆ. ಆ ಮೂಲಕ ಕತೆಗೆ ನೋಡಿಸಿಕೊಂಡು ಹೋಗುವ ಗುಣವಿದೆ. ಹಾಗಾದ್ರೆ ಪ್ರೇಕ್ಷಕನ ಪಾಲಿಗೆ ಇಲ್ಲಿ ಕಡಿಮೆ ಅನ್ನಿಸಬಹುದಾದ ಭಾವ ವ್ಯಕ್ತವಾಗುವು ದಾದರೂ ಎಲ್ಲಿ?
ಶರಣ್ ಅವರ ಕಾಮಿಡಿ ಟ್ರ್ಯಾಕ್'ಗೆ ಪೂರಕವಾಗುವಂತೆಯೇ ನಿರ್ದೇಶಕ ಪವನ್ ಒಡೆಯರ್ ಕತೆ ಸಿದ್ಧಪಡಿಸಿದ್ದರೂ, ಚಿತ್ರಕತೆ ಕೈ ಕೊಟ್ಟಿದೆ. ‘ಗೋವಿಂದಾಯ ನಮಃ' ಚಿತ್ರ ನೋಡಿ ನಕ್ಕವರಿಗೆ ಇದು ಪವನ್ ಒಡೆಯರ್ ಚಿತ್ರವಾ ಎನ್ನುವ ಪ್ರಶ್ನೆ ಉದ್ಭವಿಸದೆ ಇರದು. ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್ ಜತೆಗೆ ನೀಟ್ ಎನಿಸುವ ಕತೆಯೊಂದನ್ನು ಬೆರೆಸಿ ಸರಳರೇಖೆಯಲ್ಲಿ ಸಿನಿಮಾ ಮಾಡುವ ಪವನ್ ಫಾರ್ಮುಲಾ ಕಾಣೆಯಾಗಿದೆ. ಸಕ್ಸಸ್‌ನ ಅವರ ಸರಳ ರೇಖೆ ಕೊಂಚ ಡೊಂಕಾಗಿದೆ. ಕತೆಯಲ್ಲಿ ಹೊಸತನವಿದ್ದರೂ ಸ್ಕ್ರೀನ್ ಪ್ಲೇ ಕೈಕೊಟ್ಟಿದೆ. ‘ಗೂಗ್ಲಿ', ‘ರಣ ವಿಕ್ರಮ' ಹಾಗೂ ‘ಜೆಸ್ಸಿ' ಸಿನಿಮಾಗಳ ಮೂಲಕ ಒಂದಷ್ಟುಕಾಲ ಅವರು ಕಾಮಿಡಿ ಟ್ರ್ಯಾಕ್‌ನಿಂದ ದೂರ ಉಳಿದಿದ್ದು ಇದಕ್ಕೆ ಕಾರಣ ಇರಬಹುದು. ಆದರೂ ಕತೆಗಿರುವ ಹಾಸ್ಯದ ಲೇಪ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ.
ಕಲಾವಿದರ ಅಭಿನಯಕ್ಕೆ ಬಂದರೆ ಶರಣ್'ಗೆ ಫುಲ್'ಮಾರ್ಕ್ಸ್. ಕಲೆ ಎನ್ನುವುದು ತಮಗೆ ರಕ್ತವಾಗಿ ಬಂದಿದ್ದು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದಂತಿದೆ ಅವರ ನಟನೆ. ಹುಟ್ಟಾಕಳ್ಳ ನಟರಾಜನಿಗೆ ಜೀವ ತುಂಬುವ ಭರಾಟೆಯಲ್ಲಿ ಪಾತ್ರವೇ ಅವರಾಗಿ ಕಾಣುತ್ತಾರೆ. ನಟರಾಜನ ಬಾಯಿಂದ ಪಟಪಟ ಸಿಡಿಯುವ ಪಂಚಿಂಗ್ ಡೈಲಾಗ್ ಪ್ರೇಕ್ಷಕನಿಗೆ ಕಚಗುಳಿ ಇಡುತ್ತವೆ. ಸಹನಾ ಪಾತ್ರದಲ್ಲಿ ನಟಿ ಮಯೂರಿ ಅವರ ಸಹನೆ ಕೆಲವೊಮ್ಮೆ ಹಳಿ ತಪ್ಪಿದೆ. ಅಳು, ನಗು ಎರಡೂ ಒಂದೇ ಎಂಬಂತೆ ಭಾಸವಾಗುತ್ತದೆ. ಮಾತಿನಲ್ಲಿ ಯಾಂತ್ರಿಕತೆ ತುಂಬಿಕೊಂಡಿದೆ. ಅಷ್ಟಾಗಿಯೂ ಪ್ರೇಕ್ಷಕರಿಗೆ ಅವರ ಮುಖದಲ್ಲಿನ ಮುಗ್ಧತೆ, ಹಾವಭಾವ ಎರಡು ಆಪ್ತವಾಗುತ್ತವೆ. ಸಬ್ ಇನ್ಸ್'ಪೆಕ್ಟರ್ ಪಾತ್ರದಲ್ಲಿ ರಾಕ್'ಲೈನ್ ವೆಂಕಟೇಶ್ ಅಭಿನಯ ಖಡಕ್ ಆಗಿದೆ.
ಚಿತ್ರದಲ್ಲಿನ ರವಿಶಂಕರ್ ಪಾತ್ರ ನಿಗೂಢವಾಗಿಯೇ ಇತ್ತು. ಅಂತೆಯೇ ಒಂದು ಹಾಡು ಮತ್ತೊಂದು ಸನ್ನಿವೇಶದಲ್ಲಿ ದರ್ಗಾದಲ್ಲಿನ ಬಾಬಾ ಪಾತ್ರದೊಂದಿಗೆ ಹಾಗೆ ಬಂದು ಹೀಗೆ ಹೋಗುವ ನಟ ರವಿಶಂಕರ್ ಅಭಿನಯ ವಂಡರ್'ಫುಲ್. ವಿಲನ್ ಬ್ರಾಂಡ್'ನ ಆಚೆ ಯಾವುದೇ ಪಾತ್ರಕ್ಕೂ ಸೈ ಎನಿಸುವಂತಿದೆ ಅವರ ನಟನೆ. ಅವರು ತೆರೆಯಲ್ಲಿ ಕಾಣಿಸಿಕೊಂಡಾಗೆಲ್ಲ ಪ್ರೇಕ್ಷಕರ ಸಿಳ್ಳೇ ಕೇಕೆಗಳು ಮುಗಿಲು ಮುಟ್ಟುತ್ತವೆ. ಕತೆ ಮತ್ತು ಕಾಡಿಮಿಡಿಯ ವಿಚಾರದಲ್ಲಿ ಉಂಟಾಗುವ ಒಂದಷ್ಟು ಬೇಸರವನ್ನು ಅನೂಪ್ ಸೀಳಿನ್ ಸಂಗೀತ ಮರೆಸುತ್ತದೆ. ಆರಂಭದಲ್ಲಿ ಬರುವ ‘ಅಲ್ಲಾ ಯಾ ಅಲ್ಲಾ' ಹಾಡು ಆನಂತರ ಸಹನಾಗೆ ನಟರಾಜ ಮೇಲೆ ಪ್ರೀತಿ ಹುಟ್ಟುವಾಗ ಬರುವ ‘ಕತ್ತಲೆಡೆಯಿಂದ ಬೆಳಕಿಗೆ...' ಎನ್ನುವ ಗೀತೆಗಳಿಗೆ ಆಕರ್ಷಣೆಯ ಗುಣವಿದೆ. ಶರಣ್ ಕಾಂಬಿನೇಷನಲ್ಲಿ ಇದೇ ಮೊದಲು ಕೆಲಸ ಮಾಡಿರುವ ಅನೂಪ್ ಅವರಿಗೆ ಪ್ರೇಕ್ಷಕರ ಮೆಚ್ಚಿಗೆ ಸಿಕ್ಕಿದೆ.
ಬಹುತೇಕ ಕಾಡಲ್ಲಿ ಸುತ್ತು ಹಾಕುವ ಕತೆಗೆ ಅರುಳ್ ಸೋಮಸುಂದರಂ ಅವರ ಕ್ಯಾಮೆರಾ ಸಾಥ್ ನೀಡಿದೆಯಾದರೂ, ಅದರ ನೋಟದಲ್ಲಿ ಅಷ್ಟು ಪ್ರಖರತೆ ಕಾಣದು. ವಿಶೇಷವೂ ಎನಿಸದು. ಕೆಲವೊಂದು ಸನ್ನಿವೇಶಗಳು ಮಾತ್ರ ಕಣ್ಣಿಗೆ ತಂಪು ನೀಡುತ್ತವೆ. ನಿರ್ಮಾಣದ ದೃಷ್ಟಿಯಲ್ಲಿ ಅದ್ಧೂರಿ ಎನ್ನುವ ಮಾತಿಲ್ಲ. ಸಿಂಪಲ್ ಸೂತ್ರವನ್ನು ನಿರ್ದೇಶಕರು ಮತ್ತು ನಿರ್ಮಾಪಕರು ಯಶಸ್ವಿಯಾಗಿಯೇ ಬಳಸಿಕೊಂಡಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಚಿತ್ರಕತೆ ಇನ್ನಷ್ಟುಬಿಗಿಯಾಗಿದ್ದರೆ ಮತ್ತೊಂದು ಹಿಟ್ ಸಿಗಬಹುದಿತ್ತು ಎನ್ನುವುದು ಚಿತ್ರ ನೋಡಿ ಹೊರಬಂದಾಗ ಎಲ್ಲರಲ್ಲೂ ಅನ್ನಿಸಬಹುದಾದ ಅಭಿಪ್ರಾಯ.
- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.