ಕೆಟ್ಟವರಿಗೆ ಪಟ್ಟೆ ಹುಲಿ ಅಭಿಮಾನಿಗಳಿಗೆ ಮೀಸೆ ಹುಲಿ 'ಹೆಬ್ಬುಲಿ'

By Suvarna Web DeskFirst Published Feb 24, 2017, 12:08 AM IST
Highlights

ದೇಶವನ್ನು ಕಾಯುವವನು ಯಾರು? ಸೈನಿಕ. ಆ ಸೈನಿಕನ ಕುಟುಂಬವನ್ನು ಯಾರು ಕಾಯಬೇಕು? ದೇಶ. ದೇಶ ಯಾರ ಕೈಲಿದೆ? ರಾಜಕಾರಣಿಗಳ ಕೈಲಿ. ರಾಜಕಾರಣಿಗಳನ್ನು ಗೆಲ್ಲಿಸಿದ್ದು ಯಾರು? ಶ್ರೀಸಾಮಾನ್ಯರು? ಶ್ರೀಸಾಮಾನ್ಯರನ್ನು ಕಾಯಬೇಕಾದವರು ಯಾರು? ರಾಜಕಾರಣಿಗಳು? ರಾಜಕಾರಣಿಗಳು ಏನು ಮಾಡುತ್ತಿದ್ದಾರೆ? ಶ್ರೀಸಾಮಾನ್ಯರ ಓಟು ಬಳಸಿಕೊಂಡು ರಾಜಕಾರಣ ಮಾಡಿ, ಅವರಿಗೇ ಅನ್ಯಾಯ ಮಾಡುತ್ತಿದ್ದಾರೆ. ಅಂಥ ರಾಜಕಾರಣಿಗಳನ್ನು ಮಟ್ಟ ಹಾಕುವುದಕ್ಕೂ, ಸಾಮಾನ್ಯರನ್ನು ಕಾಯುವುದಕ್ಕೂ ಯಾರು ಬರಬೇಕು?

ಭಾಷೆ: ಕನ್ನಡ

ತಾರಾಗಣ: ಸುದೀಪ್, ಅಮಲಾಪೌಲ್,ರವಿಚಂದ್ರನ್, ರವಿಶಂಕರ್, ರವಿ ಕಿಶನ್, ಕಬೀರ್ ಖಾನ್, ಕಲ್ಯಾಣಿ, ಅವಿನಾಶ್

ನಿರ್ದೇಶಕ: ಕೃಷ್ಣ

ಛಾಯಾಗ್ರಹಣ: ಕರುಣಾಕರ್

ಸಂಗೀತ: ಅರ್ಜುನ್ ಜನ್ಯಾ

ನಿರ್ಮಾಣ: ರಘುನಾಥ್, ಉಮಾಪತಿ ಶ್ರೀನಿವಾಸ್

ದೇಶವನ್ನು ಕಾಯುವವನು ಯಾರು? ಸೈನಿಕ. ಆ ಸೈನಿಕನ ಕುಟುಂಬವನ್ನು ಯಾರು ಕಾಯಬೇಕು? ದೇಶ. ದೇಶ ಯಾರ ಕೈಲಿದೆ? ರಾಜಕಾರಣಿಗಳ ಕೈಲಿ. ರಾಜಕಾರಣಿಗಳನ್ನು ಗೆಲ್ಲಿಸಿದ್ದು ಯಾರು? ಶ್ರೀಸಾಮಾನ್ಯರು? ಶ್ರೀಸಾಮಾನ್ಯರನ್ನು ಕಾಯಬೇಕಾದವರು ಯಾರು? ರಾಜಕಾರಣಿಗಳು? ರಾಜಕಾರಣಿಗಳು ಏನು ಮಾಡುತ್ತಿದ್ದಾರೆ? ಶ್ರೀಸಾಮಾನ್ಯರ ಓಟು ಬಳಸಿಕೊಂಡು ರಾಜಕಾರಣ ಮಾಡಿ, ಅವರಿಗೇ ಅನ್ಯಾಯ ಮಾಡುತ್ತಿದ್ದಾರೆ. ಅಂಥ ರಾಜಕಾರಣಿಗಳನ್ನು ಮಟ್ಟ ಹಾಕುವುದಕ್ಕೂ, ಸಾಮಾನ್ಯರನ್ನು ಕಾಯುವುದಕ್ಕೂ ಯಾರು ಬರಬೇಕು?

ಹೀರೋ ಬರಬೇಕು.

ಆದರೆ ಸಣ್ಣ ತಿದ್ದುಪಡಿ, ಇಲ್ಲಿ ಯೋಧನೇ ಬರುತ್ತಾನೆ. ಅರೆ, ಯೋಧ ಯಾಕೆ ಬರುತ್ತಾನೆ? ಈ ಯೋಧನ ಅಣ್ಣ ಉಪಕಾರಿಯಾಗಿದ್ದ. ಅವನಿಗೆ ರಾಜಕಾರಣಿಗಳು ಅನ್ಯಾಯ ಮಾಡಿದ್ದಾರೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಪ್ಯಾರಾ ಕಮಾಂಡರ್ ತವರೂರಿಗೆ ಬಂದು ಯುದ್ಧ ಭೂಮಿಗೆ ಇಳಿಯುತ್ತಾನೆ.

ಮುಂದಿನದು ತೆರೆ ಮೇಲೆ ನೋಡಿ!

-ಗಜಕೇಸರಿ ಮಾಡಿದ್ದ ಕ್ಯಾಮರಾಮನ್ ಕೃಷ್ಣ ಈ ಸಲ ದೊಡ್ಡ ಆ್ಯಕ್ಷನ್ ಪ್ಯಾಕೇಜ್ ತಂದಿದ್ದಾರೆ. ಖೋ ಕೊಡೋ ಥರ ಜನಪ್ರಿಯ ಚಿತ್ರಕಥಾ ಮಾದರಿ ಇದೆ. ಎಲ್ಲಾ ಕುತಂತ್ರದ ಹಿಂದೆ ಇರೋ ಕಾಣದ ಕೈ ಯಾರದ್ದು ಅಂತ ಹುಡುಕಿ ಹೋದರೆ ಒಬ್ಬರಿಂದ ಇನ್ನೊಬ್ಬರ ಕಡೆಗೆ ಬೆರಳು ಹೋಗುತ್ತದೆ. ಆ ಹಂತದಲ್ಲೆಲ್ಲಾ ಪ್ರೇಕ್ಷಕ ಉಸಿರು ಬಿಗಿ ಹಿಡಿಯುತ್ತಾನೆ, ಆ ಮಟ್ಟಿಗೆ ತೀವ್ರತೆ ಇರುವ ಚಿತ್ರಕತೆಯನ್ನು ಮೊದಲಾರ್ಧದಲ್ಲಿ ಹೆಣೆಯುತ್ತಾ ಹೋಗುತ್ತಾರೆ ಕೃಷ್ಣ ಮತ್ತವರ ತಂಡ. ದ್ವಿತೀಯಾರ್ಧದಲ್ಲಿ ಮತ್ತೆ ಹುಲಿ ಕುರಿ ಆಟ. ಕೆಟ್ಟೋರೇ ಗೆದ್ದು, ಒಳ್ಳೆಯವರಿಗೆ ಕೆಟ್ಟದ್ದಾಗಿ, ಆಕ್ರೋಶ ಮಡುಗಟ್ಟಿ, ಕೊನೆಕೊನೆಗೆ ಏಟು, ಎದಿರೇಟು. ಮೊದಲಿಂದ ಕೊನೆಯತನಕ ಹೀರೋ ಘರ್ಜಿಸುವ ಹೆಬ್ಬುಲಿ, ವಿಲನ್‌ಗಳು ಹೆಬ್ಬಿಲಿ, ಜೊತೆಗೆ ಆರಡಿ ಹೀರೋವನ್ನು ತಬ್ಬಲೋ ಬೇಡವೋ ಅಂತ ಓಡಾಡೋ ಹೀರೋಯಿನ್ ತಬ್ಬಿಬ್ಬಲಿ- ಸುದೀಪ್ ಅಭಿಮಾನಿಗಳು ಮಾತ್ರ ಎರಡೂ ಬೆರಳು ಬಾಯಲ್ಲಿಟ್ಟುಕೊಂಡು ಶಿಳ್ಳೆ ಹೊಡೆಯೋ ಮೂಡಲಿ!

ಚಿತ್ರ ಸಿಕ್ಕಾಪಟ್ಟೆ ಕಿಕ್ ಕೊಡುವುದಕ್ಕೆ ಒಂದು ಎರಡು ಮತ್ತು ಮೂರನೇ ಕಾರಣ ಕಿಚ್ಚ ಸುದೀಪ್. ಅವರಿಗೆ ಮಾತ್ರ ಒಪ್ಪುವಂಥ ಪಾತ್ರ ಕಮಾಂಡರ್ ರಾಮ್. ಸಣ್ಣದಾಗಿ ಮೀಸೆಯಂಚಲ್ಲೇ ನಗಲಿ, ಹೀರೋಯಿನ್ನು ಜೊತೆ ಕಸಿವಿಸಿಯಲ್ಲೇ ‘ಸುಂದರಿ ಸುಂದರಿ’ ಅಂತ ಭರತನಾಟ್ಯ ಕುಣಿಯಲಿ, ದುಃಖವನ್ನು ಕಣ್ಣಲ್ಲೇ ಬಚ್ಚಿಟ್ಟುಕೊಂಡು ಹನಿ ತುಳುಕಿಸಲಿ, ಅಬ್ಬರಿಸಲಿ, ಸಂಹರಿಸಲಿ, ಕೈಲಿ ಡಿಸೈನ್ ಡಿಸೈನ್ ಆಯುಧಗಳನ್ನಿಟ್ಟುಕೊಂಡು ಬೀಸಲಿ- ಎಲ್ಲದರಲ್ಲೂ ಸುದೀಪ್ ಅವರದ್ದೇ ಒಂದು ಕೈ ಮೇಲೆ. ಇಡೀ ಸಿನಿಮಾದಲ್ಲಿ ಅವರು ಅಬ್ಬರಿಸುತ್ತಾರೆ, ಆದರೆ ಅಬ್ಬರದ ಡೈಲಾಗ್ ಹೇಳೋದಿಲ್ಲ. ಒಂದು ನೋಟ, ನಿಲುವು, ಒಂದು ಪದ, ಆಗಾಗ ‘ 2 ನಿಮಿಷ ಮಾತಾಡ್ಬೇಕು’ ಅನ್ನೋ ವಾಕ್ಯ, ಸ್ಮೈಲ್‌ಗಳಲ್ಲೇ ಎದುರಾಳಿಯನ್ನು ತಿಂದು ಮುಗಿಸಬಲ್ಲ ಹೆಬ್ಬುಲಿಯಾಗಿ ಅವರು ತೆರೆಯಲ್ಲಿರುತ್ತಾರೆ. ತೆರೆ ಮೇಲೆ ಸದಾ ಇರದಿದ್ದರೂ, ಆಗಾಗ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಮಾತ್ರ ಬಂದು ಹೋಗುವ ರವಿಚಂದ್ರನ್ ಒಳ್ಳೆಯ ಅಣ್ಣ, ಜನನಾಯಕ, ಕುಟುಂಬ ವಾತ್ಸಲ್ಯಮಯಿಯಾಗಿ ಇಷ್ಟವಾಗುತ್ತಾರೆ. ಅವರಿಗೂ ಸಂಭಾಷಣೆಗಿಂತ ವೌನ ಸಂಭಾಷಣೆಯೇ ಹೆಚ್ಚು. ಉಳಿದಂತೆ ಇರುವ ಖಳನಟರಲ್ಲಿ ಹೆಚ್ಚು ಅವಕಾಶ ಇರುವುದು ಮತ್ತು ಅವಕಾಶ ಬಳಸಿಕೊಂಡಿರುವುದು ರವಿಶಂಕರ್. ಮಿಕ್ಕಂತೆ ಪಾತ್ರಗಳ ಜಾತ್ರೆಯಲ್ಲಿ ಅಭಿನಯದ ಮೆರವಣಿಗೆ ಕಡಿಮೆಯೇ. ನನ್ನ ಮಾತೂ ಸ್ವಲ್ಪ ಕೇಳಿರಿ ಅಂತ ಪ್ರೇಕ್ಷಕರಲ್ಲಿ ಬೇಡುವಂತೆ ಚಂದದ ಸುಂದರಿ ಅಮಲಾ ಹಾಜರಿದ್ದಾರಷ್ಟೇ.

ಸುದೀಪ್ ನಂತರ ಚಿತ್ರ ಇಷ್ಟವಾಗುವುದು ತಾಂತ್ರಿಕ ಕಾರಣಕ್ಕೆ. ಚಿತ್ರದಲ್ಲಿ ಕೆಲವು ಉಸಿರು ಬಿಗಿ ಹಿಡಿಯುವಂಥ ದೃಶ್ಯಗಳಿವೆ, ಆಗೆಲ್ಲಾ ಛಾಯಾಗ್ರಹಣ(ಕರುಣಾಕರ್) ಆಗಲೀ, ಹಿನ್ನೆಲೆ ಸಂಗೀತ ಆಗಲಿ, ಸಂಕಲನ (ದೀಪು ಎಸ್. ಕುಮಾರ್) ಆಗಲೀ, ಸ್ಟಂಟ್ (ವಿಜಯ್ ಮತ್ತು ರವಿವರ್ಮ) ಆಗಲೀ- ನಿಮ್ಮ ಗಮನ ಬೇರೆಡೆ ಹರಿಯದಂತೆ ನೋಡಿಕೊಂಡಿದ್ದಾರೆ. ಒಂದು ಜರ್ನಿಯಲ್ಲಿ ಇರಬೇಕಾದ ವೇಗ ಇಲ್ಲಿ ಸರಿಯಾಗಿ ಇರುವ ಕಾರಣ ಇಲ್ಲಿ ನೀವು ಸೀಟ್ ಬೆಲ್ಟ್ ಹಾಕಿಕೊಂಡೇ ನೋಡಲು ಕೂರಬೇಕು. ಸುದೀಪ್ ಮತ್ತು ತಾಂತ್ರಿಕತೆಗಳನ್ನು ಸರಿಯಾಗಿ ಮಿಕ್ಸ್ ಮಾಡಿರುವ ಕಾರಣ ಕತೆ- ಚಿತ್ರಕತೆಗೆ ಸಂಬಂಧ ಪಟ್ಟ ಯಾವ ಪ್ರಶ್ನೆಯನ್ನೂ ನೀವು ಕೇಳೋದಕ್ಕೇ ಹೋಗುವುದಿಲ್ಲ ಮತ್ತು ಆಗುವುದಿಲ್ಲ. ಅರ್ಜುನ್ ಜನ್ಯ ಹಾಡುಗಳು ನಿಮ್ಮ ಕಾಲನ್ನು ಕುಣಿಸುತ್ತವೆ, ಅಲ್ಲಲ್ಲಿ ಆಹಾ ಅನ್ನಿಸುತ್ತವೆ, ಅಲ್ಲೆಲ್ಲೋ ಇನ್ಯಾವುದೋ ಹಾಡನ್ನು ಜ್ಞಾಪಿಸುತ್ತವೆ, ಅಷ್ಟೂ ಹಾಡುಗಳಲ್ಲಿ ‘ಸುಂದರಿ ಸುಂದರಿ’ ಅತ್ಯುತ್ತಮ ಹಾಡು.

ಇಷ್ಟಾದಮೇಲೂ ಇದು ಹುಲಿ ಸವಾರಿ, ವಿಲನ್‌ಗಳನ್ನು ಹುಲಿ ಸಂಹಾರ ಮಾಡುತ್ತಾ ಹೋಗುತ್ತದೆ, ಅದರ ಬೆನ್ನ ಮೇಲೆ ಏರಿ ನೀವು ನೋಡುತ್ತಾ ಹೋಗುತ್ತೀರಿ, ಕಣ್ಣುಗಳಿಗೆ ಆನಂದ, ಕಿವಿಗಳಿಗೆ ಅಬ್ಬರ. ಹಾಗಾಗಿ ಹುಲಿಯ ಮೈಮೇಲಿಂದ ಇಳಿದು, ಅದರ ಪಟ್ಟೆಗಳ ಸಂಖ್ಯೆ ಎಣಿಸಲು ಹೋಗಬಾರದು!

-ವಿಕಾಸ ನೇಗಿಲೋಣಿ

click me!