Chiranjeevi Shock: 'ಮೊನ್ನೆಯಷ್ಟೇ ನಗುನಗುತ್ತಿದ್ದ'.. ಕೆ ಭಾಗ್ಯರಾಜ್ ನಿಧನಕ್ಕೆ ಮೆಗಾಸ್ಟಾರ್ ಚಿರಂಜೀವಿ ದಿಗ್ಭ್ರಮೆ; ಭಾವನಾತ್ಮಕ ಪೋಸ್ಟ್

Published : Jun 27, 2026, 02:45 PM IST
K Bhagyaraj Chiranjeevi

ಸಾರಾಂಶ

ನೋವಿನ ಸಂಗತಿ ಏನೆಂದರೆ, ಭಾಗ್ಯರಾಜ್ ಅವರ ಗುರುಗಳು ಮತ್ತು ತಮಿಳು ಚಿತ್ರರಂಗದ ಭೀಷ್ಮ ಎಂದೇ ಕರೆಯಲ್ಪಡುತ್ತಿದ್ದ ಕೆ. ಭಾರತಿರಾಜ ಅವರು ನಿಧನರಾದ ಕೇವಲ ಎರಡೇ ವಾರಗಳಲ್ಲಿ ಅವರ ನೆಚ್ಚಿನ ಶಿಷ್ಯ ಭಾಗ್ಯರಾಜ್ ಕೂಡ ಇಹಲೋಕ ತ್ಯಜಿಸಿದ್ದಾರೆ. ಗುರು-ಶಿಷ್ಯರ ಈ ಅಗಲಿಕೆ ಸಿನಿಪ್ರೇಮಿಗಳ ಪಾಲಿಗೆ ಬರಸಿಡಿಲಾಗಿದೆ.

ಚಿತ್ರರಂಗದ 'ಚಿತ್ರಕಥೆ ಮಾಂತ್ರಿಕ' ಭಾಗ್ಯರಾಜ್ ಇನ್ನಿಲ್ಲ; ಚಿರಂಜೀವಿ ಶಾಕ್!

ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ ಒಂದು ಅಪರೂಪದ ಅಧ್ಯಾಯ ಇಂದು ಮುಕ್ತಾಯಗೊಂಡಿದೆ. ತಾವೇ ಕಥೆ ಬರೆದು, ಚಿತ್ರಕಥೆ ಹೆಣೆದು, ಸಂಗೀತ ನೀಡಿ, ಆಕ್ಷನ್-ಕಟ್ ಹೇಳಿ, ಕೊನೆಗೆ ತೆರೆಯ ಮೇಲೆ ನಾಯಕನಾಗಿ ಮಿಂಚುತ್ತಿದ್ದ 'ಆಲ್‌ರೌಂಡರ್' ಕೆ. ಭಾಗ್ಯರಾಜ್ (73) ಅವರು ಶನಿವಾರ (27 ಜೂನ್ 2026) ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಸಂಭವಿಸಿದ ಅವರ ಅಕಾಲಿಕ ನಿಧನವು ತಮಿಳು ಚಿತ್ರರಂಗವನ್ನಷ್ಟೇ ಅಲ್ಲ, ಇಡೀ ಭಾರತೀಯ ಸಿನೆಮಾ ಲೋಕವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಭಾಗ್ಯರಾಜ್ ನಿಧನಕ್ಕೆ ಭಾರತೀಯ ಚಿತ್ರರಂಗದ ಬಹಳಷ್ಟು ಕಲಾವಿದರು, ತಂತ್ರಜ್ಞರು ಹಾಗೂ ಸಿನಿಪ್ರೇಮಿಗಳು ಶ್ರದ್ದಾಂಜಲಿ ಸಲ್ಲಿಸುತ್ತಿದ್ದಾರೆ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ನಟಿ ಸುಹಾಸಿನಿ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾ (X)ನಲ್ಲಿ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಚಿರಂಜೀವಿ ಭಾವನಾತ್ಮಕ ಸಂದೇಶ ಹೀಗಿದೆ:

"ಕೇವಲ ಮೊನ್ನೆಯಷ್ಟೇ ನಾವು ಗೋವಾದಲ್ಲಿ ನಡೆದ ಕುಶ್ (ನಟಿ ಖುಷ್ಬೂ ಮಗಳ ಮದುವೆ) ಅವರ ವಿವಾಹ ಸಮಾರಂಭದಲ್ಲಿ ಒಂದಾಗಿದ್ದೆವು. ಪರಸ್ಪರ ನಗು, ತಮಾಷೆ ಹಾಗೂ ಫೋಟೋಗಳೊಂದಿಗೆ ಆ ಸುಂದರ ಕ್ಷಣಗಳನ್ನು ಕಳೆದಿದ್ದೆವು. ಭಾಗ್ಯರಾಜ್ ಗಾರು ಆಗ ತುಂಬಾ ಉಲ್ಲಾಸ ಮತ್ತು ಸಂತೋಷದಿಂದ ತುಂಬಿದ್ದರು. ಇಂದು ಬೆಳ್ಳಂಬೆಳಿಗ್ಗೆ ಅವರು ನಿಧನರಾದ ಸುದ್ದಿಯನ್ನು ಕೇಳಿ ಎಚ್ಚರಗೊಳ್ಳುವುದು ಅಕ್ಷರಶಃ ನಂಬಲಸಾಧ್ಯವಾಗಿದೆ.

ಒಬ್ಬ ಅಪ್ರತಿಮ ಚಿತ್ರನಿರ್ದೇಶಕ, ಅತ್ಯದ್ಭುತ ಚಿತ್ರಕಥೆಗಾರ ಹಾಗೂ ಶ್ರೇಷ್ಠ ನಟರಾಗಿದ್ದ ಅವರ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ.

ಪೂರ್ಣಿಮಾ ಜಿ, ಶಂತನು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಾಳದ ಸಂತಾಪಗಳು. ಈ ತುಂಬಿಬಾರದ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಚಿರಶಾಂತಿ ಸಿಗಲಿ ನನ್ನ ಆತ್ಮೀಯ ಮಿತ್ರನೇ. ನಿಮ್ಮನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ."

ನಟಿ ಸುಹಾಸಿನಿ ಕೂಡ ಭಾಗ್ಯರಾಜ್ ನಿಧನಕ್ಕೆ ಅಚ್ಚರಿ ಹಾಗೂ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಗುರು-ಶಿಷ್ಯರ ವಿಧಿಯಾಟ!

ನೋವಿನ ಸಂಗತಿ ಏನೆಂದರೆ, ಭಾಗ್ಯರಾಜ್ ಅವರ ಗುರುಗಳು ಮತ್ತು ತಮಿಳು ಚಿತ್ರರಂಗದ ಭೀಷ್ಮ ಎಂದೇ ಕರೆಯಲ್ಪಡುತ್ತಿದ್ದ ಕೆ. ಭಾರತಿರಾಜ ಅವರು ನಿಧನರಾದ ಕೇವಲ ಎರಡೇ ವಾರಗಳಲ್ಲಿ ಅವರ ನೆಚ್ಚಿನ ಶಿಷ್ಯ ಭಾಗ್ಯರಾಜ್ ಕೂಡ ಇಹಲೋಕ ತ್ಯಜಿಸಿದ್ದಾರೆ. ಗುರು-ಶಿಷ್ಯರ ಈ ಅಗಲಿಕೆ ಸಿನಿಪ್ರೇಮಿಗಳ ಪಾಲಿಗೆ ಬರಸಿಡಿಲಾಗಿದೆ. ಭಾಗ್ಯರಾಜ್ ಅವರು ಪತ್ನಿ ಪೂರ್ಣಿಮಾ, ಪುತ್ರ ಶಂತನು ಮತ್ತು ಪುತ್ರಿ ಶರಣ್ಯ ಅವರನ್ನು ಅಗಲಿದ್ದಾರೆ.

ಶೂನ್ಯದಿಂದ ಶಿಖರದವರೆಗೆ: ಕತ್ತೆ ಹಿಡಿಯುವ ಕೆಲಸದಿಂದ ನಾಯಕನ ಪಟ್ಟಕ್ಕೆ!

ಭಾಗ್ಯರಾಜ್ ಅವರ ಸಿನೆಮಾ ವೃತ್ತಿಜೀವನ ಯಾವುದೇ ರೋಚಕ ಸಿನಿಮಾಕಥೆಗಿಂತ ಕಡಿಮೆಯಿಲ್ಲ. 1977 ರಲ್ಲಿ '16 ವಯಸ್ಸಿನಿಲೆ' ಚಿತ್ರದಲ್ಲಿ ಕತ್ತೆಯನ್ನು ಹಿಡಿದುಕೊಂಡು ಹೋಗುವ ಸಣ್ಣ ಕೆಲಸದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಯುವಕ, ಕೇವಲ ಎರಡೇ ವರ್ಷಗಳಲ್ಲಿ ಸ್ವತಂತ್ರ ನಿರ್ದೇಶಕನಾಗಿ ಹೊರಹೊಮ್ಮಿದ್ದು ಅವರ ಪ್ರತಿಭೆ ಹಾಗೂ ಕೆಲಸದ ಬದ್ಧತೆಗೆ ಸಾಕ್ಷಿ. 80ರ ದಶಕದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ದೈತ್ಯ ನಟರ ಅಲೆ ಇದ್ದಾಗಲೂ, ಕೇವಲ ತಮ್ಮ ವಿಶಿಷ್ಟ ಶೈಲಿಯ ಚಿತ್ರಕಥೆ ಮತ್ತು ಹಾಸ್ಯದ ಮೂಲಕ ಭಾಗ್ಯರಾಜ್ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿದ್ದರು.

ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೆ ಭಾಗ್ಯರಾಜ್ ಹವಾ!

ಭಾಗ್ಯರಾಜ್ 'ಮುಂಧನೈ ಮುಡಿಚು' ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಬರೀ ದಕ್ಷಿಣಕ್ಕಷ್ಟೇ ಸೀಮಿತವಾಗದ ಅವರ ಪ್ರತಿಭೆ ಬಾಲಿವುಡ್‌ಗೂ ಹರಡಿತ್ತು. ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ದ್ವಿಪಾತ್ರದ ಹಿಟ್ ಸಿನಿಮಾ 'ಆಖ್ರೀ ರಾಸ್ತಾ' ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಇದೇ ಭಾಗ್ಯರಾಜ್. ಕನ್ನಡದ ಮೇಲೂ ಪ್ರೀತಿ ಹೊಂದಿದ್ದ ಅವರು, 2015 ರಲ್ಲಿ 'ರೆಡ್ ಅಲರ್ಟ್' ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದರು. 'ನಾನು ನನ್ ಹೆಂಡ್ತಿ' ಸೇರಿದಂತೆ ಭಾಗ್ಯರಾಜ್ ನಿರ್ದೇಶನದ ಹಲವು ಸಿನಿಮಾಗಳನ್ನು ಕನ್ನಡದ ನಟ-ನಿರ್ದೇಶಕ ರವಿಚಂದ್ರನ್ ರೀಮೇಕ್ ಮಾಡಿದ್ದಾರೆ.

ಎಂಜಿಆರ್ ಅವರ ಕಲಾತ್ಮಕ ಉತ್ತರಾಧಿಕಾರಿ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಮಹಾನ್ ನಟ ಎಂ.ಜಿ. ರಾಮಚಂದ್ರನ್ ಅವರು ಭಾಗ್ಯರಾಜ್ ಅವರ ಪ್ರತಿಭೆಯನ್ನು ಬಹುವಾಗಿ ಮೆಚ್ಚಿದ್ದರು. ಜೊತೆಗೆ, ಸಾರ್ವಜನಿಕ ವೇದಿಕೆಯೊಂದರಲ್ಲಿ ಭಾಗ್ಯರಾಜ್ ಅವರನ್ನು ತಮ್ಮ "ರಾಜಕೀಯ ಮತ್ತು ಕಲಾತ್ಮಕ ಉತ್ತರಾಧಿಕಾರಿ" ಎಂದು ಕರೆದಿದ್ದರು.

ನನಸಾಗದ ಸುವರ್ಣ ಮಹೋತ್ಸವದ ಕನಸುಗಳು

2026 ರಲ್ಲಿ ಅವರ ಚಿತ್ರರಂಗದ 50 ವರ್ಷಗಳ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ವೇದಿಕೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸಮ್ಮುಖದಲ್ಲೇ ಭಾಗ್ಯರಾಜ್ ಅವರು ಹೊಸ ವೆಬ್ ಸರಣಿ ಮತ್ತು ಸಿನಿಮಾವನ್ನು ನಿರ್ದೇಶಿಸುವ ಆಸೆ ವ್ಯಕ್ತಪಡಿಸಿದ್ದರು. ಆದರೆ, ಅವರ ಆ ಕನಸುಗಳು ನನಸಾಗುವ ಮೊದಲೇ ಅವರು ಅಸ್ತಂಗತರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ba Ma Harish Son Death: ನಿಶ್ಚಿತಾರ್ಥ ಮಾಡ್ಕೊಂಡಿದ್ದ ಬಾ ಮಾ ಹರೀಶ್‌ ಪುತ್ರ 28ರ ಉಲ್ಲಾಸ್‌ ಗೌಡ ನಿಧನ
SS Rajamouli Varanasi Secret: 'ವಾರಣಾಸಿ' ಸಿನಿಮಾದ ಹೊಸ ಅಪ್‌ಡೇಟ್ ಕೊಟ್ಟ ರಾಜಮೌಳಿ; ಹಲವು ಸೀಕ್ರೆಟ್‌ ಬಹಿರಂಗ!