
ಬೆಂಗಳೂರು (ಸೆ. 19): ಎರಡು ಸಾವಿರ ಹಾಗೂ ಐನೂರು ರುಪಾಯಿ ನೋಟು ನಿಷೇಧಕ್ಕೆ ಒಳಗಾದಾಗ ನಡೆದ ಬೆಳವಣಿಗಗಳು ಒಂದೆರಡಲ್ಲ. ಆ ಪೈಕಿ ಎರಡು ಸಾವಿರದ ನೋಟಿನಲ್ಲಿ ಚಿಪ್ಪು ಎನ್ನುವುದು ದೊಡ್ಡ ನ್ಯೂಸ್. ಕೊನೆಗೂ
ಅದೊಂದು ಕಾಮಿಡಿಯಾಗಿದ್ದು ಎಲ್ಲರಿಗೂ ಗೊತ್ತಿದೆ.
ಆದರೆ, ಎರಡು ಸಾವಿರದಲ್ಲಿ ಚಿಪ್ಪು ಸಿಗಲಿಲ್ಲ ನಿಜ, ಒಂದು ಸಿನಿಮಾದ ಕತೆಯಂತೂ ಸಿಕ್ಕಿದೆ! ಆ ಕಥೆ ಆಧರಿಸಿದ ಚಿತ್ರವೇ ಎಸ್‌ಡಿ ಅರವಿಂದ್ ನಿರ್ದೇಶನದ ‘ಮಟಾಶ್’. ಈ ಚಿತ್ರದ ಕತೆಗೂ 2000 ಸಾವಿರ ರೂಪಾಯಿ ನೋಟಿನಲ್ಲಿ ಮೈಕ್ರೋ ಚಿಪ್ಪು ಇದೆ ಎಂದು ಆಗ ಹಬ್ಬಿದ ವದಂತಿಗೂ ನೇರವಾದ ಸಂಬಂಧವಿದೆ. ಈ ಚಿತ್ರದ ಕತೆ ಹುಟ್ಟಿಕೊಂಡಿದ್ದೇ ಆ ವದಂತಿಗಳಿಂದ. ಹಾಗೆ ನೋಡಿದರೆ ಇಡೀ ಸಿನಿಮಾ ನೋಟು ಅಮಾನ್ಯೀಕರಣದ ಸುತ್ತ ಹೆಣೆದಿರಲಾಗಿದೆ.
ಒಂದು ಸಿನಿಮಾದ ಕತೆ ಹುಟ್ಟಿಕೊಳ್ಳುವುದೇ ನಿಜ ಜೀವನದ ಘಟನೆಗಳಿಂದ ಅಥವಾ ಅನುಭವದ ಮೇರೆಗೆ. ಅದೇ ರೀತಿ ‘ಮಟಾಶ್’ ಕಥೆ ಹುಟ್ಟಿಕೊಂಡಿದ್ದು ಸಾಮಾಜಿಕ ಜಾಲತಾಣದಿಂದ. ಇದನ್ನು ಖುದ್ದು ಅರವಿಂದ್ ಅವರೇ ಹೇಳುತ್ತಾರೆ. ‘500, 1000 ನೋಟ್ ಬ್ಯಾನ್ ಆಗಿದ್ದ ಸಂದರ್ಭದಲ್ಲಿ ಹೊಸ ನೋಟು ಚಾಲ್ತಿಗೆ ಬಂದಿದ್ದವು. ಆ ಒಂದು ತಿಂಗಳಿನ ಅಂತರದಲ್ಲಿ ಅದೆಷ್ಟೋ ಊಹಾಪೋಹಗಳಿಗೆ ಸಾಮಾಜಿಕ ಜಾಲತಾಣ ಸಾಕ್ಷಿಯಾಗಿತ್ತು.
ಯಾಕೆಂದರೆ ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಸುಳ್ಳು ಸುದ್ದಿ ಹರಿದಾಡತೊಡಗಿದವು. ಅಂಥವುಗಳಲ್ಲೇ 2000 ರೂಪಾಯಿ ನೋಟಿನಲ್ಲಿ ಚಿಪ್ ಇದೆ ಎಂಬ ಸುದ್ದಿ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಸಾಕಷ್ಟು ಕಡೆ ಹರಿದಾಡಿತ್ತು. ಜನ ಇದನ್ನು ನಿಜ ಅಂತಲೇ ನಂಬಿದ್ದರು. ಯಾಕೆಂದರೆ ಸೋಷಿಯಲ್ ಮೀಡಿಯಾ ಬಹುತೇಕ ಇಂಥ ಅಂತೆ-ಕಂತೆಗಳಿಗೇ ವೇದಿಕೆಯಾಗಿದೆ.
ಇಂಥ ಅನೇಕ ವಿಷಯಗಳನ್ನೇ ಮುಂದಿಟ್ಟುಕೊಂಡು ಒಂದು ಸಸ್ಪೆನ್ಸ್, ಥ್ರಿಲ್ಲರ್ ನೆರಳಿನಲ್ಲಿ ಹಾಸ್ಯಭರಿತವಾಗಿ ಈ ‘ಮಟಾಶ್’ ಕತೆ ಮಾಡಲಾಗಿದೆ. ಜತೆಗೆ ಮೈಕ್ರೋ ಚಿಪ್ಪಿನ ಹಿಂದಿನ ರಾಜಕೀಯವನ್ನೂ ಸಹ ಇಲ್ಲಿ ಹೇಳುತ್ತಿದ್ದೇನೆ’ ಎನ್ನುತ್ತಾರೆ ಅರವಿಂದ್. ಅಮೆರಿಕದ ಸತೀಶ್ ಪಾಠಕ್, ಗಿರೀಶ್ ಪಟೇಲ್, ಚಂದ್ರಶೇಖರ್ ಹಾಗೂ ಅರವಿಂದ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.