
ಮುಂಬೈ(ಜ.19): ಹಿಂದಿ ಸೀಜನ್ 10- ಬಿಗ್ ಬಾಸ್ ಮನೆಯ ಎಮೋಷನಲ್ ಹುಡುಗಿ ಎಂದೇ ಪ್ರಖ್ಯಾತಿ ಗಳಿಸಿರುವ ಮೊನಾಲಿಸಾ ನಿನ್ನೆ ಬಿಗ್ ಮನೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತನ್ನ ಬಹುಕಾಲದ ಗೆಳೆಯ ಬೋಜ್'ಪುರಿ ಸಿನಿಮಾ ಇಂಡಸ್ಟ್ರಿಯ ಪ್ರಖ್ಯಾತ ನಟ ವಿಕ್ರಮ್ ಸಿಂಗ್ ರಜಪೂತ್'ರೊಂದಿಗೆ ಈ ಸ್ಪರ್ಧಿ ಸಪ್ತಪದಿ ತುಳಿದಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಕೇವಲ ಸೆಲೆಬ್ರಿಟಿಗಳಿಗಷ್ಟೇ ಅವಕಾಶ ನೀಡದೆ ಇವರಿಗೆ ಸ್ಪರ್ಧೆ ನೀಡಲು ಸಾಮಾನ್ಯ ಜನರಿಗೂ ಅವಕಾಶ ನೀಡಿದ್ದ ಕಾರಣದಿಂದಾಗಿ ಈ ಬಾರಿಯ ಸೀಜನ್ ಬಹಳ ಮಹತ್ವ ಪಡೆದಿತ್ತು. ಆರಂಭದಲ್ಲಿ ಇವರ ನಡುವೆ ಹೊಂದಾಣಿಕೆ ಇಲ್ಲದೆ ಗುಂಪುಗಾರಿಕೆ ನಡೆದಿತ್ತಾದರೂ. ದಿನಗಳೆದಂತೆ ಈ ಕಂದಕ ಮುಚ್ಚಿ ಹೋಗಿತ್ತು. ಅಷ್ಟರಲ್ಲೇ ಲೋಪಾ ಹಾಗೂ ಬಾನಿ ಇವರಿಬ್ಬರ ನಡುವಿನ ಜಗಳದಿಂದಾಗಿ ಮತ್ತೆ ಬಿಗ್ ಮನೆಯಲ್ಲಿ ಮನಸ್ತಾಪ ಉಂಟಾಗಿತ್ತು.
ಆದರೆ ನಿನ್ನೆ ಬಿಗ್ ಮನೆಯಲ್ಲಿ ನಡೆದ ಮೊನಾಲಿಸಾರ ಮದುವೆ ಈ ಎಲ್ಲಾ ಜಗಳಗಳಿಗೆ ಬ್ರೇಕ್ ನೀಡಿದೆ. ಕೆಲವೇ ದಿನಗಳ ಹಿಂದೆ ಮೊನಾಲಿಸಾರ ಗೆಳೆಯ(ಪ್ರಿಯತಮ) ವಿಕ್ರಮ್ ಸಿಂಗ್ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮೊನಾಲಿಸಾ ಹಾಗೂ ತನ್ನ ನಡುವಿನ ಪ್ರೀತಿ ವಿಚಾರವನ್ನು ಬಹಿರಂಗಪಡಸಿದ್ದರು. ಬಿಗ್ ಬಾಸ್ ನೀವಿಬ್ಬರೂ ಮುಂದೆ ಮದುವೆಯಾಗುತ್ತೀರಾ? ಎಂದು ಕೇಳಿದಾಗ ಇಬ್ಬರೂ ಒಪ್ಪಿಗೆ ಸೂಚಿಸಿದ್ದರು. ಬಳಿಕ ಆ ವಿಚಾರ ಅಲ್ಲೇ ನಿಂತಿತ್ತು. ಮನೆಯ ಸ್ಪರ್ಧಿಗಳು ಮಾತ್ರವಲ್ಲದೇ ಖುದ್ದು ಮೊನಾಲಿಸಾ ಕೂಡಾ ಈ ಕುರಿತು ಹೆಚ್ಚು ಗಮನ ನೀಡಿರಲಿಲ್ಲ.
ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಗ್ ಬಾಸ್ ನಿನ್ನೆ ಮೊನಾಲಿಸಾರಿಗೆ ಅವರ ಜೀವನದ ಬಹುದೊಡ್ಡ ಖುಷಿಯನ್ನು ನೀಡಿದ್ದಾರೆ. ತನ್ನ ಮದುವೆ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತದೆ ಎಂಬ ಸಣ್ಣ ಕಲ್ಪನೆಯನ್ನೂ ಮಾಡಿರದ ಮೊನಾಲಿಸಾರ ಮದುವೆ ಅಪ್ಪಟ ದಂತ ಕಥೆಯಂತೆ ಬಿಗ್ ಮನೆಯಲ್ಲಿ ನಡೆದಿದೆ. ವಿಕ್ರಮ್, ಮೊನಾಲಿಸಾರ ಮದುವೆ ಸಕಲ ವಿಧಿ ವಿಧಾನಗಳೊಂದಿಗೆ ನಡೆದಿದೆ. ಈ ಮದುವೆಗೆ ಮೊನಾಲಿಸಾರ ತಾಯಿ ಹಾಗೂ ವಿಕ್ರಮ್'ರವರ ಅಕ್ಕ ಹಾಗೂ ಭಾವ ಆಗಮಿಸಿದ್ದರು.
ಮದುವೆ ವಿಧಿ ವಿಧಾನಗಳ ಬಳಿಕ ರಾತ್ರಿ ರಿಸೆಪ್ಷನ್ ಹಾಗೂ ಕೇಕ್ ಕಟ್ಟಿಂಗ್ ಕಾರ್ಯಕ್ರಮವೂ ಭರ್ಜರಿಯಾಗಿಯೇ ನಡೆಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭೋಜ್'ಪುರಿ ನಟ ರವಿ ಕಿಶನ್ ಬಂದು ಮನೋರಂಜನೆ ಈ ಖುಷಿಯನ್ನು ಇಮ್ಮಡಿಗೊಳಿಸಿದರು. ಬಿಗ್ ಮನೆಯ ಈ ರಿಯಲ್ ಮದುವೆಯಲ್ಲಿ ತಮ್ಮ ನಡುವಿನ ವೈಯುಕ್ತಿಕ ಮನಸ್ತಾಪ ಮರೆತು ಪ್ರತಿಯೊಬ್ಬ ಸ್ಪರ್ಧಿಯೂ ಮದುವೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರಿಂದ ಮನೆಯಲ್ಲಿ ಬದಲಾವಣೆ ಎದ್ದು ಕಾಣುತ್ತಿತ್ತು.
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಮೊದಲು ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಿದ್ದ ಸ್ಪರ್ಧಿಗಳು ಪರಸ್ಪರ ಆಕರ್ಷಣರಗೊಳಗಾಗಿ ಪ್ರೀತಿ ತೋಡಿಕೊಳ್ಳುತ್ತಿದ್ದರು. ಆದರೆ ಹೊರ ಬಂದ ಬಳಿಕ ನಾನ್ಯಾರೋ.. ನೀನ್ಯಾರೋ ಎಂಬಂತಿರುತ್ತಿದ್ದರು. ಬ್ರೇಕ್ ಅಪ್'ನಿಂದ ಪ್ರಖ್ಯಾತಿ ಪಡೆದಿದ್ದ ಬಿಗ್ ಬಾಸ್ ಶೋ ಪ್ರೇಮಿಗಳಿಗೆ ಬಿಗ್ ಮನೆಯಲ್ಲೇ ರಿಯಲ್ ಮದುವೆ ಮಾಡಿಸಿ ವೀಕ್ಷಕರ ಮನ ಗೆದ್ದಿರುವುದರಲ್ಲಿ ಸಂಶಯವಿಲ್ಲ..
ವೀಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ https://www.voot.com/shows/bigg-boss-s10/10/450656/day-94-mona-and-vikrant-tie-the-knot-/472609
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.