ಹೆಣ್ಣನ್ನು ಸೆಳೆಯಲು ಹಣ್ಣುಗಳ ಅಲಂಕಾರ! ನೆಲ ಕ್ಲೀನ್‌ ಮಾಡಿ ಅದ್ಭುತ ನೃತ್ಯ- ಅಬ್ಬಾ ಇದೆಂಥ ವಿಸ್ಮಯ: ವಿಡಿಯೋ ವೈರಲ್

By Suchethana D  |  First Published Nov 7, 2024, 8:20 PM IST

ಹೆಣ್ಣು ಹಕ್ಕಿಯನ್ನು ಒಲಿಸಿಕೊಳ್ಳಲು ಜಾಗ ಕ್ಲೀನ್‌ ಮಾಡತ್ತೆ, ಹಣ್ಣುಗಳ ಅಲಂಕಾರ ಮಾಡತ್ತದೆ, ಅತ್ಯದ್ಭುತವಾಗಿ ನರ್ತಿಸತ್ತೆ! ಅಬ್ಬಾ ಈ ಹಕ್ಕಿಯ ವಿಡಿಯೋ ನೋಡಿ...
 


ಪ್ರಕೃತಿಯಲ್ಲಿ ಹುದುಗಿರುವ ವಿಸ್ಮಯಗಳು ಅವೆಷ್ಟೋ. ಮನುಷ್ಯನ ತಿಳಿವಳಿಕೆಗೂ ನಿಲುಕದ ಅದೆಷ್ಟೋ ಕುತೂಹಲಗಳು ಈ ಪ್ರಕೃತಿಯಲ್ಲಿ ಅಡಗಿವೆ. ಅವುಗಳಲ್ಲಿ ಒಂದು ಪಕ್ಷಿ ಪ್ರಪಂಚ. ಕಂಡು ಕೇಳಿರದ ಚಿತ್ರ-ವಿಚಿತ್ರ ಪಕ್ಷಿಗಳು ಈ ಭೂಮಿಯ ಮೇಲಿವೆ. ಪ್ರತಿಯೊಂದು ಪಕ್ಷಿಗಳ ಬದುಕು ಕೂಡ ಒಂದೊಂದು ಕುತೂಹಲದಿಂದ ಕೂಡಿದೆ. ಅವುಗಳ ಜೀವನ ಕ್ರಮ ಯಾರ ಊಹೆಗೂ ನಿಲುಕದ್ದು. ಅಂಥದ್ದಲ್ಲಿ ಒಂದು ಅತ್ಯದ್ಭುತವಾದದ್ದು ಈ ಹಕ್ಕಿ. 

ಮನುಷ್ಯದಲ್ಲಿ ಸೌಂದರ್ಯಕ್ಕೆ ಇನ್ನೊಂದು ಹೆಸರು ಹೆಣ್ಣಾದರೆ, ಪ್ರಾಣಿ-ಪಕ್ಷಿಗಳಲ್ಲಿ ಸೌಂದರ್ಯದ ಹೆಸರೇ ಗಂಡು. ಸುಂದರವಾಗಿ ನಲಿಯುವ ನವಿಲು ಗಂಡು, ಕೇಸರಿಯನ್ನು ಕತ್ತಿನ ಸುತ್ತ ಸುತ್ತಿಕೊಂಡು ಸುಂದರವಾಗಿ ಕಾಣುವ ಸಿಂಹ ಕೂಡ ಗಂಡು... ಹೀಗೆ ಸುಂದರದ ವಿಷಯ ಬಂದಾಗ ಪಶು-ಪಕ್ಷಿಗಳಲ್ಲಿ ಗಂಡಿನದ್ದೇ ಮೇಲುಗೈ. ಅಂಥದ್ದೇ ಒಂದು ವಿಸ್ಮಯ ಇಲ್ಲಿದೆ. ಈ ಹಕ್ಕಿಯ ಹೆಸರು ಏನು ಎನ್ನುವುದು ತಿಳಿದಿಲ್ಲ. ‌ಆದರೆ ಇದರ ವಿಡಿಯೋ ಮಾತ್ರ ಮೂಕ ವಿಸ್ಮಿತರನ್ನಾಗಿ ಮಾಡಿಸದೇ ಇರಲಾರದು.

Tap to resize

Latest Videos

undefined

ಹಾವಿನಂತೆ ನೀರಲ್ಲಿ ಚಲಿಸುವ ಬೇರಿದು: ವಿಜ್ಞಾನಕ್ಕೇ ಸವಾಲೆಸೆಯುವ ಗರುಡ ಸಂಜೀವಿನಿಯ ಕುತೂಹಲ ಇಲ್ಲಿದೆ...

ಇದು ಗಂಡು ಹಕ್ಕಿ. ಹೆಣ್ಣು ಹಕ್ಕಿಯನ್ನು ಸೆಳೆಯಲು ಮೊದಲು ತಾನಿರುವ ಸ್ಥಳವನ್ನೆಲ್ಲಾ ಶುಚಿಗೊಳಿಸುತ್ತದೆ. ಹೆಣ್ಣನ್ನು ಸೆಳೆದ ಮೇಲೆ ಮಧುಮಂಚ ರೆಡಿ ಮಾಡಬೇಕಲ್ಲಾ, ಅದಕ್ಕಾಗಿ ಹಣ್ಣುಗಳಿಂದ ಅಲಂಕರಿಸುತ್ತದೆ. ಬಳಿಕ ಅಲ್ಲಿ ಬಿದ್ದ ಎಲೆ, ಕಸ-ಕಡ್ಡಿಗಳನ್ನು ತೆಗೆದು ಹಾಕುತ್ತದೆ. ಇವೆಲ್ಲಾ ಮಾಡುವುದು ನೃತ್ಯ ಮಾಡಲು. ನೃತ್ಯಕ್ಕೆ ವೇದಿಕೆಯನ್ನು ಸಿದ್ಧಗೊಳಿಸಿದ ಬಳಿಕ ತನ್ನ ರೆಕ್ಕೆ ಬಿಚ್ಚಿ ನೃತ್ಯ ಮಾಡುತ್ತದೆ.

ಅದ್ಯಾವ ಪರಿಯ ನೃತ್ಯ ಎಂದು ವರ್ಣಿಸಲು ಸಾಧ್ಯವೇ ಇಲ್ಲ. ಇದು ನಿಜವಾದ ಹಕ್ಕಿಯೋ ಅಥವಾ ಕೃತಕ ಬುದ್ಧಿಮತ್ತೆಯಿಂದ ರೂಪಿಸಲಾದ ಕಾಲ್ಪನಿಕ ಪಕ್ಷಿಯೋ ಎಂಬ ಸಂದೇಹವೂ ಅರೆಕ್ಷಣ ಉಂಟಾದರೆ ತಪ್ಪಾಗಲಿಕ್ಕಿಲ್ಲ. ಅಂಥ ವಿಸ್ಮಯ ಜೀವನ ಈ ಹಕ್ಕಿಯದ್ದು. ಇದನ್ನೆಲ್ಲಾ ಅಲ್ಲಿಯೇ ಮೇಲುಗಡೆ ಕುಳಿತ ಹೆಣ್ಣು ಹಕ್ಕಿ ನೋಡುತ್ತಿರುತ್ತದೆ. ಗಂಡು ಹಕ್ಕಿಯ ಹಾಡು, ನರ್ತನ ಎಲ್ಲವೂ ಇಷ್ಟವಾದರೆ ಆ ಹೆಣ್ಣು ಹಕ್ಕಿ ಮೆಲ್ಲನೆ ಈತನನ್ನು ಸೇರಿಸಿಕೊಳ್ಳಲು ಮರದಿಂದ ಕೆಳಕ್ಕೆ ಇಳಿದು ಬರುತ್ತದೆ. ಗಂಡು ಹಕ್ಕಿ ಶುಚಿಗೊಳಿಸಿದ್ದು, ವೇದಿಕೆ ಸಿದ್ಧಗೊಳಿಸಿದ್ದು ಹಾಗೂ ಅದರ ನೃತ್ಯವೆಲ್ಲಾ ಇಷ್ಟವಾದ ಮೇಲಷ್ಟೇ ಹೆಣ್ಣು ಹಕ್ಕಿ ಬಂದು ಗಂಡನ್ನು ಕೂಡಿಕೊಳ್ಳುತ್ತದೆ. ಅಲ್ಲಿಗೆ ಗಂಡು ಹಕ್ಕಿಯ ಶ್ರಮ ಸಾರ್ಥಕವಾಗುತ್ತದೆ. ಈ ಕೆಳಗಿರುವ ವಿಡಿಯೋ ನೋಡಿದರೆ ಪಕ್ಷಿ ಪ್ರಪಂಚದ ಇನ್ನೊಂದು ಲೋಕ ಅನಾವರಣಗೊಳ್ಳುವುದನ್ನು ನೋಡಬಹುದು.

click me!