
ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದ ನಟಿ ಊರ್ವಶಿ, ಇದೀಗ ಪೋಷಕ ಪಾತ್ರಗಳ ಮೂಲಕವೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ನಾಯಕ-ನಾಯಕಿಯರಿಗೆ ತಾಯಿ, ಅತ್ತೆ ಸೇರಿದಂತೆ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಿರಿಯ ನಟಿ, ತಮ್ಮ ಸಹಜ ಅಭಿನಯದ ಮೂಲಕ ಮತ್ತೊಮ್ಮೆ ಗಮನ ಸೆಳೆಯುತ್ತಿದ್ದಾರೆ.
ಇತ್ತೀಚೆಗೆ ತಮ್ಮ ಹೊಸ ಸಿನಿಮಾ 'ಆಶಾ' ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದ ಊರ್ವಶಿ, ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅಕಾಲಿಕವಾಗಿ ನಿಧನರಾದ ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
'ಸಿಲ್ಕ್ ಸ್ಮಿತಾ ನನಗೆ ತುಂಬಾ ಸಹಾಯ ಮಾಡಿದ್ದರು..'
ಸಿಲ್ಕ್ ಸ್ಮಿತಾ ಅವರೊಂದಿಗಿನ ತಮ್ಮ ಆತ್ಮೀಯತೆಯನ್ನು ನೆನಪಿಸಿಕೊಂಡ ಊರ್ವಶಿ, ಅವರನ್ನು ತಾನು ಅಕ್ಕನಂತೆ ನೋಡುತ್ತಿದ್ದೆ ಎಂದು ಹೇಳಿದ್ದಾರೆ. ಸಿಲ್ಕ್ ಸ್ಮಿತಾ ನನಗೆ ತುಂಬಾ ಸಹಾಯ ಮಾಡಿದ್ದಾರೆ. ನಾನು ಅವರನ್ನು ಒಬ್ಬ ಅಕ್ಕನಂತೆ ನೋಡುತ್ತಿದ್ದೆ. ಆ ಸಮಯದಲ್ಲಿ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳನ್ನು ಮಾಡುತ್ತಿದ್ದ ನಟಿಯರನ್ನು ಸಮಾಜ ವಿಭಿನ್ನ ದೃಷ್ಟಿಯಿಂದ ನೋಡುತ್ತಿತ್ತು. ಬಹುಶಃ ಅದಕ್ಕಾಗಿಯೇ ಸ್ಮಿತಾ ಕೂಡ ಇತರರಿಂದ ದೂರವಿದ್ದು, ಒಂಟಿಯಾಗಿರಲು ಇಷ್ಟಪಡುತ್ತಿದ್ದರು. ಅವರು ಹೆಚ್ಚಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎಂದು ಊರ್ವಶಿ ಹೇಳಿದ್ದಾರೆ.
'ಸ್ಮಿತಾ ಅವರನ್ನು ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರು'
ಸಿಲ್ಕ್ ಸ್ಮಿತಾ ಅವರನ್ನು ಹಲವರು ವಿಭಿನ್ನ ದೃಷ್ಟಿಯಿಂದ ನೋಡುತ್ತಿದ್ದರು. ಆದರೆ ಅವರ ವ್ಯಕ್ತಿತ್ವ ಹಾಗೂ ಅಭಿರುಚಿ ತುಂಬಾ ವಿಶೇಷವಾಗಿತ್ತು ಎಂದು ಊರ್ವಶಿ ನೆನಪಿಸಿಕೊಂಡಿದ್ದಾರೆ. ಸ್ಮಿತಾ ಅವರ ಬಟ್ಟೆ ಧರಿಸುವ ಶೈಲಿ ನನಗೆ ತುಂಬಾ ಇಷ್ಟವಾಗುತ್ತಿತ್ತು. ಅವರಿಗಿದ್ದಷ್ಟು ಕಾಸ್ಟ್ಯೂಮ್ ಸೆನ್ಸ್ ಹೊಂದಿದ್ದ ಮತ್ತೊಬ್ಬರನ್ನು ನಾನು ನೋಡಿಲ್ಲ. ಬಣ್ಣಗಳ ಆಯ್ಕೆ, ಅಲಂಕಾರ ಹಾಗೂ ಡ್ರೆಸ್ಸಿಂಗ್ ವಿಚಾರದಲ್ಲಿ ಅವರು ಯಾವಾಗಲೂ ವಿಭಿನ್ನವಾಗಿ ಯೋಚಿಸುತ್ತಿದ್ದರು ಎಂದು ಹಿರಿಯ ನಟಿ ಹೇಳಿದ್ದಾರೆ.
ಅಂದಿನ ಕಾಲದಲ್ಲಿ ಗ್ಲಾಮರ್ ಹಾಗೂ ಸ್ಪೆಷಲ್ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿಯರು ಹೆಚ್ಚು ಮೇಕಪ್ ಮಾಡಿಕೊಳ್ಳುತ್ತಿದ್ದರು. ಆದರೆ ಸಿಲ್ಕ್ ಸ್ಮಿತಾ ಯಾವುದೇ ರೀತಿಯ ಉಡುಪಿನಲ್ಲೂ ಅಸಭ್ಯವಾಗಿ ಕಾಣಿಸುತ್ತಿರಲಿಲ್ಲ. ಯಾವುದೇ ಬಟ್ಟೆಯನ್ನಾದರೂ ತಮ್ಮದೇ ಆದ ಸ್ಟೈಲ್‌ನಲ್ಲಿ ಧರಿಸುವ ಸಾಮರ್ಥ್ಯ ಅವರಿಗಿತ್ತು ಎಂದು ಊರ್ವಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ನಿನಗಾಗಿ ನಾನೇ ಕಾಸ್ಟ್ಯೂಮ್ ಡಿಸೈನ್ ಮಾಡ್ತೀನಿ ಅಂತಿದ್ದರು..'
ಸಿಲ್ಕ್ ಸ್ಮಿತಾ ಅವರ ಒಂದು ಆಸೆಯನ್ನೂ ಊರ್ವಶಿ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಒಂದು ದಿನ ನನ್ನ ಕಾಸ್ಟ್ಯೂಮ್ ನಾನೇ ಡಿಸೈನ್ ಮಾಡಬೇಕು ಎಂಬುದು ಸ್ಮಿತಾ ಅವರ ದೊಡ್ಡ ಆಸೆಯಾಗಿತ್ತು. 'ನಾನು ಒಂದು ಸಿನಿಮಾಗಾಗಿ ನಿನಗೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಕೊಡುತ್ತೇನೆ. ಎಷ್ಟು ಮಜವಾಗಿರುತ್ತೆ ಅಲ್ವಾ ಊರ್ವಶಿ' ಎಂದು ಅವರು ಹೇಳುತ್ತಿದ್ದರು. ಅವರು ಏನೇ ಕೊಟ್ಟರೂ ನಾನು ಸಂತೋಷದಿಂದ ತೆಗೆದುಕೊಳ್ಳುತ್ತಿದ್ದೆ ಎಂದು ಊರ್ವಶಿ ಭಾವುಕರಾಗಿ ಹೇಳಿದ್ದಾರೆ. ಆದರೆ ಸಿಲ್ಕ್ ಸ್ಮಿತಾ ಅವರ ಆ ಆಸೆ ಕೊನೆಯವರೆಗೂ ಈಡೇರಲಿಲ್ಲ ಎಂಬ ಬೇಸರವೂ ಊರ್ವಶಿ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.
ಅದು ನನ್ನ ಪಾಲಿಗೆ ಕೊನೆಯವರೆಗೂ ಈಡೇರದ ಒಂದು ಆಸೆಯಾಗಿಯೇ ಉಳಿಯಿತು. ಆ ಸಮಯದಲ್ಲಿ ನನಗೆ ಪ್ರತ್ಯೇಕ ಕಾಸ್ಟ್ಯೂಮ್ ಡಿಸೈನರ್ ಇದ್ದರು. ಅಲ್ಲದೆ ಆಗ ಕಾಸ್ಟ್ಯೂಮ್ ಡಿಸೈನಿಂಗ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳೂ ಇರಲಿಲ್ಲ. ಬಾಂಬೆಯಲ್ಲಿ ಮಾತ್ರ ಇಂತಹ ಕೆಲಸಗಳು ಬಹಳ ಅಪರೂಪವಾಗಿ ನಡೆಯುತ್ತಿದ್ದವು ಎಂದು ಊರ್ವಶಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಒಟ್ಟಿನಲ್ಲಿ, ತೆರೆಮೇಲೆ ಗ್ಲಾಮರ್ ಕ್ವೀನ್ ಆಗಿ ಮಿಂಚಿದ್ದ ಸಿಲ್ಕ್ ಸ್ಮಿತಾ ಅವರ ಹಿಂದೆ ಇದ್ದ ವಿಭಿನ್ನ ವ್ಯಕ್ತಿತ್ವ, ಕಾಸ್ಟ್ಯೂಮ್ ಮೇಲಿನ ಅವರ ಆಸಕ್ತಿ ಹಾಗೂ ಊರ್ವಶಿ ಅವರೊಂದಿಗಿನ ಆತ್ಮೀಯ ಬಾಂಧವ್ಯವನ್ನು ಈ ಸಂದರ್ಶನ ಮತ್ತೊಮ್ಮೆ ನೆನಪಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.