ಕೊಡಗು ಮರು ನಿರ್ಮಾಣಕ್ಕೆ ಇಲ್ಲಿದೆ ಮಾಸ್ಟರ್ ಐಡಿಯಾ!

By Web DeskFirst Published Aug 21, 2018, 1:51 PM IST
Highlights

ಕೊಡಗು ಜನರ ನೋವಿಗೆ ಸ್ಪಂದಿಸಲು, ಜರ್ಜರಿತಗೊಂಡಿರುವ ಕೊಡಗು ಪುನರ್‌ನಿರ್ಮಿಸಲು ರವಿಚಂದ್ರನ್ ಒಂದು ಐಡಿಯಾ ಹೇಳಿದ್ದಾರೆ. ಚಿತ್ರರಂಗ ಸೇರಿಕೊಂಡು ಒಂದು ಇಡೀ ಊರನ್ನು ಪುನರ್‌ನಿರ್ಮಿಸಿಕೊಡುವುದು ಅವರ ಯೋಚನೆ. ಅದೇ ಥರ ಬೇರೆ ಬೇರೆ ಸಂಸ್ಥೆಗಳು ಸೇರಿಕೊಂಡು ಒಂದೊಂದು ಊರನ್ನು ಪುನರ್‌ನಿರ್ಮಿಸುವ ಕೆಲಸ ಆಗಬೇಕಿದೆ ಎಂಬ ಆಲೋಚನೆಯನ್ನು ಅವರು ಹಂಚಿಕೊಂಡಿದ್ದಾರೆ. ಅವರ ಯೋಚನೆ ಮತ್ತು ಚಿತ್ರರಂಗದ ಗಣ್ಯರ ಪ್ರತಿಕ್ರಿಯೆ ಇಲ್ಲಿದೆ.

ಕೊಡಗು (ಆ. 21): ಪ್ರವಾಹದಿಂದ ಸರ್ವನಾಶವಾಗಿರುವ ಕೊಡಗನ್ನು ಮರು ನಿರ್ಮಾಣ ಮಾಡುವುದು ಒಂದು ಸವಾಲಿನ ಸಂಗತಿ. ಪ್ರವಾಹ ಸಂತ್ರಸ್ತರ ನೆರವಿಗೆ ಇಡೀ ದೇಶವೇ ಒಗ್ಗೂಡಿದೆ. ಮತ್ತೆ ಹೇಗೆ ಮರು ನಿರ್ಮಾಣ ಮಾಡುವುದು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ನಟ ರವಿಚಂದ್ರನ್ ಒಂದು ಐಡಿಯಾ ಕೊಟ್ಟಿದ್ದಾರೆ. 

ಮ್ಯಾಜಿಕಲ್ ಐಡಿಯಾ!

ಎಲ್ಲರಿಗೂ ನೋವಾಗಿದೆ. ಈಗ ನೋವಿನ ಕುರಿತು ಮಾತನಾಡಿ ಪ್ರಯೋಜನವಿಲ್ಲ. ಬದಲಾಗಿ ನಾವು ಕೊಡಗನ್ನು ಮತ್ತೆ ನಿರ್ಮಿಸುವ ಯೋಚನೆ ಮಾಡಬೇಕಾಗಿದೆ. ಟೆಂಪರರಿ ಪರಿಹಾರಕ್ಕಿಂತ, ಶಾಶ್ವತ ಪರಿಹಾರದ ಕುರಿತು ಚಿಂತಿಸಬೇಕು. ಒಬ್ಬೊಬ್ಬರೇ ಸೇರಿಕೊಂಡು ಸಹಾಯ ಮಾಡುವುದಕ್ಕೆ ಬದಲಾಗಿ ಚಿತ್ರರಂಗದವರೆಲ್ಲಾ ಸೇರಿಕೊಂಡು ಕೊಡಗಲ್ಲಿ ಇಡೀ ಒಂದು ಊರನ್ನು ನಿರ್ಮಿಸಿ ಕೊಡಬೇಕು. ಇದೇ ಥರ ಬೇರೆ ಬೇರೆ ಸಂಸ್ಥೆಗಳು ಒಟ್ಟು ಸೇರಿ ಒಂದೊಂದು ಊರನ್ನು ಪುನರ್ ನಿರ್ಮಿಸಿಕೊಟ್ಟರೆ ಕೊಡಗು ಸುಂದರವಾಗುತ್ತದೆ.’ - ಈ ಐಡಿಯಾ ನೀಡಿದ್ದು ರವಿಚಂದ್ರನ್.

ಉಪೇಂದ್ರ, ರವಿಚಂದ್ರನ್ ಅಭಿನಯದ ‘ರವಿಚಂದ್ರ’ ಚಿತ್ರದ ಮುಹೂರ್ತ ಸಂದರ್ಭದಲ್ಲಿ ಅವರು ಕೊಡಗು ನೆರೆ ಸಂತ್ರಸ್ತರ ಕುರಿತು ಮಾತನಾಡುತ್ತಾ ಕೊಡಗನ್ನು ಮತ್ತೆ ಕಟ್ಟುವ ಕೆಲಸದ ಕುರಿತು ಹೇಳಿದರು. ಅವರು ಹೇಳಿದ ಮಾತುಗಳು ಇವು.

-ರವಿಚಂದ್ರನ್ , ನಟ

ಐದಾರು ತಿಂಗಳು ಕೊಡಗಿನಲ್ಲಿರುತ್ತೇನೆ  

ರವಿಚಂದ್ರನ್ ಅವರ ಅಭಿಪ್ರಾಯ ಜೀವಪರ ಮತ್ತು ಜನಪರವಾಗಿದೆ. ವರ ಮಾತಿಗೆ ನನ್ನ ಸ್ವಾಗತ. ಪ್ರಕಾಶ್ ರಾಜ್ ಫೌಡೇಷನ್ ಹಾಗೂ ಜಸ್ಟ್ ಆಸ್ಕಿಂಗ್ ಫೌಡೇಷನ್‌ನಿಂದ ನಾನು ಮಾಡುವುದಕ್ಕೆ ಹೊರಟಿರುವುದು ಅದನ್ನೇ. ಈಗ ತಕ್ಷಣಕ್ಕೆ ನನ್ನ ಕಡೆಯಿಂದ 5 ಲಕ್ಷ ರು.ಗಳ ನೆರವು ನೀಡಿದ್ದೇನೆ. ಕಷ್ಟ ಅಂದಾಗ ಸಹಾಯಕ್ಕೆ ಎಲ್ಲರೂ ನಿಲ್ಲುತ್ತಾರೆ. ಈ ನೆರವು ಮುಂದುವರಿಯಬೇಕು. ಆ ನಿಟ್ಟಿನಲ್ಲಿ ಈಗಾಗಲೇ ನಾನು ಒಂದು ತಂಡ ಕಟ್ಟಿಕೊಂಡು ಪ್ರವಾಹಕ್ಕೆ ತುತ್ತಾದ ಪ್ರದೇಶಗಳಲ್ಲೇ ನಿಂತು ಐದಾರು ತಿಂಗಳು ಕೆಲಸ ಮಾಡುವುದ್ಕಕೆ ನಿರ್ಧರಿಸಿದ್ದೇನೆ.

ಶಾಲೆ ನಿರ್ಮಾಣ, ಮನೆ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ರವಿಚಂದ್ರನ್ ಮಾತಿನಂತೆ ಇದನ್ನೇ ಉದ್ಯಮ ಸೇರಿ ಒಂದು ಊರು ಕಟ್ಟುವ ಕೆಲಸ ಮಾಡೋಣ ಅಂದರೆ ಅದಕ್ಕಿಂತ ಒಳ್ಳೆಯ ಆಲೋಚನೆ ಮತ್ತೊಂದು ಇಲ್ಲ. ಅಂಥ ಕೆಲಸಗಳು ನಡೆದರೆ ಅದರ ಜತೆಗೆ ನಾನಿರುತ್ತೇನೆ.

-ಪ್ರಕಾಶ್ ರೈ, ನಟ

 

ಹಿರಿಯರು ನಿರ್ಧರಿಸಿದರೆ ನನ್ನ ಬೆಂಬಲ ಇದೆ

ರವಿಚಂದ್ರನ್ ಸರ್ ಹಿರಿಯರು. ಅವರು ಹೇಳಿದಂತೆ ಇಡೀ ಉದ್ಯಮ ಒಟ್ಟಾಗಿ ಸೇರಿ ಅಲ್ಲಿನ ನೊಂದ ಜನರಿಗೆ ಏನಾದ್ರೂ ಮಾಡೋಣ ಅಂತ ನಿರ್ಧಾರ ಕೈಗೊಂಡರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇದೆ. ಆದ್ರೆ ಈಗ ಅಲ್ಲಿನ ಜನರಿಗೆ ತಕ್ಷಣದ ಸಹಾಯಬೇಕಿದೆ. ಪ್ರತಿಯೊಬ್ಬರು ಈಗ ಸ್ವಪ್ರೇರಣೆಯಿಂದಲೇ ಅಲ್ಲಿನ ಜನರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ.

ನಾನೂ ಕೂಡ ಒಬ್ಬ ನಾಗರಿಕನಾಗಿ ನನ್ನ ಕೆಲಸ ಮಾಡಿದ್ದೇನೆ. ಅದು, ಎಷ್ಟು ಎನ್ನುವುದಕ್ಕಿಂತ ನೊಂದ ಜನರ ನೋವಿಗೆ ಸ್ಪಂದಿಸಬೇಕಿದೆ. ಆ ಕೆಲಸವನ್ನು ಇಡೀ ರಾಜ್ಯದ ಜನರು ಮಾಡುತ್ತಿದ್ದಾರೆ. ಅದು ಅಲ್ಲಿಗೀಗ ತುರ್ತಾಗಿ ಆಗಬೇಕಿರುವ ಕೆಲಸ. ಮುಂದೆ ಉದ್ಯಮದವರೆಲ್ಲ ಸೇರಿ ಅಲ್ಲಿನ ಜನರಿಗೆ ಶಾಶ್ವತವಾಗಿ ಇರುವಂತಹ ಏನಾದರೂ ಸಹಾಯ ಮಾಡೋಣ ಅಂತ ನಿರ್ಧಾರ ಕೈಗೊಂಡರೆ ಅದಕ್ಕೂ ನನ್ನ ಬೆಂಬಲ ಇರುತ್ತದೆ.

-ಪುನೀತ್ ರಾಜ್‌ಕುಮಾರ್  ನಟ

ಒಳ್ಳೆಯ ಕೆಲಸಕ್ಕೆ ನಾನು ಯಾವಾಗಲೂ ರೆಡಿ

ಕೊಡಗಿನ ಪರಿಸ್ಥಿತಿ ಮನ ಕಲುಕುವಂತೆ ಮಾಡಿದೆ. ಮಳೆಯ ಪ್ರವಾಹದಲ್ಲಿ ಮನೆ -ಮಠ ಕಳೆದುಕೊಂಡು ನಿರಾಶ್ರಿತದ ಜನರಿಗೆ ನಾವೆಲ್ಲ ಸಹಾಯದ ಹಸ್ತ ಚಾಚಬೇಕಿದೆ. ಈ ಹಿನ್ನೆಲೆಯಲ್ಲಿ ಹಿರಿಯರಾದ ರವಿಚಂದ್ರನ್ ಸರ್, ಹೇಳಿರುವ
ಸಲಹೆಗೆ ನಮ್ಮೆಲ್ಲರ ಸಮ್ಮತಿ ಇದ್ದೇ ಇದೆ. ಆ ನೊಂದ ಜನರಿಗೆ ಇಡೀ ಚಿತ್ರೋದ್ಯಮ ಸೇರಿ ಊರು ಕಟ್ಟೋಣ ಅಥವಾ ಇನ್ನಾವುದರ ಮೂಲಕವೋ ಅವರ ಬದುಕಿಗೆ ನೆರವಾಗೋಣ ಅಂದಾಗ ಕೈ ಜೋಡಿಸುವುದು ನನ್ನ ಧರ್ಮ. ಒಳ್ಳೆಯ ಕೆಲಸಕ್ಕೆ ನಾನು ಯಾವಾಗಲೂ ಸಿದ್ಧ. 

-ಸುದೀಪ್ , ನಟ

 

ರವಿಚಂದ್ರನ್ ಸರ್ ಆಲೋಚನೆ ಕಾರ್ಯಗತಗೊಳಿಸಬೇಕು

ನಾವೆಲ್ಲ ನೆಮ್ಮದಿಗಾಗಿ ಒಂದಿಷ್ಟು ದಿನ ಕೂರ್ಗ್‌ಗೆ ಹೋಗಿ ರಿಲ್ಯಾಕ್ಸ್ ಆಗಿ ಬರುತ್ತಿದ್ವಿ. ನಮ್ಮ ಎಲ್ಲಾ ಒತ್ತಡಗಳನ್ನು ಮರೆಯಾಗಿಸುತ್ತಿದ್ದವು. ಅದೇ ಊರು ಈ ಆಗ ನೆಮ್ಮದಿ ಕಳೆದುಕೊಂಡಿದೆ. ನಮಗೆ ನೆಮ್ಮದಿ ಕೊಡುತ್ತಿದ್ದ ಊರಿನ ಜನ ಕಣ್ಣೀರು ಹಾಕುತ್ತಿದ್ದಾರೆ. ಇಂಥವರ ಬದುಕು ಕಟ್ಟುವಂತಹ ಆಲೋಚನೆಯನ್ನು ರವಿಚಂದ್ರನ್ ಅವರು ಹೇಳಿದ್ದಾರೆ. ಅವರ ಹೃದಯದಿಂದ ಬಂದಿರುವ ಮಾತು ಇದು. ಅವರ ಈ ಆಲೋಚನೆಯನ್ನು ಹೇಗೆ ಕಾರ್ಯಗತ ಮಾಡಬೇಕು, ಅಲ್ಲಿನವರ ಪರಿಸ್ಥಿತಿ ಏನಿದೆ, ಅವರ ಅಗತ್ಯತೆಗಳೇನು ಎಂಬುದು ಗುರುತಿಸುವ ಕೆಲಸವಾದರೆ ಊರು- ಬದುಕು ಕಟ್ಟುವ ಶಾಶ್ವತವಾದ ಪರಿಹಾರ ಆಲೋಚನೆ ಜಾರಿಯಾಗುತ್ತದೆ. ಈ ಯೋಚನೆಗೆ ನಾನು ಜತಗಿರುತ್ತೇನೆ. ಒಬ್ಬೊಬ್ಬರು 10 ರು. ದಾನ ಮಾಡಿದರೂ ಕೋಟಿ ಕೋಟಿ ಬರುತ್ತೆ. ಊರು ಕಟ್ಟಬಹುದು.

-ಶ್ರೀಮುರಳಿ, ನಟ 

 

click me!