
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳಿಂದ ನಾಯಕಿಯಾಗಿ ಮಿಂಚುತ್ತಾ, ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ನಟಿ ನಯನತಾರಾ. ‘ಲೇಡಿ ಸೂಪರ್‌ಸ್ಟಾರ್’ ಎಂದೇ ಜನಪ್ರಿಯರಾಗಿರುವ ಅವರು, ತಮ್ಮ ವೈಯಕ್ತಿಕ ಜೀವನ, ಸಂಬಂಧಗಳು ಹಾಗೂ ವೃತ್ತಿಜೀವನದ ಬಗ್ಗೆ ಆಗಾಗ್ಗೆ ಮುಕ್ತವಾಗಿ ಮಾತನಾಡುತ್ತಿರುತ್ತಾರೆ. ಇದೀಗ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ಹಾಗೂ ಸಂಬಂಧಗಳಲ್ಲಿ ಸಮಸ್ಯೆಗಳು ಎದುರಾಗಲು ಕಾರಣವೇನು ಎಂಬುದನ್ನು ಬಹಿರಂಗವಾಗಿ ಹಂಚಿಕೊಂಡಿದ್ದ ವಿಚಾರ ಮತ್ತೆ ಗಮನ ಸೆಳೆಯುತ್ತಿದೆ.
‘ಇದಕ್ಕಾಗಿಯೇ ನನಗೆ ಸಮಸ್ಯೆ ಬರುತ್ತೆ’ ಎಂದ ನಯನತಾರಾ!
ಮಲಯಾಳಂ ಚಿತ್ರರಂಗದ ಮೂಲಕ ನಾಯಕಿಯಾಗಿ ಸಿನಿ ಜರ್ನಿ ಆರಂಭಿಸಿದ ನಯನತಾರಾ, ಬಳಿಕ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ನಿರ್ದೇಶಕ ಹರಿ ಅವರ ‘ಅಯ್ಯಾ’ ಸಿನಿಮಾದ ಮೂಲಕ ತಮಿಳಿನಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟ ಅವರು, ಬಳಿಕ ‘ಚಂದ್ರಮುಖಿ’, ‘ಗಜಿನಿ’ ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು.
ಇದುವರೆಗೆ 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಯನತಾರಾ, ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ನಡುವೆ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ತಮ್ಮ ವ್ಯಕ್ತಿತ್ವದ ಒಂದು ವಿಶೇಷ ಗುಣವೇ ಕೆಲವೊಮ್ಮೆ ತಮ್ಮ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದರು.
ಸ್ನೇಹ, ಸಂಬಂಧ, ಕೆಲಸ.. ಎಲ್ಲದರಲ್ಲೂ ನಾನು ಹೀಗೇ!
ಆ ಸಂದರ್ಶನದಲ್ಲಿ ನಿರೂಪಕರು, 'ನೀವು ಯಾವಾಗಲೂ ಪ್ರಾಮಾಣಿಕವಾಗಿಯೇ ಇರುತ್ತೀರಿ ಎಂದು ಭಾವಿಸುತ್ತೀರಾ?' ಎಂದು ನಯನತಾರಾ ಅವರಿಗೆ ಪ್ರಶ್ನಿಸಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ನಯನತಾರಾ, ತಾವು ಪ್ರಾಮಾಣಿಕವಾಗಿ ಮಾತನಾಡುವುದರಿಂದಲೇ ಸಾಕಷ್ಟು ಬಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಹೌದು. ಬಹುತೇಕ ಇದರಿಂದಲೇ ನನಗೆ ಸಮಸ್ಯೆ ಬರುತ್ತದೆ. ನನಗೊಂದು ನಿರ್ದಿಷ್ಟವಾದ ಆಲೋಚನಾ ವಿಧಾನವಿದೆ.
ಅದು ಯಾವಾಗಲೂ ಪ್ರಾಮಾಣಿಕವಾಗಿರಲು ನನ್ನನ್ನು ಪ್ರೇರೇಪಿಸುತ್ತದೆ. ನಾನು ಏನೇ ಮಾಡಿದರೂ, ವಿಶೇಷವಾಗಿ ಸ್ನೇಹ, ಸಂಬಂಧ ಮತ್ತು ಕೆಲಸದ ವಿಚಾರದಲ್ಲಿ ಪ್ರಾಮಾಣಿಕವಾಗಿರಬೇಕು ಎಂದು ಭಾವಿಸುತ್ತೇನೆ. ನೀವು ಈಗ ನನ್ನ ಬಳಿ ಪ್ರಶ್ನೆ ಕೇಳುತ್ತಿರುವಾಗಲೂ, ನಿಮಗೆ ನಿಜವಾದ ಉತ್ತರವನ್ನು ನೀಡಬೇಕು ಎಂದು ನಾನು ಯೋಚಿಸುತ್ತೇನೆ. ಅದಕ್ಕಾಗಿಯೇ ನನಗೆ ಹೆಚ್ಚು ಸಮಸ್ಯೆಗಳು ಎದುರಾಗುತ್ತವೆ ಎಂದು ನಯನತಾರಾ ಹೇಳಿಕೊಂಡಿದ್ದರು.
2026ರಲ್ಲಿ ನಯನತಾರಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, 2026ರಲ್ಲಿ ಇದುವರೆಗೆ ನಯನತಾರಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ನಿರ್ದೇಶಕ ವಿಷ್ಣು ಎಡವನ್ ನಿರ್ದೇಶನದ ತಮಿಳು ಸಿನಿಮಾ ‘ಹೈ’ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಕನ್ನಡ ಸಿನಿಮಾ ‘ಟಾಕ್ಸಿಕ್’ನಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಎರಡೂ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ನಯನತಾರಾ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅದೇ ‘ಮೂಕುತಿ ಅಮ್ಮನ್ 2’. ಭಕ್ತಿ ಪ್ರಧಾನ ಕಥಾಹಂದರದೊಂದಿಗೆ ಅದ್ಧೂರಿಯಾಗಿ ಮೂಡಿಬಂದಿರುವ ಈ ಸಿನಿಮಾವನ್ನು ಸುಂದರ್ ಸಿ ನಿರ್ದೇಶಿಸಿದ್ದಾರೆ.
ಸದ್ಯ ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್ 2’ ಸಿನಿಮಾ 2026ರ ನವೆಂಬರ್ 6ರಂದು ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದರ ಜತೆಗೆ ನಯನತಾರಾ ಕೈಯಲ್ಲಿ ಇನ್ನೂ ಹಲವು ಸಿನಿಮಾಗಳಿವೆ. ಹೀಗಾಗಿ ಒಂದೆಡೆ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಲೇಡಿ ಸೂಪರ್‌ಸ್ಟಾರ್, ಮತ್ತೊಂದೆಡೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಈ ಹಿಂದೆ ಹಂಚಿಕೊಂಡಿದ್ದ ಮುಕ್ತ ಮಾತುಗಳ ಮೂಲಕವೂ ಸುದ್ದಿಯಾಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.