'ಪ್ರೇಮದ ಊರಲಿ' ಚಿತ್ರದಲ್ಲಿ ಬರಬೇಕಿತ್ತು ಆ ಎಣ್ಣೆ ಹಚ್ಚೋ ಸೀನ್.. ಮೇಕಪ್ ಸಮಸ್ಯೆಯಿಂದ ಸಿನಿಮಾದಿಂದ ಡಿಲೀಟ್ ಆದ ದೃಶ್ಯಗಳಿವು!

Published : Oct 25, 2026, 09:02 PM IST
Premada Oorali

ಸಾರಾಂಶ

Premada Oorali Movie Shooting Memories: ಸಿನಿಮಾದಲ್ಲಿ ಪ್ರೇಕ್ಷಕರ ಮನಗೆಲ್ಲಬಹುದಾಗಿದ್ದ ಕ್ಯೂಟ್ ಮತ್ತು ರೊಮ್ಯಾಂಟಿಕ್ ದೃಶ್ಯಗಳು ಎಡಿಟಿಂಗ್ ಟೇಬಲ್‌ನಲ್ಲಿ ಕಟ್ ಆಗಿದ್ದು ಏಕೆ? ನಿರ್ದೇಶಕರು ಕಣ್ಣೀರಿಟ್ಟು ಕೈಬಿಟ್ಟ ಆ ಸ್ವಾರಸ್ಯಕರ ಸನ್ನಿವೇಶಗಳ ಬಗ್ಗೆ ಚಿತ್ರದಲ್ಲಿ 'ಅಜ್ಜಿ' ಪಾತ್ರದಲ್ಲಿ ನಟಿಸಿದ ಇಳಾ ವಿಟ್ಲ ಬಿಚ್ಚಿಟ್ಟ ಅಸಲಿ ಸತ್ಯ ಇಲ್ಲಿದೆ..

ಸಿನಿಮಾದ ಕಥೆಯ ಓಟ ಹಾಗೂ ಸಮಯದ ಮಿತಿಗೆ ತಕ್ಕಂತೆ ಎಷ್ಟೋ ಅದ್ಭುತ ದೃಶ್ಯಗಳನ್ನು ಎಡಿಟಿಂಗ್ ಟೇಬಲ್‌ನಲ್ಲಿ ಕತ್ತರಿಸುವುದು ಸಾಮಾನ್ಯ. ಅದೇ ರೀತಿ ತಮ್ಮ ಸಿನಿಮಾದಲ್ಲಿ ಪ್ರೇಕ್ಷಕರ ಮನಗೆಲ್ಲಬಹುದಾಗಿದ್ದ ಕೆಲವು ಕ್ಯೂಟ್ ಮತ್ತು ರೊಮ್ಯಾಂಟಿಕ್ ದೃಶ್ಯಗಳನ್ನು ಕೈಬಿಟ್ಟಿರುವ ಬಗ್ಗೆ ಚಿತ್ರದಲ್ಲಿ ಮುಖ್ಯ 'ಅಜ್ಜಿ' ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ ಕಲಾವಿದೆ ಇಳಾ ವಿಟ್ಲ, ಏಷ್ಯಾನೆಟ್ ಸುವರ್ಣನ್ಯೂಸ್ ಸಂದರ್ಶನದಲ್ಲಿ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇವೇ ನೋಡಿ ಆ ಸೀನ್

ಸಿನಿಮಾದಲ್ಲಿ ನವವಿವಾಹಿತ ನಾಯಕ ಅಜಯ್, ನಾಚಿಕೆಯಿಂದ ಹೆಂಡತಿಗೆ ಹೇಳಲಾಗದೆ ಅಜ್ಜಿಯ ಬಳಿ ತಲೆಗೆ ಎಣ್ಣೆ ಹಚ್ಚಲು ಕೇಳುತ್ತಾನೆ. ಆಗ ಅಜ್ಜಿ ಸೊಸೆಯನ್ನು ಕರೆತಂದು ಅವಳ ಕೈಯಿಂದಲೇ ಮಸಾಜ್ ಮಾಡಿಸುತ್ತಾಳೆ. ನಾಯಕ "ಅಜ್ಜಿ ಕೈ ಇವತ್ತು ಇಷ್ಟು ಸ್ಮೂತ್ ಆಗಿದೆ ಯಾಕೆ?" ಎಂದು ತಿರುಗಿ ನೋಡಲು ಹೋದಾಗ ಅಜ್ಜಿ ಅವನ ಮುಖ ತಿರುಗಿಸಿ ತಮಾಷೆ ಮಾಡುವ ದೃಶ್ಯ ಕ್ಯೂಟ್ ಆಗಿತ್ತು.

ಜೊತೆಗೆ ಟೆರೇಸ್ ಮೇಲೆ ಬಟ್ಟೆ ಒಣಗಿಸುವಾಗ ನಾಯಕ-ನಾಯಕಿಯ ತುಂಟಾಟಕ್ಕೆ ಅಜ್ಜಿ ಕಾಲೆಳೆಯುವ ದೃಶ್ಯವೂ ಇತ್ತು. ಆದರೆ ಸಿನಿಮಾದ ಲೆಂತ್ ಮತ್ತು ಮೇಕಪ್ ಸಮಸ್ಯೆಯಿಂದಾಗಿ ನಿರ್ದೇಶಕರು ಅನಿವಾರ್ಯವಾಗಿ ಈ ದೃಶ್ಯಗಳನ್ನು ಕಟ್ ಮಾಡಿದರು. ಅಲ್ಲದೆ ಆ ಸಮಯದಲ್ಲಿ ನಿರ್ದೇಶಕರು ತುಂಬಾ ಬೇಸರಪಟ್ಟು ಕಣ್ಣೀರು ಹಾಕಿದ್ದರು ಎಂದು ತಿಳಿಸಿದರು.

ಇದನ್ನು ಕೇಳಿದ ನಮ್ಮ ಆ್ಯಂಕರ್, "ನಿರ್ದೇಶಕ ಮನೋಜ್ ಕುಮಾರ್ ಅವರೇ, ದಯವಿಟ್ಟು ಈ ದೃಶ್ಯಗಳನ್ನು ಸಿನಿಮಾಗೆ ಮತ್ತೆ ಆಡ್ ಮಾಡಿ, ಜನ ಖಂಡಿತ ಎಂಜಾಯ್ ಮಾಡ್ತಾರೆ" ಎಂದು ವಿನಂತಿಸಿದರು. ನಟಿ ಕೂಡ "ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎನ್ನುವಂತೆ ನಮಗೆ ಸೀನ್‌ಗಳು ಇಷ್ಟವಾದರೂ ಪ್ರೇಕ್ಷಕರ ದೃಷ್ಟಿಯಿಂದ ಅವುಗಳನ್ನು ತೆಗೆದುಹಾಕಿದ್ದಾರೆ" ಎಂದರು.

"ನೀನು ಕಾಲು ಜಾರಿ ಬಿದ್ದಿಲ್ಲ ಮಗಳೇ, ಮನಸ್ಸು ಜಾರಿ ಬಿದ್ದಿದ್ದೀಯಾ..."

ಇನ್ನು ಸಿನಿಮಾದಲ್ಲಿ ತಮಗೆ ಅತ್ಯಂತ ಇಷ್ಟವಾದ ಭಾವನಾತ್ಮಕ ಸನ್ನಿವೇಶವನ್ನು ಸ್ಮರಿಸಿದ ನಟಿ ಇಳಾ ವಿಟ್ಲ, ನಾಯಕಿಗೆ ಬುದ್ಧಿವಾದ ಹೇಳುವ ದೃಶ್ಯವನ್ನು ಮೆಲಕು ಹಾಕಿದರು. "ನೀನು ಕಾಲು ಜಾರಿ ಬಿದ್ದಿಲ್ಲ ಮಗಳೇ, ಮನಸ್ಸು ಜಾರಿ ಬಿದ್ದಿದ್ದೀಯಾ..." ಎಂದು ನೋವಿನಲ್ಲೇ ಅಜ್ಜಿ ಹೇಳುವ ಸಂಭಾಷಣೆ ಚಿತ್ರದಲ್ಲೇ ಅತ್ಯಂತ ಹೃದಯಸ್ಪರ್ಶಿ ಹಾಗೂ ಮನಕಲಕುವ ಸನ್ನಿವೇಶವಾಗಿ ಮೂಡಿಬಂದಿದೆ ಎಂದು ಅವರು ಭಾವನಾತ್ಮಕವಾಗಿ ನೆನಪಿಸಿಕೊಂಡು ತಿಳಿಸಿದರು.

ಮಳೆಯ ಸನ್ನಿವೇಶದ ಬಗ್ಗೆ ಮಾತನಾಡುತ್ತಾ, "ಮಳೆಯಲ್ಲಿ 'ನಾಗಾ.. ಶಂಟು..' ಎಂದು ಹುಡುಕುತ್ತಾ, 'ಈ ಮನೆಗೆ ಶಾಪ ಇದೆಯಲ್ಲಪ್ಪ' ಎಂದು ರೋಧಿಸುವ ಸನ್ನಿವೇಶ ನನ್ನ ನೈಜ ಜೀವನದ ಹಳೆಯ ನೋವುಗಳನ್ನು ನೆನಪಿಸಿತು. ಇಂತಹ ನೋವಿನ ಸನ್ನಿವೇಶಗಳು ಕೇವಲ ಗಂಡ-ಹೆಂಡತಿ ನಡುವೆ ಮಾತ್ರವಲ್ಲ, ಅಕ್ಕ-ತಂಗಿಯರು, ಶಾಲೆಯ ಸ್ನೇಹಿತರ ನಡುವೆಯೂ ಬರುತ್ತವೆ. ನೈಜ ಜೀವನದಲ್ಲಿ ನಾವಿದನ್ನು ಸ್ವತಃ ಅನುಭವಿಸಿರುವುದರಿಂದ ಆ ದೃಶ್ಯ ನೆನೆದರೆ ಈಗಲೂ ನನಗೆ ಕಣ್ಣೀರು ಬರುತ್ತದೆ" ಎಂದು ಅವರು ಮನದಾಳದಿಂದ ಹೇಳಿಕೊಂಡರು.

ದಿಗ್ಗಜ ನಟರ ಜೊತೆ ನಟಿಸಿದ ಸವಾಲನ್ನು ಹಂಚಿಕೊಂಡ ಅವರು, "ರಂಗಾಯಣ ರಘು ಅವರಂತಹ ಹಿರಿಯ ಕಲಾವಿದರು ಉದ್ದುದ್ದ ದೃಶ್ಯಗಳನ್ನು ಒಂದೇ ಟೇಕ್‌ನಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು. ಆದರೆ ನನ್ನದು ಕೇವಲ ನಾಲ್ಕೇ ಡೈಲಾಗ್ ಇರುತ್ತಿತ್ತು. ನನ್ನ ಸಣ್ಣ ತಪ್ಪಿನಿಂದಾಗಿ ಇಡೀ ದೃಶ್ಯ 'ಪುಸ್ ಸೈಕಲ್' ಆಗಿ ಮತ್ತೊಂದು ಟೇಕ್ ಆಗಬಾರದು ಎಂದು ಕ್ಯಾಮೆರಾಗೆ ಕೋಟಿ ನಮಸ್ಕಾರ ಹಾಕಿ ಬೇಡಿಕೊಂಡು ನಟಿಸುತ್ತಿದ್ದೆ" ಎಂದು ತಮ್ಮ ರೋಚಕ ಶೂಟಿಂಗ್ ಅನುಭವವನ್ನು ಸಂಪೂರ್ಣವಾಗಿ ಮಾತಿನಲ್ಲಿ ಬಿಚ್ಚಿಟ್ಟರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಮಾನ್ಯನಂತೆ ಮಂಗಳೂರಿನ ಹೋಟೆಲ್‌ನಲ್ಲಿ ಊಟ ಸವಿದ ರಾಜ್ ಬಿ ಶೆಟ್ಟಿ.. ನಟನ ಸರಳತೆಗೆ ಫ್ಯಾನ್ಸ್ ಫಿದಾ
'ಬೂದಿ ಮುಚ್ಚಿದ ಕೆಂಡದಂತೆ ಆ ಕೇಸಿನಲ್ಲಿ ಒಂದು ಗುಟ್ಟು ಅಡಗಿದೆ'.. ಧನ್ವೀರ್-ವಿಜಯಲಕ್ಷ್ಮೀ ಸಂಬಂಧ ಹಳಸಲು ಅದೇ ಕಾರಣ!?