
ಕರ್ಣ ಸೀರಿಯಲ್ (Karna Serial)ನಲ್ಲಿ ಕರ್ಣನಾಗಿ ಮಿಂಚುತ್ತಿರುವ ಕರ್ಣ ಉರ್ಫ್ ನಟ ಕಿರಣ್ ರಾಜ್ (Kiran Raj) ಸದ್ಯ ಸೀರಿಯಲ್ನಲ್ಲಿ ಹೊಸ ಜೀವನ ಶುರು ಮಾಡಿದ್ದಾರೆ. ಅಪ್ಪನ ಪ್ರೀತಿಯೂ ಸಿಕ್ಕಿದ್ದು, ರಿಯಲ್ ಅಮ್ಮ ಕಣ್ಣೆದುರು ಬಂದಾಗಿದೆ. ಇನ್ನೇನಿದ್ದರೂ ಆಕೆಯೇ ಅಮ್ಮ ಎನ್ನೋದು ತಿಳಿಯಬೇಕಿದೆಯಷ್ಟೇ. ಈ ನಡುವೆಯೇ ಕಿರಣ್ ರಾಜ್ ಅವರು ಹೊಸ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ನಮ್ಮ ಫ್ಯಾಮಿಲಿಗೆ ಬಂದಿರುವ ಹೊಸ ಅತಿಥಿಯನ್ನು ಪರಿಚಯಿಸುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ ಕ್ಯಾಪ್ಷನ್ನಲ್ಲಿ, ಅತ್ಯಂತ ದೊಡ್ಡ ಕನಸು ನನಸಾಯಿತು, ನನ್ನ ಮಗನನ್ನು ಭೇಟಿ ಮಾಡಿ (Wildest dream come TRUE Meet my SON) ಎಂದು ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಅವರು ಪರಿಚಯ ಮಾಡಿಸಿದ್ದು ಸಿಂಹದ ಮರಿಯನ್ನು. ಇದನ್ನು ಪಳಗಿಸಿರೋ ನಟ, ಅದಕ್ಕೆ ಕರೆದಾಗ ಓಡೋಡಿ ಬರೋದನ್ನು, ಕುಳಿತುಕೋ ಎಂದಾಗ ಕುಳಿತುಕೊಳ್ಳುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ನಿನಗೆ ಏನು ಹೆಸರಿಡಲಿ ಎಂದು ಪ್ರಶ್ನಿಸಿರೋ ಕಿರಣ್ ರಾಜ್ ಅವರು ಬಳಿಕ ಆ ಮರಿಗೆ ದುರ್ಯೋಧನ ಎಂದು ನಾಮಕರಣ ಮಾಡಿದ್ದಾರೆ. ಪ್ರಾಣಿಗಳನ್ನು ಮಕ್ಕಳ ರೀತಿಯಂತೆ ನೋಡುವ ನಟನಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.
ಕೆಲವು ತಿಂಗಳ ಹಿಂದೆ ನಟ ಸಿಂಹದ ಜೊತೆಗೆ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಇದು ಸಿಂಹಕ್ಕೆ ತರಬೇತಿ ನೀಡುವುದನ್ನು ಕಲಿತ ಮೊದಲ ದಿನ ಎಂದು ಬರೆದುಕೊಂಡಿದ್ದರು. ಅಲ್ಲಿ ಎರಡು ಸಿಂಹಗಳನ್ನು ನೋಡಬಹುದಾಗಿದೆ. ಈ ಸಿಂಹದ ಹೆಸರು ರೋಜರ್ ಮತ್ತು ರಾಕಿ ಎಂದಿರುವ ನಟ, ನಾವು ಶೀಘ್ರದಲ್ಲೇ ಸ್ನೇಹಿತರಾಗುತ್ತೇವೆ ಎಂದಿದ್ದರು. ಇದೀಗ ಕೊನೆಗೂ ಸಿಂಹದ ಮರಿಗಳ ಜೊತೆ ಫ್ರೆಂಡ್ಷಿಪ್ ಮಾಡಿಕೊಂಡಿದ್ದಾರೆ. ಈ ಹಿಂದೆ ಅವರು, ಸಿಂಹದ ಜೊತೆ ಸ್ನೇಹ ಬೆಳೆಸಲು ಹೋದಾಗ ಕಲಿತಿರುವ ಪಾಠದ ಬಗ್ಗೆಯೂ ಅವರು ತಿಳಿಸಿದ್ದರು. ಸಿಂಹ ಯಾವಾಗಲೂ ನಿಮ್ಮನ್ನು ಬೀಳಿಸಲು ಪ್ರಯತ್ನಿಸುತ್ತದೆ, ಆದ್ದರಿಂದ ಯಾವಾಗಲೂ ಬಲವಾದ ಕಡೆಗೆ ವಾಲುತ್ತದೆ ಎಂದಿರುವ ಕಿರಣ್ ರಾಜ್, ದೂರ ಹೋದರೂ ಸಹ ಯಾವಾಗಲೂ ಸಿಂಹದ ಕಡೆಗೆ ಮುಖ ಇರಿಸಿ ಎಂದಿದ್ದರು. ಸಿಂಹಗಳು ನಿಮ್ಮ ಕಣ್ಣುಗಳನ್ನು ಓದಬಲ್ಲವು. ಅವು ನಿಮ್ಮನ್ನು ತಬ್ಬಿಕೊಳ್ಳಲು ಮತ್ತು ಅಪ್ಪಿಕೊಳ್ಳಲು ಇಷ್ಟಪಡುತ್ತವೆ ಎಂದಿರುವ ಕಿರಣ್ ರಾಜ್ ಅವರು ಸಿಂಹದ ಸ್ನೇಹ ಪರತೆಯ ಬಗ್ಗೆ ಮಾತನಾಡಿದ್ದರು.
ಇನ್ನು ನಟನ ಕುರಿತು ಹೇಳುವುದಾದರೆ, ಕಿರಣ್ ರಾಜ್ (Kiran Raj) ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್ ರಾಜ್. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್ಬುಕ್ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
ಅಷ್ಟಕ್ಕೂ, ಕಿರಣ್ ರಾಜ್ ಅವರನ್ನು ಟಿಆರ್ಪಿ ಕಿಂಗ್ ಎಂದೇ ಹೇಳಲಾಗುತ್ತದೆ. ಕರ್ಣ ಸೀರಿಯಲ್ನಲ್ಲಿಯೂ ಅವರು ಇದನ್ನು ಮೆಂಟೇನ್ ಮಾಡಿಕೊಂಡು ಬಂದಿದ್ದಾರೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ತಮ್ಮ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.