ಸಾವಿರ ಕೋಟಿ 'ಮಹಾಭಾರತ'; ಕನ್ನಡಿಗನಿಂದ ಹೊಸ ದಾಖಲೆ; ಬಾಹುಬಲಿಗಿಂತಲೂ ಅದ್ಭುತ ದೃಶ್ಯವೈಭವದ ಚಿತ್ರ ಇನ್ನೆರಡು ವರ್ಷದಲ್ಲಿ

By Suvarna Web DeskFirst Published Apr 18, 2017, 6:44 AM IST
Highlights

2018ರ ಸೆಪ್ಟಂಬರ್'ನಲ್ಲಿ ಚಿತ್ರವು ಸೆಟ್ಟೇರಲಿದೆ. 2020ರಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮೊದಲ ಭಾಗ ಬಿಡುಗಡೆಯಾದ ಮೂರು ತಿಂಗಳಲ್ಲಿ ಎರಡನೇ ಭಾಗವೂ ರಿಲೀಸ್ ಆಗಬಹುದು. ನಿರ್ದೇಶಕ ಶ್ರೀಕುಮಾರ್ ನಾಯರ್ ವರ್ಷಗಳ ಹಿಂದೆಯೇ ಚಿತ್ರಕ್ಕಾಗಿ ತಯಾರಿ ನಡೆಸುತ್ತಾ ಬಂದಿದ್ದಾರೆಂಬ ಸುದ್ದಿ ಇದೆ. ಸ್ಕ್ರಿಪ್ಟ್, ರಿಸರ್ಚ್ ಮೊದಲಾದ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೊಂದೆರಡು ತಿಂಗಳಲ್ಲಿ ಎಲ್ಲವೂ ಫೈನಲ್ ಆಗುವ ನಿರೀಕ್ಷೆ ಇದೆ.

ಬೆಂಗಳೂರು(ಏ. 18): ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಕಂಡ ಯಶಸ್ಸಿನಿಂದ ಸ್ಫೂರ್ತಿಗೊಂಡು ಈಗ ಮತ್ತೊಂದು ಅದ್ಭುತ ದೃಶ್ಯವೈಭವವಿರುವ ಸಿನಿಮಾ ನಿರ್ಮಾಣಕ್ಕೆ ಕನ್ನಡಿಗರೊಬ್ಬರು ಮುಂದಾಗಿದ್ದಾರೆ. ಅರಬ್ ನಾಡಿನಲ್ಲಿ ನೆಲಸಿರುವ ಉಡುಪಿ ಮೂಲದ ಬಿಆರ್ ಶೆಟ್ಟಿಯವರು ಪೌರಾಣಿಕ "ಮಹಾಭಾರತ" ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಂತ್ರಜ್ಞಾನ, ಭಾಷೆ ಹೀಗೆ ಎಲ್ಲದರಲ್ಲೂ ಈ ಸಿನಿಮಾ ಬಾಹುಬಲಿಗಿಂತಲೂ ಮಿಗಿಲಾಗಿರುತ್ತದೆ. ಭಾರತದ ಅತ್ಯಂತ ದೊಡ್ಡ ಬಜೆಟ್'ನ ಸಿನಿಮಾ ಆಗಲಿದೆ.

ಜಾಹೀರಾತು ಚಿತ್ರತಯಾರಕ ವಿ.ಎ.ಶ್ರೀಕುಮಾರ್ ಮೆನನ್ ಅವರು 'ಮಹಾಭಾರತ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ವಿಶ್ವದ ಅತ್ಯತ್ತಮ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಬಾಹುಬಲಿಯಂತೆ ಮಹಾಭಾರತ ಕೂಡ ಎರಡು ಕಂತುಗಳಲ್ಲಿ ಬರಲಿದೆ.

ಕನ್ನಡದಲ್ಲೂ ಬರಲಿದೆ:
ಕಾಪು ಮೂಲದ ಭಾವಗುತ್ತು ರಘುರಾಮ್ ಶೆಟ್ಟಿ ನಿರ್ಮಾಣದ ಈ ಚಿತ್ರ ಕನ್ನಡ, ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಲಿದೆ. ನಂತರ, ಭಾರತದ ಮಿಕ್ಕೆಲ್ಲ ಭಾಷೆ ಹಾಗೂ ವಿದೇಶದ ಕೆಲ ಭಾಷೆಗಳಿಗೂ ಇದು ಡಬ್ ಆಗಲಿದೆ.

ರಂಡಮೂಳಂ ಕಥೆ?
ಮಹರ್ಷಿ ವ್ಯಾಸರು ರಚಿಸಿರುವ 'ಮಹಾಭಾರತ' ಮೂಲಗ್ರಂಥವನ್ನು ಕೆಲವಾರು ಗಂಟೆಗಳಲ್ಲಿ ತೆರೆಗೆ ತರುವುದು ಅಸಾಧ್ಯದ ಮಾತು. ವ್ಯಾಸರ ಮಹಾಭಾರತವಷ್ಟೇ ಅಲ್ಲ, ಬೇರೆ ಅವತರಣಿಕೆಗಳನ್ನೂ ತೆರೆಯ ಮೇಲೆ ತರುವುದು ಕಷ್ಟದ ಮಾತು. ಹೀಗಾಗಿ, ಮಲಯಾಳಂ ಲೇಖಕ ಎಂ.ಟಿ.ವಾಸುದೇವನ್ ನಾಯರ್ ರಚಿಸಿರುವ ಜ್ಞಾನಪೀಠ ಪುರಸ್ಕೃತ ಗ್ರಂಥ 'ರಂಡಮೂಳಂ' ಅನ್ನು "ಮಹಾಭಾರತ" ಸಿನಿಮಾಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ರಂಡಮೂಳಂ ಪುಸ್ತಕದ ಆಧಾರದಲ್ಲಿ ಮಲಯಾಳಂನದಲ್ಲಿ ಸಿನಿಮಾವನ್ನೂ ತಯಾರಿಸಲಾಗಿತ್ತು. ಮಹಾಭಾರತದಲ್ಲಿ ಭೀಮನ ದೃಷ್ಟಿಯಿಂದ ಕಥೆಯ ವಿವರಣೆ ನಡೆದಿದೆ.

2020ರಲ್ಲಿ ತೆರೆಗೆ?
2018ರ ಸೆಪ್ಟಂಬರ್'ನಲ್ಲಿ ಚಿತ್ರವು ಸೆಟ್ಟೇರಲಿದೆ. 2020ರಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮೊದಲ ಭಾಗ ಬಿಡುಗಡೆಯಾದ ಮೂರು ತಿಂಗಳಲ್ಲಿ ಎರಡನೇ ಭಾಗವೂ ರಿಲೀಸ್ ಆಗಬಹುದು. ನಿರ್ದೇಶಕ ಶ್ರೀಕುಮಾರ್ ನಾಯರ್ ವರ್ಷಗಳ ಹಿಂದೆಯೇ ಚಿತ್ರಕ್ಕಾಗಿ ತಯಾರಿ ನಡೆಸುತ್ತಾ ಬಂದಿದ್ದಾರೆಂಬ ಸುದ್ದಿ ಇದೆ. ಸ್ಕ್ರಿಪ್ಟ್, ರಿಸರ್ಚ್ ಮೊದಲಾದ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೊಂದೆರಡು ತಿಂಗಳಲ್ಲಿ ಎಲ್ಲವೂ ಫೈನಲ್ ಆಗುವ ನಿರೀಕ್ಷೆ ಇದೆ.

ಮೋಹನ್'ಲಾಲ್ ಭೀಮ?
ದೇಶದ ಮಹಾನ್ ಕಲಾವಿದರನ್ನು ಚಿತ್ರಕ್ಕಾಗಿ ಬಳಸಿಕೊಳ್ಳಬಹುದು. ಮಲಯಾಳಂ ಸೂಪರ್'ಸ್ಟಾರ್ ಮೋಹನಲಾಲ್ ಅವರೇ ಭೀಮನ ಪಾತ್ರ ಮಾಡುವ ಸಾಧ್ಯತೆ ಇದೆ. 'ರಂಡಮೂಳಂ' ಸಿನಿಮಾದಲ್ಲೂ ಮೋಹನ್ ಲಾಲ್ ಅವರೇ ಭೀಮನ ಪಾತ್ರ ಮಾಡಿದ್ದರು. ಹೀಗಾಗಿ, ನಿರ್ದೇಶಕ ಶ್ರೀಕುಮಾರ್ ನಾಯರ್ ಅವರು ಮೋಹನ್'ಲಾಲ್'ಗೆ ಮೊದಲ ಆದ್ಯತೆ ನೀಡಿದ್ದಾರೆ. ಹಾಲಿವುಡ್'ನ ನಟರಿಗೂ ಚಿತ್ರದಲ್ಲಿ ಪಾತ್ರ ಸಿಗಲಿದೆ. ನಿರ್ಮಾಪಕ ಬಿಆರ್ ಶೆಟ್ಟಿಯವರು ಈ ಚಿತ್ರವನ್ನು ವಿಶ್ವಮಟ್ಟದ ಬೆಂಚ್'ಮಾರ್ಕ್ ಮಾಡಲು ಸಂಕಲ್ಪ ತೊಟ್ಟಿದ್ದಾರೆ.

click me!