ಕನ್ನಡದ ಮೂವರು ಪ್ರತಿಭೆಗಳು ಪರಭಾಷೆಗೆ ಎಂಟ್ರಿ

First Published Jun 14, 2018, 2:01 PM IST
Highlights

ಕನ್ನಡದ ಅನೇಕ ಪ್ರತಿಭೆಗಳು ಪರಭಾಷೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿ  ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಮತ್ತೆ ಮೂವರು ಪ್ರತಿಭಾವಂತರು ಬೇರೆ ಭಾಷೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಸಜ್ಜಾಗಿದ್ದಾರೆ. ಯಾರ್ಯಾರು ಬೇರೆ ಭಾಷೆಗೆ ಎಂಟ್ರಿ ಕೊಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

ಬೆಂಗಳೂರು (ಜೂ. 14):  ಕನ್ನಡದ ಅನೇಕ ಪ್ರತಿಭೆಗಳು ಪರಭಾಷೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಮತ್ತೆ ಮೂವರು ಪ್ರತಿಭಾವಂತರು ಬೇರೆ ಭಾಷೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಸಜ್ಜಾಗಿದ್ದಾರೆ.

ಅದರಲ್ಲಿ ದೊಡ್ಡಣ್ಣ  ತೆಲುಗಿನಲ್ಲಿ ಬಹುಮುಖ್ಯ ಪಾತ್ರ ಮಾಡುತ್ತಿದ್ದಾರೆ. ಪ್ರಣೀತಾ ಹಿಂದಿಯಲ್ಲಿ ಪ್ರಸಿದ್ಧ ನಟ ಆಯುಷ್ಮಾನ್ ಖುರಾನ ಜೋಡಿಯಾಗಿ ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮಲಯಾಳಂನ ಬಹುನಿರೀಕ್ಷಿತ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಮೂವರಿಗೂ ಕನ್ನಡಪ್ರಭ ಶುಭ ಹಾರೈಸುತ್ತಿದೆ.

ಹಿಂದಿ ಆಲ್ಬಂನಲ್ಲಿ ಪ್ರಣೀತಾ

ಬಣ್ಣದ ಜಗತ್ತಿನ ಮಿಲ್ಕ್ ಬ್ಯೂಟಿ ಎಂದಾಕ್ಷಣ ಎಲ್ಲರಿಗೂ ತಮನ್ನಾ ಬಾಟಿಯಾ ನೆನಪಾಗುತ್ತಾರೆ. ಆದರೆ, ಈ ತಮನ್ನಾಳನ್ನೇ ಹಿಂದಿಕ್ಕುವಷ್ಟು ಬ್ಯೂಟಿ ಪ್ರಣೀತಾ ಸುಭಾಷ್. ಮಂಗಳೂರಿನ ಈ ಮಿಲ್ಕ್ ಸುಂದರಿಗೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಸಿಗದಿದ್ದರೂ ತೆಲುಗು, ತಮಿಳಿನಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಈಕೆಯ ಸೌಂದರ್ಯ ಮೇಲೆಯೇ ಒಂದು ಹಾಡು ಕೂಡ ಇದೆ. ಇಂತಹ ಪ್ರಣೀತಾ ಸದ್ಯಕ್ಕೆ  ಬಾಲಿವುಡ್ ಕಡೆಗೆ ಮುಖ ಮಾಡಿದ್ದಾರೆ. ಸದ್ದಿಲ್ಲದೆ ಬಿ ಟೌನ್‌ಗೆ ಪದಾರ್ಪಣೆ ಮಾಡಿರುವ ಪ್ರಣೀತಾ, ಮೊದಲ ಹೆಜ್ಜೆಯಲ್ಲಿ ಆಲ್ಬಂ  ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

‘ತುಮಾರಿ ಸುಲು’ ಎನ್ನುವ ಚಿತ್ರವನ್ನು  ನಿರ್ದೇಶಿಸಿದ್ದ ಸುರೇಶ್ ತ್ರಿವೇಣಿ ಈಗ ‘ಚನ್ ಕಿತ್ತನ್’ ಹೆಸರಿನ ಮ್ಯೂಸಿಕ್ ಆಲ್ಬಂ ಮಾಡಿದ್ದು, ಇದರಲ್ಲಿ ಆಯುಷ್ಮಾನ್ ಖುರಾನ  ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ನಾಯಕಿ ಆಗಿ ಇದೇ ಹಾಡಿನಲ್ಲಿ ಪ್ರಣೀತಾ ನಟಿಸಿದ್ದಾರೆ. ಟೀ ಸರಣಿಯ ಮ್ಯೂಸಿಕ್  ಆಲ್ಬಂ ಇದಾಗಿದ್ದು, ಈಗಾಗಲೇ ಇದರ ಚಿತ್ರೀಕರಣ ಶುರುವಾಗಿದೆ.

ಲಡಾಕ್, ಸಿಕ್ಕಿಂನ ಸುಂದರವಾದ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ವಿಶೇಷ ಅಂದರೆ ಇದು ಪಂಜಾಬಿ ಭಾಷೆಯ ಗಜಲ್ ಆಗಿದ್ದು, ಅದನ್ನು ಸುರೇಶ್ ತ್ರಿವೇಣಿ ಮರು ಸೃಷ್ಟಿ  ಮಾಡಿದ್ದಾರೆ. 

ತೆಲುಗು ರಾಮಾ ರಾಮಾರೆಯಲ್ಲಿ ದೊಡ್ಡಣ್ಣ 

ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದೆ. ‘ಆಟಗಧಾರ ಶಿವ’ ಎಂಬ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ದೊಡ್ಡಣ್ಣ  ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು  ಚಂದ್ರ ಸಿದ್ದಾರ್ಥ. ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಅದರಲ್ಲೂ ಇದೇ ಮೊದಲು ತೆಲುಗಿನಲ್ಲಿ ನಟಿಸುತ್ತಿರುವ  ದೊಡ್ಡಣ್ಣ ಟಾಲಿವುಡ್‌ನ ಗಮನ ಸೆಳೆದಿದ್ದಾರೆ.

ಮಲಯಾಳಂ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ  

‘ಬೆಂಗಳೂರು ಡೇಸ್’ ಎಂಬ ಜನಪ್ರಿಯ ಚಿತ್ರ ನಿರ್ದೇಶಿಸಿದ್ದ ಅಂಜಲಿ ಮೆನನ್ ಐದು  ವರ್ಷಗಳ ನಂತರ ಮತ್ತೆ ಬಂದಿದ್ದಾರೆ. ಈ ಸಲ ‘ಕೂಡೆ’ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಮಲಯಾಳಂನಲ್ಲಿ ಅಪಾರ ಜನಪ್ರೀತಿ ಗಳಿಸಿದ ನಜ್ರಿಯಾ ನಜೀಂ ಬಹುವರ್ಷಗಳ ನಂತರ ನಟಿಸುತ್ತಿರುವ ಈ ಚಿತ್ರದ ಸಂಗೀತ ನಿರ್ದೇಶನ ಮಾಡಿರುವುದು ರಘು ದೀಕ್ಷಿತ್. ಬಹು ನಿರೀಕ್ಷಿತ ಚಿತ್ರದ ಮೂಲಕವೇ ರಘು ದೀಕ್ಷಿತ್ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಅಂಜಲಿ ಮೆನನ್ ನಿರ್ದೇಶನದ ಸಿನಿಮಾಗಳು ಸಂಗೀತಕ್ಕೆ ಹೆಸರುವಾಸಿ. ಒಳ್ಳೆಯ ಸಂಗೀತದ ಕಾರಣದಿಂದಲೇ ಅವರ ಸಿನಿಮಾಗಳು ಜನಪ್ರಿಯವಾಗಿದ್ದಿದೆ. ಇಂಥಾ ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ನೀಡಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್, ಪಾರ್ವತಿ ಮೆನನ್ ಮತ್ತು ನಜ್ರಿಯಾ ನಜೀಮ್ ನಟಿಸುತ್ತಿದ್ದಾರೆ. 

click me!