ಕನ್ನಡ ಶಾಲೆಯ ಮಕ್ಕಳಿಗೆ ರಿಷಬ್ ಕೊಡುಗೆ

First Published Jun 20, 2018, 12:14 PM IST
Highlights

'ಕಿರಿಕ್ ಪಾರ್ಟಿ' ಎಂಬ ಸೂಪರ್‌ಡ್ಯೂಪರ್ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ ಆ ಚಿತ್ರದ ನಂತರ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಆ ನಿರ್ಧಾರಗಳಲ್ಲಿ ಕನ್ನಡ ಶಾಲೆಗಾಗಿ ಈ ಪ್ರತಿಭಾನ್ವಿತ ನಿರ್ದೇಶಕ ಮಾಡಿದ್ದೇನು?

'ಕಿರಿಕ್ ಪಾರ್ಟಿ' ಎಂಬ ಸೂಪರ್‌ಡ್ಯೂಪರ್ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ ಆ ಚಿತ್ರದ ನಂತರ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. 

೧. ದೊಡ್ಡ ಹೀರೋಗಳಿಗೆ ಚಿತ್ರ ನಿರ್ದೇಶಿಸುವ ಅವಕಾಶ ಬಿಟ್ಟು ತನಗೆ ಮನಸ್ಸಿಗೆ ಹತ್ತಿರವಾದ ಕತೆ 'ಸಹಿಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಸಿನಿಮಾ ಮಾಡಿದ್ದು.
೨. ಪ್ರಸಿದ್ಧ ನಿರ್ಮಾಪಕರು ಸಿನಿಮಾ ಮಾಡಲು ಕೇಳಿಕೊಂಡರೂ ಮುಂದೆ ಮಾಡೋಣ ಅಂತ ಹೇಳಿ ತನ್ನದೇ ಆದ ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು.
ಇದೀಗ ಆ ಎರಡು ನಿರ್ಧಾರಗಳ ಫಲಿತಾಂಶ ಎದುರಿಗಿದೆ. 'ಸಹಿಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆಗಸ್ಟ್ ೧೬ರಂದು ಜಯಣ್ಣ ಫಿಲಮ್ಸ್ ಮೂಲಕ ಈ ಚಿತ್ರವನ್ನು ಬಿಡುಗಡೆ ಮಾಡಲು ರಿಷಬ್ ಶೆಟ್ಟಿ ನಿರ್ಧರಿಸಿದ್ದಾರೆ. 

ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಈ ಚಿತ್ರದ ಬಗ್ಗೆ, ನಿರ್ದೇಶನ, ಲೈಫು ಕುರಿತಾಗಿ ಮಾತನಾಡಿದ್ದಾರೆ.  ನನ್ನ ಕನಸಿನ ಪ್ರೊಜೆಕ್ಟ್‌ಗಳಲ್ಲಿ ಈ 'ಸಹಿಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ'ಮುಖ್ಯವಾದದ್ದು. ನಿರ್ದೇಶಕನ ಒಂದು ಸಿನಿಮಾ ಹಿಟ್ ಆದಾಗ ಅವನಿಗೆ ಹಲವು ಅವಕಾಶಗಳು ಬರುತ್ತವೆ. ಆದರೆ ನಾನು ಆ ದಾರಿ ಹಿಡಿಯದೆ ನನ್ನದೇ ದಾರಿ ಹಿಡಿದೆ. ನನಗೆ ಮನಸ್ಸಿಗೆ ಹತ್ತಿರವಾದ ಕತೆಯನ್ನುನಿರ್ದೇಶನ ಮಾಡಿ ಆಮೇಲೆ ಮರಳುತ್ತೇನೆ ಎಂದು ಅನೇಕರಿಗೆ ಭರವಸೆ ಕೊಟ್ಟಿದ್ದೇನೆ. ನನಗೆ ಇಷ್ಟ ಬಂದಂತೆ ಸಿನಿಮಾ ಮಾಡಬೇಕು ಅನ್ನುವ ಕಾರಣಕ್ಕೆ ನಾನೇ ಸಿನಿಮಾ ನಿರ್ಮಾದ ಹೊಣೆಯೂ ಹೊತ್ತುಕೊಂಡೆ. ರವಿ ರೈ ಮತ್ತು ಅಕ್ಷತಾ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನನ್ನ ತಂಡದವರು ಸಂಭಾವನೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ. ತುಂಬಾ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದೇನೆ ಅನ್ನುವುದು ನನಗೆ ಗೊತ್ತಿದೆ. ಆದರೆ ಕತೆ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಈ ನನ್ನ ಸಾಹಸ ಮತ್ತೊಂದಷ್ಟು ಜನಕ್ಕೆ ಪ್ರೇರಣೆಯಾಗಬಹುದು ಅಂದುಕೊಂಡಿದ್ದೇನೆ.

ಶಾಲಾ ದಿನಗಳ ಬಗ್ಗೆ ಕಮರ್ಷಿಯಲ್ ಚಿತ್ರ ತುಂಬಾ ಅಪರೂಪ. ಅದೇ ಥರ ಕಾಸರಗೋಡು ಪರಿಸರದ ಹಿನ್ನೆಲೆಯಲ್ಲಿ ಒಂದೂ ಕನ್ನಡ ಸಿನಿಮಾ ಬಂದಿಲ್ಲ. ಆ ಕೊರತೆಯನ್ನು ಈ ಸಿನಿಮಾ ತುಂಬಲಿದೆ. ಕಾಸರಗೋಡಿನಲ್ಲಿರುವ ಒಂದು ಶಾಲೆ, ಆ ಊರು, ಅಲ್ಲಿರುವ ಜನರೇ ಈ ಚಿತ್ರದ ಮುಖ್ಯ ಅಂಶಗಳು. ಕನ್ನಡದ ಬಗ್ಗೆ, ಕನ್ನಡ ಶಾಲೆಗಳ ಬಗೆಗಿನ ಕಾಳಜಿಯೇ ಈ ಚಿತ್ರದ ಜೀವಾಳ. ಯಾವುದೂ ಇಲ್ಲಿ ವಾಚ್ಯವಲ್ಲ. ತಮಾಷೆಯಲ್ಲೇ ಚಿತ್ರ ಸಾಗುತ್ತದೆ. ಒಂಥರಾ ಜೂನಿಯರ್ ಕಿರಿಕ್ ಪಾರ್ಟಿ ಎಂದುಕೊಳ್ಳಬಹುದು.

ಜೂ.21ರಂದು ಈ ಚಿತ್ರದ 'ದಡ್ಡ' ಎಂಬ ಹಾಡನ್ನು ಬಿಡುಗಡೆಗೊಳಿಸುತ್ತಿದ್ದೇವೆ. ಇಡೀ ಚಿತ್ರದಲ್ಲಿ 9 ಹಾಡುಗಳಿವೆ. ಈ ಚಿತ್ರದ ಹಾಡುಗಳನ್ನು ರಿಷಬ್ ಶೆಟ್ಟಿ ಆಡಿಯೋ ಎಂಬ ನನ್ನದೇ ಹೊಸ ಸಂಸ್ಥೆಯಿಂದ ಬಿಡುಗಡೆಗೊಳಿಸುತ್ತಿದ್ದೇನೆ.  ಈ ಚಿತ್ರವನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕೆಂಬ ಆಸೆ ಇದೆ. ಈ ಚಿತ್ರ ಬಿಡುಗಡೆಯಾದ ಮೂರು ತಿಂಗಳಿಗೆ 'ಕಥಾ ಸಂಗಮ' ಬಿಡುಗಡೆ ಮಾಡುತ್ತೇವೆ. ಅದೇ ಸಂದರ್ಭದಲ್ಲಿ 'ಬೆಲ್ ಬಾಟಂ' ಚಿತ್ರವೂ ರಿಲೀಸಾಗಬಹುದು. 

click me!