ಸಾರ್ವಜನಿಕರಲ್ಲಿ ಒಂದು ಮನವಿ, ಸಾರ್ವಜನಿಕರಿಗಾಗಿ ಒಂದು ಪ್ರಕಟಣೆ, ಸಾರ್ವಜನಿಕರ ಗಮನಕ್ಕೆ... ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಕೇಳುವ ಸಾಲುಗಳು ಇವು. ಹಾಗೆ ‘ಸಾರ್ವಜನಿಕರಲ್ಲಿ ವಿನಂತಿ’ ಎಂಬ ಮಾತು ಕೂಡ ಇದೇ ಪ್ರಕಟಣೆಯ ಸಾಲಿಗೆ ಸೇರುತ್ತದೆ. ಇನ್ನೂ ಈ ಹೆಸರಿನಲ್ಲಿ ಮೂಡಿ ಬಂದಿರುವ ಸಿನಿಮಾ ಹೇಗಿರಬಹುದು? ಚಿತ್ರದ ಕತೆ ಏನು? ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ.
ಆರ್ ಕೇಶವಮೂರ್ತಿ
ಸಾರ್ವಜನಿಕರಿಗಾಗಿ ಮಾಡಿರುವ ಸಿನಿಮಾ ಎಂಬುದನ್ನು ಸಿನಿಮಾ ಹೆಸರಿನಂತೆ ಅದರ ಕತೆ ನೋಡಿದಾಗಲೂ ಹೇಳುತ್ತದೆ. ಮನುಷ್ಯನ ನಂಬಿಕೆಗಳು ಹೇಗೆಲ್ಲ ದುರುಪಯೋಗವಾಗಿ, ಅದು ಮತ್ತೊಂದು ದುರಂತಕ್ಕೆ ಕಾರಣವಾಗುತ್ತದೆ. ಹಾಗೆ ದುರಂತಗಳು ನಡೆದಾಗ ಯಾರೆಲ್ಲ ಕಣ್ಣೀರು ಹಾಕಬೇಕಾಗುತ್ತದೆ ಎಂಬುದನ್ನು ತಮ್ಮದೇ ಸೀಮಿತ ವ್ಯಾಪ್ತಿಯಲ್ಲಿ ಹೇಳಿದ್ದಾರೆ ನಿರ್ದೇಶಕ ಕೃಪಾ ಸಾಗರ್. ಅವರಿಗೆ ಸಾರ್ವಜರ ಮೇಲಿನ ಹಿತಾಸಕ್ತಿ ತುಂಬಾ ಜಾಸ್ತಿ. ಹೀಗಾಗಿ ಅವರನ್ನು ಎಚ್ಚರಿಸುವ ನಿಟ್ಟಿನಲ್ಲಿ ಚಿತ್ರವನ್ನು ರೂಪಿಸಿದ್ದಾರೆ.
ತಾರಾಗಣ: ಮಂದನ್ ರಾಜ್, ಅಮೃತ ಕೆ ಎಲ್, ರಮೇಶ್ ಪಂಡಿತ್, ಮಂಡ್ಯ ರಮೇಶ್,
ನಿರ್ದೇಶನ: ಕೃಪಾ ಸಾಗರ್
ನಿರ್ಮಾಣ: ಉಮಾ ನಂಜುಂಡ ರಾವ್
ಸಂಗೀತ: ಅನಿಲ್ ಸಿಜೆ
ಛಾಯಾಗ್ರಹಣ: ಅನಿಲ್ ಕುಮಾರ್ ಕೆ.
ಚಿತ್ರದ ಮೊದಲ ಭಾಗ ಹೇಗೋ ಸಾಗಿ, ವಿರಾಮದ ನಂತರ ನಿರ್ದೇಶಕನ ಕನಸಿನ ಕತೆ. ಅಂದರೆ ಟೈಟಲ್ ಸ್ಟೋರಿ ತೆರೆದುಕೊಳ್ಳುತ್ತದೆ. ಥಿಯೇಟರ್‌ನಲ್ಲಿ ಕೂತವನಿಗೆ ಒಟ್ಟಿಗೆ ಎರಡು ಸಿನಿಮಾ ನೋಡಿದ ಅನುಭವಕ್ಕೆ ಗುರಿಯಾದರೂ ಅಚ್ಚರಿ ಇಲ್ಲ! ಮೊದಲ ಹಳ್ಳಿ ಕತೆ. ನಂತರ ಅದೇ ಹಳ್ಳಿಯ ಕ್ರೈಮ್ ಕತೆ. ನಡುವೆ ಒಂದು ಅಕ್ರಮ ಸಂಬಂಧದ ನೆರಳು. ಈ ನೆರಳಿನಿಂದ ಕತೆ ಪಕ್ಕಕ್ಕೆ ಸರಿಯಲ್ಲ. ನೋಡುಗ ಕೂಡ. ಮಧ್ಯಮ ವರ್ಗದವರೇ ತುಂಬಿರುವ ಊರು. ಅಲ್ಲೊಂದು ಕೊಲೆ ಆಗುತ್ತದೆ. ಆ ಕೊಲೆ ಮತ್ತೊಂದು ಸಾವಿಗೆ ಕಾರಣವಾಗುತ್ತದೆ. ಒಂದು ಸುಪಾರಿ ಕೊಲೆ, ಮತ್ತೊಂದು ಆತ್ಮಹತ್ಯೆ ಇವೆರಡರ ನಡುವೆ ಸಂಬಂಧ ಏನು ಎನ್ನುವ ಕುತೂಹಲದ ಪಯಣ ಶುರು ಮಾಡುತ್ತದೆ ಸಿನಿಮಾ. ಇಲ್ಲಿಂದ ಕೊಲೆಗಡುಕರು, ಸುಪಾರಿ ಧೀರರು, ಅನುಮಾನದ ನೆರಳು ಎದ್ದು ನಿಲ್ಲುತ್ತದೆ. ಮತ್ತಷ್ಟುತಿರುವುಗಳಲ್ಲಿ ಪಯಣಿಸುವ ಕತೆಯಲ್ಲಿ ಪೊಲೀಸರದ್ದೇ ಪ್ರಮುಖ ಪಾತ್ರ. ಪೊಲೀಸ್ ಇಲಾಖೆ ಎಷ್ಟರ ಮಟ್ಟಿಗೆ ಸಾರ್ವಜನಿಕರ ಪರವಾಗಿದೆ ಎಂಬುದನ್ನು ಹೇಳುವಲ್ಲಿ ಸಿನಿಮಾ ಹೊಸತನ ತೋರುತ್ತದೆ.
ಚಿತ್ರ ವಿಮರ್ಶೆ: ಕೃಷ್ಣ ಗಾರ್ಮೆಂಟ್ಸ್
ತೆರೆ ಮೇಲೆ ಕ್ರೈಮ್ ಕತೆಗಳು ಸಾಕಷ್ಟುಬಂದಿವೆ. ಆದರೆ, ನಂಬಿಕೆಗಳೇ ಕ್ರೈಮ್‌ಗೆ ದಾರಿ ಮಾಡಿಕೊಡುವ ಮನಸ್ಸುಗಳ ಸುತ್ತಲಿನ ಕತೆಗಳು ಅಪರೂಪ. ಆ ನಿಟ್ಟಿನಲ್ಲಿ ‘ಸಾರ್ವಜನಿಕರಲ್ಲಿ ವಿನಂತಿ’ ಸಿನಿಮಾ ಒಂದು ಒಳ್ಳೆಯ ಪ್ರಯತ್ನ. ನಿರ್ದೇಶಕರ ಈ ಪ್ರಯತ್ನ ಸಂಪೂರ್ಣವಾಗಿ ಈಡೇರಿದೆ ಎಂದರೆ ಪಾತ್ರಧಾರಿಗಳತ್ತ ನೋಡಬೇಕಾಗುತ್ತದೆ. ಪೇಲವ ನಟನೆಯೇ ಚಿತ್ರದ ಮೈನಸ್. ಆದರೆ, ಮಂಡ್ಯ ರಮೇಶ್ ನಗಿಸಿದರೆ, ರಮೇಶ್ ಪಂಡಿತ್ ಒಂದು ಖಡಕ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಒಂದು ಕ್ರೈಮ್ ಕತೆಯನ್ನು ಸಾಧ್ಯವಾಗಷ್ಟುಮಟ್ಟಿಗೆ ಗಟ್ಟಿಯಾಗಿ ನಿರೂಪಣೆ ಮಾಡುವುದಕ್ಕೆ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಚಿತ್ರಕ್ಕೆ ತಾಂತ್ರಿಕ ವಿಭಾಗ, ಸಂಭಾಷಣೆಗಳು ಸಾಥ್ ನೀಡಬೇಕಿತ್ತು.