ಜೋಡೆತ್ತುಗಳ ರೀತಿ ಇಬ್ಬರು ನಾಯಕರು. ಒಬ್ಬ ಫಿಸಿಕಲಿ ಫಿಟ್, ಮತ್ತೊಬ್ಬ ಟೆಕ್ನಿಕಲಿ ಸ್ಟ್ರಾಂಗ್. ಅಚಾನಕ್ ಆಗಿ ಭೂಗತ ಲೋಕಕ್ಕೆ ಬಂದು ಇಡೀ ವ್ಯವಸ್ಥೆಯನ್ನೇ ರೂಲ್ ಮಾಡಬೇಕು ಎನ್ನುವ ಆಸೆ ಹೊತ್ತ ಈ ಇಬ್ಬರಿಗೂ ಮಾಮೂಲಿಯಂತೆ ಅದದೇ ಅಡೆತಡೆಗಳು ಬರುತ್ತವೆ. ಅದನ್ನೆಲ್ಲಾ ಅವರು ದಾಟುವ ವೇಳೆ ಒಂದುಷ್ಟುತ್ಯಾಗ ಬಲಿದಾನವಾಗುತ್ತದೆ. ಇದು ಭೂಗತ ಲೋಕಕ್ಕೆ ಅಂಟಿಕೊಂಡು ಮಾಡಿದ ಬಹುತೇಕ ಚಿತ್ರಗಳ ಹಣೆ ಬರಹ. ಇಲ್ಲಿ ನಿರ್ದೇಶಕ ಪ್ರಕಾಶ್ ಹೆಬ್ಬಾಳ್ ಆ ಬೇಲಿಯನ್ನು ಧೈರ್ಯವಾಗಿ ದಾಟುವ ಪ್ರಯತ್ನ ಮಾಡಿದ್ದಾರೆಯಾದರೂ ಅದು ಕೃತಕ ಎನ್ನಿಸಿಬಿಡುತ್ತದೆ.
ಕೆಂಡಪ್ರದಿ
ಅಮಾಯಕ ಹುಡುಗರನ್ನು ಹಿಡಿದು ಅವರ ಲಿಂಗ ಪರಿವರ್ತನೆ ಮಾಡಿ ಮಾರಾಟ ಮಾಡುವ ಜಾಲದ ಜೊತೆಗೆ ಬೆಸೆದುಕೊಳ್ಳುವ ವರ್ಧನ್ ತೀರ್ಥಹಳ್ಳಿ ಮತ್ತು ರಾಘವ್ ನಾಗ್ ಕಡೆಗೆ ಅದೇ ಬಲೆಗೆ ಸಿಕ್ಕಿಕೊಳ್ಳುತ್ತಾರೆ. ಸಿನಿಮಾದ ಅರ್ಧ ಭಾಗ ಲವ್ವರ್ ಬಾಯ್ ಆಗಿ, ಸಿಕ್ಕವರನ್ನೆಲ್ಲಾ ಹೊಡೆದು ಬೀಳಿಸುವ ವರ್ಧನ್ ಇನ್ನರ್ಧ ಭಾಗ ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಂಗಳಮುಖಿಯಾಗುತ್ತಾರೆ. ಇಬ್ಬರೂ ನಾಯಕರಿಗೂ ಬಿಂಬಶ್ರೀ ಮತ್ತು ಸೌಮ್ಯ ನಾಯಕಿಯರು. ಒಂದು ಕಡೆ ಪ್ರೀತಿ, ಇನ್ನೊಂದು ಕಡೆ ಸ್ನೇಹವನ್ನು ಅರ್ಥವತ್ತಾಗಿ ತೋರಿಸಲಾಗಿದೆ.
ತಾರಾಗಣ: ವರ್ಧನ್ ತೀರ್ಥಹಳ್ಳಿ, ಬಿಂಬಶ್ರೀ ನಿನಾಸಂ, ರಾಘವ್ ನಾಗ್, ಸೌಮ್ಯ, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ಚಂದ್ರು
ನಿರ್ದೇಶನ: ಪ್ರಕಾಶ್ ಹೆಬ್ಬಾಳ್
ನಿರ್ಮಾಣ: ಮೈತ್ರಿ ಪ್ರೊಡಕ್ಷನ್
ಸಂಗೀತ: ವಿಜಯ್ ಯಾಡ್ರ್ಲಿ
ಛಾಯಾಗ್ರಹಣ: ಸೂರಿ ಸಿನಿಟೆಕ್
‘ಸೆಂಟಿಮೆಂಟ್ ನಾಟ್ ಅಲೌವ್‌್ಡ’ ಎಂದು ಹೇಳಿಕೊಂಡು ಪಿಸ್ತೂಲಿನಿಂದ ಗುಂಡುಗಳು ಒಂದರ ಹಿಂದೆ ಮತ್ತೊಂದರಂತೆ ಸಿಡಿಯುತ್ತಲೇ ಇರುವುದು, ಕತೆಯನ್ನು ಅಲ್ಲೊಂದಷ್ಟು, ಇಲ್ಲೊಂದಷ್ಟುಎಂಬಂತೆ ತಂದು ತುರುಕಿರುವುದು ಸಿನಿಮಾ ಪೂರ್ತಿಯಾದ ಮೇಲೆ ಎದ್ದು ಕಾಣುತ್ತದೆ. ಸಂಗೀತ, ಛಾಯಾಗ್ರಹಣ, ಪ್ರಮುಖ ಪಾತ್ರಗಳ ನಟನೆಯೆಲ್ಲವೂ ಸಪ್ಪೆ. ಇದೆಲ್ಲದರ ಹೊರತಾಗಿ ಕಡೆಗೆ ಸ್ನೇಹ ಗೆಲ್ಲುವಂತೆ ಮಾಡಿ ಹ್ಯಾಪಿ ಎಂಡಿಂಗ್ ನೀಡಿದ್ದಾರೆ ನಿರ್ದೇಶಕ ಪ್ರಕಾಶ್ ಹೆಬ್ಬಾಳ್.