ಚಿತ್ರ ವಿಮರ್ಶೆ: ಸಮಯದ ಹಿಂದೆ ಸವಾರಿ

By Web DeskFirst Published Jun 29, 2019, 2:46 PM IST
Highlights

ನಾವು ಇವರನ್ನೇ ಕೊಲ್ಲುತ್ತೇವೆ ಅಂದುಕೊಂಡಿರುತ್ತೇವೆ, ಕೊಲೆಯಾದವರು ಇನ್ಯಾರೋ ಆಗಿರ್ತಾರೆ. ಸಹಜ ಸಾವು ಅಂದುಕೊಂಡಿದ್ದು ಮರ್ಡರ್‌ ಆಗಿರಬಹುದು, ಕೊಲೆಯಾಗಿದ್ದಾರೆ ಅಂದುಕೊಂಡವರು ಸಹಜವಾಗಿ ಸಾಯಬಹುದು. ಕಥೆ ಮುಗಿಯಿತು ಅಂದುಕೊಂಡಿರುತ್ತೇವೆ, ವಾಸ್ತವದಲ್ಲಿ ಕಥೆ ಶುರುವಾಗುವುದೇ ಅಲ್ಲಿಂದ. ಅಂದುಕೊಂಡಿದ್ದೆಲ್ಲ ಉಲ್ಟಾಹೊಡೆಯುವ ಈ ಕಾಲದಲ್ಲಿ ತಮ್ಮ ಗೆಳೆಯನ ಕೊಲೆಯ ಹಿಂದಿನ ಸತ್ಯವನ್ನರಸಿ ಹೊರಟ ಗೆಳೆಯರ ಕಥೆಯೇ ‘ಸಮಯದ ಹಿಂದೆ ಸವಾರಿ’.

ಪ್ರಿಯಾ ಕೆರ್ವಾಶೆ

ಪತ್ರಕರ್ತ ಜೋಗಿ ಅವರ ‘ನದಿಯ ನೆನಪಿನ ಹಂಗು’ ಕಾದಂಬರಿಯಾಧರಿಸಿದ ತಯಾರಾದ ಸಿನಿಮಾ. ದಕ್ಷಿಣ ಕನ್ನಡದ ಉಪ್ಪಿನಂಗಡಿ ಪರಿಸರದಲ್ಲಿ ನಡೆಯುವ ನಿರಂಜನ ಎಂಬ ವಿಲಕ್ಷಣ ವ್ಯಕ್ತಿತ್ವದ ಕೊಲೆಯನ್ನೇ ಮೂಲವಾಗಿಟ್ಟು ಸಾಗುವ ಕತೆ.

Latest Videos

ಗೆಳೆಯನ ಸಾವಿನ ಹಿಂದಿನ ಸತ್ಯವನ್ನು ಶೋಧಿಸಲು ಹೊರಡುವ ನಿರ್ದೇಶಕ ರಘುನಂದನ ಹಾಗೂ ಗೆಳೆಯರ ಹುಡುಕಾಟದ ಕಥೆಯೂ ಹೌದು. ಒಂದು ಹಂತದಲ್ಲಿ ಮಿತ್ರರ ಪ್ರಯತ್ನಕ್ಕೆ ಯಶಸ್ಸೂ ಸಿಗುತ್ತದೆ. ಆದರೆ ಆಮೇಲೆ ಈ ವಿಚಾರವೇ ಅವರನ್ನು ಮತ್ತೊಂದು ಮಟ್ಟಕ್ಕೂ ಕರೆದೊಯ್ಯುತ್ತದೆ. ನಿರಂಜನನ ಸಾವನ್ನೇ ಮುಂದಿಟ್ಟು ಅವರೇನು ಮಾಡಹೊರಟರು, ಅಷ್ಟೊತ್ತಿಗೆ ಸಂಭವಿಸುವ ಅನಾಹುತಗಳೇನು ಎನ್ನುವುದನ್ನೆಲ್ಲ ತಿಳಿಯಲು ಸಿನಿಮಾ ನೋಡಬೇಕು.

ಈ ಸಿನಿಮಾದಲ್ಲಿ ಒಂದು ಸಾಲು ಬರುತ್ತದೆ, ‘ಕಾಡು ಸುಡುವಾಗ ಒಣಗೆಲೆ ಮಾತ್ರವಲ್ಲ, ಹಸಿರೂ ಸುಡುತ್ತದೆ.’ ಬೆಂಕಿ ಹಬ್ಬುವಾಗ ನೀನು ಪಾಪಿಯಾ, ಸಜ್ಜನನಾ ಅನ್ನೋದನ್ನು ನೋಡಲ್ಲ. ಅದರ ಕೆನ್ನಾಲಿಗೆ ಎಲ್ಲಾ ಕಡೆ ಸಮಾನವಾಗಿ ಚಾಚುತ್ತದೆ. ‘ಕ್ರೌರ್ಯ’ ಬೆಂಕಿಗೆ ಉಪಮೆಯಾಗಿ ಈ ಸಿನಿಮಾದಲ್ಲಿ ಬಂದಿದೆ. ಆ ಬೆಂಕಿ ಹೊರಗಿಂದಲೂ ಹಬ್ಬಬಹುದು, ನಮ್ಮೊಳಗೇ ಕಿಡಿಯೊಡೆದು ಭುಗಿದೇಳಬಹುದು. ಕೊಲೆಯಾಗಿದ್ದಾನೆ ಅಂದುಕೊಂಡ ನಿರಂಜನನೂ ಎಲ್ಲೋ ಒಂದು ಕಡೆ ಕ್ರೌರ್ಯಕ್ಕೆ ರೂಪಕವಾಗಿ ಕಾಣಿಸುತ್ತಾನೆ. ಅವನು ಸತ್ತಿದ್ದಾನೆ ಅಂತ ಎಲ್ಲರೂ ಅಂದುಕೊಳ್ಳುವ ಹೊತ್ತಿಗೆ ಆತ ಕ್ಯಾಮರಾ ಫ್ರೇಮಿನೊಳಗೆ ಎಂಟ್ರಿ ಪಡೆದು ಬೆಚ್ಚಿ ಬೀಳಿಸುತ್ತಾನೆ!

ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಹೆಸರಾಗಿರುವ ಸಾತ್ವಿಕ ಹಾಗೂ ರಂಗ ಪಯಣ ತಂಡಗಳ ಚೊಚ್ಚಲ ಸಿನಿಮಾವಿದು. ರಂಗಭೂಮಿಯ ಛಾಯೆ ಸಿನಿಮಾದುದ್ದಕ್ಕೂ ದಟ್ಟವಾಗಿದೆ. ಇಲ್ಲಿ ಅದರ ಅಗತ್ಯವಿತ್ತಾ ಅನ್ನುವುದು ಬೇರೆ ಪ್ರಶ್ನೆ. ಮೊದ ಮೊದಲ ಹೆಜ್ಜೆಗಳು ಗಟ್ಟಿಯಾಗಿರುವುದಿಲ್ಲ. ಆದರೆ ಅವು ಸ್ವತಂತ್ರ ನಡಿಗೆಯ ಮೊಳಕೆಗಳಂತಿರುತ್ತವೆ. ಆ ನಿಟ್ಟಿನಲ್ಲಿ ರಾಜ್‌ಗುರು ಹೊಸಕೋಟೆ ಹಾಗೂ ತಂಡದವರದ್ದು ಆಶಾದಾಯಕ ನಡೆ. ಮೊದಲ ಭಾಗದಲ್ಲಿ ಅನುಭವದ ಕೊರತೆ ಕಂಡರೂ ಸಿನಿಮಾ ಕ್ಲೈಮ್ಯಾಕ್ಸ್‌ನತ್ತ ಹೋಗುವ ಹೊತ್ತಿಗೆ ವೃತ್ತಿಪರತೆ ಕಾಣುತ್ತದೆ. ಸಂಗೀತ, ಹಾಡುಗಳು ಚೆನ್ನಾಗಿವೆ. ದಕ್ಷಿಣ ಕನ್ನಡದ ಪ್ರಕೃತಿಯ ಸೌಂದರ್ಯ ಹಾಗೂ ಕ್ರೌರ್ಯವನ್ನು ಸಿನಿಮಟೋಗ್ರಾಫರ್‌ ಸುನಿಲ್‌ ಹಲಗೇರಿ ಪರಿಣಾಮಕಾರಿಯಾಗಿ ಸೆರೆ ಹಿಡಿದಿದ್ದಾರೆ. ಆದರೆ ಪ್ರಾದೇಶಿಕ ಭಾಷೆ ದುಡಿಸಿಕೊಳ್ಳುವಲ್ಲಿ ಕಲಾವಿದರು ಇನ್ನೊಂದಿಷ್ಟುಪಳಗಬೇಕಿತ್ತು. ರಾಜ್‌ಗುರು ಅವರ ಅಭಿನಯ ಚೆನ್ನಾಗಿದೆ. ಉಳಿದವರಲ್ಲಿ ಇನ್ನಷ್ಟೇ ಬೆಳೆಯಬೇಕಿದೆ. ಕಥೆ ಗಟ್ಟಿಯಾಗಿರುವ ಕಾರಣ ನಟನೆಯ ಕೊರತೆ ಅಷ್ಟಾಗಿ ಕಾಡುವುದಿಲ್ಲ.

click me!