ನಟಿ ರಾಧಿಕಾ ಪಂಡಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಅವರದೇ ಫ್ಯಾಮಿಲಿ ಸಂಭ್ರಮಗಳು ಒಂದೆಡೆಯಾದರೆ, ಮತ್ತೊಂದೆಡೆ ಅವರೀಗ ಸುದ್ದಿಯಲ್ಲಿರುವುದು ‘ಆದಿ ಲಕ್ಷ್ಮಿಪುರಾಣ’ಚಿತ್ರದ ಕಾರಣಕ್ಕೂ ಹೌದು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರವೀಗ ಆಡಿಯೋ ಲಾಂಚ್ ಮೂಲಕ ಸದ್ದು ಮಾಡಿದೆ. ಈ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿ. ಮದುವೆಯಾದ ನಂತರ ಮೊದಲು ಕತೆ ಕೇಳಿ ಒಪ್ಪಿಕೊಂಡು ಅಭಿನಯಿಸಿದ ಚಿತ್ರ.
ದೇಶಾದ್ರಿ ಹೊಸ್ಮನೆ
ಸ್ವಲ್ಪ ತಡವಾಗಿಯೇ ಮಗಳಿಗೆ ಐರಾ ಅಂತ ಹೆಸರಿಟ್ಟಿದ್ದೀರಿ, ಆ ಹೆಸರಿನ ವೈಶಿಷ್ಟವೇನು?
ನಿಜ, ಇದಕ್ಕೆ ಸ್ವಲ್ಪ ಟೈಮ್ ತೆಗೆದುಕೊಂಡೆವು. ಒಂದೊಳ್ಳೆ ಹೆಸರು ಬೇಕು ಅನ್ನೋದು ಅದಕ್ಕೆ ಕಾರಣ. ಜತೆಗೆ ಇದೊಂದು ತುಂಬಾ ಯೂನಿಕ್ ಆದ ಹೆಸರು. ನಾವು ಮೊದಲೇ ಅನೌನ್ಸ್ ಮಾಡಿದಂತೆ ವೈಆರ್ ಅಕ್ಷರಗಳಲ್ಲೇ ಈ ಹೆಸರಿದೆ. ಹೆಸರಲ್ಲಿ ಅಪ್ಪ-ಅಮ್ಮನ ಹೆಸರು ಇರಬೇಕು, ಕರೆಯುವುದಕ್ಕೂ ಕ್ಯಾಚಿ ಆಗಿರಬೇಕು, ಕೇಳುವುದಕ್ಕೂ ಮುದ್ದಾಗಿರಬೇಕು ಎನ್ನುವ ನಮ್ಮ ಆಲೋಚನೆಗೆ ಅದು ಪರ್ಫೆಕ್ಟ್ ಎನಿಸುತ್ತೆ. ಐರಾ ಅನ್ನೋದು ಉಲ್ಟಾ ಅಕ್ಷರಗಳ ಮೂಲಕ ಯಶ್-ರಾಧಿಕಾ ಅಂತಲೂ ಆಗಬಹುದು, ಹೆಸರಿನ ಮೊದಲ ಎವೈ ಎನ್ನುವ ಅಕ್ಷರಗಳು ಅಪ್ಪ ಯಶ್ ಅಂತ ಆಗಬಹುದು, ಆರ್‌ಎ ಅನ್ನೋದು ರಾಧಿಕಾ ಅಮ್ಮ ಅಂತಲೂ ಆಗಬಹುದು.
ಯಶ್-ರಾಧಿಕಾ ಮಗಳ ನಾಮಕರಣ ಹೇಗಿತ್ತು? ಚಿತ್ರಲೋಕ
‘ಆದಿ ಲಕ್ಷ್ಮಿ ಪುರಾಣ’ ಸಿನಿಮಾ ಬಗ್ಗೆ ಹೇಳಿ...
ಮದುವೆಯಾದ ನಂತರ ಮೊದಲು ಆಯ್ಕೆ ಮಾಡಿಕೊಂಡ ಸಿನಿಮಾ. ಇದನ್ನು ನಾನು ಒಪ್ಪಿಕೊಂಡಿದ್ದಕ್ಕೆ ಇದ್ದ ಕಾರಣ ಮೂರು. ಕತೆ, ಪ್ರೊಡಕ್ಷನ್ ಹೌಸ್ ಮತ್ತು ಡೈರೆಕ್ಟರ್. ರಾಕ್ಲೈನ್ ಸರ್ ಪ್ರೊಡಕ್ಷನ್ ಹೌಸ್‌ನಲ್ಲಿ ಮೊದಲ ಸಿನಿಮಾ. ಹಾಗೆಯೇ ಕತೆ ಕೂಡ ಚೆನ್ನಾಗಿತ್ತು. ಜತೆಗೆ ಪ್ರಿಯಾ ಅವರ ನಿರ್ದೇಶನವೂ ಕಾರಣವಾಯಿತು. ಹಾಗೆ ನೋಡಿದ್ರೆ ಇಲ್ಲಿ ಮಹಿಳೆಯರ ದರ್ಬಾರು ಜಾಸ್ತಿಯಿದೆ. ಛಾಯಾಗ್ರಹಣ ಮಾಡಿದ್ದು ಕೂಡ ಲೇಡಿ. ಅವರ ಹೆಸರು ಪ್ರೀತಾ.
ಮುಂದೆ ಸಿನಿಮಾ ಜರ್ನಿ ಹೇಗಿರುತ್ತೆ, ನಟನೆಯೋ, ಸಿನಿಮಾ ನಿರ್ಮಾಣವೋ?
ಅದೇನೋ ಗೊತ್ತಿಲ್ಲ ನಾಯಕಿಯರು ಮದುವೆ ಆದ್ಮೇಲೆ ಸಿನಿಮಾಕ್ಕೆ ಬರ್ತಾರೋ, ಇಲ್ಲವೋ ಅಂತ ಅನುಮಾನ ಶುರುವಾಗುತ್ತೆ. ಆದ್ರೆ, ಮದ್ವೆ ಆದ್ರೂ ಸಿನಿಮಾ ಜರ್ನಿ ಇರುತ್ತೆ, ಅದನ್ನು ಡಿಸೈಡ್ ಮಾಡೋದು ನಾನೇ ಆಗಿರುತ್ತೇನೆ ಅಂತ ಮದುವೆಗೂ ಮುನ್ನವೇ ಹೇಳಿದ್ದೆ. ಈಗಲೂ ಅಷ್ಟೇ ಸಿನಿಮಾ ಮಾಡಿ, ಬಿಡಿ ಅಂತ ಯಶ್ ಯಾವತ್ತಿಗೂ ಹೇಳಿಲ್ಲ. ಅದು ಈಗಲೂ ನನ್ನ ನಿರ್ಧಾರಕ್ಕೆ ಸಂಬಂಧಿಸಿದ್ದು. ಸದ್ಯಕ್ಕೆ ಫ್ಯಾಮಿಲಿ ಕಮಿಟ್‌ಮೆಂಟ್. ಮಕ್ಕಳು, ಮನೆ ಅಂತ ಬ್ಯುಸಿ ಆಗಿದ್ದೇನೆ. ಸಿನಿಮಾ ನನ್ನ ಕ್ಷೇತ್ರ. ಸಮಯ ಬಂದಾಗ ನಟಿ ಆಗಿ ಬರ್ತೀನೋ, ಇಲ್ಲವೋ ಪ್ರೊಡಕ್ಷನ್ ಹೌಸ್ ಮೂಲಕ ಬರ್ತೀನೋ ಗೊತ್ತಿಲ್ಲ. ಸದ್ಯಕ್ಕೆ ಡಿಸೈಡ್ ಮಾಡಿಲ್ಲ.
ಹಾಸನದಲ್ಲಿ ಜಮೀನು ತೆಗೆದುಕೊಂಡ್ರಿ, ಅಲ್ಲಿ ಕೃಷಿ ಮಾಡುವ ಯೋಜನೆ ಇದೆಯಾ?
ಇದೊಂಥರ ನನ್ನ ಸೌಭಾಗ್ಯ. ನಾನು ಹುಟ್ಟಿ ಬೆಳೆದಿದ್ದು ನಗರದಲ್ಲಿ. ಕೃಷಿ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ ಮದುವೆಯಾಗಿ ಬಂದ ಮನೆ ಕೃಷಿ ಕುಟುಂಬಕ್ಕೆ ಸೇರಿದ್ದು. ಯಶ್ ಕೂಡ ರೈತಾಪಿ ಹಿನ್ನೆಲೆಯಿಂದ ಬಂದವರು.ಕೃಷಿ ಉದ್ದೇಶದಲ್ಲಿ ಜಮೀನು ಖರೀದಿಸಿದ್ದಾರೆ. ಅಲ್ಲಿ ಏನಾದ್ರು ಆಹಾರ ಬೆಳೆ ಬೆಳೆಯಬೇಕು, ಕೃಷಿ ಸೊಗಸು ಕಾಣಬೇಕೆನ್ನುವ ಆಸೆ ಇದೆ.
ರಾಧಿಕಾ ಪುರಾಣ ಕೇಳಲು ರೆಡಿಯಾಗಿದೆ ಸ್ಯಾಂಡಲ್‌ವುಡ್!
ಲೇಡಿ ಡೈರೆಕ್ಟರ್ ಜತೆಗೆ ಕೆಲಸ ಮಾಡಿದ್ದೀರಿ..
ಡೈರೆಕ್ಟರ್ ಮಾತ್ರವಲ್ಲ ಛಾಯಾಗ್ರಹಣ ಮಾಡಿದ್ದು ಕೂಡ ಲೇಡಿ. ನಿರ್ದೇಶಕಿ, ನಾಯಕಿ ಹಾಗೂ ಛಾಯಾಗ್ರಾಹಕಿ ಸೇರಿ ನಾವು ಮೂವರು ಇಲ್ಲಿದ್ದೇವು. ಫಸ್ಟ್ ಟೈಮ್ ಅಂತಹ ಕಾಂಬಿ ನೇಷನ್‌ನಲ್ಲಿ ನಾನು ಕೆಲಸ ಮಾಡಿದ್ದು. ನಿರ್ದೇಶಕಿ ಪ್ರಿಯಾ ಅವರ ಕೆಲಸ ಮಾತ್ರ ಅದ್ಭುತ ಎನಿಸಿತು.
ಮತ್ತೊಂದು ಸಿಹಿ ಸುದ್ದಿಯ ಬಗ್ಗೆ...
ಏನ್ ಹೇಳೋದೋ ಗೊತ್ತಾಗುತ್ತಿಲ್ಲ.‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಚಿತ್ರದಲ್ಲಿ ಒಂದು ಹಾಡಿದೆ. ಅದೇ ನನ್ನ ಉತ್ತರ. ಅದು ಬಿಟ್ಟರೆ ಇದು ದೇವರ ಆಶೀರ್ವಾದ. ಮತ್ತೊಂದು ಮಗು ಅನ್ನೋದು ನಮ್ಮ ಬಯಕೆ ಆಗಿದ್ದರೂ ದೇವರ ಕೊಡುಗೆ. ಖುಷಿಯಲ್ಲಿದ್ದೇನೆ. ಮಗನೋ, ಮಗಳೋ.. ಆ ಬಗ್ಗೆ ನಾವು ಯೋಚಿಸುವುದಿಲ್ಲ. ಯಾವುದೇ ಮಗುವಾದರೂ ನಮಗೆ ಮಗು ಮಾತ್ರ.