ತಲೆ ಇದ್ದವರಿಗೆ ಮಾತ್ರ

By Web DeskFirst Published Aug 11, 2018, 2:01 PM IST
Highlights

ಆತ್ಮದ ಜತೆಗೆ ಭಯ ಹುಟ್ಟಿಸಲಿಕ್ಕೆ ಒಂದು ಕರಿ ಬೆಕ್ಕು, ಭಯ ಪಡಲಿಕ್ಕೆಂದೇ ನಾಲ್ಕು ಮಂದಿ ಕಲಾವಿದರು, ಒಂದು ಟ್ವಿಸ್ಟ್ ಗಾಗಿ ಸತ್ತಿರುವ ವ್ಯಕ್ತಿಯ ಜೀವಂತ ತಲೆ! ಇದೇ ಕನ್ನಡದ ಅಭಿಸಾರಿಗೆ ಚಿತ್ರ. ಆದರೆ ಇದು ತಲೆ ಇದ್ದವರಿಗೆ ಮಾತ್ರ. 

ಅತಿಯಾದ ಪ್ರೀತಿ ಮತ್ತು ಆತ್ಮದ ಕತೆಯನ್ನು ಸಾಧ್ಯವಾದಷ್ಟು ಹಿಗ್ಗಿಸಿ ಹೇಳುತ್ತಲೇ ಹೋಗುವ ಸಿನಿಮಾ ‘ಅಭಿಸಾರಿಕೆ’. ಸಾವು, ಆತ್ಮ, ಕಾಡು, ಕತ್ತಲೆ, ಒಂಟಿ ಮನೆ, ಹಿನ್ನೆಲೆ ಸಂಗೀತ... ಇದೇ ಅಂಶಗಳನ್ನೇ ಅಳವಡಿಸಿಕೊಂಡಿರುವ ‘ಅಭಿಸಾರಿಕೆ’ಯದ್ದು ಅತಿಯಾಗಿ ಪ್ರೀತಿಸಿದವನ ಆತ್ಮಕತೆ.

ಈ ಆತ್ಮದ ಜತೆಗೆ ಭಯ ಹುಟ್ಟಿಸಲಿಕ್ಕೆ ಒಂದು ಕರಿ ಬೆಕ್ಕು, ಭಯ ಪಡಲಿಕ್ಕೆಂದೇ ನಾಲ್ಕು ಮಂದಿ ಕಲಾವಿದರು, ಒಂದು ಟ್ವಿಸ್ಟ್ ಗಾಗಿ ಸತ್ತಿರುವ ವ್ಯಕ್ತಿಯ ಜೀವಂತ ತಲೆ! ಪ್ರೀತಿಗಾಗಿ ಸೈಕೋನಂತೆ ವರ್ತಿಸುವ ಒಬ್ಬಾತ. ಈತನ ಕಾಟ ತಡೆಯಲಾರದೆ ಹಲವು ಬಾರಿ ಎಚ್ಚರಿಕೆ ಕೊಡುವ ಹುಡುಗಿ. ಆದರೂ ಆತ ಮಾತ್ರ ತನ್ನ ಪ್ರೀತಿಯಿಂದ ಹಿಂದಕ್ಕೆ ಸರಿಯಲ್ಲ. ಆಕೆ ಸಿಟ್ಟು ಮಾಡಿಕೊಂಡರೆ ಆತನಿಗೆ ಖುಷಿ, ತನ್ನ ಬೈಯುತ್ತಿದ್ದರೆ ಸಂಭ್ರಮ. ಇಂಥ ಪ್ರೇಮಿಯನ್ನು ಹಿಂದೆ ಕಟ್ಟಿಕೊಂಡಿರುವ ಹುಡುಗಿಗೆ ಮತ್ತೊಬ್ಬ ಪ್ರೇಮಿಯೂ ಇದ್ದಾನೆ. ಆತನೆಂದರೆ ಅವಳಿಗೆ ಪಂಚ ಪ್ರಾಣ. ಆತನ ಜತೆ ಜೀವನ ಸಾಗಿಸಬೇಕು ಎಂಬುದು ಆಕೆಯ ಮನದಾಸೆ. 

ಈ ನಡುವೆ ಈ ಸೈಕೋ ಪ್ರೇಮಿಯ ಹಿಂದೆ ಮತ್ತೊಂದು ಗ್ಯಾಂಗ್ ಬೇಟೆಗೆ ನಿಂತಿದೆ. ಅವರೆಲ್ಲ ಸೇರಿ ಏನು ಮಾಡುತ್ತಾರೆ ಎಂಬುದು ಚಿತ್ರದ ಒಟ್ಟು  ಕತೆ ಮತ್ತು ಟ್ವಿಸ್ಟ್. ಛಾಯಾಗ್ರಾಹಣ, ಸಂಗೀತ, ಸಂಕಲನ ಹೀಗೆ ಚಿತ್ರದ ಯಾವುದೇ ತಾಂತ್ರಿಕ ವಿಭಾಗ ಕತೆಗೆ ಸಾಥ್ ಕೊಟ್ಟಿಲ್ಲ. ತಯಾರಿಯ ಕೊರತೆ ನಿರೂಪಣೆ, ಪಾತ್ರದಾರಿಗಳ ಸಂಯೋಜನೆಯಲ್ಲಿ ಕಾಣುತ್ತದೆ. ಕತೆಯ ಮೊದಲ ಬಾಗ ಹೇಗೋ ಸಾಗಿ, ವಿರಾಮದ ನಂತರ ಹಾರರ್ ತಿರುವು ಪಡೆದುಕೊಳ್ಳುತ್ತದೆ. 

ವಿರಾಮದ ನಂತರ ಕರಿ ಬೆಕ್ಕು ಮತ್ತು ಅಶೋಕ್ ಪಾತ್ರ ಚಿತ್ರವನ್ನು ಲಿಫ್ಟ್ ಮಾಡಿದರೆ, ಸೈಕೋ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಯಶವಂತ್ ಶೆಟ್ಟಿ, ಇಡೀ ಚಿತ್ರವನ್ನು ಹೊತ್ತುಕೊಂಡು ಸಾಗುತ್ತಾರೆ. 

click me!