ಸೇಡಿನ ಕಥೆಯ ರೋಚಕ ಎಪಿಸೋಡು ‘ಖನನ’ !

By Web Desk  |  First Published May 11, 2019, 10:46 AM IST

ಹುಟ್ಟೂರ ಪ್ರೇಮ, ನಿರಂತರ ಜಗಳದ ದಾಂಪತ್ಯ, ಗೆಲುವು ಸಿಗದ ಪ್ರೀತಿ, ಮೋಸ, ಹಾದರ, ವಂಚನೆ, ದ್ವೇಷ ಎಲ್ಲವನ್ನೂ ಒಟ್ಟಿಗೆ ಕಟ್ಟಿಕೊಟ್ಟಿರುವ ಸಿನಿಮಾ ಇದು. ಈ ಚಿತ್ರದ ಆಧಾರವೇ ನಾಯಕ ಆರ್ಯವರ್ಧನ್‌. ಸಾಮಾನ್ಯವಾಗಿ ನಿರ್ಮಾಪಕರ ಮಗನ ಸಿನಿಮಾ ಎಂದರೆ ಬೇಜಾನ್‌ ಆ್ಯಕ್ಷನ್ನು, ಸಿಕ್ಸ್‌ಪ್ಯಾಕ್‌ ಶೋ ಎಲ್ಲವೂ ಇರುತ್ತದೆ. ಆದರೆ ಅವ್ಯಾವುದೂ ಇಲ್ಲಿ ಇಲ್ಲ ಅನ್ನುವುದೇ ಈ ಚಿತ್ರದ ಹೆಗ್ಗಳಿಕೆ.


ರಾಜೇಶ್‌ ಶೆಟ್ಟಿ

ಇದೊಂದು ರಿವೇಂಜ್‌ ಡ್ರಾಮಾ ಕೆಟಗರಿಗೆ ಸೇರಿದ ಸಿನಿಮಾ. ಒಂದೂರಲ್ಲೊಂದು ಕುಟುಂಬ ಇರುತ್ತದೆ. ಗಂಡ ಮತ್ತು ಹೆಂಡತಿ. ಗಂಡನಿಗೆ ಹಳ್ಳಿ ವ್ಯಾಮೋಹ. ಹೆಂಡತಿಯ ಆಸೆ ಏನು ಅಂತ ಸುಲಭಕ್ಕೆ ಗೊತ್ತಾಗುವುದಿಲ್ಲ. ಗೊತ್ತಾಗುವ ಹೊತ್ತಿಗಾಗಲೇ ಬೇಲಿ ಹಾರಿಯಾಗಿರುತ್ತದೆ. ಪತಿ, ಪತ್ನಿ ಔರ್‌ ವೊ ಥರದ ಸಿನಿಮಾಗಳು ಚಿತ್ರರಂಗಕ್ಕೆ ಹೊಸತಲ್ಲ. ಮೋಸ ಹೇಗೆ ಆಗುತ್ತದೆ ಮತ್ತು ಹೇಗೆ ದ್ವೇಷ ತೀರಿಸಿಕೊಳ್ಳಬಹುದು ಅನ್ನುವುದಷ್ಟೇ ಹೊಸತು. ಅದನ್ನು ಚಿತ್ರಕತೆಯಲ್ಲಿ ಸಶಕ್ತವಾಗಿ ತರುವುದು ಸವಾಲು. ಆ ಸವಾಲನ್ನು ಗೆಲ್ಲಲು ನಿರ್ದೇಶಕರು ಭಾರಿ ಶ್ರಮ ಪಟ್ಟಿದ್ದಾರೆ.

Tap to resize

Latest Videos

ಚಿತ್ರ: ಖನನ

ನಿರ್ದೇಶನ: ರಾಧಾ

ತಾರಾಗಣ: ಆರ್ಯವರ್ಧನ್‌, ಕರಿಷ್ಮಾ ಬರುಹಾ, ಯುವಕಿಶೋರ್‌, ಅವಿನಾಶ್‌

ನಿರ್ಮಾಣ: ಶ್ರೀನಿವಾಸ ರಾವ್‌

ಒಬ್ಬ ವ್ಯಕ್ತಿಯನ್ನು ಒಂದಿಡೀ ದಿನ ಉಸಿರಾಡದಂತೆ ಮಾಡಿ ಸತ್ತ ಎಂದು ಘೋಷಿಸಿ ಮರುದಿನ ಅವನನ್ನು ವಾಪಸ್‌ ಈ ಲೋಕಕ್ಕೆ ಕರೆತರುತ್ತಾರೆ. ಅವರು ಆತನನ್ನು ವಾಪಸ್‌ ಕರೆತರುವುದಕ್ಕೆ ಮಾಡಿದ ತಂತ್ರವೂ ಅಮೋಘವಾದದ್ದು. ಹೂತು ಹಾಕಿದ ಅವನ ಗೋರಿಯನ್ನು ನಾಯಿಯೇ ಅಗೆದು ಅವನು ಆಚೆ ಬರುವಂತೆ ಮಾಡಿದ್ದನ್ನು ನೋಡುವಾಗ ಬೆರಗಾಗದೆ ವಿಧಿಯಿಲ್ಲ.

ಚಿತ್ರ ವಿಮರ್ಶೆ: ಜಕ್ಕಣಚಾರಿ ಅವನ ತಮ್ಮ ಶುಕ್ಲಾಚಾರಿ

ಥ್ರಿಲ್ಲರ್‌ ಸಿನಿಮಾದಲ್ಲಿ ಸಸ್ಪೆನ್ಸ್‌ ಇರುತ್ತದೆ. ಇಲ್ಲೂ ಹಲವಾರು ಸಸ್ಪೆನ್ಸ್‌ ಉಂಟು. ನೀವು ಹುಡುಕಬೇಕು. ಬೋನಸ್ಸು ಎಂಬಂತೆ ಕಾಮಿಡಿ ಸೀನುಗಳೂ ಇವೆ. ಓಂಪ್ರಕಾಶ್‌ ರಾವ್‌, ಬ್ಯಾಂಕ್‌ ಜನಾರ್ದನ್‌ ಮುಂತಾದ ಘಟಾನುಘಟಿಗಳೇ ಇದ್ದಾರೆ. ಕಾಮಿಡಿ ಮಾತ್ರ ನೀವೇ ಕಂಡುಹಿಡಿಯಬೇಕು. ಅಷ್ಟೆಲ್ಲಾ ಇದ್ದೂ ನೋಡಿಸಿಕೊಂಡು ಹೋಗುವ ಗುಣವೂ ಈ ಸಿನಿಮಾಗಿದೆ. ಮುಂದೆ ಏನೇನು ನಡೆಯಬಹುದು ಅನ್ನುವ ಅಂದಾಜು ಮೊದಲೇ ಸಿಗುತ್ತದೆ.

ಕನ್ನಡದ ನಟ ಆರ್ಯವರ್ಧನ್‌ ಹೀರೋ ಆಗಲು ರೆಡಿಯಾಗಿಯೇ ಬಂದಿದ್ದಾರೆ. ಅವರಿಗೆ ಶ್ರದ್ಧೆ ಮತ್ತು ತಾಕತ್ತು ಎರಡೂ ಇದೆ. ಉಳಿದಿದ್ದು ದೈವೇಚ್ಛೆ.

click me!