
ಕೆಂಡ
ಚಿತ್ರದ ನಿರ್ದೇಶಕ ಕೃಷ್ಣ ಸಾಯಿ ಈಗಾಗಲೇ ತಮಿಳಿನಲ್ಲಿ ಮೂರ್ನಾಲ್ಕು ಚಿತ್ರಗಳ ನಿರ್ದೇಶನ ಮಾಡಿ ಕನ್ನಡಕ್ಕೆ ಬಂದಿದ್ದಾರೆ. ಸಂಗೀತ ನಿರ್ದೇಶಕ ಯತೀಶ್ ತೆಲುಗು ಮೂಲದವರು. ಬಂಡವಾಳ ಹೂಡಿರುವ ಕೌಶಲ್ ಮಹಾಜನ್ ಮತ್ತು ರಾಜ್ ಆನಂದ್ ಪಂಜಾಬ್ ಮೂಲದವರು. ಹೀಗೆ ಈ ತ್ರಿಮೂರ್ತಿಗಳೂ ಬೇರೆ ಬೇರೆ ದಿಕ್ಕಿನಿಂದ ಬಂದು ಸೇರಿ ಕನ್ನಡದಲ್ಲಿ ನೋಡಬಹುದಾದ ಒಂದು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಹೆತ್ತವರ ದುಡ್ಡಿನಿಂದ ಶೋಕಿ ಮಾಡಿಕೊಂಡು, ಬದುಕಿನ ಬೆಲೆ ತಿಳಿದುಕೊಳ್ಳದೇ ಸುತ್ತಾಡುವ ಹುಡುಗರು ಅಮೋಘ್ ರಾಹುಲ…, ಶಂಕರ್ ಶ್ರೀಹರಿ ಮತ್ತು ಮದನ್ ಗೌಡ. ಇವರಿಗೆ ಜೊತೆಯಾಗಿರುವುದು ನಿಮಿಷ, ರಜನಿ ಭಾರದ್ವಾಜ್ ಮತ್ತು ನೀತು ಬಾಲ.
ತಾರಾಗಣ: ಅಮೋಘ್ ರಾಹುಲ…, ಶಂಕರ್ ಶ್ರೀಹರಿ, ಮದನ್ ಗೌಡ, ನಿಮಿಷ, ಸಂಯುಕ್ತ ಹೊರನಾಡು, ರಜನಿ ಭಾರದ್ವಾಜ್, ನೀತು ಬಾಲ, ಕೃಷ್ಣ ಹೆಬ್ಬಾಳೆ, ಮನ್‌ದೀಪ್ ರಾಯ್, ಟೆನಿಸ್ ಕೃಷ್ಣ, ವಿಜಯ್ ಚೆಂದೂರ್.
ನಿರ್ದೇಶನ: ಕೃಷ್ಣ ಸಾಯಿ
ನಿರ್ಮಾಣ: ಕೌಶಲ್ ಮಹಾಜನ್, ರಾಜ್ ಆನಂದ್
ಸಂಗೀತ: ಯತೀಶ್
ಛಾಯಾಗ್ರಹಣ: ಆರ್.ಕೆ. ಪ್ರತಾಪ್
ರೇಟಿಂಗ್ ***
ಈ ಮೂವರು ಶ್ರೀಮಂತರ ಮಕ್ಕಳನ್ನೇ ಟಾರ್ಗೆಟ್ ಮಾಡಿ ಅವರಿಂದ ಹಣ ಕೀಳುವುದಕ್ಕಾಗಿಯೇ ಪೊಲೀಸ್ ಅಧಿಕಾರಿಯಾದ ಕೃಷ್ಣ ಹೆಬ್ಬಾಳೆ, ಮನ್‌ದೀಪ್ ರಾಯ್ ಅವರು ಸಂಯುಕ್ತ ಹೊರನಾಡು, ವಿಜಯ್ ಚೆಂದೂರ್ ಜೊತೆ ಸೇರಿ ಖೆಡ್ಡವೊಂದನ್ನು ತೋಡುತ್ತಾರೆ. ಈ ಖೆಡ್ಡದಲ್ಲಿ ತಾವಾಗಿಯೇ ಬಂದು ತಮಗೇ ಗೊತ್ತಿಲ್ಲದ ಹಾಗೆ ಬಕ್ರಗಳಾಗುತ್ತಾರೆ ನಾಯಕರು. ಹೀಗೆ ಬಕ್ರ ಮಾಡುವುದು ಮತ್ತು ಬಕ್ರ ಆಗುವುದರ ನಡುವಲ್ಲಿ ಅಚ್ಚುಕಟ್ಟಾದ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಸೇರಿಸಿ ನೋಡುಗನ ಕುತೂಹಲವನ್ನು ತಣಿಸುವ ಗುಣಮಟ್ಟದ ಪ್ರಯತ್ನ ಮಾಡಿದ್ದಾರೆ ಕೃಷ್ಣ ಸಾಯಿ.
ಚಿತ್ರದ ಮೊದಲಾರ್ಧ ಬರೀ ಶೋಕಿ, ಸುತ್ತಾಟಗಳಲ್ಲೇ ಸಾಗಿ ಬೇಸರ ತಂದೊಡ್ಡುತ್ತದೆ. ದ್ವಿತೀಯಾರ್ಧದಲ್ಲಿಯೇ ಅಸಲಿ ಕತೆ ತೆರೆದುಕೊಳ್ಳುವುದು. ಪ್ರೀತಿ, ಪ್ರೇಮ ಇಲ್ಲಿ ಇದ್ದೂ ಇಲ್ಲದಂತೆ. ಕುಡಿತಕ್ಕಾಗಿಯೇ ಮೀಸಲಿಟ್ಟಜಾಗ, ದೃಶ್ಯಗಳ ರಿಪಿಟೇಷನ್‌ಗಳನ್ನು ಕಡಿಮೆ ಮಾಡಿದ್ದರೆ ಚಿತ್ರ ಇನ್ನೊಂದು ಹಂತಕ್ಕೆ ಏರಬಹುದಾದ ಸಾಧ್ಯತೆ ಇದ್ದೇ ಇತ್ತು. ಅದನ್ನು ಕೈ ಚೆಲ್ಲಿದ್ದಾರೆ ನಿರ್ದೇಶಕರು. ಸಂಗೀತ ಮತ್ತು ಕ್ಯಾಮರಾ ಓಕೆ. ಹೆಚ್ಚಿನವರಿಗೆ ಇದು ಮೊದಲ ಚಿತ್ರವಾದರೂ ಚೆಂದವಾದ ನಟನೆ ಇದೆ.
ಮೂವರನ್ನು ಬಕ್ರಾ ಮಾಡಿ ದುಡ್ಡು ದೋಚಿ ಸಂಭ್ರಮಿಸುವಲ್ಲಿಗೆ ಚಿತ್ರ ಕೊನೆಯಾಗುತ್ತದೆಯಾದರೂ ಇವರನ್ನೂ ಬಕ್ರಾ ಮಾಡಲು ಮತ್ತೊಬ್ಬ ಕಾದು ಕುಳಿತಿದ್ದಾನೆ. ಅವನು ತನ್ನ ಆಟವನ್ನು ಮುಂದಿನ ಭಾಗದಲ್ಲಿ ತೋರಿಸುತ್ತಾನೆ. ಅದಕ್ಕಾಗಿಯೇ ಮತ್ತೊಂದು ‘ತ್ರಯ ಪಾರ್ಟ್ 2’ ತೆರೆಗೆ ಬರಲಿದೆ. ಒಟ್ಟಿನಲ್ಲಿ ಪಿಕ್ಚರ್ ಅಬಿ ಬಾಕಿ ಹೈ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.