ಕದ್ದದ್ದು ಕಡಿಮೆ, ಮುಚ್ಚಿಟ್ಟದ್ದು ಜಾಸ್ತಿ'ಕದ್ದು ಮುಚ್ಚಿ' !

By Web DeskFirst Published Feb 23, 2019, 9:55 AM IST
Highlights

ಹದಿಹರೆಯದ ಮನಸ್ಸುಗಳು, ಫ್ಯಾಮಿಲಿ ಸೆಂಟಿಮೆಂಟ್‌, ಮಲೆನಾಡಿನ ಹಸಿರಿನ ಗಿರಿ ವನಗಳು ಮತ್ತು ಪ್ರೀತಿ... ಇದು ‘ಕದ್ದು ಮುಚ್ಚಿ’ ಚಿತ್ರಕ್ಕಿರುವ ಮುಖ್ಯ ಪಿಲ್ಲರ್‌ಗಳು.

ಆರ್‌ ಕೇಶವಮೂರ್ತಿ

ಹಸಿರು ಪರದೆಯ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಪ್ರೀತಿಯ ಆಟ ಹೆತ್ತವರು ಮತ್ತು ಮಕ್ಕಳ ನಡುವೆ ಆಪ್ತವಾಗಿ, ಒಮೊಮ್ಮೆ ಮಂದಗತಿಯಲ್ಲಿ ಸಾಗುತ್ತಿರುವಾಗಲೇ ಹಂಸಲೇಖ ಅವರ ಹಾಡುಗಳು ಬಂದ ಚಿತ್ರದ ಓಟಕ್ಕೆ ಆಗಾಗ ಲೈಫ್‌ ಜಾಕೇಟ್‌ ಸ್ಥಾನ ತುಂಬುತ್ತದೆ. ಕತೆ ವಿಚಾರದಲ್ಲಿ ಅದೇ ಹಳೆಯ ಪ್ರೀತಿ- ಪ್ರೇಮ ಕತೆ ಅನಿಸಿದರೂ ನಿರ್ದೇಶಕರು ನಿರೂಪಣೆ ಮಾಡಿರುವ ವಿಧಾನ ಚೆನ್ನಾಗಿದೆ. ಇಲ್ಲಿ ಇಡೀ ಸಿನಿಮಾ ನಡೆಯುವುದು ಹಂಸಲೇಖ ಅವರ ಗೀತೆಗಳು, ನಾಯಕಿ ಹಾಗೂ ನಾಯಕನ ಹೆಗಲ ಮೇಲೆ. ಈ ಮೂವರು ‘ಕದ್ದು ಮುಚ್ಚು’ ಆಗಾಗ ಸಿನಿಮಾ ನೋಡಿಸಿಕೊಂಡು ಹೋಗುತ್ತಾರೆ.

ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬರುವ ಹುಡುಗ. ಆತನಿಗೆ ಕಣ್ಣಿಗೆ ಆಕಸ್ಮಿಕವಾಗಿ ಕಾಣುವ ಮಲೆನಾಡ ಬೆಡಗಿ. ಡ್ರೈವಿಂಗ್‌ ಕಲಿಯುವ ಹುಚ್ಚು ಹುಡುಗಿ, ಯಾವಾಗಲೇ ಕಾರಿನಲ್ಲಿ ಓಡಾಡಿಕೊಂಡಿರುವ ಹುಡುಗನ ಮೇಲೆ ಲವ್ವಾಗಿ ಕೂಡಲೇ ಬ್ರೇಕಪ್‌ ಆಗುವ ಹೊತ್ತಿಗೆ ಸಿನಿಮಾ ಅರ್ಧದ ಗಡಿ ರೇಖೆ ಮೇಲೆ ಬಂದು ಕೂರುತ್ತದೆ. ಇಷ್ಟಪಟ್ಟಹುಡುಗನನ್ನೇ ‘ನೋ’ ಎಂದಿದ್ದು ಯಾಕೆಂಬುದು ಮುಂದಿನ ಕತೆ ಎನಿಸಿಕೊಂಡರೆ ನಿರ್ದೇಶಕರು ಅಲ್ಲೊಂದು ತಿರುವು ಕೊಡುತ್ತಾರೆ. ನಾಯಕಿಗೆ ಬೇರೊಬ್ಬರ ಜತೆ ನಿಶ್ಚಿತಾರ್ಥ ಮಾಡಿಸುತ್ತಾರೆ. ನಾಯಕನೇ ನಾಯಕಿಯ ಮದುವೆಯ ಸಾರಥಿ ಆಗುತ್ತಾನೆ. ಹಾಗಾದರೆ ಇಬ್ಬರು ಸೇರೋದಿಲ್ಲವೇ? ಎಂದರೆ ನೀವು ಸಿನಿಮಾ ನೋಡಬೇಕು. ಆ ಮಟ್ಟಿಗೆ ನಿರೂಪಣೆಯಲ್ಲಿ ಕೊಂಚು ಹೊಸತನ ಕಾಯ್ದುಕೊಂಡು ಹೋಗಿದ್ದಾರೆ. ಕುಟುಂಬದ ಒತ್ತಡಕ್ಕೆ ಮಣಿದು ನಾಯಕಿ ಪ್ರೀತಿಸಿದ ಹುಡುಗನಿಗೆ ಕೈ ಕೊಡುತ್ತಾಳೆಯೇ ಅಥವಾ ತನ್ನ ಪ್ರೀತಿಯನ್ನು ಹುಡುಗ ದಕ್ಕಿಸಿಕೊಳ್ಳುತ್ತಾನೆಯೇ ಎಂಬುದು ಚಿತ್ರದ ಮುಂದಿನ ಕುತೂಹಲ. ಪ್ರೀತಿಯ ಎಳೆಯೊಂದಿಗೆ ಬರುವ ಕೌಟುಂಬಿಕ ದೃಶ್ಯಗಳು ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌.

ಆದರೆ, ಸಿನಿಮಾ ತಾಂತ್ರಿಕವಾಗಿ ಸಾಕಷ್ಟುಸಪ್ಪೆ ಎನಿಸಿಕೊಂಡಿದೆ. ಛಾಯಾಗ್ರಾಹಣ, ಸಂಕಲನ ಇದ್ಯಾವುದೂ ಚಿತ್ರಕ್ಕೆ ಪೂರಕವಾಗಿಲ್ಲ. ಅಲ್ಲದೆ ನಿರ್ದೇಶಕರ ಶ್ರಮವನ್ನು ಇಡೀ ಚಿತ್ರದ ಕಲಾವಿದರು ಅರ್ಥ ಮಾಡಿಕೊಂಡಿದ್ದರೆ ಸಿನಿಮಾ ಮತ್ತಷ್ಟುಸುಂದರವಾಗಿ ಮೂಡಿಬರುವುದಕ್ಕೆ ಸಾಧ್ಯವಾಗುತ್ತಿತ್ತು. ಆದರೆ, ಹಂಸಲೇಖ ಅವರ ಸಂಗೀತ- ಹಾಡು ಮತ್ತು ಕತೆಯ ಕಾರಣಕ್ಕೆ ಒಮ್ಮೆ ನೋಡುವಂತಹ ಸಿನಿಮಾ ಇದು. ನಾಯಕ ವಿಜಯ್‌ ಸೂರ್ಯ, ನಾಯಕಿ ಮೇಘಶ್ರೀ, ದೊಡ್ಡಣ್ಣ, ಸುಚೇಂದ್ರ ಪ್ರಸಾದ್‌ ಅವರ ಪಾತ್ರಗಳು ಪ್ರೇಕ್ಷಕರಲ್ಲಿ ಹೆಚ್ಚು ಅಂಕಗಳಿಸಿದರೆ, ಚಿಕ್ಕಣ್ಣ ಅವರ ಕಾಮಿಡಿ ಟೈಮಿಂಗ್‌ನಿಂದ ನಗಿಸುವುದಕ್ಕೆ ಪ್ರಯತ್ನಿಸಿದ್ದಾರೆ.

ಚಿತ್ರ: ಕದ್ದು ಮುಚ್ಚಿ

ತಾರಾಗಣ: ವಿಜಯ್‌ ಸೂರ್ಯ, ಮೇಘಶ್ರೀ, ಸುಚೇಂದ್ರ ಪ್ರಸಾದ್‌, ದೊಡ್ಡಣ್ಣ, ರಾಜೇಶ್‌ ನಟರಂಗ್‌, ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಎಂ ಎಸ್‌ ಉಮೇಶ್‌, ಎಂ ಎಸ್‌ ಕುಮಾರಸ್ವಾಮಿ, ಅಶ್ವಿನಿ ಗೌಡ

ನಿರ್ದೇಶನ: ವಸಂತ್‌ರಾಜ್‌

ನಿರ್ಮಾಣ: ವಿ ಜಿ ಮಂಜುನಾಥ್‌

ಛಾಯಾಗ್ರಾಹಣ: ವಿಲಿಯಮ್‌ ಡೇವಿಡ್‌

ಸಂಗೀತ: ಹಂಸಲೇಖ

click me!