ಐಎಎಸ್ ಆಫೀಸರ್ ಮತ್ತು ವ್ಯವಸ್ಥೆಯ ನಡುವಿನ ಕತೆಯನ್ನು ಅತ್ಯಂತ ಸಂಯಮದಿಂದ, ಯಾವುದೇ ಅತಿರೇಕದ ಆ್ಯಕ್ಷನ್ ದೃಶ್ಯಗಳಿಲ್ಲದೆ, ಬಿಲ್ಡಪ್ ಡೈಲಾಗ್‌ಗಳಿಲ್ಲದೆ, ರೊಮ್ಯಾಂಟಿಕ್ ಹಾಡುಗಳಿಲ್ಲದೆ, ತುಂಬಾ ರಿಯಲಿಸ್ಟಿಕ್ ಆಗಿ ಹೇಳಿರುವುದು ಈ ಚಿತ್ರದ ಹೆಚ್ಚುಗಾರಿಕೆ.
ರಾಜೇಶ್ ಶೆಟ್ಟಿ
ಇಲ್ಲೊಬ್ಬ ಐಎಎಸ್ ಆಫೀಸರ್. ತುಂಬಾ ದಕ್ಷ ಮತ್ತು ಪ್ರಾಮಾಣಿಕ. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಜನಪರ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಅಲ್ಲಿನ ಜನ ಪ್ರತಿನಿಧಿಗಳನ್ನು ಎದುರಿಸಿ ಅವರ ಕೋಪಕ್ಕೆ ತುತ್ತಾಗುತ್ತಾರೆ. ಅಲ್ಲಿಂದ ಅರ್ಧದಲ್ಲೇ ನೇರ ಬೆಂಗಳೂರಿಗೆ ವರ್ಗಾವಣೆ. ಇಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅಲ್ಲಿಂದ ಮತ್ತೆ ಭ್ರಷ್ಟರ ವಿರುದ್ಧದ ಹೋರಾಟ ಶುರು. ಲ್ಯಾಂಡ್ ಮಾಫಿಯಾ, ತೆರಿಗೆ ಕಳ್ಳರ ವಿರುದ್ಧ ಯುದ್ಧ. ಮತ್ತೆ ವ್ಯವಸ್ಥೆಯ ಕೋಪಕ್ಕೆ ಗುರಿ.
ಇಷ್ಟಾಗುವಾಗ ನೋಡುಗನ ಮನಸ್ಸಲ್ಲಿ ಮೂಡಿದ್ದ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿರುತ್ತದೆ. ಬಹಳ ಹಿಂದಿನಿಂದಲೇ ಐಎಎಸ್ ಡಿಕೆ ರವಿ ಕತೆ ಆಧರಿಸಿದ ಸಿನಿಮಾ ಎಂದೇ ಬಿಂಬಿತವಾಗಿದ್ದ ಸಿನಿಮಾ ಇದು. ಆದರೆ ಚಿತ್ರತಂಡ ಎಲ್ಲಾ ಐಎಎಸ್ ಆಫೀಸರ್‌ಗಳ ಕತೆ ಇದು ಎಂದಿತ್ತು. ಅದೇ ಥರ ಈ ಸಿನಿಮಾದ ನಾಯಕನ ಹೆಸರು ಸುಭಾಷ್. ಡಿಕೆ ರವಿಯವರು ಎಲ್ಲೆಲ್ಲಿ ಕೆಲಸ ಮಾಡಿದ್ದರೋ ಅದೇ ಜಾಗದಲ್ಲಿ ಸುಭಾಷ್ ಕೂಡ ಕೆಲಸ ಮಾಡಿರುತ್ತಾರೆ.
ಇಂಟರ್ವಲ್ ಬರುವ ಹೊತ್ತಿಗೆ ಎಲ್ಲರಿಗೂ ಎಲ್ಲವೂ ಸ್ಪಷ್ಟವಾಗುತ್ತದೆ. ಕಡೆಗೆ ಏನಾಗುತ್ತದೆ ಅನ್ನುವುದೂ ತಿಳಿದುಹೋಗುತ್ತದೆ. ಅದು ಈ ಚಿತ್ರದ ಮಿತಿ. ಆದರೂ ಚಿತ್ರ ನೋಡಿಸಿಕೊಂಡು ಹೋಗುತ್ತದೆ ಅನ್ನುವುದೇ ಈ ಚಿತ್ರದ ಶಕ್ತಿ.
ಇಲ್ಲಿ ಆಡಂಬರವಿಲ್ಲ, ಹೈವೋಲ್ಟೇಜ್ ಸಂಭಾಷಣೆಗಳಿಲ್ಲ. ಕೆಲವೊಮ್ಮೆ ಎಲ್ಲಾ ಕಡೆ ಕೇಳುವ ತುಂಬಾ ಸಪ್ಪೆ ಭಾಷಣದಂತೆ ಮಾತುಗಳು ಭಾಸವಾಗುತ್ತದೆ. ಸಿನಿಮಾ ಮುಂದೆಯೇ ಹೋಗುತ್ತಿಲ್ಲ ಅಂತಲೂ ಅನ್ನಿಸುತ್ತದೆ. ಆದರೆ ಈ ಕತೆಗೊಂದು ಆತ್ಮ ಇದೆ. ಅದು ಈ ಚಿತ್ರವನ್ನು ಕೈಹಿಡಿದುಕೊಂಡು ಮುನ್ನಡೆಸುತ್ತದೆ. ಸಿನಿಮಾದ ಆರಂಭದಲ್ಲೇ ನಿರ್ದೇಶಕರು ಬಲಿ ಮತ್ತು ವಾಮನನ ಕತೆ ಹೇಳುತ್ತಾರೆ. ನ್ಯಾಯವಾಗಿ ಬದುಕುತ್ತಿದ್ದ ದೊರೆ ಬಲಿಯನ್ನು ವ್ಯವಸ್ಥೆ ಬಲಿ ತೆಗೆದುಕೊಂಡಿತು ಎಂಬ ಕತೆಯಲ್ಲೇ ನಿರ್ದೇಶಕರು ಸೂಕ್ಷ್ಮವಾಗಿ ಈ ಕಾಲದ ಆಧುನಿಕ ಕತೆಯನ್ನೂ ಹೇಳಿಬಿಡುತ್ತಾರೆ.
ರಕ್ತ ಕುದಿಯದಂತೆ ಸಾವಧಾನದಿಂದ ಕತೆ ಹೇಳಿರುವ ನಿರ್ದೇಶಕ ಜೇಕಬ್ ವರ್ಗೀಸ್ ಕಥನ ಶೈಲಿ ಮೆಚ್ಚುಗೆಗೆ ಅರ್ಹ. ಆದರೂ ಕ್ಲೈಮ್ಯಾಕ್ಸ್‌ನಲ್ಲಿ ಸುಭಾಷ್ ಸೋಲು ಪ್ರೇಕ್ಷಕನ ಸೇಲೂ ಆಗಿ ಬದಲಾಗುತ್ತದೆ. ಹೃದಯ ಭಾರವಾಗುತ್ತದೆ. ಕಮರ್ಷಿಯಲ್ ಸಿನಿಮಾಗಳ ಹೀರೋಗಳಂತೆ ಇರದ ಐಎಎಸ್ ಆಫೀಸರ್ ಪಾತ್ರವನ್ನು ಒಪ್ಪಿಕೊಂಡಿದ್ದು ಮತ್ತು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದು ನೀನಾಸಂ ಸತೀಶ್ ಎಂಬ ಕಲಾವಿದನ ಗೆಲುವು. ಸರ್ದಾರ್ ಸತ್ಯ, ರೋಜರ್ ನಾರಾಯಣ್, ಪವನ್‌ಕುಮಾರ್, ಅಚ್ಯುತ್ ಕುಮಾರ್, ಸೋನು ಗೌಡ ಎಲ್ಲರ ನಟನೆಯೂ ಶ್ಲಾಘನೀಯ. ಚಿತ್ರದಲ್ಲಿ ವ್ಯವಸ್ಥೆ ಗೆಲ್ಲುತ್ತದೆ. ಚಿತ್ರದ ಆಚೆ ಇಂಥದ್ದೊಂದು ಪ್ರಯತ್ನ ಮಾಡಿದ ಚಿತ್ರತಂಡ ಗೆದ್ದಿದೆ.
ಚಂಬಲ್: ಐಎಎಸ್ ಅಧಿಕಾರಿಯ ಶೌರ್ಯ ತಿಳಿಸುವ ಹಂಬಲ!
ಚಿತ್ರ: ಚಂಬಲ್
ನಿರ್ದೇಶನ: ಜೇಕಬ್ ವರ್ಗೀಸ್
ತಾರಾಗಣ: ನೀನಾಸಂ ಸತೀಶ್, ಸೋನು ಗೌಡ, ಸರ್ದಾರ್ ಸತ್ಯ, ಅಚ್ಯುತ್, ಪವನ್ ಕುಮಾರ್, ರೋಜರ್ ನಾರಾಯಣ್
ರೇಟಿಂಗ್ 3